ಧರ್ಮ ರಕ್ಷಣೆಗಾಗಿ ಅಧರ್ಮ ಅಥವಾ ಹಿಂಸೆ ಸರಿಯೇ?
ಬಾಂಗ್ಲಾ ದೇಶವೇ ಇರಲಿ, ಬರ್ಮಾ ದೇಶವೇ ಇರಲಿ, ಭಾರತ ದೇಶವೇ ಇರಲಿ, ಪಾಕಿಸ್ತಾನವೇ ಇರಲಿ, ಅಮೆರಿಕ ದೇಶವೇ ಇರಲಿ, ಧರ್ಮ ರಕ್ಷಣೆಗಾಗಿ ಅಧರ್ಮ ಅಥವಾ ಹಿಂಸೆ ಸರಿಯೇ ? ಒಪ್ಪಿತವೇ ? ಈಗಲೂ ಪ್ರಸ್ತುತವೇ ? ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಬೌದ್ದ, ಜೈನ ಮತ್ತು ಇನ್ನೂ ಅಧೀಕೃತ ಮಾನ್ಯತೆ ಪಡೆಯದ ಬಸವ ಧರ್ಮದ ಮೂಲ ಆಶಯಗಳ ಹಿನ್ನೆಲೆಯಲ್ಲಿ...
ಬೌದ್ದ ಮತ್ತು ಜೈನ ಧರ್ಮಗಳು ಅಹಿಂಸೆ ಮತ್ತು ಸರಳತೆಯನ್ನು, ಆಸೆ ಮತ್ತು ನಿಯಂತ್ರಣಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಹಿಂಸೆಯನ್ನು ಯಾವುದೇ ರೂಪದಲ್ಲೂ ಪ್ರೋತ್ಸಾಹಿಸುವುದಿಲ್ಲ. ಧರ್ಮ ರಕ್ಷಣೆಯ ಒತ್ತಡವನ್ನು ಹೇರುವುದಿಲ್ಲ. ಬಸವ ಧರ್ಮ ಸಮ ಸಮಾಜದ, ಕಾಯಕ ತತ್ವದ ಅಡಿಯಲ್ಲಿ ಸಕಲರಲ್ಲಿ ಒಳ್ಳೆಯದನ್ನೇ ಬಯಸುವ ಆಶಯವನ್ನು ಹೊಂದಿದೆ. ದಯವೇ ಧರ್ಮ ಮೂಲ ಎನ್ನುತ್ತದೆ. ಇನ್ನು ಹಿಂಸೆಯ ಮಾತೆಲ್ಲಿ?
ಬುದ್ದ, ಮಹಾವೀರ ಕೇಂದ್ರಿತ ಜೈನ ತೀರ್ಥಂಕರರು ಮತ್ತು ಬಸವೇಶ್ವರರು ವ್ಯಕ್ತಿ ಕೇಂದ್ರಿತ ಚಿಂತನೆಗಳ ಆಧಾರದಲ್ಲಿ ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಕೆಲವು ಅಂಶಗಳನ್ನು ಹೇಳಿದ್ದಾರೆ. ಅವುಗಳನ್ನು ಧರ್ಮ ಎನ್ನುವುದಕ್ಕಿಂತ ಬದುಕಿನ ಸಾರ್ಥಕತೆಯ ಮಾರ್ಗ ಸೂತ್ರಗಳು ಎನ್ನಬಹುದು. ಒಂದು ರೀತಿಯಲ್ಲಿ ಈ ಧರ್ಮಗಳು ಅಥವಾ ವಿಚಾರಗಳು ಹಿಂದೂ ಜೀವನ ಶೈಲಿಯ ಬಂಡಾಯದ, ಪ್ರತಿಭಟನೆಯ ರೂಪಾಂತರಗಳು ಎಂದು ಸರಳವಾಗಿ ಹೇಳಬಹುದು.
