ಧೀಮಂತ ನಾಯಕ ನೇತಾಜಿಗೆ ೧೨೫ರ ಹುಟ್ಟು ಹಬ್ಬ
ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದೊಡನೆಯೇ ಎಲ್ಲರ ಮೈಯಲ್ಲೂ ವಿದ್ಯುತ್ ಸಂಚಲನವಾದಂತೆ ಆಗುತ್ತದೆ. ಭಾರತ ಮಾತೆಯ ಹೆಮ್ಮೆಯ ಪುತ್ರ ಸುಭಾಷ್ ಚಂದ್ರ ಬೋಸ್ ಹುಟ್ಟಿದ ಪುಣ್ಯ ದಿನವಾದ ಜನವರಿ ೨೩ನ್ನು ಪ್ರಸಕ್ತ ವರ್ಷದಿಂದ ‘ಪರಾಕ್ರಮ ದಿನ’ ಎಂದು ಕರೆಯಲಾಗುತ್ತದೆ. ಭಾರತೀಯರಲ್ಲಿ ಸ್ವಾತಂತ್ರ್ಯದ ಕೆಚ್ಚನ್ನು ಹುಟ್ಟುಹಾಕಿದ ಕೀರ್ತಿ ನೇತಾಜಿ ಅವರಿಗೆ ಸಲ್ಲುತ್ತದೆ. ಅಂದಿನ ಸಮಯದಲ್ಲೇ ಭಾರತದ ಸ್ವಾತಂತ್ರ್ಯದ ಸಲುವಾಗಿ ದೇಶದಿಂದ ದೇಶಕ್ಕೆ ತಿರುಗಾಡಿ ‘ಆಜಾದ್ ಹಿಂದ್ ಸೇನೆ’ ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ೧೯೪೫ರ ಆಗಸ್ಟ್ ೧೮ರಂದು ನಡೆದಿದೆಯೆನ್ನಲಾದ ವಿಮಾನ ದುರಂತದಲ್ಲಿ ನೇತಾಜಿಯವರು ಮರಣವನ್ನಪ್ಪಿದ್ದಾರೆ ಎಂಬ ಸುದ್ದಿಯನ್ನು ಬಹುತೇಕರು ಇನ್ನೂ ನಂಬುತ್ತಿಲ್ಲ. ಈ ಘಟನೆಯ ಬಗ್ಗೆ ನಮ್ಮನ್ನು ಆಳಿರುವ ಯಾವುದೇ ಸರಕಾರಗಳು ಮುತುವರ್ಜಿಯಿಂದ ಕಾರ್ಯ ನಿರ್ವಹಿಸಲೇ ಇಲ್ಲ. ನೇತಾಜಿಯವರ ಸಾವಿನ ರಹಸ್ಯ ಬಯಲಾಗಲೇ ಇಲ್ಲ.
೧೮೯೭ರ ಜನವರಿ ೨೩ರಂದು ಒರಿಸ್ಸಾದ ಕಟಕ್ ನಲ್ಲಿ ಜಾನಕೀನಾಥ ಬೋಸ್ ಹಾಗೂ ಪ್ರಭಾದೇವಿಯವರ ೧೨ ಮಕ್ಕಳ ಪೈಕಿ ಒಬ್ಬರಾಗಿ ಸುಭಾಷ್ ಚಂದ್ರ ಬೋಸ್ ಜನಿಸುತ್ತಾರೆ. ಇವರದ್ದು ಶ್ರೀಮಂತ ವಿದ್ಯಾವಂತ ಮನೆತನ. ಅಂದಿನ ಕಲ್ಕತ್ತಾದ ಖ್ಯಾತ ಪ್ರಸಿಡೆನ್ಸಿ ಕಾಲೇಜು, ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ, ಇಂಗ್ಲೆಂಡಿನ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆದವರು. ತಂದೆಯ ಒತ್ತಾಯದ ಮೇರೆಗೆ ಐ.ಸಿ.ಎಸ್ ಉತ್ತೀರ್ಣರಾದರಾದರೂ ಭಾರತದ ಮೇಲೆ ಆಂಗ್ಲರ ದಬ್ಬಾಳಿಕೆಯನ್ನು ಗಮನಿಸಿದ ಅವರು ಈ ಹುದ್ದೆಗೆ ಸೇರಿಕೊಳ್ಳಲೇ ಇಲ್ಲ. ಉತ್ತಮ ಕೈತುಂಬಾ ಸಂಬಳ, ಸಮಾಜದಲ್ಲಿ ಗೌರವವನ್ನು ಹೊಂದಿದ ಹುದ್ದೆಯನ್ನು ತ್ಯಜಿಸಿ ಭಾರತ ಮಾತೆಯನ್ನು ದಾಸ್ಯದಿಂದ ಬಿಡುಗಡೆಗೊಳಿಸುವ ಕೈಂಕರ್ಯವನ್ನು ಕೈಗೆತ್ತಿಕೊಂಡರು.
