ಧೂಮ-ಸಾಹಿತ್ಯ...!

ಧೂಮ-ಸಾಹಿತ್ಯ...!

ಭೂಮ್ಯಾಕಾಶಾಂತರ್ಗತ ಕವಲೆ
ನಾನಾಕಾರ ಹಾಹಾಕಾರ ತಿರುಳೆ
ದೇಹ ಹೋಮ ಕುಂಡವಾಗಿ 
ಸಿಗರೇಟನು ಹಚ್ಚಿತೆ ಅಗ್ನಿ?

ಕೈ ಬಾಯಿಯ ಜುಗಲ್ ಬಂಧಿ
ಬಿಟ್ಟು ಬಿಡದೆಲ್ಲ ಸಂದಿ ಗೊಂದಿ
ಪುಸು ಪುಸು ಬುಸು ಬುಸು ಸರ್ಪ
ನುಗ್ಗಿದ ಕಡೆಯೆಲ್ಲಾ ಒಣ ದರ್ಪ..!

ಗುರುತ್ವವನೆ ಬೆಚ್ಚಿಸೊ ಬಯಲೆ
ನಾನಾ ನರ್ತನ ಮೇಲೇರಲೆ
ಪಿಶಾಚ ರೂಪ ಕರಿ ನೀಲ ಬಿಳುಪ
ಕಲಸಿದ್ದೆ ಹಗುರ ಕಾಡೆ ಮಾಲೆ!

ಕೆಮ್ಮಿದ್ದರು ದಮ್ಮಿರಬೇಕು ಪಕ್ಕ
ಶೈಲಿ ವಿನ್ಯಾಸಗಳ ರಂಗಿನ ಸುಖ
ಹೇಳಿದ ಮಾತ ಕೇಳದ ಸಂಸಾರ
ಸುಟ್ಟರು ವಿಧೇಯ ಇವನೊಂಥರ!

ಬೆಚ್ಚಗಿರಿಸುವನೊ ಕೊಚ್ಚುವನೊ
ಒತ್ತಡಗಳನಳಿಸುವ ಕೊರಮನೊ
ಹಂಗಿಗೆ ಬಿದ್ದರೆ ಅವನದೆ ರಾಜ್ಯ
ರಂಗಿಲ್ಲದ ಹೊಗೆಯಡಿ ದಾಸ್ಯ!

ಜತೆಗಾರರ ಜತೆ ಸಖ್ಯ ಸುಖ
ಕುಡಿತ ಕುಣಿತ ಜೊತೆ ಪಾನಕ
ಒಂದನೊಂದು ಸೇರಿಸುವ ಚೊಕ್ಕ
ಹೆಣ್ಣೊಂದು ಸಿಕ್ಕೆ ಮುಗಿಯಿತೆ ಲೆಕ್ಕ!

ಬರಿ ಕೂರಲಾಗದ ಚಡಪಡಿಕೆ ಗುದಿ
ಕೈ ಹಿಡಿಯಬೇಕೆ ಸಿಗರೇಟಿನ ತುದಿ
ಆರಂಭ ಶೋಕಿ ಸೇದಲಿರದಾ ಅಗತ್ಯ
ಸೇದಿಟ್ಟ ದೇಹ ಸಿಗರೇಟಿನ ಸಾಹಿತ್ಯ!

- ನಾಗೇಶ ಮೈಸೂರು

Comments

Submitted by kavinagaraj Mon, 07/01/2013 - 15:04

ಸಾಮಾನ್ಯವಾಗಿ ಧೂಮಪಾನಿಗಳು ಕೊನೆಗಾಲದಲ್ಲಿ ಬೀಡಿ, ಸಿಗರೇಟುಗಳಂತೆಯೇ ಕಾಣುತ್ತಾರೆ!! ಇಡೀ ಶರೀರವೇ ತಂಬಾಕಿನ ಘಮಲು ಹೊರಸೂಸುತ್ತಿರುತ್ತದೆ! 'ಸೇದಿಟ್ಟ ದೇಹ ಸಿಗರೇಟಿನ ಸಾಹಿತ್ಯ!' - ಇದಂತೂ ನಿಜ!!
Submitted by nageshamysore Mon, 07/01/2013 - 20:10

