ದ. ರಾ. ಬೇಂದ್ರೆಯವರ ಕುರಿತು ಲೇಖನ ಇಂದು ಅವರ ಜನ್ಮ ದಿನ

ದ. ರಾ. ಬೇಂದ್ರೆಯವರ ಕುರಿತು ಲೇಖನ ಇಂದು ಅವರ ಜನ್ಮ ದಿನ

                                         ವರಕವಿಯ   ನೆನೆದೇವ. . . . . .
‘ದ.ರಾ.ಬೇಂದ್ರೆ ಅವರು ಇಂದು ಅಸಂಖ್ಯ ಕವಿಗಳು ಬರೆಯುವ ಅನಂತ ಕವನ’- ಶೇ.ಗೋ.ಕುಲಕರ್ಣಿ
          ಶೇ.ಗೋ.ಕುಲಕರ್ಣಿಯವರ ಈ ಮಾತುಗಳು ಒಬ್ಬ ಕವಿಗೆ ನೀಡಬಹುದಾದ ಬಹು ದೊಡ್ಡ ಗೌರವ. ಈ ಗೌರವಕ್ಕೆ ಪಾತ್ರರಾದವರು ವಿರಳಾತಿ ವಿರಳ. ಶೇ.ಗೋ.ಕುಲಕರ್ಣಿಯವರು ‘ಕವಿ ಅಂಬಿಕಾತನಯದತ್ತ’ ಎಂಬ ಕವನ ಸಂಕಲನವನ್ನು ಸಂಪಾದಿಸಿದ್ದು, ದ.ರಾ.ಬೇಂದ್ರೆ ಅವರ ಕುರಿತಾಗಿರುವ ಕವಿತೆಗಳು ಇದರಲ್ಲಿವೆ. ಕವಿಯ ಮೇಲೆ ಅವÀರಿಗಿರುವ ಅಪಾರ ಅಭಿಮಾನವನ್ನು ಗೌರವವನ್ನು ಇದು ಸೂಚಿಸುತ್ತದೆ. ಈ ಸಂಕಲನವು ಕನ್ನಡ ನಾಡಿನ ಕಾವ್ಯ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆಯಾಗಿದೆ. ಬೇಂದ್ರೆಯವರು ತಮ್ಮ ಸಮಕಾಲೀನ ಕವಿಗಳ ಮೇಲೆ ಬೀರಿದ ಪ್ರಭಾವವು ಎಷ್ಟೆಂಬುದನ್ನು ಇದರಲ್ಲಿ ಕಾಣಬಹುದಾಗಿದೆ. ಕನ್ನಡ ನಾಡಿನ ಬಹು ಮುಖ್ಯ ಕವಿಗಳ ಒಂದೊಂದು ಕವಿತೆಗಳು ಇದರಲ್ಲಿವೆ. ಅಪರೂಪದಲ್ಲಿ ಅಪರೂಪವೆನ್ನಬಹುದಾದ ಕೃತಿ ಇದು. ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಇಬ್ಬರು ಕವಿಗಳು ದ.ರಾ.ಬೇಂದ್ರೆ ಅವರ ಕುರಿತು ಬರೆದಿರುವ ಕವನಗಳು ಇದರಲ್ಲಿವೆ ಎಂದರೆ ಈ ಸಂಕಲನದ ಮಹತ್ವವನ್ನು ಸಹಜವಾಗಿ ಅರಿಯಬಹುದಾಗಿದೆ. ಆ ಇಬ್ಬರ ಪೈಕಿ ಒಬ್ಬರು ಬೇಂದ್ರೆಯವರೊಂದಿಗೆ ಗುರು ಶಿಷ್ಯ ಸಂಬಂಧ ಹೊಂದಿರುವ ಸನ್ಮಾನ್ಯಶ್ರೀ ವಿನಾಯಕ ಕೃಷ್ಣ ಗೋಕಾಕರು. ಇನ್ನೊಬ್ಬರು ಬೇಂದ್ರೆಯವರ ಅಣ್ಣನ ಸಮಾನರಾದ ಸನ್ಮಾನ್ಯಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್‍ರು. ಇದಲ್ಲದೇ ಕನ್ನಡದ ದೀಪದ ಕವಿ ಎಂದೇ ಖ್ಯಾತರಾದ ಡಿ ಎಸ್ ಕರ್ಕಿ, ಅಮ್ಮೆಂಬಳ ಶಂಕರನಾರಾಯಣ, ಹ ಬ ಕೊಣ್ಣೂರ, ಕೃಷ್ಣಮೂರ್ತಿ ಪುರಾಣಿಕ, ದತ್ತಾತ್ರೇಯ ಕುಲಕರ್ಣಿ ಬಂಗಾರ ಕಡಿಯಾಲು ರಾಮಾಚಾರ್ಯ ಅವರಂತಹ ಮಹನೀಯರನ್ನು ಒಳಗೊಂಡ ಒಂಭತ್ತು ಕವಿಗಳÀ ಕವಿತೆಗಳು ಈ ಸಂಕಲನದಲ್ಲಿವೆ. ದ.ರಾ.ಬೇಂದ್ರೆ ಅವರು ಅಸಂಖ್ಯ ಕವಿಗಳು ಬರೆಯುವ ಅನಂತ ಕವನವಾಗಿದ್ದು ಹೇಗೆ ಎಂಬುದನ್ನು ಈ ಸಂಕಲನ ವಿಶದೀಕರಿಸುತ್ತದೆ.
