ಧಾವತಿ

ಧಾವತಿ

ಪುಸ್ತಕದ ಲೇಖಕ/ಕವಿಯ ಹೆಸರು
ಗಂಗಪ್ಪ ತಳವಾರ
ಪ್ರಕಾಶಕರು
ತಮಟೆ ಪಬ್ಲಿಕೇಷನ್ಸ್, ಕಾಮಾಕ್ಷಿ ಪಾಳ್ಯ, ಬೆಂಗಳೂರು - ೫೬೦೦೭೯
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೩

ಸಾಹಿತಿ ಗಂಗಪ್ಪ ತಳವಾರ ಅವರ ವಿನೂತನ ಕಾದಂಬರಿ “ಧಾವತಿ" ಇತ್ತೀಚೆಗೆ ಬಿಡುಗಡೆಯಾಗಿದೆ. ವಿಮರ್ಶಕಿ ಭಾರತೀ ದೇವಿ ಪಿ. ಇವರು ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

“ಕಿಚ್ಚಿಲ್ಲದ ಬೇಗೆ, ಏರಿಲ್ಲದ ಧಾವತಿ ಇವು ಬರಿಕಂಗಳಿಗೆ ಕಾಣದ, ಆದರೆ ಒಳಗೇ ಇರಿಯುವ ನೋವು. ಒಳಗೆ ಚುಚ್ಚಿ ಮುರಿದ ಮುಳ್ಳಿನ ನೋವು ಅದು. ಅಕ್ಕನ ವಚನಗಳಲ್ಲಿ ಬರುವ ಈ ಪದಗಳು ಹಲವು ನೆಲೆಗಳಲ್ಲಿ ನಮ್ಮನ್ನು ತಟ್ಟುತ್ತವೆ. ಭವಗಳಲ್ಲಿ ಏಗಿ ಏಗಿ ದಾಟುವ ಹಾದಿ ಅದು. ಶರಣರು ಸವೆಸುವ ಹಾದಿಗೆ ಮೋಕ್ಷವೆಂಬ ಗಂತವ್ಯ ಇದೆ. ಆದರೆ ಹಲವು ಜೀವಗಳ ಬದುಕಲ್ಲಿ ನೋವೇ ಹಾದಿ ಮತ್ತು ಕೊನೆಯೂ ಕೂಡಾ. ಗಂಗಪ್ಪ ತಳವಾರ್ ಅವರು ತಮ್ಮ‘ಧಾವತಿ’ಯಲ್ಲಿ ಈ ಒಡಲಾಳದ ಬೇಗೆಯನ್ನು, ಒಡಲೊಳಗೇ ಮುರಿದ ಮುಳ್ಳಿನಂತಿರುವ ವಿಷಮತೆಯನ್ನು ಚಂದ್ರಿ ಎನ್ನುವ ಹೆಣ್ಣುಮಗಳ ಮೂಲಕ ಗಾಢವಾಗಿ ಕಟ್ಟಿಕೊಡುತ್ತಾರೆ.

ಈ ಕೃತಿ, ಸಿದ್ಧಜಾಡಿಗೆ ಸಿಲುಕದೆ, ಕಟುವಾಸ್ತವವನ್ನು ಇದ್ದಂತೆಯೇ ನಿರೂಪಿಸುತ್ತಾ ನಮ್ಮನ್ನು ಕವಿದುಬಿಡುತ್ತದೆ. ಒಂದೆಡೆ ಸಾಮಾಜಿಕ ತಾರತಮ್ಯ, ಇನ್ನೊಂದೆಡೆ ಕಡುಬಡತನ ಇವೆರಡೂ ಬದುಕುಗಳನ್ನು ಜರ್ಜರಿತಗೊಳಿಸುತ್ತಾ ಹೋಗುವ ಸಾಮಾಜಿಕ ದುರಂತವನ್ನು ಈ ಕತೆ ಚಿತ್ರಿಸುತ್ತದೆ. ಬದುಕಿನ ಹೋರಾಟದಲ್ಲಿ ಜೀವಂತಿಕೆ ಉಡುಗಿಹೋಗುವ ದಾರುಣತೆ ಇಲ್ಲಿದೆ. ಗೇಯುವುದಷ್ಟೇ ಬದುಕಾಗಿ ಒಂದಿಷ್ಟು ನೆಮ್ಮದಿಯ ಬದುಕಿನ ಹಂಬಲವೂ ಸಾಕಾರವಾಗದೇ ಇರುವ ಈ ಬಗೆ ನಮ್ಮ ಎದುರಿನ ಕೋಟ್ಯಂತರ ದುಡಿಯುವ ಜನರ ಬದುಕಿನ ಕತೆಯಾಗಿದೆ.

