ಧಾರವಾಡಕ ಕಾಡುಕೋಣ ಓಡಿಬಂದಿತ್ತ..!

ಧಾರವಾಡಕ ಕಾಡುಕೋಣ ಓಡಿಬಂದಿತ್ತ..!

ಬರಹ

ಸೂರ್ಯವಂಶಿಗೆ ಬೆಳಿಗ್ಗೆ ೬ಕ್ಕೆ ಮೊಬೈಲ್ ರಿಂಗಣಿಸಿದರೆ ಹೇಗಾಗಬೇಡ? ತಪ್ಪಿ, ಬೇಗ ಏಳಬೇಕು ಎಂದುಕೊಂಡು ‘ಅಲಾರಾಮ್’ ಇಟ್ಟಿದ್ದೇನೆಯೇ? ಎಂದು ಒಲ್ಲದ ಮನಸ್ಸಿನಿಂದ ತಡಕಾಡಿ, ನಿದ್ದೆ ಕಣ್ಣಿನಲ್ಲಿ ಜಂಗಮವಾಣಿ ಎತ್ತಿದರೆ ಆ ಕಡೆಯಿಂದ ಪ್ರೊ.ಗೋಪಾಲಕೃಷ್ಣ ಜೋಶಿ ಅವರ ಕರೆ! ಇಷ್ಟು ಬೆಳಿಗ್ಗೆ ಅದ್ಯಾವ ಮೀಟಿಂಗ್ ನನ್ನ ಈ ಹಿರಿಯ ಅಣ್ಣಂದು ಎಂದು ಲೊಚಗುಟ್ಟಿದ್ದಾಯಿತು. ಮುಂದೆ ಕೇಳಿ..

ತಡಬಡಾಯಿಸಿ ‘ಸರ್..ಹೇಳಬೇಕು..’ ಅಂತ ನಾನು ಅಂದಿದ್ದೇ ತಡ..ಆ ಕಡೆಯಿಂದ ‘ಅಲ್ಲೋ ಮಾರಾಯಾ ಗಂಟೆ ೬. ಇನ್ನೂ ಎದ್ದಿಲ್ಲ? ಹರ್ಷ, ನಿಮ್ಮ ಓಣಿಯೊಳಗ ಕಾಡುಕೋಣ ಬೈಸನ್..ಬೈಸನ್ ಬಂದದ. ಪೂನಾ-ಬೆಂಗಳೂರು ರಸ್ತೆ ಮ್ಯಾಲಿನ ಮಾಡರ್ನ ಥೇಟರ್ ಮುಂದಿಂದ ಓಡಿಸಿಕೊಂಡು ಬಂದೇನಿ. ನಮ್ಮ ಪ್ರೊ.ಗಂಗಾಧರ ಕಲ್ಲೂರ ಅದರ ಬೆನ್ನು ಹತ್ತಿ ಓಡಿಸಿ..ಓಡಿಸಿ ಯಾರದರ ಕಂಪೌಂಡಿನೊಳಗ ಅಥವಾ ದನದ ಕೊಟ್ಟಿಗೆಯೊಳಗ ಹಾಕಬೇಕು ಅಂತ ಸರ್ಕಸ್ ಮಾಡ್ಲಿಕತ್ಯಾರ. ನೀ ಕ್ಯಾಮೆರಾ ಹೆಗಲಿಗೆ ಸಿಕ್ಕಿಸಿಕೊಂಡ ಬಾರೋ..ಏನು ಎಲ್ಲಾ ಫೋನ್ಯಾಗ ಹೇಳು ಅಂದ್ಯೋ? ಪುಣ್ಯಾತ್ಮಂದು ‘ಆರ್ಮ್ ಚೇರ್ ಜರ್ನಲಿಸಂ’! ಅಂದ್ರು.

ಜೋಗ ಜಲಪಾತದ ದಭೆ ದಭೆ ತರಹ ಪ್ರೊ. ಗೋಪಾಲ ಜೋಶಿ ‘ರನ್ನಿಂಗ ಕಾಮೆಂಟ್ರಿ’. ನನಗ ಅನ್ನಿಸ್ತು. ನಿದ್ದಿ ಗುಂಗಿನೊಳಗ ನಮ್ಮ ಸರ್ ವಾಕಿಂಗ್ ಹೋಗ್ಯಾರ. ನಮ್ಮ ಮಾಳಮಡ್ಡಿಯೊಳಗಿನ ಗೌಳ್ಯಾರ ದಡ್ಡಿಯೋಳಗಿನ ದೊಡ್ಡ ಕೋಣ, ಇವರಿಗೆ ಹಂಗ ಕಂಡದ. ಮಲಗಿದವರ ನಿದ್ದಿ ಕೆಡಿಸಲಿಕ್ಕೆ ಈ ಪ್ರತಾಪ..ಪ್ರಲಾಪ.

