ಧರ್ಮಾತ್ಮ

ಧರ್ಮಾತ್ಮ

ಪುಸ್ತಕದ ಲೇಖಕ/ಕವಿಯ ಹೆಸರು
ಡಿ.ವಿ.ಗುರುಪ್ರಸಾದ್
ಪ್ರಕಾಶಕರು
ವಿಕ್ರಂ ಪ್ರಕಾಶನ, ಹೆಬ್ಬಾಳ, ಬೆಂಗಳೂರು-೫೬೦೦೨೪
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೨

ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಬಗ್ಗೆ ನಿವೃತ್ತ ಡಿ ಜಿ ಪಿ ಡಾ. ಡಿ.ವಿ.ಗುರುಪ್ರಸಾದ್ ಅವರು ಬರೆದ ಪುಸ್ತಕವೇ “ಧರ್ಮಾತ್ಮ". ಸಜ್ಜನ ರಾಜಕಾರಣಿ ಎಂದು ಹೆಸರುವಾಸಿಯಾಗಿದ್ದ ಧರಂಸಿಂಗ್ ಸಮ್ಮಿಶ್ರ ಸರಕಾರದ ನೇತೃತ್ವವನ್ನು ವಹಿಸಿದ್ದರು. ಅಧಿಕ ಸಮಯ ಮುಖ್ಯಮಂತ್ರಿಯಾಗಿರಲು ಸಾಧ್ಯವಾಗದೇ ಹೋದರೂ ಹಲವಾರು ವರ್ಷ ಶಾಸಕರಾಗಿ, ಮಂತ್ರಿಯಾಗಿ, ಲೋಕಸಭಾ ಸದಸ್ಯರಾಗಿ ಕರ್ನಾಟಕ ರಾಜ್ಯಕ್ಕೆ ಸಲ್ಲಿಸಿದ ಸೇವೆ ಮರೆಯಲು ಸಾಧ್ಯವಿಲ್ಲ. ಧರಂಸಿಂಗ್ ಅವರ ಊರಿನವರೇ ಆದ ಸಾಹಿತಿ ದೇವು ಪತ್ತಾರ ಇವರು ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಆಯ್ದ ಸಾಲುಗಳು ನಿಮ್ಮ ಓದಿಗಾಗಿ... 

“ಕೆಲದಿನಗಳ ಹಿಂದೆ ನಿವೃತ್ತ ಡಿ.ಜಿ.ಪಿ ಡಾ ಡಿ.ವಿ ಗುರುಪ್ರಸಾದ್ ಫೋನ್ ಮಾಡಿ ‘ನಾನೊಂದು ಪುಸ್ತಕ ಬರೆದಿದ್ದೇನೆ. ಅದು ಮಾಜಿ ಮುಖ್ಯಮಂತ್ರಿ ಧರಂಸಿಂಗ್‌ ಅವರ ಬಗ್ಗೆ’ ಎಂದಾಗ ನನಗೆ ಸಹಜವಾಗಿಯೇ ಖುಷಿಯಾಯಿತು. ‘ನಾಲ್ಕು ದಶಕಗಳ ವೃತ್ತಿ ಬದುಕಿನಲ್ಲಿ ಹತ್ತಿರದಿಂದ ಕಂಡ ಅನುಭಗಳನ್ನು ದಾಖಲಿಸಿದ್ದೇನೆ’ ಎಂದ ಅವರು, ‘ನೀವು ಧರಂಸಿಂಗ್ ಊರಿನ ಕಡೆಯವರು ನೀವೇ ಅದಕ್ಕೆ ಮುನ್ನುಡಿ ಬರೆದುಕೊಡಬೇಕು’ ಎಂದು ಕೇಳಿದಾಗ ಅಚ್ಚರಿ, ಆತಂಕ, ಅನುಮಾನ ಏಕಕಾಲಕ್ಕೆ ಮೂಡಿದವು. ಜೊತೆಗೆ ‘ನಾನೇಕೆ’ ಎಂಬ ಪ್ರಶ್ನೆಯೂ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ.

