ಧಾರವಾಡದ ಕೋಗಿಲೆ

ಧಾರವಾಡದ ಕೋಗಿಲೆ

ಬರಹ

ದೆಹಲಿ ಆಕಾಶವಾಣಿಯಲ್ಲಿ ಸುಶ್ರಾವ್ಯವಾದ ಹಿಂದೂಸ್ತಾನಿ ಸಂಗೀತ ಕೇಳಿಬರುತ್ತಿತ್ತು. ಅದನ್ನು ಕೇಳುತ್ತಾ ಕುಳಿತಿದ್ದ ಓರ್ವ ಹುಡುಗಿ, “ಆಂಟಿ ಹಾಡ್ತಾರೆ ಅಂತ ಕೂತ್ರೆ ಯಾರೋ ಗಂಡಸರು ಹಾಡ್ತಾ ಇದಾರೆ.” ಎಂದು ಗೊಣಗಿದಳು. ಅದನ್ನು ಕೇಳಿಸಿಕೊಂಡ ಅವಳ ಅಮ್ಮ “ಗಂಡಸಾದರೇನು ಹೆಂಗಸಾದರೇನು? ಸಂಗೀತ ಅಂತೂ ಚೆನ್ನಾಗಿದೆ ಅಲ್ವಾ? ಸುಮ್ಮನೆ ಕೂತು ಕೇಳು” ಎಂದಾಗ,
ಮಗಳು, “ಹೌದು ಸಂಗೀತವೇನೋ ಮೇಲ್ಮಟ್ಟದ್ದೆ. ಕೇಳಲು ಕರ್ಣಾನಂದವಾಗೇ ಇದೆ. ಆದರೂ ಆಂಟಿ ತನ್ನ ಹಾಡು ಬರತ್ತೆ ಕೇಳು ಅಂತ ಹೇಳಿದ್ರು. ಅದು ಯಾಕೆ ಬರಲಿಲ್ಲ ಅಂತ ಆಶ್ಚರ್ಯ ಆಯ್ತು ಅಷ್ಟೆ.” ಅಂದಳು.
ಆ ಆಂಟಿ ಮನೆಗೆ ಬಂದರು. ಅವಳು ಒಳಗೆ ಕರೆದು ಉಪಚರಿಸಿದಳು. ಅವರು ಸುಧಾರಿಸಿಕೊಂಡು ಕೇಳಿದರು, “ ನನ್ನ ಹಾಡು ಕೇಳಿದ್ಯೇನೆ ಹುಡುಗಿ?”
“ರೇಡಿಯೋ ಆನ್ ಮಾಡಿದ್ದೆ ಆಂಟಿ. ಆದರೆ ಯಾರೋ ಗಂಡಸರು ಹಾಡುತ್ತಿದ್ದರು.” ಎಂದಳು ಹುಡುಗಿ.
ಆಗ ಅವರು ಜೋರಾಗಿ ನಕ್ಕು, “ಆ ಗಂಡು ಕೋಗಿಲೆ ನಾನೇಕಣೆ ಹುಡುಗಿ” ಎಂದರು.
ಒಂದು ಕ್ಷಣ ಹುಡುಗಿ ಪೆಚ್ಚಾಗಿ ನಂತರ ಅವರೊಂದಿಗೆ ನಗಲು ಪ್ರಾರಂಭಿಸಿದಳು. “ಹೆಸರು ಅನೌನ್ಸ್ ಮಾಡಿದಾಗ ಯಾರೋ ಬಂದಿದ್ದರು. ಆ ಗಡಿಬಿಡಿಯಲ್ಲಿ ಹೆಸರು ಕೇಳಿಸಿಕೊಳ್ಳಲು ಆಗಲಿಲ್ಲ. ಅದಕ್ಕೆ ಈ ತಾಪತ್ರಯ ಆಗಿದ್ದು.” ಎಂದಳು.

