ಧಾರವಾಡದ ಅಮ್ಮಿನ ಬಾವಿ

ಧಾರವಾಡದ ಅಮ್ಮಿನ ಬಾವಿ

ಧಾರವಾಡ ಜಿಲ್ಲೆಯ ಅಮ್ಮಿನ ಬಾವಿ, ಜಿಲ್ಲಾ ಕೇಂದ್ರದಿಂದ 13 ಕಿ.ಮೀ. ಅಂತರದಲ್ಲಿದೆ. ಇದು ಚಾಳುಕ್ಯರ ಆಡಳಿತಕ್ಕೆ ಒಳಪಟ್ಟ ಪ್ರದೇಶವಾಗಿದ್ದು ಕ್ರಿ.ಶ. 1243ರ ಕಾಲದ ವೀರಗಲ್ಲು ಕೂಡ ಇಲ್ಲಿಯ ಶಾಸನಗಳಲ್ಲಿ 'ಅಮ್ಮಯ್ಯನ ಬಾವಿ' ಎಂದು ಉಲ್ಲೇಖವಿದೆ. 

ಇಲ್ಲಿಯ ನೇಮಿನಾಡ, ಜಿನ ಹಾಕಿರುವ ಫಲಕದಲ್ಲಿ 10ನೇ ಶತಮಾನದಲ್ಲಿ ಚಾಳುಕ್ಯರ ಅಧಿಪತ್ಯಕ್ಕೆ ಒಳಪಟ್ಟ ಪಾಳೇಗಾರರ ಸಮೂಹ ಸ್ಥಳ ಅರಸುತ್ತ ಈಗಿನ ಗ್ರಾಮದ ಬಯಲಲ್ಲಿ ನೆಲೆಸಿದರಂತೆ. ಅವರು ಅಮ್ಮಿನಬಾವಿ ದೇಸಾಯರು ಎಂದು ಪ್ರಸಿದ್ಧರಾದರು. ಇವರು ಇಲ್ಲಿ ಒಂದು ಬಾವಿ ಕೊರೆದು ಅದಕ್ಕೆ ಕುಲದೇವತೆಯಾದ ಪದ್ಮಾವತಿ ಅಮ್ಮನವರ ಹೆಸರಿಟ್ಟು 'ಅಮ್ಮನವರ ಬಾವಿ' , 'ಅಮ್ಮಯ್ಯನ ಭಾವಿ' ಎನ್ನುವ ಹೆಸರು ರೂಢಿಯಾಯಿತು. ಕ್ರಮೇಣ 'ಅಮ್ಮಿನಬಾವಿ' ಎಂದಾಯಿತು.  

ಇಲ್ಲಿಯ ಜೈನ ಬಸದಿ ಜೀರ್ಣೋದ್ಧಾರಗೊಂಡಿದ್ದು, ಎರಡೂವರೆ ಅಡಿ ಎತ್ತರದ ಮೂರ್ತಿ ಇಲ್ಲಿದೆ. ಈ ಸ್ಥಳ ಮಲ್ಲಿಕಾಫರ್ ನ ದಾಳಿಗೆ ತುತ್ತಾದಾಗ ಆ ಮೂರ್ತಿಯನ್ನು ಅಂದಿನವರು ಭೂಮಿಯಲ್ಲಿ ಅಡಗಿಸಿಟ್ಟರು. ಕ್ರಮೇಣ ಬ್ರಿಟಿಷ್ ಆಳ್ವಿಕೆ ಕಾಲಕ್ಕೆ ನಡೆದ ಭೂ ಉತ್ಖನನದಲ್ಲಿ ಈ ಮೂರ್ತಿ ಲಭ್ಯವಾಯಿತು. ಬ್ರಿಟಿಷರು ಇದನ್ನು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದಾಗ ಸ್ಥಳೀಯರು ಅದು ಇಲ್ಲಿಯೇ ಇರಲಿ, ಎಂಬ ಹೋರಾಟ ಆರಂಭಿಸಿದರು.  

ಅಂದಿನ ಬ್ಯಾರಿಸ್ಟರ್ ಚಂಪತರಾಯರು 24 ತೀರ್ಥಂಕರರನ್ನು ಒಳಗೊಂಡ ಈ ಅಪರೂಪದ ವಿಗ್ರಹವನ್ನು 1935ರಲ್ಲಿ ಇಲ್ಲಿಯೇ ಪ್ರತಿಷ್ಠಾಪಿಸಿದರಂತೆ. ದೇಶದಲ್ಲಿಯೇ ಅಪರೂಪವೆನ್ನಬಹುದಾದ ವಿಗ್ರಹ ಇದಾಗಿದೆ. 1999ರಲ್ಲಿ ನೇಮಿನಾಥ ಬಸದಿಯ ನೂತನ ಶಿಖರ ಮತ್ತು ಮಾನಸ್ತಂಭ ನಿರ್ಮಾಣದೊಂದಿಗೆ ಇಲ್ಲಿ ಪಂಚಕಲ್ಯಾಣ ಮಹೋತ್ಸವ ಜರುಗಿದ್ದು, ನಿತ್ಯವೂ ಪೂಜಾ ಕಾರ್ಯಗಳು ಇಲ್ಲಿ ನೆರವೇರುತ್ತಿದೆ.