ಈ ಸಂಕಲನದ ಮೊದಲ ಕಾವ್ಯ ಶ್ರೀನಿವಾಸ ಕಾವ್ಯ ನಾಮದಿಂದ ಬರೆಯುತ್ತಿದ್ದ ಸನ್ಮಾನ್ಯಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್‍ರರು ಬರೆದ ಕವನದಿಂದ ಆರಂಭವಾಗುತ್ತದೆ.
ಶ್ರೀ ಬೇಂದ್ರೆಯವರನ್ನು ಕುರಿತು – ಶ್ರೀನಿವಾಸ
ಮಳೆಯ ಹನಿಗಳ ನಡುವೆ ತೂರಿಬಹ ಹೊಂಬಿಸಿಲ
ಬಣ್ಣ ಬಣ್ಣದ ಬೆಳಕ ಬಲುಮೆಯೊಳ್ನುಡಿಯಿಂದ,
ನಿನಗಲ್ಲದಾರಿಗೂ ಬರದ ಗಾರುಡಿಯಿಂದ,
ಹಕ್ಕಿ ಹಾರಿದ ತೆರನ ಹಾಡಿ, ಕವಿತೆಯ ಹೊಸಲ
ನೀಂದಾಟಿ ನಿಂತೆ ಗೆಳೆಯ. ನಿನ್ನ ನುಡಿ ಕುಶಲ:
    ಬೇಂದ್ರೆ ದುಂಬಿಯಂತೆ ಅಲೆದು ರಸಪಾಕ ಹೀರಿ ಕಾವ್ಯ ಜೇನು ಉಣಬಡಿಸುತ್ತಿದ್ದರು. ಈ ಕವನದ ಸೊಗಸು ನೋಡಿ, ‘ಹಕ್ಕಿ ತೆರನ ಹಾಡಿ’ ಅಲ್ಲ, ‘ಹಕ್ಕಿ ಹಾರಿದ ತೆರನ ಹಾಡಿ’ ಎಂಬಲ್ಲಿಗೆ ಬೇಂದ್ರೆ ಕಾವ್ಯದ ಎತ್ತರ ಕಾಣಬಹುದಾಗಿದೆ.ಕವಿತೆ ಹೆಣೆಯುವಲ್ಲಿ ಬೇಂದ್ರೆ ಎಲ್ಲ ಮಿತಿಗಳನ್ನೂ ದಾಟಿ ನಿಂತವರು. ಅವರು ಮಾತು ಕೇಳುವುದೇ ಒಂದು ಸೊಗಸು.
    ಶೇ.ಗೋ.ಕುಲಕರ್ಣಿಯವರು ಬರೆದಿರುವ ಹದಿನೇಳು ಪುಟಗಳ ಸುದೀರ್ಘ ಕವನವು ಐವತ್ತೊಂದು ಷಟ್ಪದಿಗಳನ್ನು ಹೊಂದಿದ್ದು ಮೂರುನೂರಾ ಆರು ಸಾಲುಗಳದಾಗಿದೆ. ಈ ಕವನ ಆರಂಭವಾಗುತ್ತಲೇ ಬೇಂದ್ರೆ ಅಭಿಮಾನಿಗಳನ್ನು ಇಂದಿನ ಪರಿಭಾಷೆಯಲ್ಲಿ ಹೇಳುವುದಾದರೆ ಶಿಳ್ಳೆ ಹಾಕುವಂತೆ ಮಾಡುತ್ತದೆ.