1983ರಲ್ಲಿ ನಾನು ಶಹಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದೆ. ಶಹಾಪುರದ ಲಯನ್ಸ್ ಕ್ಲಬ್ ಒಂದು ಸಮಾರಂಭವನ್ನು ಏರ್ಪಡಿಸಿತ್ತು. ಅದರಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದವರು ಆಗ ಗುಲ್ಬರ್ಗ ಎಸ್ಪಿಯಾಗಿದ್ದ ಡಿ.ವಿ ಗುರುಪ್ರಸಾದ್. ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿತ್ತು. ಪ್ರಶಸ್ತಿ ಪತ್ರ+ಇಂಗ್ಲಿಷ್ ಕನ್ನಡ ಡಿಕ್ಷನರಿ+ಪೆನ್ನು+ಕಾಗದ ಹೀಗೆ ಹಲವು ವಸ್ತುಗಳನ್ನು ನೀಡಲಾಯಿತು. ನಮ್ಮ ಶಾಲೆಯಿಂದ ನಾನು ಆಯ್ಕೆಯಾಗಿದ್ದೆ. ಗುರುಪ್ರಸಾದ್ ಅವರಿಂದ ಅವುಗಳನ್ನು ಸ್ವೀಕರಿಸಿದ ನೆನಪು. ಅದು ನಾನು ಪಡೆದ ಮೊದಲ ಪ್ರಶಸ್ತಿ ಪತ್ರ. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ನನ್ನ ತಂದೆಯವರಿಗೆ ಆಗ ಉಂಟಾಗಿದ್ದ ಖುಷಿ ಅಪರಿಮಿತವಾಗಿತ್ತು. ನನಗೆ ನೀಡಿದ ಪ್ರಶಸ್ತಿ ಪತ್ರಕ್ಕೆ ಕಟ್ಟು ಹಾಕಿಸಿ ಮನೆಯಲ್ಲಿ ನೇತುಹಾಕಿದ್ದರು. ಈಗಲೂ ಅದು ಹಾಗೆಯೇ ಇದೆ.

ಬರೆಯುವು‌ದು ಮತ್ತು ಪುಸ್ತಕ ಪ್ರಕಟಿಸುವುದು ಗುರುಪ್ರಸಾದ್ ಅವರಿಗೆ ಸಹಜವಾದ ಪ್ರಕ್ರಿಯೆ. ಹೀಗಾಗಿಯೇ ಅವರ ಪುಸ್ತಕಗಳ ಸಂಖ್ಯೆಯು ಅವರ ವಯಸ್ಸಿನ ಸಂಖ್ಯೆಯನ್ನೂ ಮೀರಿ ಮುನ್ನಡೆದಿದೆ. ವೃತ್ತಿಯಲ್ಲಿದ್ದಾಗ ಕೆಲಸದ ಒತ್ತಡ ಮತ್ತು ವೃತ್ತಿಸಂಹಿತೆಗಳು ಅವರ ಕೈ ಕಟ್ಟಿದ್ದವು ಎನ್ನುವುದಕ್ಕೆ ನಿವೃತ್ತಿಯ ನಂತರ ಅವರು ಬರೆದು-ಪ್ರಕಟಿಸಿದ ಪುಸ್ತಕಗಳೇ ಸಾಕ್ಷಿ. ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಗುರುಪ್ರಸಾದ್ ಅವರಿಗೆ ಬರವಣಿಗೆಯ ಕೌಶಲ್ಯ ಸಿದ್ಧಿಸಿದೆ. ಹಾಗಂತ ಸಾಹಿತ್ಯದ ವಿದ್ಯಾರ್ಥಿಗಳೆಲ್ಲ ಲೇಖಕರಾಗಿರುತ್ತಾರೆ/ ಆಗಿರಬೇಕು ಎಂದೇನಲ್ಲ. ಅಲ್ಲಿಯೇ ಗುರುಪ್ರಸಾದ್ ಅವರ ವಿಶೇಷತೆ ಇರುವುದು. ಸಾಹಿತ್ಯದ ಓದಿನ ಹಿನ್ನೆಲೆ ಪೊಲೀಸ್ ಬದುಕಿನ ಅನುಭವ ದೃಶ್ಯಗಳೆರಡೂ ಹದವಾಗಿ ಮೇಳೈಸಿರುವುದು ಗುರುಪ್ರಸಾದ್ ಅವರ ಬರವಣಿಗೆಯ ವೈಶಿಷ್ಟ್ಯ.