ಕತೆ ಒಂದು ವಿಚಿತ್ರ ಸನ್ನಿವೇಶದಲ್ಲಿ ತೆರೆದುಕೊಳ್ಳುತ್ತದೆ. ನಸುಗತ್ತಲು, ಹೆಂಡದಂಗಡಿಯಲ್ಲಿ ನೋವು ಮರೆಯಲು, ಉನ್ಮತ್ತರಾಗಲು ನೆರೆದ ಜನರು, ಅವರ ವಿಚಿತ್ರವಾದ ನಡವಳಿಕೆಗಳ ಮಧ್ಯೆ ಎಲ್ಲವನ್ನೂ ಕಳೆದುಕೊಂಡವಳಂತೆ ಬರುವ ಚಂದ್ರಿ. ಸಾವಿಗೆ ಮುಖಮಾಡಿ ಹಿನ್ನೋಟದಲ್ಲಿ ಬದುಕನ್ನು ಕಾಣುವ ಬಗೆಯಲ್ಲಿ ಕತೆ ಮೊದಲಾಗುತ್ತದೆ. ಕೊನೆಯಲ್ಲಿ ಮತ್ತೆ ಸಾವಿಗೆ ಮುತ್ತಿಕ್ಕುತ್ತದೆ. ಈ ಸಾವು ಯಾರ ಸಾವು? ಜೀವಂತಿಕೆ ಕಸಿಯುವ ಸತ್ತ ಸಮಾಜದ ಕೊಲೆಗಡುಕತನವೇ? ವೈಯಕ್ತಿಕ ದುರಂತವೇ? ಬದುಕಿದ ಎಲ್ಲರೂ ಹೊಂದಬೇಕಾದ ಅಂತಿಮ ಬಿಂದುವೇ? ಎಂಬ ಪ್ರಶ್ನೆಗಳ ಮಧ್ಯೆ ಕತೆ ಹರಡಿಕೊಂಡಿದೆ. 

ಚಂದ್ರಿ ಅತ್ಯಂತ ಬಡತನದಲ್ಲಿ ಹುಟ್ಟಿದವಳು. ವಿದ್ಯೆ ಕಲಿಯುವ ಅವಳ ಆಸೆ, ಶಾಲೆಯ ತಾರತಮ್ಯದ ವಾತಾವರಣದಲ್ಲಿ ಕಮರಿ ಹೋಗುತ್ತದೆ. ಸವಲತ್ತು ಉಳ್ಳವರ ಮಧ್ಯೆ ಕ್ಷಣಕ್ಷಣವೂ ಕೀಳರಿಮೆಯಲ್ಲಿ ಬೇಯುವ, ಅವಹೇಳನಕ್ಕೆ ತುತ್ತಾಗುವ ಸಂಕಟ, ಚಂದ್ರಿ ಶಾಲೆಯಿಂದ ಹೊರಬರುವಂತೆ ಮಾಡುತ್ತದೆ. ನಂತರ ಅವಳು ಬದುಕು ಸಾಗಿಸಲು ಸಣ್ಣಪುಟ್ಟ ಕೆಲಸ ಮಾಡಲು ಶುರು ಮಾಡುತ್ತಾಳೆ. ಒಂದು ಚಂದದ ಬದುಕು, ನೆಮ್ಮದಿಯ ನೆಲೆಯ ಹುಡುಕಾಟದಲ್ಲಿ ಅವಳು ಆತುಕೊಂಡ ಬಳ್ಳಿಗಳೆಲ್ಲ ಹಾವಾಗಿ ಬದಲಾಗುತ್ತವೆ. ಇನ್ನು ಬಂದರೆ ಎಂತಹ ಕಷ್ಟ ನನಗೆ ಬರಲು ಸಾಧ್ಯ ಎನ್ನುವ ಕಾಠಿಣ್ಯದಲ್ಲಿ ಆಕೆ ಬದುಕು ಸವೆಸುತ್ತಾಳೆ. 