ಕವಿ ಅಂಬಿಕಾತನಯದತ್ತ’ - ಶೇ.ಗೋ.ಕುಲಕರ್ಣಿ
ನಿನ್ನ ಬರುವಿಕೆಗಾಗಿ
ಕನ್ನಡಕೆ ಕನ್ನಡವು
ತನ್ನೊಳಗೆ ಕುದಿಯುತ್ತ ಕಾಯುತಿತ್ತು
ನೀ ಬಂದೆ ಅಲ್ಲಿಂದೆ
ನಿನ್ನ ಯುಗ ಮೊದಲಾಯ್ತು
     ಇಂದು ಅನೇಕರ ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯದ ಮಹತ್ವವನ್ನು ನಾವು ಮರೆತಿದ್ದೇವೆ. ಅದರಂತೆ ಕನ್ನಡ ನಾಡು ಕೂಡಾ ಹರಿದು ಹಂಚಿ ಹೋಗಿತ್ತು, ಅದನ್ನು ಒಂದಾಗಿಸಲು ಪರಿಶ್ರಮ ಪಟ್ಟವರನ್ನು ಮರೆಯುತ್ತಲಿದ್ದೇವೆ. ನಮ್ಮ ಭಾಷೆಯ ಮಹತ್ವವೇ ಮರೆಯಾಗುತ್ತಿದೆ. ಬೇಂದ್ರೆಯವರು ಬರೆಯಲು ಆರಂಭಿಸಿದಾಗ ಕನ್ನಡ ಭಾಷೆ ಹಾಗೂ ಜನತೆ ದೈನೆಸಿ ಸ್ಥಿತಿಯಲ್ಲಿದ್ದುದನ್ನು ಬಿಂಬಿಸುತ್ತಾ, ಬೇಂದ್ರೆಯವರು ಬರೆಯಲು ಆರಂಭಿಸಿದೊಡನೆ ಕನ್ನಡ ಭಾಷೆಯಲ್ಲಿ ಬೇಂದ್ರೆ ಕಾವ್ಯ ಯುಗವೇ ಆರಂಭವಾಯಿತು ಎಂದು ಸೂಚಿಸುತ್ತದೆ.
                                                                                   ಬೆಳಕ ಮನೆಯವ ನೀನು
ಬೆಳಕ ಬಗೆಯುವ ನೀನು
ಬೆಳಕ ತಳಿ ತಲೆ ತಲೆಗು ಬೆಳಸಿದವ ನೀನು
        ಬೇಂದ್ರೆ ಕವಿಯಾಗಿ ತಾವೊಬ್ಬರೆ ಬೆಳೆಯಲಿಲ್ಲ ಗೆಳೆಯರ ಗುಂಪು ಕಟ್ಟಿ ತಮ್ಮೊಂದಿಗೆ ನಾಡನ್ನು ಕಟ್ಟುವ ಜೊತೆಗೆ ಜನಸಾಮಾನ್ಯರೊಂದಿಗೆ ಬೆರೆತು ಎಲ್ಲರ ಮನ ಬೆಳಗಿದವರು.
                                                                                    ಬೆಟ್ಟದಡಿ ಬಂಡೆಯಲಿ
ಬಿಟ್ಟ ಕಿರಿ ಬಿರುಕಿನಲಿ
ಹುಟ್ಟಿ ಹೊರ ಬಂದ ಝರಿ ಹೊಳೆಯಾಗಲಹುದು
ಹೊಟ್ಟೆಯಲಿ ಹುಮ್ಮಸವ
ದಿಟ್ಟಯಲಿ ನಿಶ್ಚಯವ
ನೆಟ್ಟುನಡೆದೊಡೆ ನರನು ಅಮರನಾಗುವನು
         ಬೇಂದ್ರೆ ಅವರ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರಿಗೂ ಅವರು ಹೊಸ ಹುರುಪು ತುಂಬಿ ಏನನ್ನಾದರೂ ಸಾಧಿಸಬೇಕೆಂಬ ಛಲ ತುಂಬಿ ಕಳಿಸುತ್ತಿದ್ದರು. ಇಂತಹ ಮಹತ್ ಕಾರ್ಯ ಮಾಡಿದ ನರನು ಖಂಡಿತ ಜನಮಾನಸದಲ್ಲಿ ಅಮರತ್ವ ಪಡೆಯುತ್ತಾನೆ.