ಧಾರವಾಡದ ಹೆಣ್ಣು ಕೋಗಿಲೆಯೊಂದು ತನ್ನ ಟಾನ್ಸಿಲ್ಸ್ ತೊಂದರೆಯಿಂದಾಗಿ ಗಂಡುಕೋಗಿಲೆಯಾದ ವ್ಯಥೆಯೊಂದಿದೆ. ಡಾ. ಗಂಗೂಬಾಯಿ ಹಾನಗಲ್ ಅವರೇ ಆ ಆಂಟಿ. ಅವರ ಕುಟುಂಬ ವೈದ್ಯರಾದ ಡಾ.ಜೋಶಿಯವರು ಗಂಗೂಬಾಯಿಯವರ ಪರಮ ಅಭಿಮಾನಿ. ಅವರಿಗೆ ಆತಂಕ ಗಾನಕೋಗಿಲೆಯ ಧ್ವನಿಗೆ ಏನಾದರೂ ಆದರೆ ಎಂದು, “ಇದೇನೋ ಸಣ್ಣ ಆಪರೇಶನ್. ಆದರೆ ಇದರಿಂದಾಗಿ ಗಂಟಲಿಗೆ ಖಾಯಂ ಆಗಿ ಹಾಡುವುದಕ್ಕೆ ತೊಂದರೆ ಆದೀತು ಎಂಬ ಭಯ ನನಗೆ. ಶಾರೀರಕ್ಕೆ ಧಕ್ಕೆ ಆದೀತೇನೋ ಎಂಬ ಆತಂಕ ನನಗೆ” ಎಂದು ಚಿಂತೆಗೊಳಗಾದರಂತೆ. ನಂತರ, “ಟಾನ್ಸಿಲ್ಸ್ ಅಂದರೆ ದುರ್ಮಾಂಸ ಇರ್ತದೆ. ಇದನ್ನು ಕರೆಂಟಿನಿಂದ ಸುಟ್ಟುಬಿಡೋಣ ಅಂದರೆ ಗಂಟಲಕ್ಕೇನು ತ್ರಾಸ ಆಗೊದಿಲ್ಲ. ಆಪರೇಶನ್ ಮಾಡಿದರೆ ಧ್ವನಿ ಮೇಲೆ ಪರಿಣಾಮ ಆಗಬಹುದು. ಆಪರೇಶನ್ ಬೇಡಾ.” ಎಂದು ಹೇಳಿ ಹಾಗೇ ಮಾಡಿದರು. ಅದರ ಪರಿಣಾಮ ಗಂಗೂಬಾಯಿಯವರ ಧ್ವನಿ ಗಡಸು ಧ್ವನಿಯಾಗಿ ಹೋಯಿತು. ಹೀಗಾಗಿ ಬರಬರುತ್ತಾ ಅವರ ಧ್ವನಿ ಗಂಡುಧ್ವನಿಯಂತಾಗಿ ಅವರು ತನ್ನನ್ನು ತಾನೇ ಗಂಡು ಕೋಗಿಲೆ ಎಂದು ಕರೆದು ಕೊಂಡರು.
ಒಬ್ಬ ಶ್ರೇಷ್ಟ ಕಲಾವಿದರ ಬದುಕು ಬರಿ ಹೂವಿನ ಹಾಸಿಗೆಯೇನಲ್ಲ. ಅಲ್ಲಿ ಮುಳ್ಳುಗಳು ಇರುತ್ತವೆ, ಆ ತೊಂದರೆಗಳನ್ನು ದಾಟಿ ತಾವು ಆ ಮಟ್ಟಕ್ಕೆ ಏರಲು ಎಷ್ಟು ಪರಿಶ್ರಮ ಹಾಕಿರುತ್ತಾರೆ, ತಮ್ಮ ಜೇವನವನ್ನೇ ಆ ಕಲೆಗೆ ಮುಡಿಪಾಗಿಟ್ಟಿರುತ್ತಾರೆ ಎಂಬುದು ನಾವು ಅರಿತಿರುವ ವಿಷಯವೇ. ಆ ಕಾರಣಕ್ಕೇ ಅವರಿಗೆ ಸಲ್ಲಬೇಕಾದ ಗೌರವ ಹೆಚ್ಚಿರಬೇಕು ಎಂದೆನಿಸುತ್ತದೆ. ಇಂತಹಾ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು ಗಾನಕೋಗಿಲೆ ಗಂಗೂಬಾಯಿ ಹಾನಗಲ್ ಅವರು.
ಇತ್ತೀಚೆಗೆ ಅವರ ’ನನ್ನ ಬದುಕಿನ ಹಾಡು’ ಎಂಬ ಆತ್ಮ ಚರಿತ್ರೆ ಓದುವ ಅವಕಾಶ ನನಗೆ ದೊರಕಿತು. ಅಲ್ಲಿ ಸಿಕ್ಕ ಕೆಲವು ಆಣಿಮುತ್ತುಗಳನ್ನು ಇಲ್ಲಿ ಜೋಡಿಸಿಕೊಡಲು ಪ್ರಯತ್ನಿಸಿದ್ದೇನೆ. ಇಲ್ಲಿ ನಾನು ಕೆಲವನ್ನು ಮಾತ್ರ ಆಯ್ದಿದ್ದೇನೆ. ಆಯದೇ ಬಿಟ್ಟ ಅನೇಕ ಮುತ್ತು ರತ್ನಗಳನ್ನು ಆಯ್ದುಕೊಳ್ಳುವ ಅವಕಾಶವನ್ನು ನಿಮಗೇ ಬಿಟ್ಟಿದ್ದೇನೆ.
