ಧಾರವಾಡದ ಮಂಜುನಾಥಪುರಕ್ಕೆ ನಿವೇಶನ ಗುರುತಿಸಲು ಬಂದ ‘ಹೊಪೋ ದಂಪತಿ’!
ಇಂದು ಬೆಳಿಗ್ಗೆ ನಮ್ಮ ಮನೆಯ ಹಿಂದಿನ ತೋಟಕ್ಕೆ ‘ಟ್ರೀ ಸರ್ವೇಯರ್’ ಒಬ್ಬರು ಏಕಾ ಏಕಿ ಭೇಟಿ ನೀಡಿದರು. ಬಹಳ ಧಾವಂತದಲ್ಲಿದ್ದ ಅವರು ನಾಲ್ಕಾರು ಗಿಡಗಳ ‘ಟೊಂಗೆ ಸರ್ವೇ’ ಕ್ಷಣಾರ್ಧದಲ್ಲಿ ಮಾಡಿ ಮುಗಿಸಿದರು. ತುಂಬ ವಿಚಲಿತರಾದಂತೆ ಕಂಡು ಬಂದ ಅವರು ಕೂಡಲೇ ಒಂದು ನಿರ್ಧಾರಕ್ಕೆ ಬರುವಂತೆ ಕಾಣುತ್ತಿದ್ದರು. ನಾನು ಕಳೆದ ಒಂದು ದಶಕದ ಹಿಂದೆ ಮನೆ ಕಟ್ಟಲೋಸುಗ ನಿವೇಶನ ಹುಡುಕುತ್ತಿದ್ದ ಧಾವಂತಕ್ಕೆ, ಅಲ್ಲಿ ನಡೆಸುತ್ತಿದ್ದ ಥರಹೇವಾರಿ ಸಮೀಕ್ಷೆಗಳಿಗೆ ಸಮನಾಗಿತ್ತು ಆ ‘ಟ್ರೀ ಸರ್ವೇಯರ್’ ಸಾಹೇಬರ ಸರ್ವೇ!
ಈಗ ಆ ‘ಟ್ರೀ ಸರ್ವೇಯರ್’ ಹೊಸದಾಗಿ ಮದುವೆಯಾಗಿದ್ದಾರೆ; ಬಾಡಿಗೆ ಮನೆ ಹಿಡಿಯುವ ಮನಸ್ಸಿಲ್ಲ, ಹಾಗಾಗಿ ಸ್ವಂತ ಮನೆಯನ್ನು ಕಟ್ಟುವ ತವಕದಲ್ಲಿದ್ದಂತಿತ್ತು. ಮೇಲಾಗಿ ಸದ್ಯಲ್ಲಿಯೇ ಅವರ ಮನೆಯವರ ಸೀಮಂತ, ಬಾಣಂತನ ಎಲ್ಲ ಆಗಬೇಕಿದೆ. ಆ ಸಂಸಾರಸ್ಥರ ‘ಟೆನ್ಷನ್’ ವರ್ಣಿಸಲು ನನ್ನಲ್ಲಿ ಶಬ್ದಗಳಿಲ್ಲ; ಒಂದರ್ಥದಲ್ಲಿ ಆ ‘ಟೆನ್ಷನ್’ಗೆ ಸದಾ ‘ಅಟೆನ್ಷನ್’ನಲ್ಲಿರುವುದೇ ಉದ್ಯೋಗ! ಸದಾ ಸನ್ನದ್ಧ ಹಾಗೂ ಎಚ್ಚರ ಸ್ಥಿತಿಯಲ್ಲಿರುವುದೇ ನಾವು ‘ಆ ಸ್ವಾತಂತ್ರ್ಯ’ಕ್ಕೆ ತೆರುವ ನಿಜವಾದ ಬೆಲೆ ಇರಬೇಕು..ಹಾಗಾಗಿ ಸಂಸಾರವೆಂಬುದು ಸಸಾರವಲ್ಲ!