ಗೆಲುವಿರಲಿ; ಸೋಲಿರಲಿ
ಒಲವು ಸುಳಿದಾಡುತಿರೆ
ಬಲವ ಪಡೆವುದು ಜೀವ ಹೊರ ಒಳಗಿಂದ
ಗೆಲುವಿಗೂ ಸೋಲಿಗೂ
ಒಲಿಯದಲೆ ಜೀವನವ
ಬಲಿಸುವುದೆ ಒಲವಿನೊಳು ಹುದುಗಿರುವ ಚಂದ
 ‘ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು’ ಎಂದು ಹಾಡಿದ ಕವಿ ಬೇಂದ್ರೆ ಅವರ ವ್ಯಕ್ತಿತ್ವವನ್ನೆ ಈ ಸಾಲುಗಳಲ್ಲಿ ಕವಿ ಕಡೆದಿಟ್ಟಿದ್ದಾರೆ.
ಅಗಣಿತದ ಗಣಿತ ನೀ
ನಗೆಗಡಲ ಮಣಿತ ನೀ
ಮುಗಿಯಿಲ್ಲ ಮುಗಿಲೆಲ್ಲ; ನಿನಗೆ ಮುಗಿಯಿಲ್ಲ
ಎಂದು ಮುಕ್ತಾಯಗೊಳ್ಳುವ ಈ ಕವಿತೆ ಅನಂತ ಆಕಾಶದಂತೆ ನಿನ್ನ ಕಾವ್ಯ ಮತ್ತು ಬದುಕು ಎಂದು ಧನ್ಯತಾ ಭಾವದಿಂದ ಬಾಗುತ್ತದೆ.
       ಶ್ರೀ ಡಿ ಎಸ್ ಕರ್ಕಿ ಅವರು ಬರೆದಿರುವ ಗೀತ ಗಾರುಡಿಗ ಕಾವ್ಯದ ಈ ಕೆಳಗಿನ ಸಾಲುಗಳು ಅವರನ್ನು ‘ಅವಧೂತ ಕವಿ’ ಎನ್ನಲು ಸಾಕ್ಷಿ ನೀಡುತ್ತವೆ. ಅದನ್ನು ಅನುಭವಿಸಿಯೇ ಈ ಕವಿತೆ ಬರೆದಿರಬಹುದು. ಜನರ ನಾಡಿ ಮಿಡಿತ ಅರಿತು ಅವರ ನೋವನ್ನು ದೂರಗೊಳಿಸುವ ಸಂತೈಸುವ, ಮತ್ತೆ ಬದುಕು ಕಟ್ಟಿಕೊಳ್ಳುವಂತೆ ಪ್ರೇರಿಪಿಸುವ ಸಂತ ಮಾದರಿಯ ಕಾವ್ಯ ಬೇಂದ್ರೆಯವರದಾಗಿತ್ತು.
                                              ಗೀತ ಗಾರುಡಿಗ - ಶ್ರೀ ಡಿ ಎಸ್ ಕರ್ಕಿ
ಗರಿ’ಯನು ಧರಿಸಿದ ಗಾರುಡನೀತನು
ಆಟವ ಹೂಡಿದನು
ಜಡವನು ತೇಲಿಸಿ ಜೀವ ಪ್ರೇರಿಸಿ
ಮಾಟವ ಮಾಡಿದನು
ನಾಡಿನ ನಾಡಿಯ ತೀಡಿದನು
ಶ್ರೀ ದ.ರಾ. ಬೇಂದ್ರೆ -  ಅಮ್ಮೆಂಬಳ ಶಂಕರನಾರಾಯಣ
ಅಮೃತ ಸಂಜೀವಿನಿಯನೆರೆದ ಮೋಹನ ಖನಿಯು!
ಕವನ ವನದಲಿ ತೂಗುತಿರುವ ನಿಮ್ಮುಯ್ಯಾಲೆ
ಯಲ್ಲಿ ಭಾವಾನಂದ ಪಡೆದವರಾರಿಹರು?
ನಾದಲೀಲೆಯ ನಾದ ಲಾಸ್ಯಕೊಸೆಯದರಾರು?
       ನಾಡಿಗೆ ನಾಡೇ ಬೇಂದ್ರೆ ಕಾವ್ಯದ ಮೋಡಿಗೆ ಸಿಲುಕಿತ್ತು. ಅವರ ಕಾವ್ಯದ ಮೊಡಿಗೆ ಒಳಗಾಗದವರಾರು? ಚೂರು ಚೂರಾಗಿದ್ದ ಕನ್ನಡ ಭಾಷೆ, ಭಾಷಿಗರಿಗೆ ಅಮೃತ ಸಂಜೀವಿನಿಯಂತೆ ಬೇಂದ್ರೆ ಬಂದೊದಗಿದರು ಎಂಬ ಭಾವವು ಶ್ರೀ ಅಮ್ಮೆಂಬಳ ಶಂಕರನಾರಾಯಣರು ಕಟ್ಟದ ಈ ಕಾವ್ಯದಲ್ಲಿ ಕಾಣಬಹುದಾಗಿದೆ.
