ಧಾರವಾಡದ ಮುಗದಕ್ಕೆ ‘ಪಕ್ಷಿ ಪ್ರಾಮುಖ್ಯ ಪ್ರದೇಶ’ ಎಂಬ ಮನ್ನಣೆ ಈ ಪಕ್ಷಿಯಿಂದ ದೊರಕೀತೇ?

ಧಾರವಾಡದ ಮುಗದಕ್ಕೆ ‘ಪಕ್ಷಿ ಪ್ರಾಮುಖ್ಯ ಪ್ರದೇಶ’ ಎಂಬ ಮನ್ನಣೆ ಈ ಪಕ್ಷಿಯಿಂದ ದೊರಕೀತೇ?

ಬರಹ

ಡಾ. ಸಲೀಂ ಅಲಿ. ಭಾರತ ಕಂಡ, ಅಂತಾರಾಷ್ಟ್ರೀಯ ಖ್ಯಾತಿಯ ಪಕ್ಷಿ ಶಾಸ್ತ್ರಜ್ಞ. ಅವರು ಜನ್ಮಕೊಟ್ಟ ಸಂಸ್ಥೆಯ ಹೆಸರು ಬಾಂಬೆ ನ್ಯಾಶನಲ್ ಹಿಸ್ಟರಿ ಸೊಸಾಯಿಟಿ (ಬಿಎನ್ ಎಚ್ ಎಸ್). ಈಗಾಗಲೇ ಶತಮಾನೋತ್ಸವ ಆಚರಿಸಿಕೊಂಡ ಸಂಸ್ಥೆ ಅದು. ಮುಂಬೈ ಕೇಂದ್ರವಾಗಿಟ್ಟುಕೊಂಡು ಅದು ರಾಷ್ಟ್ರವ್ಯಾಪಿಯಾಗಿ ಪಕ್ಷಿಗಳ ಗಣತಿ ಹಾಗು ಸಂರಕ್ಷಣೆ ಕುರಿತು ಸದ್ದಿಲ್ಲದೇ ಕೆಲಸ ಮಾಡುತ್ತಿರುವ ವಿಶ್ವವಿದ್ಯಾಲಯ ಸದೃಶ ಸಂಸ್ಥೆ. ಇಂದಿಗೂ ಪಕ್ಷಿಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಪ್ರಬಲವಾಗಿ ಅವುಗಳ ಬದುಕುವ ಹಕ್ಕುಗಳನ್ನು ಪ್ರತಿಪಾದಿಸುತ್ತ ಬಂದಿದೆ.

ಇಷ್ಟೆಲ್ಲ ವಿಷಯಗಳನ್ನು ಸಂಪದಿಗರಿಗೆ ತಿಳಿಸಲು ಕಾರಣವಿದೆ. ಇಂದು ಬೆಳಿಗ್ಗೆ ಅಚಾನಕ್ ಚಾರಣ ಕೈಗೊಂಡಿದ್ದ ನಮಗೆ (ಅರ್ಥಾತ್ ನಾನು ಹಾಗು ಛಾಯಾಪತ್ರಕರ್ತ ಜೆ.ಜಿ.ರಾಜ್) ಅವರಿಗೆ ವಿಶೇಷ ಪಕ್ಷಿಯೊಂದು ದರ್ಶನ ನೀಡಿತು. ನಗರದ ಹೊರವಲಯದ ಮುಗದ ಗ್ರಾಮದ ಬಳಿ ಸ್ವಚ್ಛಂದವಾಗಿ ಬೇಟೆ ಹೆಕ್ಕುತ್ತ ಕುಳಿತ ಈ ಪಕ್ಷಿ ನಮ್ಮ ಗಮನ ಸೆಳೆಯಿತು. ನೋಡಲು ಥೇಟ್ ಕಿಂಗ್ ಫಿಷರ್ ಪಕ್ಷಿಯನ್ನೇ ಹೋಲುವ ಈ ಪಕ್ಷಿ ತನ್ನ ವಿಶಿಷ್ಟ ವ್ಯಕ್ತಿತ್ವದಿಂದ ನಮ್ಮನ್ನು ಸಹ ಪಕ್ಷಿ ಶಾಸ್ತ್ರಜ್ಞ್ನರನ್ನಾಗಿಸಿತ್ತು.

