ಧನ್ಯವಾಗಲಿ, ಕನ್ನಡತನ

ಧನ್ಯವಾಗಲಿ, ಕನ್ನಡತನ

       ಸಮಗ್ರ ಕರ್ನಾಟಕದ ಭಾಗಗಳನ್ನು ಅಧೀಕೃತವಾಗಿ ಪ್ರತ್ಯೇಕತಾ ಹೆಸರುಗಳಿಂದ  ಕರೆಯುವ ಅಸಮಂಜಸ ಸಲಹೆಯೊಂದನ್ನು ಇತ್ತೀಚೆಗೆ ವಿದ್ವಾಂಸರೊಬ್ಬರು ಅಪ್ಪಣೆ ಕೊಡಿಸಿದ್ದಾರೆ. ಹೈದರಾಬಾದ್ ಕರ್ನಾಟಕವನ್ನು “ಕಲ್ಯಾಣ ಕರ್ನಾಟಕ”, ಮುಂಬೈ ಕರ್ನಾಟಕವನ್ನು “ಕಿತ್ತೂರು ಕರ್ನಾಟಕ” ಎಂದು ರಾಜಪತ್ರ ಪ್ರಕಟಣೆ ಹೊರಡಿಸಬೇಕಂತೆ! ಕಿತ್ತೂರ ರಾಣಿ, ಇಡೀ ಕರ್ನಾಟಕಕ್ಕೇ ಚಿರಂತನ ಸ್ಫೂರ್ತಿ ಮತ್ತು ಕಲ್ಯಾಣದ ಬಸವಣ್ಣ ಲೋಕಗುರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕರ್ನಾಟಕದ ಈ “ಹೆಮ್ಮೆ”ಗಳನ್ನು ಕ್ರಮವಾಗಿ ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳನ್ನೊಳಗೊಂಡ ವಿಭಾಗಗಳಿಗೆ ಕಟ್ಟಿಹಾಕುವುದು ಎಷ್ಟುಮಾತ್ರಾ ವಿವೇಕ?


ಇಷ್ಟಕ್ಕೂ “ನಿಜಾಂ ಕರ್ನಾಟಕ”, “ಮುಂಬೈ ಕರ್ನಾಟಕ” ಎಂಬ ಹೆಸರುಗಳಾದರೋ ಬಂದಿರುವುದು ಹೇಗೆ? ಕುಬ್ಜನನ್ನು ಕುಳ್ಳ, ಕದಿಯುವವನನ್ನು ಕಳ್ಳ ಎಂದಂತೆ ರೂಢನಾಮವಾಗಿಯೇ ಹೊರತು ಹಾಗೆಂದು “ಅಂಕಿತ” ಮಾಡಲಾಗಿದೆಯೇ?


ಹಳೆ ಮೈಸೂರು ಪ್ರಾಂತದೊಂದಿಗೆ ಹೊಸ ಕರ್ನಾಟಕ ಭಾಗಗಳು ವಿಲೀನಗೊಂಡವು ಎಂಬರ್ಥದ “ಕ್ಯಾತೆ”ಗಳೂ ರಾಜ್ಯೋದಯ ಕಾಲದಲ್ಲಿ ನಡೆದಿದ್ದವು. ‘ಅದು ಹಾಗಲ್ಲ’ ಎನ್ನುವುದನ್ನು ಯಾರೂ “ಇದಮಿತ್ತಂ” ಎಂದು ಮನಸ್ಪೂರ್ತಿಯಾಗಿ ಇತ್ಯರ್ಥ ಮಾಡಹೋಗಲಿಲ್ಲ. ಆಗ ನಡೆದ “ತಿಪ್ಪೆ ಸಾರಿಸುವ” ಪ್ರಯತ್ನ ಸಹ, ಮುಂದೆ ಪ್ರತ್ಯೇಕತೆಯ ಕೂಗಿಗೆ ಪರೋಕ್ಷವಾಗಿ ಒಂದು ಕಾರಣವಾಯಿತು. ಹೈದರಾಬಾದ್ ಕರ್ನಾಟಕಕ್ಕಂತೂ ಹಿಂದುಳಿದ ಪ್ರದೇಶ ಎಂಬ ವಿಶಿಷ್ಟತೆ ಖಾಯಂ ಹಣೆಪಟ್ಟಿಯಾಗಿ, ಆ ತೊಗರೀ ಬೇಳೆ ನಾಡಿನಲ್ಲಿ ಸಾಕಷ್ಟು ರಾಜಕೀಯ ಬೇಳೆಯೇನೋ ಬೆಂದು ಹೋಯಿತಾದರೂ ನಿಜಕ್ಕೂ ಹಿಂದುಳಿದಿರುವಿಕೆಯೇನೂ ಅಷ್ಟಾಗಿ ಹಿಂಗಲಿಲ್ಲ!


ಹೇಳಿ-ಕೇಳಿ ನಿರ್ಲಜ್ಜ ರಾಜಕೀಯವಾದರೋ ಇರುವುದೇ ಹಾಗೆ. ಆದರೆ ವಿದ್ವಾಂಸರೂ, ಸಾಂಸ್ಕೃತಿಕ ಕಳಕಳಿವಂತರೂ, ಸಾತ್ವಿಕ ಚಿಂತಶೀಲರೂ ಆದ ಜನವಾದರೂ ನಾಡಿನ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಸೊಬಗಿಗೆ ನಾಡಿನ ಎಲ್ಲಾ ಜನ ಸಮಗ್ರವಾಗಿ ಕಣ್ತೆರೆಯುವಂತೆ ಮಾಡಿದರೆ ಕನ್ನಡತನ ಧನ್ಯವಾದೀತಲ್ಲವೇ?!