ಆ ‘ಸರ್ವೇಯರ್’ ನೆಲ ಕುಟುಕ ‘ಹೊಪೋ’ಪಕ್ಷಿ. ಫೆಬ್ರುವರಿಯಿಂದ ಮೇ ತಿಂಗಳುಗಳ ವರೆಗೆ ಅವರು ಸಂಸಾರಕ್ಕೆ ಹೆಗಲು ಕೊಡುವುದರಲ್ಲಿ ತುಂಬ ವ್ಯಸ್ಥ. ಹಾಗಾಗಿ ಮರದ ಪೊಟರೆಗಳಲ್ಲಿ, ಕಲ್ಲುಗಳ ಮಧ್ಯೆ ಅಥವಾ ಮಣ್ಣಿನ ಕಟ್ಟಡಗಳ ಸಂದುಗಳಲ್ಲಿ, ಹೆದ್ದಾರಿಗಳಿಗಾಗಿ ನಿರ್ಮಿಸಲಾದ ಫ್ಲೈ ಓವರ್ ಗಳ ಅಕ್ಕ ಪಕ್ಕ ಹಾಕಲಾಗಿರುವ ಸಿಮೆಂಟ್ ಬ್ಲಾಕ್ ಗಳ ಮಧ್ಯೆ ಇರುವ ರಂಧ್ರಗಳಲ್ಲಿ ಅವು ಹುಲ್ಲಿನಿಂದ ಮೆತ್ತನೆ ಹಾಸಿಗೆ ಮಾಡಿ ಗೂಡು ಕಟ್ಟುತ್ತವೆ. ಹಾಗಾಗಿ ನಮ್ಮ ಮನೆಯ ಹಿಂದಿನ ತೋಟದಲ್ಲಿ ತುರ್ತಾಗಿ ಗಂಡು ಹೊಪೋ ತನ್ನ ಸರ್ವೇ ಕಾರ್ಯ ನಡೆಸಿತ್ತು.
ಮೈಮೇಲೆ ಹೆಸರಗತ್ತೆಗೆ (ಝಿಬ್ರಾ) ಇರುವಂತೆ ಕಪ್ಪು-ಬಿಳಿ ಪಟ್ಟೆಗಳನ್ನು ಹೊಂದಿರುವ ಮೈನಾ ಗಾತ್ರದ ಹಕ್ಕಿಯದು. ಕುತ್ತಿಗೆ ಹಾಗೂ ಎದೆ ಕಿತ್ತಳೆ ಬಣ್ಣ; ಕಲರ್ ಕಾಂಬಿನೇಶನ್ ನೋಡಿದರೆ ಹೊಪೋ ಪಕ್ಷಿ ‘ಕಂಪ್ಲೀಟ್ ಮ್ಯಾನ್’! .ಕಿರೀಟವಿಟ್ಟಂತೆ ತಲೆಯ ಮೇಲೆ ನವಿಲಿ ಗಿರುವ ಬೀಸಣಿಕೆಯಂತೆ ತುರಾಯಿ ಇತ್ತು. ಆ ತುರಾಯಿಯ ಕೊನೆಯಲ್ಲಿ ಅಂದವಾಗಿ ಕಪ್ಪು ಮಚ್ಚೆಗಳಿದ್ದವು; ಉಂಗುರಕ್ಕೆ ಅಂದನೆಯ ಹರಳು ತೊಡಿಸಿದಂತೆ!. ನಾವು ಹುಬ್ಬು ಹಾರಿಸಿದಂತೆ ಹೊಪೋ ತನ್ನ ತಲೆಯ ಮೇಲಿನ ಚೊಟ್ಟಿಯನ್ನು ಹಾರಿಸಿ ಮತ್ತೆ ಯಥಾಸ್ಥಿತಿಗೆ ಒಯ್ಯುತ್ತಿತ್ತು. ಚೊಟ್ಟಿ ಮಡಚಿದಾಗ ಅದು ಹಿಮ್ಮುಖವಾಗಿ ಇನ್ನೊಂದು ಚುಂಚು ಹೊಂದಿರುವಂತೆ ಭಾಸವಾಗುತ್ತಿತ್ತು.