ಕ್ರಿಶ್ಚಿಯನ್ ಧರ್ಮದಲ್ಲಿ ಶತ್ರುಗಳನ್ನು ಪ್ರೀತಿಸಿ, ನೆರೆಹೊರೆಯವರನ್ನು ಪ್ರೀತಿಸಿ, ಸಮಾಜದ ಅತ್ಯಂತ ದುರ್ಬಲ ವರ್ಗದವರನ್ನು ಪ್ರೀತಿಸಿ - ಅವರಿಗೆ ನೆರವಾಗಿ ಎಂದು ಸ್ಪಷ್ಟವಾಗಿ ಹೇಳುತ್ತದೆ. ಆ ಧರ್ಮದ ಅನುಯಾಯಿಗಳು ಅನಂತರದಲ್ಲಿ ಮತಾಂತರಕ್ಕೆ ಪ್ರೋತ್ಸಾಹಿಸಿದರು ಎಂಬುದು ನಿಜ. ಆದರೆ ಅದು ಆಸೆ ಆಮಿಷಗಳ ರೂಪದಲ್ಲಿ ಹೆಚ್ಚಾಗಿ ಕಂಡುಬರುತ್ತದೆಯೇ ಹೊರತು ಈಗಿನ ಕಾಲದಲ್ಲಿ ಹಿಂಸೆಯ ರೂಪ ಅಷ್ಟಾಗಿ ಕಾಣುವುದಿಲ್ಲ.
ಆದರೆ, ಹಿಂದೂ ಮತ್ತು ಇಸ್ಲಾಂ ಧರ್ಮದಲ್ಲಿ ಧರ್ಮದ ರಕ್ಷಣೆಗಾಗಿ ಹಿಂಸೆಯ ಪ್ರತಿಪಾದನೆ ಬೇರೆ ಬೇರೆ ರೂಪದಲ್ಲಿ ಕಂಡುಬರುತ್ತವೆ. ಕಾನೂನಿನ ಪರಿಭಾಷೆಯಂತೆ ಧರ್ಮದ ಅರ್ಥವನ್ನು ಸಹ ಅನೇಕ ಕೋನಗಳಲ್ಲಿ ವಿಧವಿಧವಾಗಿ ಅರ್ಥೈಸಬಹುದು. ಆದರೆ ಇಲ್ಲಿ ಸಾಮಾನ್ಯ ಜನರ ಸಾಮಾನ್ಯ ತಿಳಿವಳಿಕೆಯ ಆಧಾರದಲ್ಲಿ ಇದನ್ನು ನೋಡುವ ಒಂದು ಪ್ರಯತ್ನ.
ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯಲ್ಲಿ, ಯುದ್ಧಭೂಮಿಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಭೋದಿಸುವ ಸಂದೇಶದಲ್ಲಿ ಧರ್ಮ ರಕ್ಷಣೆಗಾಗಿ ಅಧರ್ಮಿಗಳನ್ನು ಕೊಲ್ಲಬೇಕಾಗುತ್ತದೆ. ಅದಕ್ಕಾಗಿ ತಂತ್ರ, ಪ್ರತಿತಂತ್ರ, ಹಿಂಸೆ ಸೇರಿ ಯಾವುದೇ ಮಾರ್ಗವನ್ನು ಅನುಸರಿಸಬಹುದು. ಇಲ್ಲದಿದ್ದರೆ ಅಧರ್ಮ ಅನ್ಯಾಯ ಹೆಚ್ಚಾಗಿ ಇಡೀ ಸಮಾಜದ ಅಸ್ತಿತ್ವವೇ ಕುಸಿದು ಹೋಗುತ್ತದೆ. ಅಧರ್ಮಿಗಳು ಮತ್ತು ಅವರ ಬೆಂಬಲಿಗರು ಸಹ ಶಿಕ್ಷೆಗೆ ಅರ್ಹರು ಎಂಬ ಅರ್ಥದಲ್ಲಿ ವ್ಯಾಖ್ಯಾನಿಸಲಾಗಿದೆ. ಬಹುತೇಕ ಇದೇ ಅರ್ಥಕೊಡುವ ಅಂಶಗಳನ್ನು ಇಸ್ಲಾಂ ಸಹ ಪ್ರತಿಪಾದಿಸುತ್ತದೆ. ಇಲ್ಲಿ ಕೆಲವು ಗೊಂದಲಗಳು ಇವೆ ಅಥವಾ ಹುಟ್ಟುಹಾಕಲಾಗಿದೆ ಅಥವಾ ಅರ್ಥೈಸಲಾಗಿದೆ.