‘ಸರ್..ನೀವು ಕಣ್ಣಾರೆ ನೋಡೀರಿ? ಅದು ಕಾಡು ಕೋಣ ಹೌದ? ಯಾಕಂದ್ರ ಧಾರವಾಡ ಸುತ್ತ ೪೦ ಕಿಲೋ ಮೀಟರ್ ಪರಿಧಿಯೊಳಗ ಕಾಂಕ್ರೀಟ್ ಕಾಡು, ಯಂತ್ರ ಮಾನವರನ್ನ ಬಿಟ್ರ ಯಾರೂ ಇಲ್ಲ. ಅದೆಲ್ಲಿಂದ ಬಂದೀತು?’ ಅಂದು ನಕ್ಕೆ.
‘ಪುಣ್ಯಾತ್ಮಾ..ಇಲ್ಲೇ ಕುಮಾರ್ ಭಾಗವತ್, ಡಾ. ಸಂಜೀವ ಕುಲಕರ್ಣಿ, ಪ್ರೊ. ಗಂಗಾಧರ ಕಲ್ಲೂರ, ಡಾ. ಪ್ರಕಾಶ ಭಟ್ ಮತ್ತ ಮೋಹನ್ ರಾವ್ ಮೋರೆ ಎಲ್ರೂ ಇದಾರ. ಮಂಜುನಾಥಪುರ, ರೆಡ್ಡಿ ಕಾಲೋನಿ ವೆಂಕಪ್ಪನ ಗುಡಿಯ ಹತ್ತಿರ ಇರೋ ರಿಟಾಯರ್ಡ ಎಸ್.ಪಿ. ನಾಗನೂರ ಅವರ ಮನಿ ಕಂಪೌಂಡಿನೊಳಗ ದೆವ್ವನಾಂಗ ನಿಂತದ..ಲೊಗೂನ ಬಾ..’ ಅವರ ಧಾವಂತ ನೋಡಬೇಕಿತ್ತು.

ಅವರ ಆಕ್ಶೇಪಣೆಗೆ ಜೈ ಅಂದು ಮನೆ ಮಂದಿಯೆಲ್ಲ ಹೂದ್ವಿ. ಸುದ್ದಿ ತಿಳಿದು ಸಾವಿರಾರು ಜನ ಆಗಲೇ ಅಲ್ಲಿ ಜಮಾಯಿಸಿದ್ರು. ತಮಗೆ ತಿಳಿದಂತೆ, ತೋಚಿದಷ್ಟು ಆ ಕಾಡೆಮ್ಮಿ/ ಕಾಡುಕೋಣದ ಬಗ್ಗೆ ವಿಶ್ಲೇಷಣೆ ನಡೆಸಿದ್ರು. ‘ಪಾಪ ಕಾಡುಕೋಣ ೧೨ ಫೂಟ್ ಎತ್ತರದ ನಾಗನೂರ್ ಸಾಹೇಬ್ರ ಕಂಪೌಂಡ್ ಎಗರಿ ಸಿಮೆಂಟ್ ಶೀಟಿನ ಆಕಳ ದೊಡ್ಡಿ ಮ್ಯಾಲೆ ನಿಲ್ಲಲಿಕ್ಕೆ ಹೋತು. ೯೦೦ ರಿಂದ ೧೦೦೦ ಕಿಲೋ ತೂಕದ ೧೬ ತಿಂಗಳ ಕಾಡುಕೋಣದ ಮರಿ ಭಾರಕ್ಕ ಸಿಮೆಂಟಿನ ಶೀಟ ಮುರಕೊಂಡು ‘ರೊಟ್ಟಿ ಜಾರಿ ತುಪ್ಪದೊಳಗ ಬಿದ್ದಂಗ’ (ಪ್ರೊ.ಕಲ್ಲೂರರಿಗೆ!) ಆಕಳು ಮತ್ತ ಎಮ್ಮೆಗಳ ಮಧ್ಯೆ ‘ಧಪ್ಪ್’ ಅಂತ ಬಿತ್ತು!’ ನಡೆದಿತ್ತು ಹೀಗೆ ಸಂಭಾಷಣೆ.