ಹಾಗಾಗಿ ಬಿ.ಎನ್.ಎಚ್.ಎಸ್ ಸಂಸ್ಥೆಯನ್ನು ಇಲ್ಲಿ ನೆನೆದುಕೊಳ್ಳಬೇಕಾಯಿತು. ಇತ್ತೀಚೆಗೆ ಈ ಸಂಸ್ಥೆ ಪಕ್ಷಿಗಳ ಕುರಿತು ದೇಶವ್ಯಾಪಿ ಸಮೀಕ್ಷೆ ಕೈಗೊಂಡಿದೆ. ಈ ಸಮೀಕ್ಷೆಯ ಪರಿಣಾಮವಾಗಿ ದೇಶದಲ್ಲಿ ೪೪೬ ಹಾಗು ರಾಜ್ಯದಲ್ಲಿ ೩೬ ಸ್ಥಳಗಳನ್ನು ‘ಪಕ್ಷಿ ಪ್ರಾಮುಖ್ಯ ಪ್ರದೇಶಗ’ಳೆಂದು ಗುರುತಿಸಲಾಗಿದೆ. ವಿಶೇಷವೆಂದರೆ ಈ ಸಮೀಕ್ಷೆಯಲ್ಲಿ ರಾಜ್ಯದ ಮೈಸೂರು ಅಮೇಚೂರ್ ನ್ಯಾಚುರಲಿಸ್ಟ್ (ಮ್ಯಾನ್) ಸಂಸ್ಥೆ ಸೇರಿದಂತೆ ಒಟ್ಟು ೧೪ ಸ್ವಯಂ ಸೇವಾ ಸಂಸ್ಥೆಗಳು ಈ ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದವು. ಮ್ಯಾನ್ ಸಂಸ್ಥೆ ಮಾತ್ರ ರಾಜ್ಯದ ೧೯ ಪಕ್ಷಿ ಪ್ರಾಮುಖ್ಯ ಪ್ರದೇಶಗಳಿಗೆ ಭೇಟಿ ನೀಡಿದ ೧೪ ತಂಡಗಳು ಮಾಹಿತಿ ಸಂಗ್ರಹಿಸಿವೆ. ಸಂಸ್ಥೆ ಕಳೆದ ೨೦ ವರ್ಷಗಳಿಂದ ಸಂಗ್ರಹಿಸಿಟ್ಟಿದ್ದ ಮಹತ್ವಪೂರ್ಣ ಮಾಹಿತಿಯನ್ನು ಸಹ ಈ ಸಮೀಕ್ಷಾ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗಿದೆ.

ಪಕ್ಷಿ ಪ್ರಾಮುಖ್ಯ ಪ್ರದೇಶವೆಂದು ಗುರುತಿಸಲು ಕೆಲ ಮಾನದಂಡಗಳಿವೆ. ಆ ಪ್ರದೇಶ ಅಪರೂಪದ ಪಕ್ಷಿಗಳ ವಾಸಸ್ಥಳವಾಗಿರಬೇಕು. ಕನಿಷ್ಠ ೨ ಪಕ್ಷಿಗಳಾದರೂ ವಿನಾಶದ ಅಂಚಿಗೆ ತಲುಪಿರಬೇಕು. ಜಗತ್ತಿನ ಒಟ್ಟು ಸಂಖ್ಯೆಯ ೧ ರಷ್ಟು ವಿಶೇಷ ಪಕ್ಷಿಗಳು ಇರುವ ಸ್ಥಳವನ್ನು ಪಕ್ಷಿ ಪ್ರಾಮುಖ್ಯ ಸ್ಥಳವೆಂದು ಗುರುತಿಸಲಾಗುತ್ತದೆ. ಹಾಗಾದರೆ ನಮ್ಮ ಮುಗದ..ಇದು ನಮ್ಮ ಮುಂದಿದ್ದ ಪ್ರಶ್ನೆ! ನಾನ್ನು ಕಂಡು ಹಿಡಿದ, ಕ್ಯಾಮೆರಾ ಝಳಪಿಸಿ ಜೆ.ಜಿ.ರಾಜ್ ಸೆರೆಹಿಡಿದ ಈ ವಿಶೇಷ ಪಕ್ಷಿ ಆ ೩ ಮಾನದಂಡಗಳಲ್ಲಿ ಯಾವುದಾದರೂ ಒಂದನ್ನಾದರೂ ಪೂರೈಸುತ್ತದೆಯೇ? ತಲೆ ಚಿಟ್ಟು ಹಿಡಿಸಿತು. ಸಹೃದಯ ಸಂಪದಿಗರು ಈ ನಿಟ್ಟಿನಲ್ಲಿ ನನಗೆ ಸಹಾಯ ಮಾಡುವರು ಎಂಬ ಭರವಸೆ ಇದೆ.