1915 ಮಾರ್ಚ್ 5ರಂದು ಜನಿಸಿದ ಗಂಗೂಬಾಯಿ ಹಾನಗಲ್ ಅವರ ಸಂಗೀತ ಪ್ರಗತಿಗೆ ನಾಂದಿ ಹಾಡಿ ಮೊದಲು ಕಾರಣರಾದವರು ಅವರ ತಾಯಿಯವರು. ಅವರ ತಾಯಿ ಕರ್ನಾಟಕ ಸಂಗೀತದ ವಿದೂಶಿಯಾಗಿದ್ದರೂ ತನ್ನ ಮಗಳು ಹಿಂದೂಸ್ತಾನಿ ಕಲಿಯಲಿ ಎಂದು ಬಯಸಿದರು.
ಖ್ಯಾತ ಹಿಂದೂಸ್ತಾನಿ ಗಾಯಕರಾದ ಖಾನ್ ಸಾಹೇಬ್ ಅಬ್ದುಲ್ ಕರೀಂ ಖಾನರು ಅವರ ಮನೆಗೆ ಅಗಾಗ್ಗೆ ಬರುತ್ತಿದ್ದರು. ಅವರು ಗಂಗೂಬಾಯಿಯವರ ತಾಯಿಯವರು ಹಾಡುತ್ತಿದ್ದ ತ್ಯಾಗರಾಜರ ಕೀರ್ತನೆಗಳನ್ನು ಕೇಳಿ ಆನಂದಪಡುತ್ತಿದ್ದರು. ಗಂಗೂಬಾಯಿಯವರ ತಾಯಿಯವರು ಹಾಕುತ್ತಿದ ನೊಟೇಶನ್ಸ್ ಖಾನರಿಗೆ ಬಹಳ ಪ್ರಿಯವಾಗಿತ್ತು. ಖಾನರೂ ಸಹಾ ತಮ್ಮ ಮೊದಲನೇ ಧ್ವನಿಮುದ್ರಿಕೆ ’ಪಿಯಾ ಬಿನ ನಾಹಿ ಅವತ ಚೈನ’ ಎಂಬ ಝುಂಝುಟಿ ರಾಗಕ್ಕೆ ಸುಂದರವಾದ ಸರಗಂ ಹಾಕಿರುತ್ತಾರೆ.ಅವರು ಗಂಗೂಬಾಯಿ ಸಹಾ ತಾಯಿಯೊಂದಿಗೆ ಹಾಡುವುದನ್ನು ಕೇಳಿ ಸಂತೋಷವಾಗಿ “ಗಲಾ ಅಚ್ಚಾ ಹೈ ಬೇಟಿ ಖೂಬ್ ಖಾನಾ ಔರ್ ಖೂಬ್ ಗಾನಾ” ಎಂದು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ತಾಯಿಗೆ ಮಗಳ ಶಾಲಾ ವಿದ್ಯಾಭ್ಯಾಸಕ್ಕಿಂತ ಸಂಗೀತ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡುವ ಆಸೆ ಇತ್ತು.