ಸ್ವತಃ ಚಂದ್ರಿಯ ತಾಯಿ ರಾಮಕ್ಕನ ಬದುಕೇ ತಳ ಒಡೆದ ದೋಣಿಯಂತಹುದು. ಈಕೆ ಬದುಕಿನ ಜಂಜಾಟದಲ್ಲಿ ಮೃದುಭಾವನೆಗಳನ್ನೇ ಬದಿಗೊತ್ತಿ ಜೀವತೇಯುತ್ತಿರುವವಳು. ಒದ್ದಾಟ, ಚಟಗಳು, ಸಹವಾಸ ಎಲ್ಲದರ ಮಧ್ಯೆ ಮಗಳ ಬಗೆಗಿನ ಅವಳ ವಾತ್ಸಲ್ಯವನ್ನು ಹೊರಹಾಕುವ ವ್ಯವಧಾನ ಅವಳಿಗಿಲ್ಲ. ಇಲ್ಲಿ ಸರಿ ತಪ್ಪುಗಳ ಲೆಕ್ಕಾಚಾರದ ಆಚೆ ಎಲ್ಲರೂ ಪರಿಸ್ಥಿತಿಯ ಕೂಸುಗಳು. ಚಂದ್ರಿ ತಂದೆ ಕದಿರಪ್ಪ ಗಾರೆ ಕೆಲಸ ಮಾಡುತ್ತಾ ಊರಿಂದೂರಿಗೆ ಸಾಗುತ್ತಾ ಆಗೊಮ್ಮೆ ಈಗೊಮ್ಮೆ ಮನೆಗೆ ಭೇಟಿ ಕೊಡುವ ಅತಿಥಿ. 

ಬದುಕಿನ ಹೋರಾಟ ಪತಿ ಪತ್ನಿಯರ ನಡುವಣ ಮಾರ್ದವವನ್ನೂ ಒಣಗಿಸಿಬಿಟ್ಟಿದೆ. ಅವನೂ ಅಷ್ಟೇ ಅಸಹಾಯಕ. ಮಡದಿ, ಮಗಳ ಬಗ್ಗೆ ಕಕ್ಕುಲಾತಿ ಇದ್ದರೂ ಆಗೊಮ್ಮೆ ಈಗೊಮ್ಮೆ ಭೇಟಿ ಕೊಡುವ ಅವನು ರಾಮಕ್ಕನ ಪಾಲಿಗೆ ಬೇಡದ ಅತಿಥಿ. 