ಹಾಗಾದರೆ ರಾಜ್ಯದಲ್ಲಿ ಗುರುತಿಸಲಾದ ಪಕ್ಷಿ ಪ್ರಾಮುಖ್ಯ ಪ್ರದೇಶಗಳು ಯಾವವು? ಈ ಪ್ರಶ್ನೆಗೆ ಇದೋ ನೋಡಿ..ಇಲ್ಲಿದೆ ಉತ್ತರ. ಆದಿಚುಂಚನಗಿರಿ, ಅಣಸಿ ರಾಷ್ಟ್ರೀಯ ಉದ್ಯಾನ, ಬಂಡೀಪುರ, ಬನ್ನೇರುಘಟ್ಟ, ಭದ್ರಾ ವನ್ಯಜೀವಿ ಅಭಯಾರಣ್ಯ, ಭೀಮಗಡ್ ಅರಣ್ಯ, ಬಿಳಿಗಿರಿ ರಂಗಸ್ವಾಮಿ ಬೆಟ್ಟ, ಬ್ರಹ್ಮಗಿರಿ, ಕಾವೇರಿ ವನ್ಯಜೀವಿ ಅಭಯಾರಣ್ಯ, ಗುಡವಿ, ಹಂಪಿ, ಜೋಗಿಮಟ್ಟಿ, ಮೈಸೂರಿನ ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ, ಕೆಮ್ಮಣ್ಣು ಗುಂಡಿ, ಕೆಂಪೊಳೆ ಅರಣ್ಯ, ಕೊಕ್ಕರೆ ಬೆಳ್ಳೂರು, ಕೆ.ಆರ್.ಎಸ್ ಹಿನ್ನೀರು ಪ್ರದೇಶ, ಕುದುರೆ ಮುಖ, ಮಾಗಡಿ ಹಾಗು ಶೆಟ್ಟಿ ಕೆರೆ, ಮೇಲುಕೋಟೆ, ನಾಗರಹೊಳೆ, ನಂದಿ ಬೆಟ್ಟ, ನರಸಾಂಬುದಿ ಕೆರೆ, ಪುಷ್ಪಗಿರಿ, ರಾಮನಗರ ರಾಜ್ಯ ವ್ಯಾಪ್ತಿ ಅರಣ್ಯ, ರಂಗನತಿಟ್ಟು, ರಾಣೆಬೆನ್ನೂರು, ಶರಾವತಿಕೊಳ್ಳ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ, ಸೂಳೆಕೆರೆ, ತಲಕಾವೇರಿ ವನ್ಯಜೀವಿ ಅಭಯಾರಣ್ಯ, ಅರಬ್ಬಿ ತಿಟ್ಟು, ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ಪ್ರಮುಖವಾದವು.

ಅಯ್ಯೊ..ಈ ಲಿಸ್ಟ್ ನಲ್ಲಿ ನಮ್ಮ ಧಾರವಾಡದ ಮುಗದ ಸೇರಿಲ್ಲ! ಸಂಪದದ ಈ ಲೇಖನದಿಂದ ಬಹುಶ: ಸೇರಬಹುದು ಎಂಬ ಆಶಾಭಾವನೆ ನಮ್ಮಿಬ್ಬರದು!