ಇಷ್ಟರಲ್ಲಿಯೇ ಅವರ ಮನೆಯವರೂ ಎಲ್ಲಿಂದಲೋ ಹಾರಿ ಬಂದು ಸರ್ವೇ ಕಾರ್ಯದಲ್ಲಿ ತೊಡಗಿಕೊಂಡರು. ಬಹುಶ: ಅವರಿಗೆ ಮನೆ ತೋರಿಸಲು ಕೆಲವು ಏಜೆಂಟರೂ ಜತೆಗೆ ಇದ್ದರು! ಕೆಮ್ಮೀಸೆ ಪಿಕಳಾರ (ರೆಡ್ ವಿಸ್ಕರ್ಡ್ ಬುಲು ಬುಲ್), ಕೆಂಪು ಬಾಲದ ಪಿಕಳಾರ (ರೆಡ್ ವೆಂಟೆಡ್ ಬುಲ್ ಬುಲ್), ಹಳದಿ ಕುಂಡೆಕುಸ್ಕ (ಯಲ್ಲೋ ವ್ಯಾಗ್ ಟೇಲ್), ಕರಿ ಕುಂಡೆಕುಸ್ಕ ( ಲಾರ್ಜ್ ಪೈಡ್ ವ್ಯಾಗ್ ಟೇಲ್), ಗುಬ್ಬಚ್ಚಿ (ಹೌಸ್ ಸ್ಪ್ಯಾರೋ), ಹಸುರು ಟುವ್ವಿ (ಟೇಲರ್ ಬರ್ಡ್) ಹಾಗೂ ಕಿರು ಟುವ್ವಿ (ಇಂಡಿಯನ್ ವರೆನ್ ವ್ಯಾಬ್ಲರ್) ದಂಪತಿಗಳು ನೆಲ ಕುಟುಕ (ಹೊಪೋ) ದಂಪತಿಗಳಿಗೆ ಹಲವಾರು ಗಿಡಗಳನ್ನು ಪರಿಚಯಿಸುತ್ತಿರುವಂತೆ, ಸಂಗೀತ ಕಚೇರಿಯೊಂದಿಗೆ ಪಕ್ಷಿಲೋಕದ ಗಂಧರ್ವ ಗಾಯಕರು ಅತ್ತಿಂದಿತ್ತ- ಇತ್ತಿಂದತ್ತ ಹಾರಾಡುತ್ತಿದ್ದವು. ಹೊಪೋ ನಾನೇ ಈಕೆಯ ಗಂಡ ಎಂದು ರೋಪು ಜಮಾಯಿಸಲು, ಕೆಲವೊಮ್ಮೆ ತನ್ನ ಇರುವಿಕೆ ತೋರ್ಪಡಿಸಲು ಹಾಗೂ ಇತರ ಹಕ್ಕಿಗಳನ್ನು ಹೆದರಿಸಲು ತುರಾಯಿಯಂತಿದ್ದ ಚೊಟ್ಟಿಯನ್ನು ಹಾರಿಸಿ, ಅಗಲಿಸಿ ಮತ್ತೆ ದಿಕ್ಕು ಬದಲಿಸಿ ಕೂಡುತ್ತಿತ್ತು. ‘ಭೋ ಪುಪು..ಬೋ ಪುಪು’ ಎಂದು ಆಗಾಗ ಮೆಲುದನಿಯಲ್ಲಿ ಕೂಗಿ ತನ್ನ ಸಂಗಾತಿಯೊಂದಿಗೆ ನೆಲದಿಂದ ಮೇಲಕ್ಕೆ ಹಾರಿ ಟೊಂಗೆಯ ಮೇಲೆ ಕುಳಿತುಕೊಂಡು ಸಂಭವನೀಯ ಅಪಾಯದಿಂದ ಪಾರಾಗುತ್ತಿತ್ತು.