ಕಾಫೀರರನ್ನು ಕೊಲ್ಲಿ ಎಂದು ಹೇಳಲಾಗಿದೆಯಂತೆ. ಅಂದರೆ ಅಧರ್ಮೀಯರನ್ನು ಅಥವಾ ಧರ್ಮಕ್ಕೆ ವಿರೋಧ ಇರುವವರನ್ನು ಅಥವಾ ಅನ್ಯ ಧರ್ಮೀಯರನ್ನು ಕೊಂದು ಇಸ್ಲಾಂ ಧರ್ಮ ರಕ್ಷಿಸಿ ಎಂದು ಅರ್ಥೈಸಲಾಗುತ್ತದೆ. ಭಗವದ್ಗೀತೆಯ ಅರ್ಥದಂತೆ ಅಧರ್ಮೀಯರನ್ನು ಕೊಂದಾದರೂ ಧರ್ಮ ರಕ್ಷಿಸಿ ಎಂಬುದು ಮೂಲ ಇಸ್ಲಾಂ ಧರ್ಮದ ಆಶಯ. ಆದರೆ ಆಧುನಿಕ ಕಾಲದ ಕೆಲವು ಭಯೋತ್ಪಾದಕ ಸಂಘಟನೆಗಳು ಮತ್ತು ಇಸ್ಲಾಂ ವಿರೋಧಿ ಗುಂಪಿನವರು ಇಡೀ ಜಗತ್ತೇ ಅಲ್ಲಾ ಎಂಬ ದೇವರ ಸೃಷ್ಟಿ. ಆದ್ದರಿಂದ ಜಗತ್ತನ್ನೇ ಇಸ್ಲಾಮೀಕರಣ ಮಾಡಿ ಎಂದು ತಪ್ಪು ಮಾಹಿಯ ನೀಡಿ ಇಸ್ಲಾಂ ಎಂದರೆ ಹಿಂಸೆ ಎಂಬುದಾಗಿ ತಪ್ಪು ಕಲ್ಪನೆ ಮೂಡಿಸಿದ್ದಾರೆ ಎಂದೂ ಹೇಳಲಾಗುತ್ತದೆ.
ಒಟ್ಟಿನಲ್ಲಿ ಮೂಲ ಧರ್ಮ ರಚಿಸಿದವರ ಆಶಯ ಮತ್ತು ಉದ್ದೇಶ ಏನೇ ಇರಲಿ, ಇಂದಿನ ಎರಡೂ ಧರ್ಮದ ಅನುಯಾಯಿಗಳನ್ನು, ಅವರ ಆಚರಣೆಗಳನ್ನು, ಅವರ ಅಭಿಪ್ರಾಯಗಳನ್ನು, ಅವರ ನಡವಳಿಕೆಗಳನ್ನು ನೋಡಿದಾಗ ಇಬ್ಬರಲ್ಲೂ ಶ್ರೇಷ್ಠತೆಯ ವ್ಯಸನ ಮತ್ತು ಇನ್ನೊಂದು ಧರ್ಮದ ಬಗ್ಗೆ ಅಸಹನೆ - ದ್ವೇಷ ತುಂಬಿಕೊಂಡಿರುವುದನ್ನು ಕಾಣಬಹುದು. ಅಲ್ಲದೇ ಹಿಂಸೆಯನ್ನು ಮಾಡಿಯಾದರೂ ನಮ್ಮ ಧರ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಜಿದ್ದಿಗೆ ಬಿದ್ದಿದ್ದಾರೆ.