ಉಡುಗೊರೆ - ಹ ಬ ಕೊಣ್ಣೂರ
ಹಕ್ಕಿ ಹೆಜ್ಜೆ ಹಿಡಿದು ಹಾರಿ ಚಂದ್ರಲೋಕದೆಡೆಯನುಂಡೆ;
ಚಿಕ್ಕಿಲಯರ ತೊಟ್ಟ ಇರುಳ ಹೆಣ್ಣಿನೊಲವನಾಟ ಕಂಡೆ.
 
ಮುದ್ದು ಹಾಡು ಮಲಗಿ ಇದ್ದ ಶರಣನಾಡ ಕೆರಳಿಸಿಹುದು,
ಎದ್ದು ಜಿವ ಸೆರೆಯ ತೊರೆದು ಮುಗಿಲ ಮುಟ್ಟಿ ಬೆಳೆಸುತಿಹುದು.
 
ಹೂವು ತನ್ನ ಹಗುರವಾದ ಹೆಸರ ಹುಟ್ಟಿನೂಹಿಸಿಹುದು
ಸಾವು ನಿನ್ನ ನಗೆಯ ತೊರೆಗೆ ಸಿಕ್ಕು ಹರಿದು ಹೋಗುತಿಹುದು.
    ಹ ಬ ಕೊಣ್ಣೂರರವರು ರಚಿಸಿರುವ ಈ ಕವಿತೆಯಲ್ಲಿ ಬೇಂದ್ರೆಯವರನ್ನು ಹಕ್ಕಿಯ ಜಾಡು ಹಿಡಿದು ಚಂದ್ರಲೋಕಕ್ಕೆ ಹಾರಬಲ್ಲ ಹಾಗೂ ಆ ಭಾವಲೋಕದೊಳಗೆ ಓದುಗರನ್ನು ಕರೆದುಕೊಂಡು ಹೋಗಬಲ್ಲ ಸಾಮಥ್ರ್ಯವಿರುವ ಕವಿ ಎಂದು ಕೊಂಡಾಡಿದ್ದಾರೆ. ಮಲಗಿಯೇ ಇದ್ದ ಈ ಶರಣರ ನಾಡನ್ನು ಎಚ್ಚರಗೊಳಿಸಿದ ಕವಿ ನೀನು, ಸಾವು ನಿನ್ನ ನಗೆಯ ತೊರೆಗೆ ಸಿಕ್ಕು ಹರಿದು ಹೋಗುತಿಹುದು ಎಂಬ ಮಾತು ಮಕ್ಕಳ ಸಾವು, ಹತ್ತಿರದವರ ಸಾವಿನ ನೋವು ಉಂಡ ಬೇಂದ್ರೆಯವರ ನಗೆಗೆ ಸಾವು ಅಂಜುತ್ತಿತ್ತು. ನೋವಿನ ಭಾವದಿಂದ ಕೂಡಿದ ಕವಿಯ ರಚನೆಗಳು ಇಂದಿಗೂ ಮನೆ ಮಾತಾಗಿ ಅಮರಗೊಂಡಿರುವುದೇ ಸಾಕ್ಷಿ.
ಬೇಂದ್ರೆ! - ಡಿ ಎಸ್ ಕರ್ಕಿ
ಶಬ್ದಕೊಂದು ಜೀವ ತುಂಬಿ
ಕುಣಿಸಿ ಬಿಟ್ಟಿ ತನನನಾ
ನುಡಿಯ ಜಾಡ ಹಿಡಿದು ಭಾವ
ಮಣಿದು ಬರುವ ತನ್ಮನಾ
       ಶಬ್ದ ಗಾರುಡಿಗ ಎಂಬುದು ಬೇಂದ್ರೆಯವರಿಗಿದ್ದ ಇನ್ನೊಂದು ಬಿರುದು. ಅವರ ಕಾವ್ಯದೊಳಗಿನ ಶಬ್ದಗಳು ಛಕ್ಕನೆ ಹೊಳೆದು ನಾನಾ ಭಾವಗಳ ಚಿಮ್ಮಿಸುತ್ತವೆ. ಶಬ್ದಗಳು ಜೀವ ತುಂಬಿಕೊಂಡು ಮನದಂಗಳದಲ್ಲಿ ಕುಣಿದಾಡುತ್ತವೆ. ಕಾಡಿ ಕಾಡಿ ತಮ್ಮ ಒಳ ಗೂಢ ಬಿಟ್ಟು ಕೊಡುತ್ತವೆ.
