ಧನ್ಯವಾದ ಭಗವಂತ !
ಮೆದು ಹುಲ್ಲು ಹಾಸಿನ ಮೇಲೆ ಹೆಜ್ಜೆ ಇಟ್ಕೋಂಡು ಸಾಗುತ್ತಾಯಿದ್ವಿ. ಕೈಗಳು ತಮಗರಿವಿಲ್ಲದೆ ಬೆಸೆಯುವ ಕಾಯಕದಲ್ಲಿ ಇದ್ದವು. ಆಗತಾನೇ ಅರಳಿರುವ ಹೂವಿನ ಮಕರಂದ ಹೀರಲು ಮುಗಿಬಿದ್ದ ದುಂಬಿಗಳ ಗುನುಗು, ಭವ್ಯ ಮರಗಳಲ್ಲಿ ಸಂಸಾರ ಹೂಡಿರುವ ಹಕ್ಕಿಗಳ ಚಿಲಿಪಿಲಿ, ಕೋಗಿಲೆಯ ಮಧುರ ಗಾನ, ಮನಸೆಳೆದು ಅಯಸ್ಕಾಂತದಂತೆ ಒಬ್ಬರನೊಬ್ಬರು ಅಪ್ಪಿಕೊಂಡು ಹಸಿರು ಹಾಸಿನ ಮೃದುತ್ವವನ್ನು ಅನುಭವಿಸುತ್ತಾ ಮರೆಯಲಿದ್ದ ಬೆಂಚಿನ ಹವಣಿಕೆ ತೀರಿಸುವ ಬವಣೆಯಲ್ಲಿದ್ವಿ. ಅವಳ ಸೊಂಟ ಬಳಸಿದ್ದ ನನ್ನ ಕೈಯನ್ನು ತನ್ನ ಕೈಯಿಂದ ಹಿಡಿದು ಮುಗುಳುನಗುತ್ತ, ಮುಂಗುರುಳು ಹೊಯ್ದಾಡಲು ಬಿಟ್ಟಿದ್ದಳು. ಸೂರ್ಯ ತನ್ನ ಕರ್ತವ್ಯ ಮುಗಿಸಿ ಧರೆಗೆ ಚುಂಬನದ ವಿದಾಯ ಹೇಳುತ್ತಿರುವಾಗ , ನಾಚಿ ಕೆಂಪಾದ ಇಳೆಗೆ ಚಂದಿರನ ಆಗಮನದ ಆತುರ. ಎದೆಯ ಬಡಿತವನ್ನು ಕೇಳಲು , ತನ್ನ ಕೂದಲನ್ನು ಹರಡಿ ಕಿವಿ ಕೊಟ್ಟದ್ದಳು. ಬೆಂಚಿನ ಮೇಲೆ ಕುಳಿತು ಆಗಲೇ 15 ನಿಮಿಷಗಳಾಗಿತ್ತು. ಅಬ್ಬಾ ಮೌನಕ್ಕೆ ಎಂಥಾ ಶಕ್ತಿಯಿದೆ, ಎಲ್ಲವನ್ನು ಹೇಳುವ ತಾಕತ್ತು ಅದಕ್ಕಿದೆ. ಸಾವಿರ ಕನಸುಗಳನ್ನ ಕಟ್ಟಿದ್ದು ಈ ಮೌನವೇ, ಹಲವಾರು ಆಸೆಗಳನ್ನ ಬಿತ್ತಿ ಬೆಳೆಸಿದ್ದು ಈ ಮೌನವೇ. ನಮ್ಮಬ್ಬರಲ್ಲಿ ಒಲವಿನ ಸೆಲೆ ಹುಟ್ಟಿಸಿದ್ದ ಈ ಮೌನವೇ. ದಶಕಗಳ ಹಿಂದೆ ನಾವಿಬ್ಬರು ಇದೇ ಮೌನದ ಜಾಲಕ್ಕೆ ಬಿದ್ದಿದ್ವಿ. ನನ್ನೆದೆ ಬಡಿತ ಈ ಮೌನದ ಕಥೆಗಳನ್ನ ಹೇಳ್ತಾಯಿತ್ತು, ಅವಳಲ್ಲಿ ಅದನ್ನು ಕೇಳುತ್ತಿರುವ ಉತ್ಸಾಹಯಿತ್ತು. ನಮ್ಮಿಬ್ಬರ ಭೇಟಿಯಾಗಿದ್ದು ಸ್ಪರ್ಶದಿಂದ . ನಮಲ್ಲಿ ಮೂಡಿದ ಪ್ರೀತಿಯನ್ನ ನಾವು ಹೇಳಲಿಲ್ಲ, ಅಲ್ಲಿಯೂ ಮೌನದ ಅವತರಿಣಿಕೆ. ನಮ್ಮಿಬ್ಬರ ಮಧ್ಯ ಇದ್ದಿದ್ದು ಬರಿ ಸ್ಪರ್ಶದ ಮಾತುಗಳು. ಅದು ಹೇಗೊ ಗೊತ್ತಿಲ್ಲ ನಮ್ಮ ಕಿವಿಗಳು ಆ ಮೌನದ ಭಾಷೆಗೆ ಹೊಂದಿಕೊಳ್ಳುತ್ತ ಹೋಗ್ತಾಯಿತ್ತು. ಒಬ್ಬರ ಹೃದಯದ ಉಲಿವು ಇನ್ನೊಬ್ಬರ ಮನಸ್ಸಿನ ತರಂಗಗಳನ್ನ ಜಾಗೃತಗೊಳಿಸುತ್ತಿತ್ತು. ಅಂದು ಒಡಮೂಡಿದ ಪ್ರೀತಿಗೆ ಇಂದು 50 ವರ್ಷಗಳ ಸಂಭ್ರಮ. ನಮ್ಮಲ್ಲಿ ಲಾಲಸೆ, ಇರ್ಷ್ಯೆ,ದುಃಖ,ಸುಖ, ಎಲ್ಲವೂ ಒಂದೇ ಆಗಿತ್ತು ಅದು ಮೌನವೇ ಆಗಿತ್ತು. ಮೌನದಲ್ಲಿ ನಾವು ಜಗತ್ತಿನ ಅತ್ಯಂತ ಮಧುರವಾದ ಸುಖವನ್ನ ಅನುಭವಿಸಿದ್ವಿ. ಅದಕ್ಕೆ ಸಾಕ್ಷಿಯಾಗಿ ಅವಳು ಎರಡು ಮಕ್ಕಳ ತಾಯಿ. ಮಕ್ಕಳೊಡನೆ ನಮ್ಮ ಸಂಭಾಷಣೆಯಲ್ಲೂ ಮೌನವೇ ಅಧಿಪತಿ. ಇಂದು ಮೊಮ್ಮಕ್ಕಳೊಡನೆ ಕೂಡ ಅದೇ. ಹೌದು ನಾವು ಮೌನವನ್ನು ತೊರೆದು ಇರಲು ಸಾಧ್ಯವೇ ಇಲ್ಲ. ಆ ಬೆಂಚಿಂದ ಮೆಲ್ಲನೆ ಎದ್ದು , ಹೊರಟೆವು,. ಅನಿರೀಕ್ಷಿತವಾಗಿ ಒಂದು ಕೈ ನಮ್ಮನ್ನು ತಡಿಯಿತು.
"ತಾತ, ಅಲ್ಲಿ ಕೆಸರಿದೆ, ಈ ಕಡೆಗೆ ಬನ್ನಿ" ಅದು ನನ್ನ ಮುದ್ದಿನ ಮೊಮ್ಮಗಳ ಕೈ. ನನ್ನ ಸಮ್ಮತಿ ತೊರಿಸುವಂತೆ ಕೈಯಲಿದ್ದ "Blind walker " ನ ಬೆಲ್ ನ್ನು ಬಾರಿಸಿದೆ. ಮೆಲ್ಲಗೆ ಕರೆದುಕೊಂಡು ಹೋಗ್ತಾಯಿದ್ದಳು.
ನಮಗೆ ಮೌನವನ್ನ ವರದಾನವಾಗಿ ಕೊಟ್ಟಿದ್ದ ಆ ಭಗವಂತ. ಕಣ್ಣುಗಳ ಕಾಂತಿಯನ್ನ ಹುಟ್ಟಿನಿಂದಲೇ ಇಲ್ಲವಾಗಿಸಿದ್ದ. ಕಿವಿಯಂಚಲಿ ಕೇಳುವ ಶಕ್ತಿಯನ್ನು ಮರೆಯಾಗಿಸಿದ್ದ. ಮಕ್ಕಳ ಅಳುವನ್ನು ಕೇಳದೆ ಅವರಿಗೆ ಹಾಲುಣಿಸಿದ್ದೆವು, ಭಾವನೆಗಳನ್ನು ಕೇಳದೆ, ನೋಡದೆ, ಅರಿಯದೆ, ಭಾವಪರವಶವಾಗುತ್ತಿದ್ದೆವು. ಸಿಟ್ಟೆಯಿರದೆ ಮುನಿಸಿಕೊಳ್ಳುತ್ತಿದ್ದೆವು.ಅಹಾ! ಕಲ್ಪನೆಗೆ ಎಡೆಯಿಲ್ಲದೆ ನಾವು ಜೀವನವನ್ನ ಅನುಭವಿಸಿದ್ದೆವು. ಧನ್ಯವಾದ ಭಗವಂತನಿಗೆ . ಇಂದ್ರಿಯಗಳನ್ನು ಕೊಟ್ಟಿದ್ದರೆ , ನಮ್ಮ ಕಲ್ಪನೆಗೆ ಮಿತಿಯಿರುತ್ತಿತ್ತು ಅಲ್ಲವೇ?
Comments
ಅರ್ಥಪೂರ್ಣ ಕಥೆ. ಮಾತು ಬೆಳ್ಳಿ
ಭಾವವೀಣೆ ಮಿಡಿಸುವ ಕಥೆ! ಧನ್ಯವಾದ.
In reply to ಭಾವವೀಣೆ ಮಿಡಿಸುವ ಕಥೆ! ಧನ್ಯವಾದ. by kavinagaraj
ನಿಮ್ಮ ಪ್ರತಿಕ್ರಿಯೆಗೆ