ಧಾರವಾಡದಲ್ಲಿ ಸಂಗೀತ ಶಿಕ್ಷಕರಾದ ಭಾಸ್ಕರ ಬುವಾ ಬಖಲೆ ಅವರ ಪ್ರಭಾವದಿಂದ ಹಿಂದೂಸ್ತಾನಿ ಸಂಗೀತಕ್ಕೆ ಹೆಚ್ಚು ಬೇಡಿಕೆಯಿತ್ತು. ತಾಯಿಗೆ ಜೈಪುರ ಘರಾಣಾಕ್ಕಿಂತ ಕಿರಾನಾ ಘರಾಣೆ ಸಂಗೀತದ ಕಡೆ ಹೆಚ್ಚು ಒಲವು ಇತ್ತು. ಮಗಳಿಗೆ ಸಂಗೀತ ಕಲಿಸಲು ಎಲ್ಲಿ ನೆಲಸಿದರೊಳ್ಳೆಯದು ಎಂಬ ಚಿಂತೆಯಲ್ಲಿ ಧಾರವಾಡ ಹುಬ್ಬಳ್ಳಿ ಎಂದು ಪರದಾಡಿ ಒಳ್ಳೆಯ ಗುರುಗಳನ್ನು ಹುಡುಕಿ ಕೊನೆಗೆ ಹುಲಗೂರ ಕೃಷ್ಣಾಚಾರ್ಯರು ಎಂಬ ವಿದ್ವಾಂಸರ ಬಳಿ ಸಂಗೀತ ಶಿಕ್ಷಣ ಪ್ರಾರಂಭವಾಯಿತು.ಅವರ ಬಳಿ 60 ಚೀಜುಗಳನ್ನು ಕಲಿತರು. ಆಗ ಅವರ ತಾಯಿ ಗುರುಗಳಿಗೆ, “ನಮ್ಮ ಗಂಗೂಗೆ ತಾಳ ಸ್ವಲ್ಪ ಕಚ್ಚಾ ಇದೆ. ಆಕಡೆ ಸ್ವಲ್ಪ ಹೆಚ್ಚು ಲಕ್ಷ ಇರಲಿ” ಎಂದದ್ದಕ್ಕೆ ಗುರುಗಳು ಕೋಪಿಸಿಕೊಂಡು, “ನನ್ನ ಒಂದು ವರ್ಷದ ಪಾಠದ ಗುರುದಕ್ಷಿಣೆ 120ರೂ.ಗಳು ಈಗ ಕೊಟ್ಟುಬಿಡ್ರಿ. ನಾನು ಈಗಲೇ ಹೊರಡುವೆ” ಎಂದರಂತೆ. ಆಗ ತಾಯಿಯು ತನ್ನ 5 ತೊಲದ ಪಾಟಲಿಯನ್ನು ಮಾರಿ 100ರೂಗಳು ತಂದುಕೊಟ್ಟರಂತೆ. ಇನ್ನೂ 20ರೂ ಕಡಿಮೆ ಇದೆ ಎಂದು ಹೇಳಿ ಗುರುಗಳು ದುಡ್ಡು ಇಟ್ಟ ತಟ್ಟೆಯನ್ನು ನೂಕಿದ ರಭಸಕ್ಕೆ ತಟ್ಟೆಯಲ್ಲಿದ್ದ ದುಡ್ಡೆಲ್ಲಾ ಚೆಲ್ಲಾಪಿಲ್ಲಿಯಾಯಿತಂತೆ. ಇದು ಗಂಗೂಬಾಯಿ ಯವರಿಗೆ ಬಹಳ ದುಃಖ ಕೊಟ್ಟ ಸಂಗತಿಯಾಗಿತ್ತು.
ಗಂಗೂಬಾಯಿಯವರ ತಾಯಿ ತನ್ನ ಕರ್ನಾಟಕ ಶೈಲಿಯ ಸಂಗೀತದ ಪ್ರಭಾವ ಮಗಳಮೇಲೆ ಹೆಚ್ಚಾಗಬಾರದು ಎಂದು ತನ್ನ ಹಾಡುಗಾರಿಕೆಯನ್ನು ನಿಲ್ಲಿಸಿಬಿಟ್ಟರು. ಹನ್ನೆರಡು ವರ್ಷದ ತನ್ನ ತಪಸ್ಸಿಗೆ ಪೂರ್ಣವಿರಾಮ ಹಾಕಿದರು. ಕಛೇರಿಯ ಆಮಂತ್ರಣಗಳನ್ನೆಲ್ಲಾ ನಿರಾಕರಿಸಿದರು. ಮಗಳ ಸಲುವಾಗಿ ಎಂತಹಾ ದೊಡ್ಡ ತ್ಯಾಗ ಎಂದು ಗಂಗೂಬಾಯಿಯವರು ತನ್ನ ತಾಯಿಯ ಆ ಮಹಾ ತ್ಯಾಗದ ಬಗ್ಗೆ ಇಂದಿಗೂ ನೆನೆಯುತ್ತಾರೆ. (ಆದರೆ ಇಲ್ಲಿ ನನ್ನದು ಒಂದು ಅನಿಸಿಕೆ. ಅದು ತಪ್ಪಿದ್ದರೂ ಇರಬಹುದು. ತಾಯಿಯ ಈ ತ್ಯಾಗದ ಅವಶ್ಯಕತೆ ಇತ್ತೆ? ಅವರವರ ಪದ್ಧತಿಯಲ್ಲಿ ಅವರವರು ಹಾಡಬಹುದಾಗಿತ್ತಲ್ಲವೇ? ಎರಡು ಪದ್ಧತಿಗಳನ್ನೂ ಒಬ್ಬರೇ ಕಲಿತ ಶ್ರೀಮತಿ ಶ್ಯಾಮಲಾ ಬಾವೆಯಂತಹಾ ವಿದ್ವಾಂಸರು ಯಾವ ಪದ್ಧತಿಗೂ ಚ್ಯುತಿ ಬಾರದಂತೆ ಸುಂದರವಾಗಿ ಹಾಡುವುದನ್ನು ನಾವು ಕೇಳಿಲ್ಲವೇ? ಎರಡೂ ಪದ್ಧತಿಗಳ ವಿದ್ವಾಂಸರು ಜೊತೆಯಲ್ಲಿ ಕುಳಿತು ಹಾಡುವ ಜುಗಲ್ಬಂದಿಗಳ ಸೊಗಸು ನಮ್ಮನ್ನು ಅದೆಷ್ಟು ರಂಜಿಸಿವೆ. ಹೀಗೆಯೇ ಗಂಗೂಬಾಯಿಯವರ ತಾಯಿಯವರು ತಮ್ಮ ಸಂಗೀತವನ್ನು ಮುಂದುವರಿಸಬೇಕಾಗಿತ್ತು. ಅವರು ಹಾಗೆ ತ್ಯಾಗ ಮಾಡಿದ್ದರಿಂದ ಸಂಗೀತ ಲೋಕಕ್ಕೆ ಎಷ್ಟು ನಷ್ಟವಾಯಿತು? ನಾವಲ್ಲಾ ಅವರ ಗಾಯನವನ್ನು ಕೇಳುವ ಅವಕಾಶಗಳನ್ನು ಕಳೆದುಕೊಂಡೆವಲ್ಲ ಎಂಬ ದುಃಖ ನನಗೆ. ಇರಲಿ ಅವರ ಮನಸ್ಸಿಗೆ ಆ ತ್ಯಾಗದ ಅವಶ್ಯಕತೆ ಇತ್ತು ಅನ್ನಿಸಿತ್ತೇನೋ.) ಹೀಗಾಗಿ ತನ್ನ ತಾಯಿಯ ಈ ಮಹಾತ್ಯಾಗ ಅವರ ಮನಸ್ಸಿನಲ್ಲಿ ಸದಾ ತುಂಬಿತ್ತು. ಅವರ ತಾಯಿಯ ನೆನಪು ತನ್ನ ಸಂಗೀತದಲ್ಲಿ ಹಾಸು ಹೊಕ್ಕ ಹಾಗೆ ಇದ್ದದ್ದನು ಅವರ ಮಾತಲ್ಲೇ ತಿಳಿಯೋಣ.
“ಸಂಗೀತದಲ್ಲಿ ರಸ, ರಾಗ, ಭಾವಗಳನ್ನು ಅನುಭವಿಸಿ ಹಾಡಬೇಕು ಅಂತ ಹೇಳುತ್ತಾರೆ. ನಿಜವಾಗಿಯೂ ನನಗೆ ಜೋಗಿಯಾ, ದರಬಾರಿ, ತೋಡಿ ಇಂತಹಾ ಶೋಕ ರಾಗದ ಚೀಜುಗಳನ್ನು ಹಾಡುವಾಗಲೆಲ್ಲಾ ನನ್ನ ತಾಯಿಯದೇ ನೆನಪು ಬಂದು ನನ್ನ ಅಂತಃಕರಣದಿಂದ ದುಃಖ ಉಕ್ಕಿ ಬರುವ ಹಾಗೆ ಹಾಡಿದ್ದೇನೆ. ನಾನು ಶೋಕ ಅನುಭವಿಸಿ ಕಣ್ಣೀರು ತಂದು ಹಾಡಿದ ರಾಗಗಳು ಶ್ರೋತೃಗಳ ಕಿವಿಯ ಮೇಲೆ ಬಿದ್ದಾಗ ಅವರು ಅದಕ್ಕಾಗಿ ಸಂತೋಷಪಟ್ಟುಕೊಂಡು ಚಪ್ಪಾಳೆ ತಟ್ಟೋದು ಒಂದು ಚಮತ್ಕಾರದ ಅನುಭವ ಅಲ್ಲವೇ? ಅವರು ನನ್ನ “ರಾಮ ಹರಿ ಕಾ ಭೇದ ನ ಪಾಯೋ” ಎಂಬ ಜೋಗಿಯಾ ಕೇಳಿ ಆನಂದಪಟ್ಟುಕೊಂಡಾಗ ನಾನೂಕೂಡ ಆನಂದಪಟ್ಟಿದ್ದೇನೆ. ಒಂದು ರಾಗ ಮೊದಲು ಕಣ್ಣೀರು ತರಿಸಿದರೂ ಆ ಕಣ್ಣೀರಿನಲ್ಲೇ ಕಲ್ಲುಸಕ್ಕರೆಯಂತಹಾ ಸವಿ ಇರೋದು ಒಂದು ಚಮತ್ಕಾರ!”