      ದತ್ತಾತ್ರೇಯ ಕುಲಕರ್ಣಿ ಅವರ ಕವನ ನೂರು ಕಾಲ ಬಾಳು ಕವನ ಬೇಂದ್ರೆ ಅವರು ಕಾವ್ಯ ಓದುವ ಶೈಲಿಯೇ ವಿಭಿನ್ನ  ಅವರು ಕಾವ್ಯ ಓದುವ ರೀತಿಗೆ ಜನ ಮೋಡಿಗೊಳಗಾದಂತೆ ತಲೆದೂಗುತ್ತಿದ್ದರು ಎಂಬುದನ್ನು ಬಿಂಬಿಸುತ್ತಾ ಒಲವನ್ನೆ, ಒಳಿತನ್ನೆ ಸಕಲರಿಗೂ ಬಡಿಸುತ್ತ ¨ಂದ ತಮ್ಮ ಕಾವ್ಯ ಗುರುವಿಗೆ ಮನಸಾರೆ ನಮಿಸಿದ್ದಾರೆ.
ನೂರು ಕಾಲ ಬಾಳು - ದತ್ತಾತ್ರೇಯ ಕುಲಕರ್ಣಿ
ಬಾಳ ಕಡಲನೀಸಿ
ಗಾಳಿಯಲ್ಲಿ ತೋಳ ಬೀಸಿ
ಮುಗಿಲ ಚಿಕ್ಕೆ ಹೂವ ಮೂಸಿ..
ಅನುರಾಗವೆ ಬಾಳ ರಾಗ
ನಿನ್ನದಿದುವೆ ಕಾವ್ಯಯೋಗ
ಕವಿಗುರುವೇ ನಮಿಪನೀಗ
      ದ.ರಾ.ಬೇಂದ್ರೆಯವರು ತಮ್ಮ ಕಾವ್ಯ ರಚನೆಯ ಅನುಭವ ಕುರಿತು ಹೀಗೆ ಹೇಳುತ್ತಿದ್ದರು- ‘ಅಂಬಿಕಾತನಯದತ್ತ ಹಾಡತಾನ, ಬೇಂದ್ರೆ ಮಾಸ್ತರ ಅದನ್ನ ಬರಕೊತಾನ; ಪ್ರೊಫೆಸರ್ ಬೇಂದ್ರೆ ಅದನ್ನ ನಿಮ್ಮ ಮುಂದ ಹೇಳತಾನ’. ಕವಿತೆ ನಾನು ಬರೆಯುವುದಿಲ್ಲ ಅದು ಅಂಬಿಕಾತನಯದಯದತ್ತನದು ಎಂಬ ಭಾವ ಅವರಲ್ಲಿ ಸದಾ ಇತ್ತು. ತಾವು ತಾಯಿಯ ಹೆಸರು ಮುಂದಿಟ್ಟುಕೊಂಡು ಬರೆಯುವುದು ಸೋಜಿಗವೇನಲ್ಲ ಎಂಬ ನಂಬಿಕೆ ಅವರದು.  ಅವರ ಆ ತಾಯಿಯು  ತನ್ನ ಹಡೆದವ್ವ ಅಂಬಾಬಾಯಿ, ಧಾರವಾಡ ಮಣ್ಣ ತಾಯಿ ದುರ್ಗಾದೇವಿ, ನಾಡ ತಾಯಿ ಭುವನೇಶ್ವರಿ, ಲೋಕ ಮಾತೆ ಭಾರತಾಂಬೆ, ಮತ್ತು ಎಲ್ಲರನ್ನು ಹೊತ್ತು ನಿಂತಿರುವ ವಸುಂಧರೆಯೇ ಆಗಿದ್ದಾಳೆ ಎಂಬ ನಂಬುಗೆ ಅವರದಾಗಿತ್ತು.