ಅಲ್ಲಿಯ ವರೆಗೆ ಸುಮಾರು ೧೬ ಕಿ.ಮೀ. ಓಡಿಸಿಕೊಂಡು ಬಂದಿದ್ದ ಪ್ರೊ.ಕಲ್ಲೂರ ‘ಅಬ್ಬಾ’ ಅಂತ ನಿಟ್ಟುಸಿರು ಬಿಟ್ರು. ಮಾಳಮಡ್ಡಿಯ ಸುಮಾರು ೮೦ ಎಕರೆ ವಿಸ್ತಾರದ ಲಕ್ಶೀಸಿಂಗನಕೆರಿ ಈಗ ಕೇರಿ! ಭೋವಿ ಒಡ್ಡರು, ಗೋಸಾವಿ ಸಮುದಾಯದವರು, ಸಿಖ್ಖರು, ಮುಸಲ್ಮಾನರು ವಾಸವಾಗಿರುವ ೧೦೦೦ ಕ್ಕೂ ಹೆಚ್ಚು ವಸತಿ ಸಮುಚ್ಚಯಗಳನ್ನುಳ್ಳ ಕಾಂಕ್ರೀಟ್ ಕೇರಿ. ನೀರಿಲ್ಲ. ಬಾಗಿಲ ಮುಂದೆ, ರಸ್ತೆಯ ಇಕ್ಕೆಲಗಳಲ್ಲಿ ಕೌದಿ ಹೊದ್ದು ಮಲಗಿದ್ದ ಜನರನ್ನು ತುಳಿಯದೇ ಛಂಗನೆ ನೆಗೆಯುತ್ತ, ನಾಯಿಗಳಿಗೂ ಹೆದರದೆ, ಗಂಗಾಧರ ಕಲ್ಲೂರ ಅವರ ಮೇಲೆ ತಿರುಗಿ ಆಕ್ರಮಣ ಮಾಡದೇ ಓಡುತ್ತ ಬಂದು ಸುರಕ್ಷಿತವಾಗಿ ದನದ ಕೊಟ್ಟಿಗೆಗೆ ಬಿದ್ದ ಕಡುಕೋಣದ/ ಮರಿ ಪ್ರತಾಪ ಮಾಧ್ಯಮದವರಿಗೆ ಎಲ್ಲರೂ ನಾ-ತಾ ಮುಂದು ಎಂದು ವಿವರಿಸುತ್ತಿದ್ದರು.

ಡಾ.ಸಂಜೀವಣ್ಣ, ಕುಮಾರ ಭಾಗವತ್, ಪ್ರೊ.ಗಂಗಾಧರ ಕಲ್ಲೂರ ಹಾಗು ವಲಯ ಅರಣ್ಯ ಸಂರಕ್ಷಣಾಧಿಕಾರಿ ಉಜಿನಪ್ಪ ಜನರನ್ನು ನಿಯಂತ್ರಿಸುತ್ತ ಆ ದನದ ಕೊಟ್ಟಿಗೆಗೆ ಪ್ಲಾಸ್ಟಿಕ್ ಹೊದಿಸಿ ಕಾಡುಕೋಣದ ಮರಿಗೆ ತುಸು ನೆಮ್ಮದಿ ಕರುಣಿಸಲು ಹೊರಟರು. ಆದರೂ ಜನ-ಮಕ್ಕಳು, ಮುದುಕರು ಹೆಣ್ಣು ಮಕ್ಕಳು ಎಂಬ ಬೇಧವಿಲ್ಲದೇ ಕಾಡುಕೋಣ ನೋಡಲು ಮುಗಿಬಿದ್ದು ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟು ಮಾಡುತ್ತಿದ್ದರು.

ಈ ಎಲ್ಲ ಧಾವಂತದ ಮಧ್ಯೆ, ಡಾ. ಸಂಜೀವಣ್ಣ, ಬಾಲಬಳಗದ ಪುಟಾಣಿ ಮಕ್ಕಳಿಗೆ ಪರಿಸರ ರಕ್ಷಿಸಿ ಸಪ್ತಾಹದ ಆಂದೋಲನ ಅಂಗವಾಗಿ ಆಗಮಿಸಿರುವ, ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿ, ಎಂದು, ಕಾಡುಕೋಣ ತೋರಿಸಿ ಎಳೆಯರ ಕುತೂಹಲ ತಣಿಸಿದರು. ನೋಡಬೇಕಿತ್ತು ಮಕ್ಕಳ ಉತ್ಸಾಹ. ಹಗ್ಗ ಕಟ್ಟಿ ಕೈಯಲ್ಲಿ ಕೊಟ್ಟರೆ ಕಾಡುಕೋಣದ ಮರಿ ಸಾಕಲು ಎಲ್ಲರೂ ತಯಾರಿದ್ದರು. ಎಲ್ಲಿ ಬಾಲಬಳಗದ ಆವರಣದಲ್ಲೋ? ತಮ್ಮ ಮನೆಯಂಗಳದಲ್ಲೋ? ನಿರ್ಧಾರವಾಗಿರಲಿಲ್ಲ!

ಅಷ್ಟರಲ್ಲಿಯೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಬಂದು ಪರಿಸ್ಥಿತಿ ಅವಲೋಕಿಸಿದರು. ಇಡೀ ಕೊಟ್ಟಿಗೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ಜನರ ಪುಂಡಾಟ ಹೆಚ್ಚಾಗುತ್ತಿದ್ದಂತೆ ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಲು ಸಹ ಆಜ್ನೆ ಇತ್ತರು. ಅರಣ್ಯ ಇಲಾಖೆಯ ದೊಡ್ಡ ಬೊಡ್ಡೆಗಳು ಲಾರಿಯಲ್ಲಿ ಬಂದಿಳಿದವು. ೪ ಕಡೆಗಳಿಂದಲೂ ಕೊಟ್ಟಿಗೆಗೆ ಆನಿಸಿಟ್ಟು ಬಂದೋಬಸ್ತ್ ಮಾಡಲು ಮುಂದಾದರು. ಮಾಧ್ಯಮದ ಮಿತ್ರರೆಲ್ಲ ಪ್ರತಿಕ್ಷಣವನ್ನು ಕಾತರದಿಂದ ನೋಡುತ್ತ, ವಿಡಿಯೋ ಚಿತ್ರೀಕರಣ, ಛಾಯಾಗ್ರಹಣ, ಹೀಗೆ ಒಳ್ಳೆ ‘ರಾಂಪ್’ ಮೇಲೆ ಬೆಡಗಿ ನಡೆದಾಗ ಕ್ಲಿಕ್ಕಿಸಿದಂತೆ ಹತ್ತಾರು ಕ್ಯಾಮೆರಾ ಮೆನ್ ಗಳು ಕೋನಗಳನ್ನು ಬದಲಿಸಿ ವಿವಿಧ ಭಾವ ಭಂಗಿಯಲ್ಲಿ ಕಾಡುಕೋಣ ಸೆರೆ ಹಿಡಿಯುತ್ತಿದ್ದರು.

ಆದರೆ ನಿಜವಾಗಿಯೂ ಆ ಕಾಡುಕೋಣವನ್ನು ಸೆರೆಹಿಡಿಯುವುದು ಹೇಗೆ? ಅರಣ್ಯ ಇಲಾಖೆಯ ಅಧಿಕಾರಿಗಳು, ವನ್ಯಜೀವಿ ತಜ್ನರು, ಗುಣಾಕಾರ, ಭಾಗಾಕಾರ, ಕೂಡಿಸಿ, ಕಳೆದು, ಅಳೆದು-ತೂಗಿ ಲೆಕ್ಕ ಮಾಡಿದರು. ಕತ್ತಲೆಯಾಗುವವರೆಗೆ ಕಾಯುವುದು. ಶಿವಮೊಗ್ಗೆಯಿಂದ ವನ್ಯಜೀವಿ ತಜ್ನ ವೈದ್ಯರನ್ನು ಕರೆಯಿಸಿಕೊಳ್ಳುವುದು. ಅರವಳಿಕೆ ಚುಚ್ಚುಮದ್ದು ಬಂದೂಕಿನ ಮೂಲಕ ಶೂಟ್ ಮಾಡಿ ಕಾಡುಕೋಣಕ್ಕೆ ನೀಡುವುದು. ಎಚ್ಚರ ತಪ್ಪುತ್ತಿದ್ದಂತೆ ಸ್ಥಳೀಯ ಗೌಳಿ ಯುವಕರ ಸಹಾಯದಿಂದ ಕೈ-ಕಾಲು ಕಟ್ಟಿ ಬಂಧಿಸಿ ಹುಲ್ಲು ಹೇರಿಕೊಂಡು ಬಂದ ಲಾರಿಯಲ್ಲಿ ಎತ್ತಿ ಹಾಕುವುದು. ಅಳ್ನಾವರ ಅಥವಾ ದಾಂಡೇಲಿ ಕಾಡಿನಲ್ಲಿ ಬಿಟ್ಟು ಬರುವುದು. ಇಷ್ಟು ನಿಷ್ಕರ್ಷೆಗೆ ಬರಲಾಯಿತು.