ಒಂದೆಡೆ ಮಹಾತ್ಮ ಗಾಂಧೀಜಿಯವರ ಅಹಿಂಸಾ ಮಾರ್ಗವಾದರೆ ನೇತಾಜಿಯವರದ್ದು ಕ್ರಾಂತಿಕಾರಿಗಳ ಮಾರ್ಗ. ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ಎರಡು ಬಾರಿ ಅಲಂಕರಿಸಿದ (೧೯೩೮-೩೯) ರಾದರೂ ಅಲ್ಲಿನ ನಾಯಕರ ಮೃದು ಧೋರಣೆಯು ನೇತಾಜಿಯವರಿಗೆ ಸರಿಕಂಡುಬರಲಿಲ್ಲ. ಹುದ್ದೆಗೆ ರಾಜೀನಾಮೆ ನೀಡಿ ತಮ್ಮದೇ ಆದ ದಾರಿಯನ್ನು ಕಂಡುಕೊಂಡರು. ಒಮ್ಮೆ ಬ್ರಿಟೀಷರು ಸುಭಾಷರನ್ನು ‘ಗೃಹ ಬಂಧನ'ದಲ್ಲಿ ಇರಿಸಿದ್ದರು. ತಮ್ಮ ಚಾಣಾಕ್ಷತನದಿಂದ ಆ ಬಂಧನದಿಂದ ತಪ್ಪಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಸೇನೆ ಕಟ್ಟಿದರು. ತಮ್ಮ ಆಜಾದ್ ಹಿಂದ್ ಫೌಜ್ (Indian National Army -INA) ಮೂಲಕ ಮಣಿಪುರದ ಇಂಫಾಲ್ ನಲ್ಲಿ ಹಾಗೂ ಪೂರ್ವ ಬಂಗಾಲದ ಚಿತ್ತಗಾಂಗ್ ನಲ್ಲಿ ಬ್ರಿಟೀಷರ ಧ್ವಜವನ್ನು ಇಳಿಸಿ ಭಾರತದ ಸ್ವಾತಂತ್ರ್ಯದ ಧ್ವಜವನ್ನು ಹಾರಿಸಿದರು.