ಗಂಗೂಬಾಯಿಯವರದ್ದು ಬಹಳ ಸರಳ ಸ್ವಭಾವ. ಸಾಧಾರಣ ಮಧ್ಯಮ ವರ್ಗದವರಂತಹಾ ವೇಷಭೂಷಣ ಅವರ ಪ್ರತಿಭೆ ಹೊರಗೆ ಕಾಣದಂತೆ ಮರೆ ಮಾಚುತ್ತಿದ್ದವು. ಒಮ್ಮೆ ಕಲ್ಕತ್ತಾದ ಆಲ್ ಇಂಡಿಯಾ ಮ್ಯೂಸಿಕ್ ಕಾನ್ಫರೆನ್ಸ್ ಗೆ ಹೋಗಿದ್ದಾಗ ಇವರ ಈವೇಷಭೂಷಣ ಮತ್ತು ತೆಳ್ಳಗಿನ ವ್ಯಕ್ತಿತ್ವ ಅಲ್ಲಿನ ಸಂಚಾಲಕರಿಗೆ “ಈಕೆ ಏನು ಹಾಡುತ್ತಾಳೋ” ಎಂಬ ಸಂಶಯ ಬಂದಿರಬೇಕು. “ಎಲ್ಲಿ ಸ್ವಲ್ಪ ರಿಹರ್ಸಲ್ ನೋಡೋಣ” ಎಂದಾಗ ಇವರಿಗೆ ಮನಸ್ಸಿಗೆ ಪಿಚ್ ಎನ್ನಿಸಿತಂತೆ. ಅವರೊಂದಿಗಿದ್ದ ಹಿರಿಯ ಗಾಯಕರಾದ ನಿಸಾರ್ ಹುಸೇನ್ ಖಾನ್ ಅವರು ಗಂಗೂಬಾಯಿಯವರ ಕಿವಿಯಲ್ಲಿ “ ನೀವು ಇಷ್ಟು ಸಿಂಪಲ್ಲಾಗಿ ಇರೋದು ಅವರಿಗೆ ಅನುಮಾನ. ಹಾಡಿ ತೋರಿಸಿರಿ. ನೀವೂ ಸಾಥೀದಾರರನ್ನು ನೋಡಿಕೊಂಡ ಹಾಗೇ ಆಗುತ್ತೆ.” ಎಂದರು. ಆ ಸಿಂಪಲ್ ಕಲಾವಿದೆ ಸವಾಯಿ ಗಂದರ್ವರ ಎರಡು ಸ್ಯಾಂಪಲ್ ತೋರಿಸಿದಾಗ ಆ ಸಂಚಾಲಕರಿಗೆ ದಿಗ್ಭ್ರಮೆ.