ಹಿಂಡಿನಿಂದ ತಪ್ಪಿಸಿಕೊಂಡು, ಕಾಡು ಬಿಟ್ಟು ನಾಡು ಸೇರಿದ್ದ ಕಾಡು ಕೋಣದ ಮರಿ ನಾಲ್ಕಾರು ದಿನ ದಿಕ್ಕು ತಪ್ಪಿ ಅಲೆದಿದ್ದರಿಂದ, ಕುಡಿಯಲು-ತಿನ್ನಲು ಏನೂ ಸಿಗದೇ ಹೋದ ಹಿನ್ನೆಲೆಯಲ್ಲಿ ತೀವ್ರ ನಿತ್ರಾಣಗೊಂಡಿತ್ತು. ಆದರೂ ಆಗಾಗ ತಪ್ಪಿಸಿಕೊಂಡು ಓಡಿ ಹೋಗುವ ಸೂಚನೆ ನೀಡುತ್ತಿತ್ತು. ನಿಂತಲ್ಲೇ ಹೂಂಕರಿಸುತ್ತಿತ್ತು. ಪಾಪ ತನ್ನ ಅಸಹನೆ ವ್ಯಕ್ತಪಡಿಸುತ್ತಿತ್ತು. ತನ್ನ ಎಡ-ಬಲಗಳ ಅಳತೆ ಮಾಡುತ್ತಿತ್ತು. ಓಡಿ ಹೋಗಲು ದಾರಿ ಹುಡುಕುತ್ತಿತ್ತು. ಆದರೂ ‘ಬುಧ್ಧಿವಂತ’ ಪ್ರಾಣಿ ಎದುರು ಅದರ ಜಾಣತನ ಕೆಲಸ ಮಾಡಲಿಲ್ಲ.

ಅಂತೂ ಕಾಡುಕೋಣದ ಮರಿ ಸೆರೆಹಿಡಿಯಲು ಅರಣ್ಯ ಇಲಾಖೆ ಅಂತಿಮ ಕ್ಷಣಗಣನೆಗೆ ತೊಡಗಿತು. ರಾತ್ರಿ ೭.೩೦ರ ಸುಮಾರಿಗೆ ಶಿವಮೊಗ್ಗೆಯಿಂದ ವನ್ಯಜೀವಿ ತಜ್ನ ವೈದ್ಯರ ತಂಡ ಧಾರವಾಡಕ್ಕೆ ಬಂದಿಳಿಯಿತು. ಕೇವಲ ಅರ್ಧ ಗಂಟೆಯಲ್ಲಿ ಸೆರೆ ಹಿಡಿಯುವ ಸಮೀಕರಣ ಮುಂದಿಟ್ಟು, ದೊಡ್ಡಿಯ ಒಂದು ಮೂಲೆಯಿಂದ ಕೋಣದ ತೊಡೆಗೆ ಬಂದೂಕಿನ ಸಹಾಯದಿಂದ ಶೂಟ್ ಮಾಡಿ ಅರವಳಿಕೆ ಇಂಜೆಕ್ಷನ್ ನೀಡಲಾಯಿತು.

