ಧರ್ಮೋ ರಕ್ಷತಿ ರಕ್ಷಿತಃ

ಧರ್ಮೋ ರಕ್ಷತಿ ರಕ್ಷಿತಃ

ಒಂದು ಕಾಡಿನಲ್ಲಿ ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವಾದಾಗ ನಿಧಾನವಾಗಿ ತಾನು ಹುಡುಕಿಕೊಂಡ ಸ್ಥಳದ ಕಡೆ ನಡೆಯ ತೊಡಗಿತು. ನಡೆಯುತ್ತಾ ನಡೆಯುತ್ತಾ ತಾನು ಹುಡುಕಿ ಕೊಂಡ ಸ್ಥಳಕ್ಕೆ ತಲುಪಿದ ಜಿಂಕೆಗೆ ಪ್ರಸವ ವೇದನೆ ತಾಳದಾಯಿತು. ಆ ಕ್ಷಣಕ್ಕೆ ಆಕಾಶದಲ್ಲಿ ಕಾರ್ಮೋಡಗಳು ದಟ್ಟವಾಯಿತು, ಮಿಂಚಿನಿಂದ ಕಾಡಿನಲ್ಲಿ ಬೆಂಕಿ ಹತ್ತಿತು. ಇದನ್ನು ಕಂಡ ಜಿಂಕೆ ಆ ಸ್ಥಳದಿಂದ ದೂರ ಹೋಗಲು ತಿರುಗಿತು. ತಿರುಗಿದ ಜಿಂಕೆಗೆ ಆಗ ಕಂಡದ್ದು ಏನೆಂದರೆ ಅದರ ಎಡಕ್ಕೆ ಒಬ್ಬ ಬೇಟೆಗಾರ ಜಿಂಕೆಗೆ ಗುರಿ ಮಾಡಿ ಬಾಣ ಹೂಡಿದ್ದಾನೆ. ಇದನ್ನು ಕಂಡು ಆಘಾತದಿಂದ ಜಿಂಕೆ ಬಲಕ್ಕೆ ತಿರುಗಿದಾಗ ಅಲ್ಲೊಂದು ಹಸಿದ ಸಿಂಹ ಇದರೆಡೆಗೆ ಬರುತ್ತಿದೆ.

ಪ್ರಸವ ವೇದನೆ ತಾಳಲಾರದ ಜಿಂಕೆ ಈಗ ಏನು ಮಾಡೀತು ? ಜಿಂಕೆ ಬದುಕುಳಿಯುತ್ತದಾ? ತನ್ನ ಮಗುವಿಗೆ ಜನ್ಮ ನೀಡುತ್ತದಾ? ಕಾಡಿನ ಬೆಂಕಿಗೆ ಎಲ್ಲರೂ ಆಹುತಿಯಾ ?ಆ ಕ್ಷಣ ಏನು, ಎತ್ತ, ಹೇಗೆ?  

ಜಿಂಕೆ ತನ್ನ ಎಡಕ್ಕೆ ಹೋಗುತ್ತದಾ ?.. ಅಲ್ಲಿ ಬೇಟೆಗಾರ ಇದ್ದಾನೆ.

ಜಿಂಕೆ ತನ್ನ ಬಲಕ್ಕೆ ಹೋಗುತ್ತದಾ ?.. ಅಲ್ಲಿ ಹಸಿದ ಸಿಂಹ ಇದೆ.

ತನ್ನ ಸ್ಥಳದಿಂದ ಮುಂದಕ್ಕೆ ಹೊರಟರೆ ?.. ಕಾಡಿಗೆ ಬೆಂಕಿ ಬಿದ್ದಿದೆ.

ತನ್ನ ಸ್ಥಳದಿಂದ ಹಿಂದಕ್ಕೆ ಸರಿದರೆ ? ಅಲ್ಲಿ ನದಿ ಇದೆ.

ಪ್ರಶ್ನೆ : ಹಾಗಾದರೆ ಈ ಕ್ಷಣಕ್ಕೆ ಗರ್ಭಿಣಿ ಜಿಂಕೆ ಏನು ಮಾಡೀತು ? 