ಈ ಹಿನ್ನೆಲೆಯಲ್ಲಿ ಡಿ.ವಿ. ಗುರುಪ್ರಸಾದ್ ಅವರು ಧರಂಸಿಂಗ್ ಅವರ ಬಗ್ಗೆ ಪುಸ್ತಕ ಬರೆದಿದ್ದೇನೆ ಎಂದಾಗ ‘ಆಕರ’ವೊಂದು ಸೃಷ್ಟಿಯಾಗಿದೆ ಎಂದು ಖುಷಿಯಾಯಿತು. ಇಂತಹ ಹಲವು ಆಕರಗಳು ಹುಟ್ಟಲಿ ಎಂಬ ಆಸೆ-ನಿರೀಕ್ಷೆಗೂ ಕಾರಣವಾಯಿತು. ಪುಸ್ತಕದ ಹಸ್ತಪ್ರತಿಯನ್ನು ಒಂದೇ ಸಿಟ್ಟಿಂಗ್ನಲ್ಲಿ ಓದಿ ಮುಗಿಸಿದೆ. ಹೌದು. ಇಡೀ ಪುಸ್ತಕವೇ ಸ್ವರೂಪವೇ ಹಾಗಿದೆ. ಕಾದಂಬರಿಯಂತೆ ಅಂಕಿ-ಸಂಖ್ಯೆಗಳಿಂದ ಬೋರು ಹೊಡೆಸುವುದಿಲ್ಲ. ಆತ್ಮಕತೆಯ ಪುಟಗಳಂತೆ ಇರುವುದು ಸಹಜವಾಗಿದೆ. ಅದರಿಂದ ಬರವಣಿಗೆಗೆ ಅಥೆಂಟಿಸಿಟಿ ದೊರೆತಿದೆ. ನೆನಪುಗಳ ಓಣಿಯಲ್ಲಿ ಓಡಾಡಿ ಬಂದ ಗುರುಪ್ರಸಾದ್ ಅವರು ಹಾದಿಯಲ್ಲಿದ್ದ ಹಲವು ಸಂಗತಿಗಳನ್ನು ಹೆಕ್ಕಿ ತಂದು ಈ ಪುಸ್ತಕದಲ್ಲಿ ಸೇರಿಸಿದ್ದಾರೆ. ಅನುಭವ ಆಧರಿಸಿದ ನೆನಪುಗಳ ಮರೆವಣಿಗೆಗೆ ಹಾಗೂ ಅದನ್ನು ಸರಳವಾಗಿ ಓದುಗನಿಗೆ ದಾಟಿಸುವುದು ಗುರುಪ್ರಸಾದ್ ಅವರ ಬರವಣಿಗೆಯ ವಿಶೇಷ. ಎದುರು ಕೂತು ಮಾತನಾಡಿದ ಅನುಭವ ಒದಗಿಸುತ್ತದೆ.

ಧರಂಸಿಂಗ್ ಅವರ ರಾಜಕೀಯ ಜೀವನದ ‘ಇನ್ನಿಂಗ್ಸ್’ ನಲ್ಲಿ ಹಾಗೂ ಸತತ 49 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಅವರು ಕಂಡದ್ದು ಕೇವಲ ಎರಡು ಸೋಲು. ಆ ಎರಡು ಸೋಲುಗಳನ್ನು ಹೊರತು ಪಡಿಸಿದರೆ ಅವರದು ಯಶೋಗಾಥೆ. ರಾಜಕೀಯ ಕ್ಷೇತ್ರಕ್ಕೆ ಬಂದಾಗಿನಿಂದ ಕೊನೆಯ ಉಸಿರು ಇರುವವರೆಗೆ ಒಂದೇ ರಾಜಕೀಯ ಪಕ್ಷದಲ್ಲಿದ್ದ ಧರಂಸಿಂಗ್ ಅವರು ಮಾತೃಪಕ್ಷದಲ್ಲಿಯೇ ನೆಲೆ ಕಂಡುಕೊಡಿದ್ದರು. ಪಕ್ಷ ನಿಷ್ಠೆಯೇ ಅವರನ್ನು ಮುಖ್ಯಮಂತ್ರಿ ಹುದ್ದೆಯವರೆಗೆ ಕರೆದೊಯ್ದಿತು. ಅದೇ ಅವರಿಗೆ ಸಂಸತ್ತಿಗೆ ಪ್ರವೇಶಿಸುವಂತೆ ಮಾಡಿತು. ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆ, ವಿರೋಧ ಪಕ್ಷದ ನಾಯಕನ ಸ್ಥಾನಗಳೂ ಒಲಿದು ಬಂದದ್ದಕ್ಕೆ ಪಕ್ಷ ನಿಷ್ಠೆಯೇ ಪ್ರಮುಖ ಕಾರಣ.