೨೦ ನಿಮಿಷ ಗುದ್ದಡಿ, ಹೋರಾಡಿ ಆಯ ತಪ್ಪಿ ಬಲಿಷ್ಠ ಕೋಣ ನೆಲಕ್ಕುರುಳಿತು. ಆಗಲೇ ಹಗ್ಗ ಹಿಡಿದು ಸನ್ನಧ್ಧರಾಗಿದ್ದ ಸ್ಥಳೀಯ ಗೌಳಿಗಳು ಕೋಣದ ಒದೆತ ತಿನ್ನುತ್ತಲೇ ಕೊಂಬು, ಕಾಲುಗಳಿಗೆ ಹಗ್ಗ ಬಿಗಿದರು. ನಾಲ್ಕೂ ಕಾಲುಗಳ ಮಧ್ಯೆ ಮರದ ಬೊಡ್ಡೆ ಇರಿಸಿ ೩೦ಕ್ಕೂ ಹೆಚ್ಚು ಜನ ಎತ್ತಿಕೊಂಡು ಇಕ್ಕಟ್ಟಾದ ಬಾಗಿಲಿನ ಮೂಲಕ ಹೊರ ತಂದರು. ಕೋಣದ ಕಣ್ಣಿಗೆ ಬಟ್ಟೆ ಕಟ್ಟಿ ಯಾವ ಭಾಗಕ್ಕೂ ಪೆಟ್ಟಾಗದಂತೆ ಎಚ್ಚರವಹಿಸಲಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ನಿಂತು ನಿರ್ದೇಶನ ನೀಡುತ್ತಿದ್ದರೆ, ಅಶಕ್ತ ಗಾರ್ಡಗಳು ಕೊಟ್ಟಿಗೆಗೆ ಬ್ಯಾಟರಿ ಬೆಳಕು ಬಿಡುವಲ್ಲಿ ನಿರತರಾಗಿದ್ದರು. ಬಲಿಷ್ಠ ಕೋಣವನ್ನು ಬಂಧಿಸಿ ಸಾಗಿಸಿದ ಶ್ರೇಯ ಗೌಳಿ ಯುವಕರಿಗೇ ಸಲ್ಲಬೇಕು.

ಕಾಡುಕೋಣ ರಾತ್ರಿ ೧೧.೩೦ಕ್ಕೆ ಅರಣ್ಯ ಇಲಾಖೆಯ ಲಾರಿಯಲ್ಲಿ ಹುಲ್ಲು ಹಾಸಿನ ಮೇಲೆ ಅನಾಯಾಸವಾಗಿ ಮಲಗಿ ದಾಂಡೇಲಿ ಅರಣ್ಯಕ್ಕೆ ಪ್ರಯಾಣ ಬೆಳೆಸಿತು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ೩೦೦ ಕ್ಕೂ ಹೆಚ್ಚು ಜನರಲ್ಲಿ ಧನ್ಯತಾಭಾವ ಮನೆ ಮಾಡಿತ್ತು. ಎಲ್ಲರೂ ಖುಷಿ-ಖುಷಿಯಾಗಿ ಕಾಡುಕೋಣದ ಮರಿಯನ್ನು ಮುಟ್ಟಿ, ಮೈದಡವಿ ಬೀಳ್ಕೋಟ್ಟರು.

ಮಧ್ಯರಾತ್ರಿ ೧೨.೪೦ಕ್ಕೆ ದಾಂಡೇಲಿಯ ಅರಣ್ಯದಲ್ಲಿ ಕಾಡುಕೋಣವನ್ನು ಕೆಳಗಿಳಿಸುತ್ತಿದ್ದಂತೆ ಯಾವುದೇ ಪ್ರತಿಭಟನೆ ತೋರದೇ, ಮುಗ್ಧ ಮಗುವಿನಂತೆ ಕಾಡಿನಲ್ಲಿ ನಡೆದು ಹೋಯಿತು.

ಆ ಕಾಡುಕೋಣ ಇನ್ನೂ ಹಲವಾರು ಕಥೆಗಳನ್ನು ಹೇಳದೇ ನಮ್ಮ ತಿಳಿವಳಿಕೆಗೆ, ಅರಿವಿಗೆ ಬಿಟ್ಟು ಹೋಗಿದ್ದು ಇನ್ನು ನಮ್ಮನ್ನು ಚಿಂತೆಗೆ ಈಡು ಮಾಡಬೇಕಿದೆ. ‘ಒಣ ಮುಹೋತ್ಸವಗಳ’ ರುವಾರಿಗಳಿಗೆ ಬಿಸಿ ತಟ್ಟೀತೆ?