ಈ ಹೊಪೋ ದಂಪತಿ ಈ ಮಧ್ಯೆ ‘ತಮ್ಮ ಮನೆ ತೋರಿಸುವ ಏಜೆಂಟರುಗಳಿಗೆ’ ‘ಹೂಂ’ ಗುಟ್ಟಿದಂತೆ, ಸಮಾಲೋಚನೆಯಲ್ಲಿ ತೊಡಗಿದಂತೆ ನೆಲದ ಮೇಲೆ ಹಾರಿ ಕುಳಿತು ಮಣ್ಣಿನಲ್ಲಿ ಎನೋ ಹೆಕ್ಕುತ್ತ ಸಂಭಾಷಿಸುತ್ತಿದ್ದವು. ನೆಲ ಕೆದಕಿದಾಗ ದೊರಕುತ್ತಿದ್ದ ಕೀಟಗಳನ್ನು ಪರಸ್ಪರ ವಿನಿಮಯಿಸಿಕೊಂಡು ಭೂರಿ ಭೋಜನದಲ್ಲೂ ಮುಳುಗುತ್ತಿದ್ದವು. ಹುಲ್ಲಿನ ಮೈದಾನಗಳಿರುವೆಡೆ ಮಿಡತೆ, ಹ್ಯಾತೆ, ಕೀಟಗಳು, ಜೇನು ನೊಣ, ಜೇಡ, ಯರೆ ಹುಳು, ಮಳೆ ಹುಳುಗಳನ್ನು ಹೆಕ್ಕಲು ಅವು ಅಣಿಯಾದಾಗ ಕಾಣಸಿಗುತ್ತವೆ. ಹೆಚ್ಚಾಗಿ ಹಳ್ಳಿ -ಗ್ರಾಮ್ಯ ಪರಿಸರದಲ್ಲಿ ಅವುಗಳ ಸಂತತಿ ಹೆಚ್ಚು.
ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಭರ್ಮಾ ಹಾಗೂ ಪಾಕಿಸ್ತಾನಗಳಲ್ಲಿಯೂ ಹೊಪೋ ಹಕ್ಕಿಯನ್ನು ಗುರುತಿಸಬಹುದಾಗಿದೆ ಎನ್ನುತ್ತಾರೆ ಪಕ್ಷಿಶಾಸ್ತ್ರಜ್ಞರು. ದೇವರ ದಯದಿಂದ ಹೊಪೋ ದಂಪತಿ ಈ ತೋಟದಲ್ಲಿಯೇ ಮನೆ ಮಾಡಿದರೆ ಅವರ ಪುಟ್ಟ ಸಂಸಾರದ ಕೌತುಕಗಳ ಬಗ್ಗೆ ಮತ್ತೆ ಬರೆಯುವ ಭಾಗ್ಯ ನನ್ನದು; ಓದುವ ಅವಕಾಶ ನಿಮ್ಮದಾಗಲಿ ಎಂದು ಆಶಿಸುತ್ತೇನೆ. ಏಕೆಂದರೆ ನಮ್ಮ ಮನೆಯ ಮುಂದಿನ ರಸ್ತೆ ಮೊದಲು ಕಲ್ಲು-ಮಣ್ಣಿನ ಕಾಲುದಾರಿಯಾಗಿತ್ತು; ಜನ-ವಾಹನ ದಟ್ಟಣೆ ಅಷ್ಟಾಗಿರುತ್ತಿರಲಿಲ್ಲ. ಆದರೆ ಇತ್ತೀಚೆಗೆ ಸಿಮೆಂಟ್ ರಸ್ತೆಯಾದಾಗಿನಿಂದ ನನ್ನ ನೆಮ್ಮದಿಗೇ ಭಂಗ ಬಂದಂತಾಗಿದೆ..ಇನ್ನು ಪಾಪ ಹೊಪೋ ದಂಪತಿ ಸಹಿಸಿಕೊಳ್ಳುವರೇ ನಮ್ಮ ಈ ಗಲಾಟೆ ಎಂಬ ದುಗುಡ ನನ್ನನ್ನು ಆವರಿಸಿದೆ. ‘ಕಾದು’ ನೋಡೋಣ; ಅವುಗಳನ್ನು ‘ಕಾಯಿಸಿ’ದ್ದಕ್ಕಾಗಿ!.