ರಾಜಕೀಯ ತಂತ್ರಗಾರಿಕೆಯಲ್ಲಿ ಧರಂಸಿಂಗ್ ಅವರಿಗೆ ಸಮನಾಗಿ ನಿಲ್ಲಬಲ್ಲವರು ಅಪರೂಪ. ಕೆಲವೇ ಮತಗಳಿರುವ ಸಮುದಾಯಕ್ಕೆ ಸೇರಿಯೂ ಸತತವಾಗಿ ಎಂಟು ಬಾರಿ ಗೆಲುವು ಸಾಧಿಸಲು ಸಾಧ್ಯವಾದದ್ದು ತಂತ್ರಗಾರಿಕೆಯ ಕಾರಣದಿಂದಲೇ. ಧರಂಸಿಂಗ್ ತಮ್ಮ ಅನುಗಾಲದ ಗೆಳೆಯ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಫಲವಾಗಿ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ಮಾಡಿಸುವುದು ಸಾಧ್ಯವಾಯಿತು. ಹೈದರಾಬಾದ್ ಕರ್ನಾಟಕದ ಬಹುದಿನದ ಬೇಡಿಕೆಯಾಗಿದ್ದ ಸಂವಿಧಾನದ ತಿದ್ದುಪಡಿ ಸಾಧ್ಯವಾಗಿದ್ದು ಉಭಯ ನಾಯಕರಿಂದ. ಪ್ರಾದೇಶಿಕ ಅಸಮಾನತೆಯ ಅರಿವಿದ್ದ ಧರಂಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡಗಳಲ್ಲಿ ಹೈಕೋರ್ಟ್ ಪೀಠ ಸ್ದಾಪನೆಯಾದವು. ಹಾಗೆ ನೋಡಿದರೆ ಧರಂಸಿಂಗ್ ಅವರು ತಮ್ಮ ರಾಜಕೀಯ ಜೀವನದ ಕೊನೆಯ ಹತ್ತು ವರ್ಷಗಳಲ್ಲಿ ಹಳೆಯ ನಿಷ್ಕ್ರಿಯತೆಯ ಬಾಕೀ ಎಲ್ಲ ತೀರಿಸುವಂತೆ ಕೆಲಸ ಮಾಡಿದರು. ಅದೇ ಅವರ ಮೇಲಿನ ಪ್ರೀತಿ-ಗೌರವ ಹೆಚ್ಚಿಸಲು ಕಾರಣ.

ಕರ್ನಾಟಕ ಕಂಡ ಮಹತ್ವದ ಮತ್ತು ವಿಶಿಷ್ಟ ರಾಜಕಾರಣಿ ಧರಂಸಿಂಗ್ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಗುರುಪ್ರಸಾದ್ ಮಹತ್ವದ ಕೆಲಸ ಮಾಡಿದ್ದಾರೆ. ಇದು ಗುರುಪ್ರಸಾದ್ ಅವರ ಕಣ್ಣಿಗೆ ಕಂಡ ಧರಂಸಿಂಗ್. ಅಧಿಕಾರಿಯಾಗಿ ತಮ್ಮ ಜೊತೆಗೆ ಒಡನಾಟದ ವಿವರಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಇದು ಧರಂಸಿಂಗ್ ಅವರಿಗೆ ಸಂದ-ಸಲ್ಲುತ್ತಿರುವ ಅತ್ಯುತ್ತಮ ಶ್ರದ್ಧಾಂಜಲಿ ಶಬ್ದಾಂಜಲಿ.