೧೯೪೨ರ ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಜಪಾನ್ ದೇಶವು ಏಷ್ಯಾದ ಕೆಲವು ಸಣ್ಣ ಪುಟ್ಟ ದೇಶಗಳನ್ನು, ಭೂಭಾಗಗಳನ್ನು ವಶ ಪಡಿಸಿಕೊಂಡಿತ್ತು. ಆ ಸಮಯ ಜಪಾನ್ ಅಂಡಮಾನ್ ದ್ವೀಪವನ್ನು ವಶಪಡಿಸಿಕೊಂಡಿತ್ತಂತೆ. ಒಂದು ಮೂಲಗಳ ಪ್ರಕಾರ ೧೯೪೩ರಲ್ಲಿ ಅಂಡಮಾನ್ ದ್ವೀಪವನ್ನು ಜಪಾನ್ ದೇಶೀಯರ ಕಪಿಮುಷ್ಟಿಯಿಂದ ಆಜಾದ್ ಹಿಂದ್ ಸೇನೆಯು ಸ್ವತಂತ್ರಗೊಳಿಸಿತ್ತು. ಆ ಸಮಯದಲ್ಲಿ ನೇತಾಜಿಯವರು ಸ್ವತಂತ್ರ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರೆಂದು ಹೇಳುತ್ತಾರೆ. ೧೯೪೩ರ ಡಿಸೆಂಬರ್ ೨೯ರಂದು ಅಂಡಮಾನ್ ಭೇಟಿಯ ಸಮಯದಲ್ಲಿ ನೇತಾಜಿಯವರು ಅಲ್ಲಿ ಭಾರತದ ಧ್ವಜಾರೋಹರಣ ಮಾಡಿ ಸಂಭ್ರಮಿಸಿದ್ದರಂತೆ. ಆ ಸಮಯ ಭಾರತ ಅಖಂಡವಾಗಿತ್ತು. ಪಾಕಿಸ್ತಾನವಿನ್ನೂ ಭಾರತ ದೇಶದಿಂದ ಬೇರ್ಪಟ್ಟಿರಲಿಲ್ಲ. ಆ ಕಾರಣದಿಂದ ಅವಿಭಜಿತ ಭಾರತ ದೇಶದ ಪ್ರಧಾನಿ ಎಂದು ನೇತಾಜಿಯವರನ್ನು ಕರೆಯಬಹುದು. ಆ ಸಮಯ ನೇತಾಜಿಯವರು ಆಂಡಮಾನ್ ದ್ವೀಪದ ಹೆಸರನ್ನು ‘ಸ್ವರಾಜ್' ಎಂದೂ, ನಿಕೋಬಾರ್ ಹೆಸರನ್ನು ‘ಶಾಕೀದ್' ಎಂದು ಬದಲಾಯಿಸಿದ್ದರು.
ಸ್ವಾತಂತ್ರ್ಯ ಹೋರಾಟವು ತೀವ್ರ ಸ್ವರೂಪ ಪಡೆಯುತ್ತಿರುವ ಸಮಯದಲ್ಲೇ ನೇತಾಜಿಯವರು ನಿಗೂಢವಾಗಿ ಕಣ್ಮರೆಯಾದರು. ನೇತಾಜಿ ವಿಮಾನ ಅಪಘಾತವೊಂದರಲ್ಲಿ ನಿಧನ ಹೊಂದಿದರು ಎಂದು ಸುದ್ದಿಗಳು ಬಂದರೂ ಅವರ ಮೃತ ಶರೀರ ದೊರೆಯಲಿಲ್ಲ. ಕಳೆದ ಏಳು ದಶಕಗಳಿಂದ ಅವರ ಮರಣದ ಬಗ್ಗೆ ಅನುಮಾನಗಳು ಏಳುತ್ತಲೇ ಇವೆ. ಅವರ ಸಾವಿನ ಹಿಂದಿನ ಷಡ್ಯಂತ್ರವನ್ನು ಬಯಲು ಮಾಡುವ ಕೆಲಸವಿನ್ನೂ ಆಗಿಲ್ಲ. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಕಂಡು ಬಂದ ಗೂಮ್ನಾಮಿ ಬಾಬಾ ಎಂಬ ವ್ಯಕ್ತಿಯೇ ಸುಭಾಷ್ ಚಂದ್ರ ಬೋಸ್ ಎಂದು ತರ್ಕಿಸಲಾಗಿತ್ತು. ಆದರೆ ಆ ತರ್ಕಗಳಿಗೆ ಯಾವುದೇ ಸಮರ್ಪಕ ಆಧಾರಗಳು ದೊರೆಯಲಿಲ್ಲ.
ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ಆಯೂಬ್ ಖಾನ್ ನಡುವೆ ನಡೆದ ತಾಷ್ಕೆಂಟ್ ಒಪ್ಪಂದದ ಸಮಯದಲ್ಲೂ ನೇತಾಜಿ ಹಾಜರಿದ್ದರು ಎಂದು ಉಲ್ಲೇಖಿಸಲಾಗಿದೆ. (ಆಧಾರ: ತಾಷ್ಕೆಂಟ್ ಡೈರಿ, ಲೇಖಕರು: ಎಸ್. ಉಮೇಶ್) ಆ ಒಪ್ಪಂದದ ಬಳಿಕ ಎರಡೂ ನಾಯಕರು ಹಸ್ತಲಾಘವ ಮಾಡಿಕೊಳ್ಳುತ್ತಿರುವ ಫೋಟೋ ಒಂದು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅದರಲ್ಲಿ ನೇತಾಜಿಯವರನ್ನು ಹೋಲುವ ಒಂದು ವ್ಯಕ್ತಿ ಜನಗಳ ಮಧ್ಯೆ ಪ್ರಕಟವಾಗಿದ್ದರು. ಬ್ರಿಟೀಷ್ ಮ್ಯಾಪಿಂಗ್ ತಜ್ಞ ನೀಲ್ ಮಿಲ್ಲರ್ ಅವರ ಫೇಸ್ ಮ್ಯಾಪಿಂಗ್ ವರದಿಗಳ ಪ್ರಕಾರ ಆ ಫೋಟೋದಲ್ಲಿರುವ ವ್ಯಕ್ತಿಯ ಚಹರೆ ನೇತಾಜಿಯವರ ಮುಖವನ್ನು ಬಹಳಷ್ಟು ಹೋಲುತ್ತಿತ್ತು. ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಮೃತ ಪಟ್ಟಾಗಲೂ ಅವರ ಪಾರ್ಥಿವ ಶರೀರದ ಎದುರು ನೇತಾಜಿಯನ್ನು ಹೋಲುತ್ತಿರುವ ವ್ಯಕ್ತಿಯೋರ್ವರು ಕಾಣಿಸಿದ್ದರು. ಆದರೆ ಯಾವ ವ್ಯಕ್ತಿಯೂ ತಾನೇ ನೇತಾಜಿ ಎಂದು ಹೇಳಿಕೊಳ್ಳಲಿಲ್ಲ. ಆದುದರಿಂದ ನೇತಾಜಿಯವರ ಸಾವು ಒಂದು ನಿಗೂಢ ರಹಸ್ಯವಾಗಿಯೇ ಉಳಿಯಿತು.
ನೇತಾಜಿ ಸುಭಾಷ್ ಚಂದ್ರ ಬೋಸ್ ಓರ್ವ ವ್ಯಕ್ತಿಯಲ್ಲ, ಅವರೋರ್ವ ಅಪೂರ್ವ ಶಕ್ತಿ. ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಪಂಚದ ಇತರೆ ದೇಶಗಳ ಸಹಾಯ ಹಸ್ತವನ್ನು ಕೋರಿ, ತಮ್ಮ ಅಪೂರ್ವ ವ್ಯಕ್ತಿತ್ವದಿಂದ ಬೇರೆ ಬೇರೆ ದೇಶಗಳ ಮುಖ್ಯಸ್ಥರ ಮನವೊಲಿಸಿದ ಮಹಾನ್ ವ್ಯಕ್ತಿ ಅವರು. ಅವರ ಜನ್ಮ ದಿನದಂದು ನಾವು ಅವರನ್ನು ಸ್ಮರಿಸಲೇ ಬೇಕು. ಭಾರತ ಮಾತೆಯ ಹೆಮ್ಮೆಯ ಪುತ್ರ ಸುಭಾಷ್ ಚಂದ್ರ ಬೋಸರಿಗೆ ಶತಕೋಟಿ ಪ್ರಣಾಮಗಳು.
ಚಿತ್ರದಲ್ಲಿ ತಾಷ್ಕೆಂಟ್ ಒಪ್ಪಂದದ ಸಂದರ್ಭದಲ್ಲಿ ಜನಗಳ ನಡುವೆ ನೇತಾಜಿಯನ್ನು ಹೋಲುವ ವ್ಯಕ್ತಿ (ಗುರುತು ಮಾಡಲಾಗಿದೆ)
ಚಿತ್ರ ಕೃಪೆ: ಅಂತರ್ಜಾಲ ತಾಣಗಳು