ಎಲ್ಲದರ ಮಧ್ಯೆ ಚಂದ್ರಿ ಒಂದು ಹಿಡಿ ಪ್ರೀತಿಗೆ, ನೆಮ್ಮದಿಯ ಬದುಕಿಗೆ ಹಂಬಲಿಸುತ್ತಾಳೆ. ಅವಳು ಆತುಕೊಂಡ ಎಲ್ಲವೂ ಅವಳನ್ನು ಪೊರೆಯುವ ಬದಲು ಹಿಂಡಿ ಹಾಕುತ್ತವೆ. ತಂದೆ ತಾಯಿಯರ ತುಂಬು ಪ್ರೀತಿಯನ್ನೂ ಕಾಣದ ಚಂದ್ರಿಯನ್ನು ಗೌಣ್ಣೋರ ಸುರೇಶ, ಗಂಡ, ಮೈದುನ, ಮೇಸ್ತ್ರಿ ಎಲ್ಲರೂ ಭೋಗಕ್ಕೆ ಬಳಸಿಕೊಳ್ಳುತ್ತಾರಲ್ಲದೆ, ಈಕೆಗೆ ಆಸರೆಯಾಗಿರುವುದಿಲ್ಲ. ಬದುಕಲ್ಲಿ ಏನೆಲ್ಲ ಉಂಡ ತನ್ನ ತಾಯಿಯ ಕೊನೆಯ ಕ್ಷಣ ಚಂದ್ರಿಯನ್ನು ಅಲ್ಲಾಡಿಸುತ್ತದೆ. ಜೀವಂತಿಕೆಯ ಕುರುಹುಗಳೆಲ್ಲವೂ ಕ್ರೂರ ವಾತಾವರಣದಲ್ಲಿ ಕಮರುತ್ತಾ ಹೋಗುತ್ತವೆ. ಇಲ್ಲಿ ಬರುವ ‘ಸ್ಮಶಾನ’ ಎಲ್ಲವನ್ನೂ ಮಾರ್ಮಿಕವಾಗಿ ಧ್ವನಿಸುತ್ತದೆ.

ಮಗುವಿನ ಕಣ್ಣಲ್ಲಿ ದೊಡ್ಡವರ ಜಗತ್ತು ದಾಖಲಾಗುವ ಬಗೆಯಲ್ಲಿ ಬರೆದ ಅನೇಕ ಕಥೆಗಳು ಕನ್ನಡದ ಕಥಾಪರಂಪರೆಯಲ್ಲಿವೆ. ಈ ಕಥಾಹಂದರದ ಮೊದಲ ಭಾಗದಲ್ಲಿ ಪುಟ್ಟ ಚಂದ್ರಿ ಕಣ್ಣುಗಳ ಮೂಲಕ ಲೋಕವನ್ನು ನೋಡಲಾಗಿದೆ. ತನ್ನ ತಂದೆಯ ಮುಗ್ಧತೆ, ಅಮಾಯಕತೆ ಒಂದೆಡೆ, ತಾಯಿಯ ಒರಟುತನ, ಸೆಣಸಾಟ ಒಂದೆಡೆ. ಒಮ್ಮೆ ಸಿನೆಮಾ ನೋಡಲು ಹೋದಾಗ ತನ್ನ ತಾಯಿಯ ಗುಟ್ಟಿನ ಸಂಬಂಧ ಅವಳ ಕಣ್ಣೆದುರು ಬಿಚ್ಚಿಕೊಳ್ಳುತ್ತದೆ. ಅದು ಅವಳಲ್ಲಿ ಹುಟ್ಟಿಸಿದ ಆಘಾತ ನಂತರದಲ್ಲೂ ಬೇರೆ ಬೇರೆ ರೀತಿಯಲ್ಲಿ ಆಕೆಯನ್ನು ಭೂತವಾಗಿ ಕಾಡುತ್ತಲೇ ಇರುತ್ತದೆ. ದುರಂತಗಳು ಸರಪಳಿಯಂತೆ ಒಂದರೊಡನೊಂದು ಹೆಣೆದುಕೊಂಡು ಬದುಕನ್ನು ದಿಕ್ಕೆಡಿಸುತ್ತವೆ.