ಪುಸ್ತಕದುದ್ದಕ್ಕೂ ಗುರುಪ್ರಸಾದ್ ಅವರಿಗೆ ಧರಂಸಿಂಗ್ ಅವರ ಬಗೆಗಿದ್ದ ಪ್ರೀತಿ-ವಿಶ್ವಾಸ-ಗೌರವಗಳು ಹಲವವು ಘಟನೆ-ವಿವರಗಳಲ್ಲಿ ದಾಖಲಾಗಿವೆ. ಪುಸ್ತಕ ಓದಿ ಮುಗಿಸಿದಾಗ ದಾಖಲಿಸಲಾಗದೇ ಬಿಟ್ಟ ವಿವರಗಳೂ ಇದ್ದವು-ಇವೆ ಎನ್ನಿಸದೇ ಇರದು. ಅದಕ್ಕೆ ವಿವಾದಾಸ್ಪದ ಸಂಗತಿಗಳನ್ನು ಚರ್ಚೆಗೆ ಎತ್ತಿಕೊಳ್ಳಲೂ ಬಯಸುತ್ತಿರಲಿಲ್ಲ. ಆದರೆ, ವಾದ-ವಿವಾದಗಳಿಲ್ಲದೆ ರಾಜಕಾರಣವೇ ಇಲ್ಲ. ಒಬ್ಬ ವ್ಯಕ್ತಿಯ ಬಗೆಗಿನ ಎಲ್ಲ ಅಂಶಗಳನ್ನು ಒಂದೇ ಪುಸ್ತಕದಲ್ಲಿ ನಿರೀಕ್ಷಿಸಬೇಕಿಲ್ಲ. ಹೀಗೆ ಹಲವು ನೆಲೆಯಲ್ಲಿ ಕಟ್ಟುವ ಕೆಲಸವನ್ನು ಬೇರೆಯವರೂ ಮಾಡಬಹುದು-ಮಾಡಬೇಕು. ಸೌಜನ್ಯ-ಸಭ್ಯತೆ-ಒಳ್ಳೆಯತನಗಳನ್ನು ಒಳಗೊಂಡ ಧರಂಸಿಂಗ್ ಅವರ ‘ನುಡಿಚಿತ್ರ’ ಈ ಪುಸ್ತಕದಲ್ಲಿದೆ. ಅಲ್ಲಲ್ಲಿ ಅಸಮಾಧಾನಕರ ಅಂಶಗಳನ್ನು ಮಾಸಲಿಗೆ ಎಂಬಂತೆ ದಾಖಲಿಸಿದ್ದಾರೆ. ಆಧುನಿಕ ಕರ್ನಾಟಕದ ಚರಿತ್ರೆ ಬರೆಯಬಯಸುವವರಿಗೆ ಈ ಗ್ರಂಥ ಒಂದು ಪ್ರಮುಖ ಆಕರ ಎಂಬುವುದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿ ಡಿ.ವಿ.ಗುರುಪ್ರಸಾದ್ ಅವರನ್ನು ಅಭಿನಂದಿಸುತ್ತೇನೆ ಮತ್ತು ಇಂತಹ ಅಪರೂಪದ ಮಾಹಿತಿ-ವಿವರಗಳಿರುವ ಪುಸ್ತಕಗಳು ಅವರಿಂದ ಬರಲಿ ಎಂದು ಆಶಿಸುತ್ತೇನೆ.” ೨೧೨ ಪುಟಗಳ ಈ ಪುಸ್ತಕ ಅಪರೂಪದ ಕಾಜಕಾರಣಿಯಾದ ಧರಂಸಿಂಗ್ ಅವರನ್ನು ಇನ್ನಷ್ಟು ತಿಳಿದುಕೊಳ್ಳಲು ಸಹಕಾರಿ.