ಹೀಗೆ ಮತ್ತೊಮ್ಮೆ ದೆಹಲಿ ರೇಡಿಯೋ ಕಾರ್ಯಕ್ರಮಕ್ಕೆ ಹೋದಾಗ ಅರ್ಧ ಗಂಟೆ ಮೊದಲೇ ಹೋಗಿದ್ದರೂ ಅವರನ್ನು ಯಾರೂ ಕ್ಯಾರೆ ಎನ್ನಲಿಲ್ಲವಂತೆ. ಅವರು ಪಾಪ ಸುಮ್ಮನೆ ಕಾದು ಕುಳಿತಿದ್ದರಂತೆ. ಕಾರ್ಯಕ್ರಮ ಪ್ರಾರಂಭವಾಗುವ ಹೊತ್ತಿಗೆ ಒಳಗಿನಿಂದ ಬಂದ ಮ್ಯೂಸಿಕ್ ಸೂಪರ್ವೈಸರ್ ಗಂಗೂಬಾಯಿ ಹಾನಗಲ್ ಎಂದು ಕೂಗಿದನಂತೆ, ಯಾಕೆ ತಡ ಎಂದು ಬೇರೆ ರೇಗಿದನಂತೆ. ಇವರು ಸಣ್ಣ ಧ್ವನಿಯಲ್ಲೇ, “ನಾನು ಬಂದು ಅರ್ಧ ಗಂಟೆಯಾಯಿತು” ಎಂದರಂತೆ. ಅವನು ಅಲಕ್ಷದಿಂದಲೇ, “ಅಲ್ಲಿ ತಂಬೂರಿ ಇದೆ ತೆಗೆದುಕೊಂಡು ಕೂರಿ” ಎಂದನಂತೆ. ಇವರು ತಾನೇ ತಂಬೂರಿ ತೆಗೆದುಕೊಂಡು ಹೋಗಿ ಕುಳಿತು ಶೃತಿ ಮಾಡಿಕೊಂಡು ಹಾಡಲು ಪ್ರಾರಂಭಿಸಿದರು. ಸಂಗೀತ ಪ್ರಸಾರವಾಯಿತು. . ಸಂಗೀತ ಕೇಳುತ್ತಿದ್ದ ಕೇಂದ್ರ ನಿರ್ದೇಶಕರು ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಸ್ಟೂಡಿಯೋಕ್ಕೆ ಬಂದು ಸಂತೋಷದಿಂದ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿದರು. ಅವರೊಡನೆ ಚಹಾಪಾನ ಮಾಡಿ ಅವರೊಂದಿಗೆ ಅಭಿಮಾನದ ಮಾತುಗಳನ್ನಾಡಿದರು. ಇದನ್ನು ನೋಡಿದ ಅಲ್ಲಿನ ಅವರನ್ನು ಅಗೌರವವಾಗಿ ಕಂಡ ಮಿಕ್ಕ ಕೆಲಸಗಾರರ ಮುಖವೆಲ್ಲಾ ಕಪ್ಪಿಟ್ಟು ಹೋಯಿತಂತೆ. ನಂತರ ಅವರೂ ಗಂಗೂಬಾಯಿಯವರನ್ನು ಗೌರವದಿಂದ ಕಾಣಲು ಪ್ರಾರಂಭಿಸಿದರಂತೆ.
ಅವರ ಸರಳತ್ವದೊಂದಿಗೆ ಅವರ ಮಗುವಿನಂತಹಾ ಮನಸ್ಸು ಸಾಮಾನ್ಯ ಜನರಂತೆ ಕುತೂಹಲವನ್ನು ವ್ಯಕ್ತಪಡಿಸುವುದರಲ್ಲೂ ಕಂಡುಬರುತ್ತದೆ. 1971ರಲ್ಲಿ ಅವರ ಮನೆಗೆ ಕೆಲವು ಅಧಿಕಾರಿಗಳು ಬಂದು ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಡಬೇಕೆಂದು ದಿಲ್ಲಿ ಸರ್ಕಾರ ನಿರ್ಧರಿಸಿರುವುದಾಗಿ ಹೇಳಿ ಅದಕ್ಕೆ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಂಡು ಹೋದರಂತೆ. ಮುಂದಿನ ಜನವರಿ 25ರಂದು ರಾತ್ರಿ 12 ಗಂಟೆಯ ವರೆಗೆ ಪ್ರಶಸ್ತಿ ಬಂದವರ ಹೆಸರು ಹೇಳಬಹುದು ಎಂದು ರೇಡಿಯೋ ಮುಂದೆ ಕಾತುರದಿಂದ ಕಾದು ಕುಳಿತಿದ್ದರಂತೆ. ಯಾವುದೇ ರೀತಿ ಅನೌನ್ಸ್ ಮೆಂಟ್ ಬರದೇ ಇದ್ದುದನ್ನು ನೋಡಿ ನಿರಾಶರಾದುದನ್ನೂ ಸರಳ ನುಡಿಯಲ್ಲಿ ಹೇಳಿಕೊಂಡಿದ್ದಾರೆ. ಮಧ್ಯರಾತ್ರಿಯ ಮೇಲೆ ಅವರಿಗೆ ಟೆಲಿಗ್ರಾಂನಲ್ಲಿ “Congratulations on your Padmabhushana Award – Indira Gandhi” ಎಂಬ ಸಂದೇಶ ಬಂದು ಮರುದಿನ ವರ್ತಮಾನ ಪತ್ರಿಕೆಗಳಲ್ಲೆಲ್ಲಾ ಅದೇ ಸುದ್ದಿ, ಅವರ photoಗಳು, ನೋಡಿ ತುಂಬಾ ಸಂತೋಷವಾಯ್ತು ಎಲ್ಲರೂ ಮನೆಗೆ ಬರುವವರೇ ಅಭಿನಂದನೆ ಹೇಳುವವರೇ ಎಷ್ಟೊಂದು phone ಕರೆಗಳು ಆದಿನ ತನ್ನ ಅಭಿಮಾನಿ ಬಳಗ ಎಷ್ಟು ದೊಡ್ಡದು ಎಂದು ತಿಳಿದು ಆಶ್ಚರ್ಯಪಟ್ಟರಂತೆ. ಇಂತಹಾ ಸಂದರ್ಭಗಳಲ್ಲಿ ಅವರಿಗೆ ತನ್ನ ತಾಯಿಯ ನೆನಪಾಗುವುದಂತೆ. ಅವರಿದ್ದರೆ ಎಷ್ಟು ಸಂತೋಷಪಡುತ್ತಿದ್ದರು ಎಂದು ನೆನಸಿಕೊಳ್ಳುವುದು ಅವರ ವಾಡಿಕೆ.
