ಧೀರ ಹುತಾತ್ಮ ಭಗತ್ ಸಿಂಗ್

ಧೀರ ಹುತಾತ್ಮ ಭಗತ್ ಸಿಂಗ್

ಪುಸ್ತಕದ ಲೇಖಕ/ಕವಿಯ ಹೆಸರು
ಡಾ॥ ಬಿ.ಆರ್. ಮಂಜುನಾಥ್
ಪ್ರಕಾಶಕರು
ಡಾ॥ ಬಿ. ಆರ್. ಮಂಜುನಾಥ್, ಎಐಡಿಎಸ್ ಓ, ಎಐಡಿವೈಓ, ಮಲ್ಲೇಶ್ವರಂ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೦.೦೦, ಮುದ್ರಣ: ೨೦೦೭

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಹೆಸರು ಸದಾಕಾಲ ಮುಂಚೂಣಿಯಲ್ಲಿ ಇದ್ದೇ ಇರುತ್ತದೆ. ೨೦೦೭ರಲ್ಲಿ ಭಗತ್ ಸಿಂಗ್ ಜನ್ಮಶತಮಾನೋತ್ಸವವನ್ನು ಆಚರಿಸಲಾಗಿತ್ತು. ಈ ಸಮಯದಲ್ಲಿ ಹೊರ ತಂದ ಪುಸ್ತಕವೇ ‘ಧೀರ ಹುತಾತ್ಮ ಭಗತ್ ಸಿಂಗ್'. ಭಗತ್ ಸಿಂಗ್ ಬಗ್ಗೆ ಅಧಿಕ ಮಾಹಿತಿ ಬೇಕಾದವರು ಈ ಪುಸ್ತಕವನ್ನು ಓದಬಹುದು.

ಪುಸ್ತಕದ ಲೇಖಕರಾದ ಡಾ॥ ಬಿ. ಆರ್. ಮಂಜುನಾಥ್ ಅವರು ತಮ್ಮ ಮುನ್ನುಡಿ ‘ಅರಿಕೆ'ಯಲ್ಲಿ ಬರೆಯುತ್ತಾರೆ “ ಮಹಾನ್ ಹುತಾತ್ಮ ಭಗತ್ ಸಿಂಗ್ ಜನ್ಮ ತಳೆದು ೨೦೦೭ರ ಸೆಪ್ಟೆಂಬರ್ ೨೮ಕ್ಕೆ ನೂರು ವರ್ಷಗಳು. ಅಧಿಕೃತ ಮಾಧ್ಯಮಗಳು ಭಗತರ ನೆನಪನ್ನು ಜನರಿಗೆ ಕೊಂಡೊಯ್ಯುವಲ್ಲಿ ವಿಫಲವಾದರೂ ದಿನದಿಂದ ದಿನಕ್ಕೆ ಆತನ ಜನಪ್ರಿಯತೆ ಹೆಚ್ಚುತ್ತಿದೆ. ಅಸಂಖ್ಯಾತ ಎಳೆಯ ಹೃದಯದಲ್ಲಿ ಆತನ ಬದುಕು ಮತ್ತು ಚಿಂತನೆ ಹೊಸ ದೀಪಗಳನ್ನು ಹಚ್ಚುತ್ತಿವೆ. ಆತನ ಬಗ್ಗೆ ತಿಳಿಯಬೇಕೆಂಬ ಉತ್ಸುಕತೆ, ಉತ್ಸಾಹಗಳೂ ಎಲ್ಲೆಲ್ಲೂ ಕಂಡು ಬರುತ್ತಿದ್ದರೂ, ಅದನ್ನು ಪೂರೈಸಬಲ್ಲ ಪುಸ್ತಕಗಳು ಹೆಚ್ಚಿಲ್ಲ, ಅದರಲ್ಲೂ ವೈಜ್ಞಾನಿಕ ದೃಷ್ಟಿಕೋನದಿಂದ ಆತನ ಕಾಲವನ್ನು , ಅಲ್ಲಿದ್ದ ವಿವಿಧ ಚಿಂತನೆ ಹಾಗೂ ಸಂಘರ್ಷದ ಪಂಥಗಳನ್ನು ವಿಶ್ಲೇಷಿಸುವ ಪ್ರಯತ್ನ ಸಾಕಷ್ಟು ಕಂಡು ಬಂದಿಲ್ಲ. ಈ ನ್ಯೂನತೆಯನ್ನು ನಿವಾರಿಸುವ ದೃಷ್ಟಿಯಿಂದ ಈ ಹೊತ್ತಿಗೆಯನ್ನು ರಚಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಇದರ ರಚನೆಯಲ್ಲಿ ಹಲವು ಸಂಗಾತಿಗಳು ವಿವಿಧ ರೀತಿಯಲ್ಲಿ ಭಾಗಿಯಾಗಿದ್ದಾರೆ.

ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಪ್ರಕಟವಾದ ಹಲವು ಪುಸ್ತಕಗಳನ್ನು, ನಿಯತಕಾಲಿಕಗಳ ಹಾಗೂ ಅಂತರ್ಜಾಲದ ಲೇಖನಗಳನ್ನು ನಾವು ಆಕರವಾಗಿ ಉಪಯೋಗಿಸಿಕೊಂಡಿದ್ದೇವೆ. ಕೆಲವೆಡೆ ಘಟನೆಗಳ ವರ್ಣನೆ ಸೃಜನಶೀಲ ಸಾಹಿತ್ಯದ, ಕಥೆ ಹೇಳುವ ರೂಪವನ್ನು ಪಡೆದಿದೆಯಾದರೂ ಅದು ಚಾರಿತ್ರಿಕ ಸತ್ಯಗಳನ್ನು ಚಿತ್ತಾಕರ್ಷಕವಾಗಿ ನಿರೂಪಿಸುವ ಒಂದು ಮಾದರಿಯಾಗಿದ್ದು ವಾಸ್ತವತೆಗೆ ದೂರವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಹೊಸ ತಲೆಮಾರಿನ ಯುವಕ, ಯುವತಿಯರನ್ನು ಗಾಢ ಚಿಂತನೆಗೆ, ಸಾಮಾಜಿಕ ಕ್ರಿಯೆಗೆ ತೊಡಗಿಸುವುದರಲ್ಲಿ ಈ ಹೊತ್ತಿಗೆ ಸಹಕಾರಿ". 

ಭಗತ್ ಸಿಂಗ್ ಜೀವನಗಾಥೆಯನ್ನು ೩೦ ಅಧ್ಯಾಯಗಳಲ್ಲಿ ವಿಂಗಡಿಸಲಾಗಿದೆ. ಪುಟ್ಟ ಪುಟ್ಟ ಅಧ್ಯಾಯಗಳಾದುದರಿಂದ ಓದಲೂ ಸಹಕಾರಿಯಾಗಿದೆ. ಪುಸ್ತಕದಲ್ಲಿರುವ ‘ಸಾವಿನ ನಂತರವೂ ಸಂಘರ್ಷ’ ಎಂಬ ಅಧ್ಯಾಯ ಓದುವಾಗ ಭಗತ್ ಸಿಂಗ್ ಅವರ ಧೀರ ವ್ಯಕ್ತಿತ್ವದ ಅರಿವಾಗುತ್ತದೆ ನಮಗೆ. ಅದರಲ್ಲಿ ಲೇಖಕರು ಬರೆಯುತ್ತಾರೆ “ಪಟ್ಟಾಭಿ ಸೀತಾರಾಮಯ್ಯ ಎಂಬ ಕಾಂಗ್ರೆಸ್ ಚರಿತ್ರಾಕಾರರು (ಇವರೇ ಸುಭಾಷ್ ಚಂದ್ರ ಭೋಸ್ ಎದುರು ಸ್ವರ್ಧಿಸಿ ಸೋತವರು) ಒಪ್ಪಿಕೊಳ್ಳುವಂತೆ ಸಾಯುವ ಹೊತ್ತಿಗೆ ಭಗತ್ ಸಿಂಗ್ ಭಾರತದ ಉದ್ದಗಲಕ್ಕೂ ಗಾಂಧೀಜಿಯವರಷ್ಟೇ ಪ್ರಸಿದ್ಧರಾಗಿದ್ದರು. ‘ಭಗತ್ ಸಿಂಗ್ ಯಶಸ್ವಿಯಾದರು. ಆತನ ವಿಚಾರಣೆಯ ಪಂಜರ ರಾಜಕೀಯ ವೇದಿಕೆಯಾಗಿ ಬಿಟ್ಟು ದೇಶದ ಹಳ್ಳಿ ಹಳ್ಳಿಯಲ್ಲೂ ಆತನ ಸಾಹಸಕಾರ್ಯಗಳು ಪ್ರತಿಧ್ವನಿಸಿದವು. ಆ ಸಂದರ್ಭದಲ್ಲಿ ಆತನ ಛಾಯಾಚಿತ್ರಗಳು ನಗರ ಪಟ್ಟಣಗಳಲ್ಲೂ, ಗ್ರಾಮಗಳಲ್ಲೂ ಮಾರಾಟವಾಗುತ್ತಾ ಆತ ಗಾಂಧೀಜಿಯವರಿಗೆ ಜನಪ್ರಿಯತೆಯಲ್ಲಿ ಸಮಾನ ಪ್ರತಿಸ್ಪರ್ಧಿಯಾಗಿದ್ದ. ಇಪ್ಪತ್ತಮೂರು ವರ್ಷದ ಹುಡುಗನಿಗೆ ಅದೆಂಥಾ ಪ್ರಶಸ್ತಿ ಪತ್ರ! ಇದನ್ನು ನೀಡಿದವರು ಇನ್ನಾರೂ ಅಲ್ಲ - ಬ್ರಿಟೀಷ್ ಬೇಹುಗಾರ ಸಂಸ್ಥೆಯ ನಿರ್ದೇಶಕರಾದ ಸರ್ ಹೊರೇಸ್ ವಿಲಿಯಂಸನ್ !! ಸುಭಾಷರು ‘ಇಡೀ ದೇಶವನ್ನು ಆವರಿಸಿಕೊಂಡಿರುವ ಕ್ರಾಂತಿಯ ಸ್ಪೂರ್ತಿಯ ಪ್ರತೀಕ ಭಗತ್ ಸಿಂಗ್. ಆ ಸ್ಪೂರ್ತಿ ಹೊತ್ತಿಸಿರುವ ಜ್ವಾಲೆ ಎಂದಿಗೂ ಆರಿ ಹೋಗುವುದಿಲ್ಲ' ಎಂದದ್ದು ಅತ್ಯಂತ ಸಮಯೋಚಿತವಾಗಿತ್ತು.”

೧೦೮ ಪುಟಗಳ ಈ ಪುಸ್ತಕವು ಭಾರತ ಕಂಡ ಧೀರ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಬಗ್ಗೆ ಮತ್ತಷ್ಟು ಮಾಹಿತಿ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.