       ಈ ಸಂಕಲನದ ಬಹು ಮುಖ್ಯ ಹಾಗೂ ಸುದೀರ್ಘ ಕವನ ಸನ್ಮಾನ್ಯಶ್ರೀ ವಿನಾಯಕ ಕೃಷ್ಣ ಗೋಕಾಕ ಅವರದು. ಇವರು ಬರೆದಿರುವ ಹದಿನೆಂಟು ಪುಟಗಳ ಸುದೀರ್ಘ ಕವನವು ಐವತ್ಮೂರು ಷಟ್ಪದಿಗಳನ್ನು ಹೊಂದಿದ್ದು, ಮೂರುನೂರಾ ಹದಿನೆಂಟು ಸಾಲುಗಳದಾಗಿದೆ ಆರು ಭಾಗಗಳಲ್ಲಿ ಕವಿಯನ್ನು ವಿಶೇಷಣಗಳೊಂದಿಗೆ ವರ್ಣಿಸಿದ್ದಾರೆ. ಅವರ ಅಧ್ಯಾತ್ಮಿಕ ಚಿಂತನೆಗಳನ್ನು ತಿಳಿಸುತ್ತಾ ‘ಹಿಂಗಿತಯ್ಯ ನಿನ್ನ ಬರವಿಗೆಮ್ಮ ನುಡಿಯ ಹೀನ ದೆಸೆಯು’ ಎಂಬ ನುಡಿಗಳಲ್ಲಿ ಅವರೊಬ್ಬ ಗಂಧರ್ವ ಕವಿ ಎಂಬಂತೆ ಕಂಡಿದ್ದಾರೆ. ಹಾಗೂ ‘ಭೂಮಿಗಿಳಿದು ಬಂದೆ ನೀನು ಲೀಲೆಗೋಸ್ಕರ’ ಎಂದು ಚಮತ್ಕಾರವನ್ನು ನಿರೀಕ್ಷಿಸಿದ್ದಾರೆ.
ಕನ್ನಡ ಕುಲ ಗಂಧರ್ವ – ವಿನಾಯಕ
ಎಳೆಯನಿರಲು ಎಳೆಯರಾಟ;
ಗೆಳೆಯನಿರಲು ಕೆಳೆಯ ನೋಟ;
ಸಾಹಿತಿಯಿರೆ ರಸದೂಟದಿ ನೀನು ರಮಿಸಿದೆ
ಬಂದ ಪಾತ್ರವನ್ನು ವಹಿಸಿ
ಪ್ರೀತಿ-ಪಟ್ಟು ಹಿಗ್ಗಿ ಕುಗ್ಗಿ
ಕೊನೆಗೆ ನಿನ್ನದೆಲ್ಲವೆಂದು ತಾಯ್ಗೆ ನಮಿಸಿದೆ .. ..
 
ನಿನ್ನ ದುಃಖಗಳನು ನುಂಗಿ
ಹೆರವರನ್ನು ಸಂತವಿಸುತ
ನಂದಿಹೋದ ದೀಪಗಳನು ಮತ್ತೆ ಹಚ್ಚಿದೆ
ದುಖಃಮಯ ಪ್ರಪಂಚದಲ್ಲಿ
ಮಗುವಿನಾಟ ಗಂಡಿನೋಟ
ಹೆಣ್ಣಿನ ಸೈರಣೆಯ ನೋಟಗಳಿಗೆ ಮೆಚ್ಚಿದೆ.
.               ಚಿರಕಾಲ ಬಾಳೈ! - ಬಂಗಾರ ಕಡಿಯಾಲು ರಾಮಾಚಾರ್ಯ
ಕರುನಾಡ ಮನ ತೊಳೆಯ
ರಸಗಂಗೆಯನು ತಂದೆ
ಓ! ಭಗೀರಥ
ಚಿರಕಾಲ ಬಾಳೈ
        ಬಂಗಾರ ಕಡಿಯಾಲು ರಾಮಾಚಾರ್ಯ ಅವರ ಈ ಪದ್ಯದೊಂದಿಗೆ ಮುಕ್ತಾಯಗೊಳ್ಳುವ ಈ ಪುಟ್ಟ ಕಾವ್ಯ ಸಂಕಲನ ಬೇಂದ್ರೆಯವರ ಕಾವ್ಯದ ಕುರಿತು ಬೇಂದ್ರೆಯವರನ್ನು ಹತ್ತಿರದಿಂದ ಬಲ್ಲ ಮಹನೀಯರು ಸುಮಧುರವಾಗಿ ಸುಲಲಿತವಾಗಿ ಗೌರಪೂರ್ವಕವಾಗಿ ಗಾನ ಗಾರುಡಿಗ ಶಬ್ಧಗಾರುಡಿಗ ವರಕವಿ ಬೇಂದ್ರೆ ಅವರಿಗೆ ನಮನ ಸಲ್ಲಿಸಿದ್ದಾರೆ.
