ದ ರಾ ಬೇಂದ್ರೆಯವರ ಕವನ

ದ ರಾ ಬೇಂದ್ರೆಯವರ ಕವನ

ಬರಹ

ಯುಗಯುಗಾದಿ ಕಳೆದರೂ
ಮಾಸದ ಸವಿಗಂಪಿನೊಂದಿಗೆ ಹೊಸಹೊಸದಾಗಿರುವ ದ ರಾ ಬೇಂದ್ರೆಯವರ ಈ ಕವನವನ್ನು ಮರೆಯಲು ಸಾಧ್ಯವೇ ಇಲ್ಲ.
ಮರೆತವರಿಗಾಗಿ ಇಲ್ಲಿ ಮತ್ತೊಮ್ಮೆ ಹಾಕಲಾಗಿದೆ.

 

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

 

ಹೊಂಗೆ ಹೂವ ತೊಟ್ಟಿಲಲ್ಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತಿದೆ

ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ

 

ವರುಷಕೊಂದು ಹೊಸತು ಜನುಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ

ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೆ ಏತಕೋ?

 

ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ?

ಎಲೆ ಸನತ್ಕುಮಾರದೇವ ಎಲೆ ಸಾಹಸಿ ಚಿರಂಜೀವ ನಿನಗೆ ಲೀಲೆ ಸೇರದೋ?

 

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ನಮ್ಮನಷ್ಟೆ ಮರೆತಿದೆ