ಇನ್ನು ಇಲ್ಲಿರುವ 'ಬಾವಿ' ಬಸ್ ನಿಲ್ದಾಣದಿಂದ ಅನತಿ ದೂರದಲ್ಲಿದ್ದು ಪಂಚಾಯಿತಿ ಹತ್ತಿರದಲ್ಲಿದೆ. ಎಂಥ ಬಿರುಬೇಸಿಗೆಯಲ್ಲೂ ನೀರನ್ನು ಒಳಗೊಂಡಿದ್ದು, ಮಳೆಗಾಲದಲ್ಲಿ ತುಂಬಿ ಹರಿಯುವುದೆಂದೂ ಇಲ್ಲಿನ ಜನರು ಹೇಳುವರು. ಈ ಬಾವಿಗೆ ಸುತ್ತಲೂ 'ಗಡೆ' ಹಾಕಲಾಗಿದ್ದು, ನೀರು ತುಂಬಲು ಅನುಕೂಲ. ಇಂದಿಗೂ ಕೂಡ ಈ ಬಾವಿ ಸುಸ್ಥಿತಿಯಲ್ಲಿದ್ದದ್ದು ವಿಶೇಷ.

ಇಲ್ಲಿಯ ಮಲ್ಲಿಕಾರ್ಜುನ ದೇವಾಲಯ ಕೂಡ ಜೀರ್ಣೋದ್ಧಾರಗೊಂಡಿದ್ದು, ಗರ್ಭಗೃಹದಲ್ಲಿ ಲಿಂಗ, ಅಂತರಾಳದಲ್ಲಿ ನಂದಿ, ನವರಂಗದಲ್ಲಿ ನಾಗ, ಕಾಲಭೈರವ, ತ್ರಿಭಂಗಿಯಲ್ಲಿರುವ ಭೈರವ ಶಿಲ್ಪಗಳಿವೆ. ಇಲ್ಲಿರುವ ಕ್ರಿಶ. 1163ರ ಶಾಸನ 'ಗೋಪಿ' ಪೆರ್ಮಾಡಿ ದೇವನ ಕಾಲದ್ದು, ಮಾಡಬೊಪ್ಪನು ತ್ರಿಣೇಯನ ಗಣಪತಿ ಪೂಜೆಗೆ ನೀಡಿದ ಭೂದಾನ ಕುರಿತು ಇದರಲ್ಲಿ ಉಲ್ಲೇವಿದೆ.

ಧಾರವಾಡ - ಸವದತ್ತಿ ಮಾರ್ಗದಲ್ಲಿ ಇರುವ ಈ ಗ್ರಾಮ, ಗ್ರಾಮ ಪಂಚಾಯತಿ, ಪ್ರೌಢಶಾಲೆಯವರೆಗೆ ಶಿಕ್ಷಣ, ಪಶುವೈದ್ಯ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಮೊದಲಾದ ಸೌಕರ್ಯ ಹೊಂದಿದ್ದು, ಧಾರವಾಡದಿಂದ ಸಾಕಷ್ಟು ಬಸ್ ಸೌಕರ್ಯ ಒಳಗೊಂಡ ಗ್ರಾಮವಾಗಿದೆ. "ಜೈನ ಮತ್ತು ಹಿಂದು ಧರ್ಮಗಳ ಸಮ್ಮಿಲನ, ಪುರಾತನ ಕಾಲದ ಭವ್ಯವಾದ ಐತಿಹ್ಯ, ಅದ್ಭುತವಾದ ಇತಿಹಾಸ ಹೊಂದಿರುವ ಬಾವಿ. ಬ್ರಿಟಿಷರ ಕಾಲದ ಆಕರ್ಷಣೆಯ ಸ್ಥಳ ಇದಾಗಿದೆ- ಧಾರವಾಡ ಜಿಲ್ಲೆಯ - ಅಮ್ಮಿನ ಬಾವಿ" ಬನ್ನಿ ಒಮ್ಮೆ ಪ್ರವಾಸಕ್ಕೆ…

(ಚಿತ್ರಗಳು : ಅಂತರ್ಜಾಲ ಕೃಪೆ)

-ರಮೇಶ ನಾಯ್ಕ, ಉಪ್ಪುಂದ, ಬೈಂದೂರು