ಅವರ ಸರಳತೆಯೊಂದಿಗೆ ಇದ್ದ ಸಜ್ಜನತೆ ಮತ್ತು ತಾವು ಇಷ್ಟು ದೊಡ್ಡ ವ್ಯಕ್ತಿಯಾದರೂ ಸ್ವಲ್ಪವೂ ಗರ್ವವಿಲ್ಲದ ಸ್ವಭಾವಕ್ಕೆ ಮತ್ತು ತಮ್ಮ ಗುರುಗಳ ಮೇಲೆ ಅವರು ಇಟ್ಟಿದ್ದ ಪ್ರೀತಿ ಮತ್ತು ಭಕ್ತಿಗೆ ಒಂದು ಉದಾಹರಣೆ ಎಂದರೆ ಅವರು ತನ್ನ ಗುರುಗಳ ಬಗ್ಗೆ ಹೇಳುವಾಗ ತನ್ನ ಬಗ್ಗೆ ಹೇಳಿಕೊಂಡ ಮಾತು.
“ನಮ್ಮ ಗುರುಗಳ ಸಂಗೀತ ಪ್ರತಿಭೆ ಪಾಂಡಿತ್ಯಗಳ ಬಗ್ಗೆ ಹೆಚ್ಚೇನು ಹೇಳುವುದು? ಭಾರತಕ್ಕೆ ಸ್ವಾತಂತ್ರ್ಯ ದೊರೆತ 5 ವರ್ಷಗಳೊಳಗಾಗಿಯೇ ಸ್ವರ್ಗಸ್ಥರಾದ ಸವಾಯಿ ಗಂಧರ್ವರು ಇನ್ನೂ ಕೆಲವು ವರ್ಷ ಬದುಕಿದ್ದರೆ ಎಷ್ಟೆಷ್ಟೋ ಪ್ರಶಸ್ತಿ, ಪುರಸ್ಕಾರ, ಪದವಿ, ಬಿರುದಾವಳಿಗಳನ್ನು ಪಡೆಯುತ್ತಿದ್ದರು. ಅವರ ವಿದ್ವತ್ತಿನ ಎರಡಾಣೆಯಷ್ಟು ಕೂಡ ಗಳಿಸದ ನನಗೇ ಇಷ್ಟೊಂದು ಗೌರವಗಳು ದೊರೆತಿರುವಾಗ ಅವರಿಗೆ ಇದರ ಎಂಟು ಹತ್ತು ಪಟ್ಟಾದರೂ ದೊರಕುತ್ತಿದ್ದವು; ಅವರು ಹಾಡುವ ಶೈಲಿ, ಹಾಡು ಕಲಿಸುವ ಶೈಲಿ ಅಪ್ರತಿಮ.”
ತನ್ನ ಗುರುಗಳ ಬಗ್ಗೆ ಭಕ್ತಿ ತನ್ನ ಬಗ್ಗೆ ಅಹಂಕಾರವಿಲ್ಲದ ಸರಳತನ ಅವರ ಹಿರಿಯ ವಿದ್ವತ್ತು ಎಲ್ಲವೂ ಸಾರುತ್ತಿವೆ “ತುಂಬಿದ ಕೊಡ” ಅವರು ಎಂದು. ಇಂತಹಾ ಹಿರಿಯ ಕಲಾವಿದೆಗೆ ನನ್ನ ಹೃದಯಾಂತರಾಳದ ನಮನ ಸಲ್ಲಿಸುತ್ತೇನೆ.