ಧೀಮಂತ ಸಾಹಿತಿ - ತಳುಕಿನ ವೆಂಕಣ್ಣಯ್ಯ

ತಳುಕಿನ ವೆಂಕಣ್ಣಯ್ಯ ಹೆಸರು ಕೇಳುವಾಗಲೇ ನಾವು ಓದಿ ತಿಳಿದ ಹಾಗೆ ಕಣ್ಣೆದುರು ಅವರ ಎತ್ತರದ ದೇಹ ನೆನಪಿಗೆ ಬರುತ್ತದೆ. ೧೮೮೫ ನವಂಬರ ೧೭ ರಂದು ಚಳ್ಳಕೆರೆಯ ತಳುಕಿನ ಕನ್ನಡದ ಮಣ್ಣಿನಲ್ಲಿ, ಸುಬ್ಬಣ್ಣ ಹಾಗೂ ಮಹಾಲಕ್ಷ್ಮಮ್ಮ ದಂಪತಿಗಳ ಕುವರನಾಗಿ ಜನುಮ ತಳೆದ ಧೀಮಂತ ವ್ಯಕ್ತಿತ್ವದ ಮೇರು ಸಾಹಿತಿಗಳಿವರು. 'ಕನ್ನಡದ ಮೊದಲ ಪ್ರಾಧ್ಯಾಪಕರೆಂಬ ಹೆಗ್ಗಳಿಕೆ' ಶ್ರೀಯುತರದ್ದು. ೧೯೨೬ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನಾಲ್ಮಡಿ ಕೃಷ್ಣರಾಜ ಒಡೆಯರ್ ಇದ್ದ ಸಮಯ. ಸ್ವಾಮಿ ವಿವೇಕಾನಂದರ ಗೆಳೆಯರಾಗಿದ್ದ ಬಚ್ಚೇಂದ್ರನಾಥಪಾಲರು ಉಪಕುಲಪತಿಗಳಾಗಿದ್ದರು. ಕನ್ನಡದ ಕಣ್ವರೆನಿಸಿದ ಬಿ.ಎಂ ಶ್ರೀಕಂಠಯ್ಯನವರು ರಿಜಿಸ್ಟಾರ್ ಆಗಿದ್ದರು. ಆ ಸಮಯದಲ್ಲಿ ಕನ್ನಡ ಕಲಿಯಲು ಸೌಲಭ್ಯವಿರಲಿಲ್ಲವಂತೆ. ಕನ್ನಡ ಎಂ.ಎ, ಆನರ್ಸ್ ತರಗತಿಗಳು ಎಲ್ಲಾ ಆಡಳಿತದವರ ಪ್ರಯತ್ನದಿಂದಾಗಿ ಆರಂಭವಾಗಿ, ತಳುಕಿನ ವೆಂಕಣ್ಣಯ್ಯನವರು ಪ್ರಾಧ್ಯಾಪಕರಾಗಿ ನೇಮಕಗೊಂಡರು. ಉದಾತ್ತ ಮನದ, ದಾನಗುಣದ ಮನಸ್ಸಿನ ಹೃದಯವಂತರಂತೆ. ಸಂಸ್ಕೃತ, ಆಂಗ್ಲ, ಕನ್ನಡ ಮೂರು ಭಾಷೆಯನ್ನೂ ಅಭ್ಯಾಸ ಮಾಡಿದ್ದರು. ಅಪಾರ ಜ್ಞಾನವಂತರಾಗಿದ್ದರಂತೆ. ಮೀಮಾಂಸೆ, ತತ್ವಶಾಸ್ತ್ರ ಅವರ ಆಸಕ್ತಿಯ ವಿಷಯವಂತೆ. ತಮ್ಮ ಶಿಷ್ಯರ ಹತ್ತಿರ ಅಪಾರ ಪ್ರೀತಿಯಂತೆ. ಮಾತೃವಾತ್ಸಲ್ಯದ ವೆಂಕಣ್ಣಯ್ಯನವರನ್ನು ಎಲ್ಲರೂ ಇಷ್ಟಪಡುತ್ತಿದ್ದರಂತೆ. ಇವರಲ್ಲಿ ರಾಷ್ಟ್ರಕವಿ ಕುವೆಂಪುರವರು ಪ್ರಮುಖರು. ಕುವೆಂಪುರವರ ಪ್ರಕಾರ ವೆಂಕಣ್ಣಯ್ಯನವರು ತುಂಬಾ ಮೃದುಸ್ವಭಾವದವರಂತೆ. ಬರೆಯುವವರಿಗೆ ಅತ್ಯಂತ ಪ್ರೋತ್ಸಾಹ ಕೊಡುವ ಸ್ವಭಾವದವರು. ಬಡಮಕ್ಕಳಿಗೆ ಆಶ್ರಯ,ವಸತಿ ನೀಡಿ ಕಲಿಕೆಗೆ ಸಹಕಾರ ಮತ್ತು ಬರವಣಿಗೆಗೂ ಪ್ರೋತ್ಸಾಹ ನೀಡುವ ಸಹೃದಯರು. ತನ್ನ ಮನೆಯಲ್ಲಿಯೇ ಸಾಹಿತ್ಯಗೋಷ್ಠಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದರು.