       ಬೇಂದ್ರೆಯವರ ‘ಗರಿ’ ಕಾವ್ಯ ಸಂಕಲನದ ಬಹುತೇಕ ಕಾವ್ಯಗಳು ಇವರ ಮೇಲೆ ಪ್ರಭಾವ ಬೀರಿವೆ. ‘ಕವಿಗೆ ಕವಿ ಮಣಿವ’ ಎಂಬ ಮಾತು ಇಲ್ಲಿ ಸಾಫಲ್ಯ ಕಂಡಿದೆ. ಕವಿ ಬೇಂದ್ರೆಯವರ ಕಾವ್ಯವನ್ನು ಓದಿ ಅವರೊಡನೆ ಸಂವಾದ ನಡೆಸಿ ಅವರ ಸಾಮಿಪ್ಯ ಸಾಹಚರ್ಯವನ್ನು ಅನುಭವಿಸಿ ಅವರ ಕುರಿತು ಕಾವ್ಯವನ್ನು ರಚಿಸಿದ್ದಾರೆ. ಇದರಲ್ಲಿನ ಕಾವ್ಯಾಭಿವ್ಯಕ್ತಿಗಳು ಬೇಂದ್ರೆಯವರ ಚಿತ್ರಿಕೆಯನ್ನು ಮನದಲ್ಲಿ ಅಚ್ಚೊತ್ತುವಂತೆ ಮಾಡುತ್ತವೆ. ಕವಿಗೆ ಕವಿಗಳು ಕೊಡುವ ಕಾವ್ಯ ಗೌರವ ಇದಾಗಿದೆ. ತನ್ಮೂಲಕ ಕನ್ನಡ ಕವಿಗಳ ಹೃದಯ ವೈಶಾಲ್ಯತೆ ಕಾಣಬಹುದಾಗಿದೆ.
      ಈ ಮಹನೀಯರಷ್ಟೆ ಅಲ್ಲ ನಾಡಿನ ಹಿರಿಯ ಕವಿಗಳೂ ಸೇರಿದಂತೆ ಇನ್ನೂ ಅನೇಕರು ಸಂದರ್ಭಾನುಸಾರವಾಗಿ ಬೇಂದ್ರೆ ಅವರ ಕುರಿತು ಕಾವ್ಯಗಳನ್ನು ಬರೆದಿದ್ದಾರೆ. ಕೆಲವು ಹೊತ್ತಿಗೆಗಳ ರೂಪದಲ್ಲೂ ಪ್ರಕಟವಾಗಿವೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಅವರ ಕುರಿತು ಕಾಲ ಕಾಲಕ್ಕೆ ಪ್ರಕಟಗೊಂಡಿರುವ ಕಾವ್ಯಗಳು ಅಸಂಖ್ಯವಾಗಿವೆ. ಅವುಗಳನ್ನೆಲ್ಲ ಒಗ್ಗೂಡಿಸುವ ಒಂದೆಡೆ ಲಭ್ಯವಾಗುವಂತೆ ಮಾಡುವ ಕಾರ್ಯವಾಗಬೇಕಿದೆ. ಇದು ನಮ್ಮ ಕವಿಗೆ ನಾವು ಕೊಡುವ ಗೌರವಪೂರ್ವಕ ನಮನವಷ್ಟೆ ಅಲ್ಲ ನಮ್ಮನ್ನು ನಾವೇ ಗೌರವಿಸಿಕೊಳ್ಳುವ ಪರಿಯೂ ಹೌದು. ಬೇಂದ್ರೆ ಕಾವ್ಯಕ್ಕೆ ಇಂದಿಗೂ ಜನ ಮನ್ನಣೆಯಿದೆ ಜನ ಪ್ರೀತಿ ಗಳಿಸಿರುವ ಈ ಕವಿ ಕನ್ನಡ ಭಾಷಿಕರ ಹೃದಯ ಸಾಮ್ರಾಟ!
ವಿಳಾಸ : ಶ್ರೀನಿವಾಸ.ಹುದ್ದಾರ
      ‘ಜನನಿ’
     1ನೇ ಕ್ರಾಸ್,ಮಂಗಳಗಟ್ಟಿ ಪ್ಲಾಟ್ಸ, ಸಾಧನಕೇರಿ
ಧಾರವಾಡ – 580008
ಸಂಪರ್ಕ : 9448541024