ಈ ಎರಡೂ ಧರ್ಮದ ತತ್ವಗಳಲ್ಲಿ ವ್ಯಕ್ತಿಯನ್ನು ಗೌಣವಾಗಿಸಿ ಧರ್ಮವನ್ನು ಎತ್ತಿಹಿಡಿಯಲಾಗಿದೆ. ಆತನ ಸ್ವತಂತ್ರ ಚಿಂತನೆಗಳಿಗೆ ಕಡಿವಾಣ ಹಾಕಲಾಗಿದೆ. ಧರ್ಮದ ನೆರಳಲ್ಲಿ ಬದುಕನ್ನು ನಡೆಸಲು ಸೂಚಿಸಲಾಗಿದೆ. ಈ ಕಾರಣದಿಂದಲೇ ಧರ್ಮ ರಕ್ಷಣೆಯ ಹೆಸರಿನಲ್ಲಿ ಹಿಂಸೆ ಜಾಸ್ತಿಯಾಗಿದೆ. ಈ ಸಂದರ್ಭದಲ್ಲಿ ನಾವು ಮಾಡಬಹುದಾದದ್ದು ಏನು ?
ಯಾರು ಒಪ್ಪಲಿ ಅಥವಾ ಒಪ್ಪದಿರಲಿ ಈ ಕ್ಷಣದ ಈ ಧರ್ಮಗಳು ನಮ್ಮ ವಿನಾಶಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ಈ ಧರ್ಮದ ಆಚರಣೆಗಳು ಮತ್ತು ನಂಬಿಕೆಗಳನ್ನು ಖಾಸಗಿ ಸಂಪ್ರದಾಯವಾಗಿ ಮನೆಯೊಳಗಿನ ವ್ಯವಹಾರದಂತೆ ಭಾವಿಸಬೇಕು. ಸಾರ್ವಜನಿಕವಾಗಿ ನಮ್ಮ ದೇಶದ ಸಂವಿಧಾನವೇ ನಿಜವಾದ ಧರ್ಮ ಎಂದು ಅದಕ್ಕೆ ನಿಷ್ಠರಾಗಿರಬೇಕು. ಕಾಲಕ್ಕೆ ತಕ್ಕಂತೆ ಕೆಲವು ನಿಯಮಾವಳಿಗಳನ್ನು ಜನರ ಶ್ರೇಯೋಭಿವೃದ್ದಿಗಾಗಿ ತಿದ್ದುಪಡಿ ಮಾಡುತ್ತಾ, ವ್ಯಕ್ತಿಯ ಘನತೆಯನ್ನು, ಸ್ವಾತಂತ್ರ್ಯವನ್ನು, ಸಮಾನತೆಯನ್ನು ಕಾಪಾಡುತ್ತಾ ಸಂವಿಧಾನವೇ ಧರ್ಮ ಎಂದು ಭಾವಿಸಿದಲ್ಲಿ ಆಧುನಿಕ ನಾಗರಿಕ ಸಮಾಜದ ಬದುಕು ಧರ್ಮಗಳ ಕಾಲಕ್ಕಿಂತ ಹೆಚ್ಚು ಸಹನೀಯ ಮತ್ತು ನೆಮ್ಮದಿತ್ತ ಸಾಗುತ್ತದೆ. ಈ ವಿಷಯದಲ್ಲಿ ನೀವು ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಮತ್ತೊಮ್ಮೆ ಯೋಚಿಸಿ. ಇದು ಸರಿ ಎನಿಸಿದಲ್ಲಿ ಹಿಂಸೆಯ ವಿರುದ್ಧ, ಸಂವಿಧಾನದ ಪರವಾಗಿ ನಿಮ್ಮ ಧ್ವನಿ ಮೊಳಗಲಿ.
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