ಎ.ಆರ್ ಕೃಷ್ಣಶಾಸ್ತ್ರಿಗಳೊಂದಿಗೆ ಸೇರಿ 'ಕರ್ನಾಟಕ ಸಂಘ'ವನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸ್ಥಾಪನೆ ಮಾಡಿ, ಹಲವಾರು ಸಾಹಿತ್ಯ ಚಟುವಟಿಕೆಗಳನ್ನು ಮಾಡುತ್ತಿದ್ದರು.'ಪ್ರಬುದ್ಧ ಕರ್ನಾಟಕ' ಎಂಬ ಕನ್ನಡ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದ್ದರು. ಬಂಗಾಳಿ ಭಾಷೆಯಲ್ಲಿ ಹಿಡಿತ ಇದ್ದ ಕಾರಣ 'ರಾಮಕೃಷ್ಣ ಪರಮಹಂಸ'ರ ಜೀವನ ಚರಿತ್ರೆಯನ್ನು ಕನ್ನಡ ಭಾಷೆಯಲ್ಲಿ ಬರೆದರು. ರವೀಂದ್ರನಾಥ ಠಾಗೂರರ ಹಲವು ಸಾಹಿತ್ಯಕ ಪ್ರಬಂಧಗಳನ್ನು ಕನ್ನಡಕ್ಕೆ ಅನುವಾದಿಸಿ 'ಪ್ರಾಚೀನ ಸಾಹಿತ್ಯ' ಎಂಬ ಗ್ರಂಥವನ್ನು ಬರೆದರು. ನಾಗವರ್ಮನ ಕಾದಂಬರಿಯನ್ನು ಸಂಗ್ರಹಿಸಿ ಪ್ರಕಟಿಸಿದರು. ಬಿ.ಎಂ.ಶ್ರೀಯವರೊಡನೆ ಸೇರಿ'ಕನ್ನಡ ಕೈಪಿಡಿ'ಯ ೪ನೇ ಭಾಗವಾದ 'ಭಾಷಾಚರಿತ್ರೆ'ಯನ್ನು ಸೇರಿ ರಚಿಸಿದರು. 'ಕನ್ನಡ ಸಾಹಿತ್ಯ ಚರಿತ್ರೆ' ಮತ್ತು 'ಇತರ ಲೇಖನಗಳು'ಮತ್ತೊಂದು ಕೃತಿ. 'ರಾಘವಾಂಕ'ನ 'ಹರಿಶ್ಚಂದ್ರ ಕಾವ್ಯ' ಸಂಗ್ರಹವನ್ನು ಎ.ಆರ್.ಕೃಷ್ಣಶಾಸ್ತ್ರಿಯವರೊಂದಿಗೆ ಸೇರಿ, ಸಂಪಾದನಾ ಗ್ರಂಥವಾಗಿ ಮಾಡಿದರು. ೧೯೩೯ರಲ್ಲಿ ಶ್ರೀಯುತರು ಇಹಲೋಕಯಾತ್ರೆ ಮುಗಿಸಿದಾಗ 'ಆಶ್ರಯ ಪಡೆದಿದ್ದ ಹಡಗೊಂದು ನೀರಿನಲ್ಲಿ ಮುಳುಗಿತು' ಎಂದರಂತೆ ಬಿ.ಎಂ.ಶ್ರೀಯವರು.
ಬರಹ ಮತ್ತು ಅದೇ ರೀತಿ ಬದುಕಿ ತೋರಿಸಿದ,ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಸಂಸ್ಕೃತಿಯನ್ನು ಪೋಷಿಸಿದ,ಸೃಜನಶೀಲತೆಯನ್ನು ಎತ್ತಿ ಹಿಡಿದ,ಸಾಹಿತ್ಯವನ್ನು ಬೆಳೆಸಿದ,ಪ್ರೋತ್ಸಾಹಿಸಿದ ಮೇರು ಪರ್ವತವೇ ಟಿ.ಎಸ್ ವೆಂಕಣ್ಣಯ್ಯನವರು.
(ಮಾಹಿತಿ ಸಂಗ್ರಹ) ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