ಚಂದ್ರಿಯ ಬದುಕಿನ ಕತೆಯನ್ನು ಆಲಿಸುತ್ತಿದ್ದಂತೆ ನಮಗೆ ನೋವುಣ್ಣುತ್ತಾ ಬದುಕು ಕಟ್ಟಿಕೊಳ್ಳುವ ಛಾತಿ ತೋರುವ, ನೋವಲ್ಲೇ ಕೊನೆಯಾಗುವ ಇನ್ನೂ ಅನೇಕ ಹೆಣ್ಣುಗಳ ಚಿತ್ರ ಕಣ್ಣಮುಂದೆ ಸುಳಿಯುತ್ತದೆ. ಚೋಮನದುಡಿ ಕಾದಂಬರಿಯ ಬೆಳ್ಳಿ, ಒಡಲಾಳದ ಸಾಕವ್ವ, ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬರುವ ಸೇಸಿ ಸಂಕಟವನ್ನೇ ಹಾಸಿ ಹೊದ್ದು ಬದುಕಿದವರು. ಎಲ್ಲದರ ಮಧ್ಯೆ ತೀವ್ರವಾಗಿ ಬದುಕುತ್ತಾ ಹಿಡಿ ಪ್ರೀತಿಗಾಗಿ ಹಂಬಲಿಸಿದವರು. ತನ್ನವರನ್ನು ಪೊರೆಯುವ, ಸ್ವಾಭಿಮಾನದಿಂದ ಬದುಕುವ ಇವರ ಛಲದ ಮುಂದೆ ವಿಕೃತ ವ್ಯವಸ್ಥೆ ಬೆತ್ತಲಾಗುತ್ತಾ ಹೋಗುತ್ತದೆ. ಸಂಕಟದಲ್ಲೂ ಆರದ ಜೀವನಪ್ರೀತಿ, ಛಲವನ್ನು ಇಂಚಿಂಚಾಗಿ ವ್ಯವಸ್ಥೆ ದಮನಿಸುತ್ತಾ ಹೋಗುತ್ತದೆ.

ಇಲ್ಲಿ ರಾಮಕ್ಕ ಅಥವಾ ಚಂದ್ರಿಯ ವೈಯಕ್ತಿಕ ನಡೆಗಳು ಅವರನ್ನು ದುರಂತಕ್ಕೀಡುಮಾಡಿದವೇ? ಆಳಕ್ಕಿಳಿಯದೆ, ಮೇಲುಸ್ತರದಲ್ಲಿ ನೋಡುವ ಮನಸ್ಸುಗಳಿಗೆ ಹಾಗನಿಸಬಹುದು. ಆದರೆ ಇದು ಸಮಾಜದಲ್ಲಿ ಆಳವಾಗಿ ಬೇರೂರಿರುವ ವಿಷಬೀಜದ ಫಲಿತ. ಜಾತಿ, ಬಡತನ, ಲೈಂಗಿಕ ಶೋಷಣೆಗಳ ಸುಳಿಯಲ್ಲಿ ಸಿಕ್ಕಮೇಲೆ ಪಾರಾಗುವ ದಾರಿ ಕಂಡರೂ ಜಿಗಿಯುವುದು ಸುಲಭದ ಮಾತಲ್ಲ. ವಿದ್ಯೆ ಕಲಿತು ಮುನ್ನಡೆಯುವ ಹಂಬಲವಿದ್ದರೂ ಅಲ್ಲಿನ ವಾತಾವರಣ ಕೀಳರಿಮೆ, ಅನಾಥಪ್ರಜ್ಞೆಯನ್ನು ಹೆಚ್ಚಿಸುವಂತಿರುತ್ತವೆ. ಬೀಳುವ ಏಟುಗಳು ಶಾಲೆ ಅಸಹನೀಯ ಎನಿಸುವಂತೆ ಮಾಡುತ್ತವೆ. 