ಉತ್ತರ : ಈ ಕ್ಷಣಕ್ಕೆ ಜಿಂಕೆ ತನ್ನ ಗಮನವೆಲ್ಲ ತನ್ನ ಮಗುವಿಗೆ ಜನ್ಮ ನೀಡುವುದರಲ್ಲಿ ಮಾತ್ರ ಕೇಂದ್ರೀಕರಿಸಿತು. ತನ್ನ ಆತಂಕ, ಚಿಂತೆ, ದುಗುಡವನ್ನೆಲ್ಲಾ ಬದಿಗಿಟ್ಟು ಪರಮಾತ್ಮನಲ್ಲಿ ನಂಬಿಕೆ ಇಟ್ಟು ತನ್ನ ಕರ್ತವ್ಯ, ತನ್ನ ತಾಯಿ ಧರ್ಮವನ್ನು ಪಾಲಿಸಲು ತನ್ನ ಕುಡಿಯ ಜನನ ಕಾರ್ಯದಲ್ಲಿ ಮಗ್ನವಾಯಿತು. ಚಿಂತೆಯನ್ನೆಲ್ಲಾ ಚಿನ್ಮಯನಿಗೆ ಕೊಟ್ಟ ಮೇಲೆ, ಜಗದೊಡೆಯ ಜಗನ್ನಾಥನ  ನಂಬಿದ ಮೇಲೆ ಎಲ್ಲವೂ ಅವನ ಭಾರ ತಾನೇ ...!

ಆಗ.. ಆ .. ಒಂದು ಕ್ಷಣದಲ್ಲಿ.... ದಟ್ಟವಾದ ಕಾರ್ಮೋಡಗಳಿಂದ ಕಣ್ಣು ಕೋರೈಸುವ ಮಿಂಚು ಹೊಡೆಯಿತು. ಬೇಟೆಗಾರನ ಕಣ್ಣಿಗೆ ಕತ್ತಲು ಆವರಿಸಿತು. ಆತ ಹೂಡಿದ ಬಾಣ ಗುರಿ ತಪ್ಪಿ ಹಸಿದ ಸಿಂಹಕ್ಕೆ ತಗುಲಿತು. ದಟ್ಟವಾದ ಕರಿ ಮೋಡಗಳಿಂದ ಬಿರುಸಾಗಿ ಮಳೆ ಸುರಿಯ ತೊಡಗಿತು. ಮಳೆಯ ಆರ್ಭಟಕ್ಕೆ ಕಾಡಿಗೆ ಹತ್ತಿದ ಬೆಂಕಿ ಪ್ರಶಾಂತವಾಯಿತು. ಆ ಕ್ಷಣಕ್ಕೆ ತಾಯಿ ಜೀವ ತನ್ನ ಮುದ್ದಾದ ಮಗುವಿಗೆ ಜನ್ಮ ನೀಡಿತು.

ಶ್ರೀಕೃಷ್ಣ ಪರಮಾತ್ಮ ಹೇಳಿದಂತೆ ಯಾವ ಫಲದ ಅಪೇಕ್ಷೆಯೂ ಇಲ್ಲದೆ, ಯಾವ ಪರಿಣಾಮದ ಬಗ್ಗೆಯೂ ಯೋಚಿಸದೆ ಜಿಂಕೆ ತನ್ನ ತಾಯಿ ಧರ್ಮ ಪಾಲಿಸಿತು, ಗೆದ್ದಿತು. ಕಷ್ಟ ಬಂದಾಗ ನಾವು ಸಂಭವಿಸಬಹುದಾದ ಎಲ್ಲ ಸಂಭವನೀಯತೆಯನ್ನು ಯೋಚಿಸಿ ದಿಕ್ಕು ತಪ್ಪುತ್ತೇವೆ, ಹೆದರುತ್ತೇವೆ. ಮಾಡುವ ಕರ್ತವ್ಯದಿಂದ, ನಮ್ಮ ಧರ್ಮದಿಂದ ವಿಮುಖರಾಗುತ್ತೇವೆ. ಭಗವಂತನನ್ನು ನೆನೆದು, ನಮ್ಮ ಕರ್ತವ್ಯವನ್ನು ಮಾಡೋಣ, ಧರ್ಮ-ಕರ್ಮ ಗಳ ಫಲ ಎಲ್ಲ ಪರಮಾತ್ಮನ ಭಾರ !!!....

ll ಕರ್ಮಣ್ಯೇವಾಧಿಕಾರಸ್ತೇ ಮಾ 

   ಫಲೇಷು ಕದಾಚನ l

   ಮಾ ಕರ್ಮಫಲಹೇತುರ್ಭೂಃ 

   ಮಾ ತೇ ಸಂಗೋಸ್ತ್ವಕರ್ಮಣಿ ll

ಧರ್ಮೋ ರಕ್ಷತಿ ರಕ್ಷಿತಃ #

(ನಾನು ಓದಿದ, ಈ ಲೇಖನ ಹೃದಯವನ್ನು ಮುಟ್ಟುವ ಹಾಗೇ ಇತ್ತು. ಇದನ್ನು ನಿಮ್ಮ ಹತ್ರ ಹಂಚಿಕೊಳ್ಳುವ ಉದ್ದೇಶದಿಂದ, ಪೋಸ್ಟ್ ಮಾಡಿದ್ದೇನೆ)

-ಸಂತೋಷ್ ಕುಮಾರ್, ಸುರತ್ಕಲ್ (ಸಂಗ್ರಹ)