ಧನಿಕರಿಗೆ ಸೀಮಿತವೇ ?

ಧನಿಕರಿಗೆ ಸೀಮಿತವೇ ?

ಕವನ

ನಗುವೆಂಬ ಸಿರಿಯೊಂದು

ಮೊಗದಲ್ಲಿ ಮೂಡಿಹುದು

ಸೊಗಸಾದ ನೋಟವಿದು ಕಣ್ಣಮುಂದೆ

ಹಗಲಲ್ಲಿ ದುಡಿಮೆಯಲಿ

ಮಗುವ ಮುದ್ದಿಸೆ ಬಿಡನು

ಬಿಗುಮಾನದೆಜಮಾನ ಬೆನ್ನ ಹಿಂದೆ

 

ಹಸಿವನ್ನು ನೀಗಿಸಲು

ಬಿಸಿಲಲ್ಲಿ ದುಡಿವವಳು

ವಸುಧೆಯಂತೆಯೆ ನಾರಿ ಶಾಂತ ಮೂರ್ತಿ

ಬಸವಳಿದ ದೇಹಕ್ಕೆ

ಹಸುಗೂಸು ಜೊತೆಗಿರಲು

ನಸುನಗೆಯು ಹೊಮ್ಮಿಹುದು ದೊರಕಿ ಶಾಂತಿ

 

ಧನಿಕರಿಗೆ ಸೀಮಿತವೆ

ಮನ ಶಾಂತಿ ಸೌಭಾಗ್ಯ

ಹಣತೆತ್ತು ಕೊಳ್ಳುವರೆ ಸುಖವನವರು

ಕನಕದಲಿ ಸುಖವೆಂದು

ದಿನನಿತ್ಯ ಹಂಬಲಿಸಿ

ಜನುಮವನು ಕಳೆವವರು ಸುಖವ ಪಡರು

 

ಅನುದಿನವು ಸಂತಸಕೆ

ಧನಕನಕ ಬೇಕಿಲ್ಲ

ಮನದೊಳಗೆ ಹುದುಗಿಹುದು ಹುಡುಕಬೇಕು

ಅನವರತ ಧನಕಾಗಿ

ಕನವರಿಸಿ ಕೂತಿರದೆ

ತನುಜರೊಳಗೊಂದಾಗು ಖುಷಿಗೆ ಸಾಕು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್