ಬಹಳ ಮುಖ್ಯವಾಗಿ ಈ ಕಥೆ ಚಂದ್ರಿಯ ಬದುಕನ್ನು ನೈತಿಕ ಅನೈತಿಕ ಎಂಬ ಸರಳ ಚೌಕಟ್ಟಿನಲ್ಲಿ ಇರಿಸಿ ನೋಡುವುದಿಲ್ಲ. ಮೇಲುಜಾತಿಯ ಹೆಣ್ಣುಮಕ್ಕಳಿಗೆ ಹೋಲಿಸಿದರೆ ಚಂದ್ರಿ, ಆಕೆಯ ತಾಯಿ ಹೀಗೆ ಶ್ರಮವೇ ಬದುಕಾಗಿ ಉಳ್ಳ ತಳಸಮುದಾಯದ ಹೆಣ್ಣುಮಕ್ಕಳು ಕಟ್ಟುಪಾಡುಗಳಿಗೆ ಸಡ್ಡುಹೊಡೆದು ಸಾಗುತ್ತಾರೆ. ಆದರೆ ಈ ಬಿಡುಗಡೆಯೂ ಅವರನ್ನು ಶೋಷಿಸುವ ದಾಳವಾಗಿಯೇ ಬದಲಾಗುವುದು ವ್ಯಂಗ್ಯ. ಅಷ್ಟಕ್ಕೂ ಯಾವುದು ನೈತಿಕ, ಯಾವುದು ಅನೈತಿಕ ಇದನ್ನು ನಿರ್ಧರಿಸುವವರು ಯಾರು? ಜಾರಿದವರು ಎಂದು ಹೇಳುವಾಗಲೂ ಅದಕ್ಕೆ ಯಾರು ಎಷ್ಟು ಹೊಣೆ? ಎಂದು ನಮ್ಮನ್ನು ನಾವೇ ನೋಡಿಕೊಳ್ಳುವಂತೆ ಈ ಕಥೆ ಮಾಡುತ್ತದೆ. ಜೊತೆಗೆ, ಹಳ್ಳಿಯ, ದಮನಿತರ ಬದುಕಿನ ಕಥೆ ಹೇಳುವಾಗ ಅದನ್ನು ಕತೆಗಾರರು ಸಿದ್ಧ ಜಾಡಿಗೆ ಒಗ್ಗಿಸುವುದಿಲ್ಲ. ಸುಡುವ ವಾಸ್ತವವನ್ನೂ ತಣ್ಣಗೆ ಹೇಳುತ್ತಾ ನಮ್ಮನ್ನು ಗಾಢ ವಿಷಾದಕ್ಕೆ ದೂಡುತ್ತಾರೆ. ಈ ಕಾರಣಕ್ಕೆ ಗಂಗಪ್ಪ ತಳವಾರ್ ಕತೆಗಾರರಾಗಿ ನಮ್ಮೊಳಗಿನ ಮಾನವತೆಯ ಎಳೆಯನ್ನು ಮೀಟುತ್ತಾರೆ, ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುತ್ತಾರೆ. 

ಗಂಗಪ್ಪ ತಳವಾರ್ ಅವರ ಕಥನಶೈಲಿಯೂ  ನೆಲದ ಸೊಗಡಿನ ಮೂಲಕ, ಭಾಷೆ ಮತ್ತು ವಿವರಗಳ ಮೂಲಕ ವಿಶಿಷ್ಟವಾಗಿದೆ. ಇದು ಚಂದ್ರಿಯ ಬದುಕಿನ ರೂಕ್ಷತೆಯನ್ನು ಹಾಗೆಯೇ ಮನಸ್ಸಿಗಿಳಿಸಿಬಿಡುತ್ತದೆ. ಕೋಲಾರ ಸೀಮೆಯ ದಮನಿತ ಬದುಕಿನ ಚಿತ್ರಣ ಸಜೀವವಾಗಿ ಇಲ್ಲಿ ಮೈಪಡೆದಿದೆ. ಹೆಂಡದಂಗಡಿಯ ಪರಿಸರ, ಮನೆ, ಊರು ಎಲ್ಲವೂ ಜೀವಂತವಾಗಿ ಕಣ್ಣಮುಂದೆ ಮೂಡುತ್ತವೆ.”

ಸುಮಾರು ನೂರು ಪುಟಗಳ ಈ ಪುಸ್ತಕ ಸರಾಗವಾಗಿ ಓದಿಸಿಕೊಂಡು ಹೋಗುವುದಲ್ಲದೇ ಬಹಳಷ್ಟು ವಿಷಾದ ಭಾವವನ್ನು ಓದುಗರಲ್ಲಿ ಮೂಡಿಸುತ್ತದೆ.