In reply to by kavinagaraj

ಕವಿ ನಾಗರಾಜರೆ, ಎಲ್ಲಾ ಧೂಮಲೀಲೆಯೆನ್ನಬಹುದೇನೊ...! ಚಟವಾಗಿ ಅಂಟಿಕೊಂಡರೆ ಹಠದ ಧೂಮಕೇತುವಂತಾಗಿಬಿಡುವ ಈ ಚಾಳಿಯನ್ನು ಹತೋಟಿಯಲಿಡಲು ಸಿಂಗಪುರದಲ್ಲಿ ಪ್ಯಾಕೆಟ್ಟಿನ ಮೇಲೆ ಭಯಂಕರ ರೋಗ ಪರಿಣಾಮಗಳ ಚಿತ್ರ ಮುದ್ರಿಸಿರುತ್ತಾರೆ ಮತ್ತು ಬೆಲೆಯೂ ತೀರಾ ಅಧಿಕ. ಆದರು ಸೇದುವವರು ಇದ್ದೆ ಇರುತ್ತಾರೆ! ಪ್ರತಿಕ್ರಿಯೆಗೆ ಧನ್ಯವಾದಗಳು - ನಾಗೇಶ ಮೈಸೂರು.
Submitted by ರಾಮಕುಮಾರ್ Tue, 07/02/2013 - 12:11

ಧೂಮಲೀಲೆ ಚೆನ್ನಾಗಿದೆ! ಧೂಮಲೀಲೆಯ ಬಗ್ಗೆ ತಟ್ಟನೆ ನೆನಪಾದ ಕೆಲವು ಕವನಗಳು... ನಾ ಸುಟ್ಟ ಸಿಗರೇಟುಗಳ ಲೆಕ್ಕ ಯಮ ನೋಡಿ ನಕ್ಕ (ಯಾರ ಸಾಲು ಅಂತ ನೆನಪಾಗುತ್ತಿಲ್ಲ...) ಸಿಗರೇಟಿನ ಹೊಗೆ ವರ್ತುಳ ವರ್ತುಳ ಧೂಪಧೂಮ ಮಾಲೆ; ವಿವಿಧರೂಪ, ವಿಹ್ವಲವಿಲಾಪಗಳು ವಿಕೃತ ಚಿತ್ರಗಳು ಗಾಳಿಯಲೆಯ ಮೇಲೆ -ಗೋಪಾಲಕೃಷ್ಣ ಅಡಿಗ ಬಿ.ಆರ್.ಲಕ್ಷ್ಮಣರಾಯರ "ಬಿಡಲಾರೆ ನಾ ಸಿಗರೇಟು..." https://www.youtube… ಟಿ.ಪಿ.ಕೈಲಾಸಂರವರ ಅಗ್ನಿಕಾರ್ಯದ ಮಂತ್ರ :-) "ಸಮಿಧಾಮಾದಾಯ ಮುಖೆ ನಿಕ್ಷೇಪ್ಯ ಅಗ್ನಿಂ ಸ್ಪರ್ಶ್ಯ ಜೋ ಧೂಮ: ಯಾತಿ ತಂ ಕೇಶವಂ ಸಮರ್ಪಯಾಮಿ"
Submitted by ರಾಮಕುಮಾರ್ Tue, 07/02/2013 - 19:06

In reply to by ರಾಮಕುಮಾರ್

"ನಾ ಸುಟ್ಟ ಸಿಗರೇಟುಗಳ ಲೆಕ್ಕ..." ಇದು ಹೆಚ್ ಎಸ್ ಬಿಳಿಗಿರಿಯವರ ಪದ್ಯ ಇರಬೇಕು. ಶಿಶುನಾಳ ಶರೀಫರ "ಗುಡುಗುಡಿಯ ಸೇದಿ ನೋಡೋ..."ಯನ್ನು ಕೂಡ ಈ ಪಟ್ಟಿಗೆ ಸೇರಿಸಬಹುದು. https://www.youtube…
Submitted by nageshamysore Tue, 07/02/2013 - 21:11

In reply to by ರಾಮಕುಮಾರ್

ರಾಮಕುಮಾರರೆ ನಮಸ್ಕಾರ. ನನಗೆ ಸಿಗರೇಟಿನ ಒಂದೆರಡು ಹಾಡು / ಕವನ ಮಾತ್ರ ಗೊತ್ತಿತ್ತು ಅದರಲ್ಲು ಬಿ.ಆರ್. ಲಕ್ಷ್ಮಣರಾವ್ ರವರದು, ಮತ್ತು ಗುಡುಗುಡಿ ಹಾಡು ಇತ್ಯಾದಿ. ನಿಮ್ಮ ಲಿಸ್ಟು ನೋಡಿದ ಮೇಲೆ ಈ ಕ್ಷೇತ್ರದಲ್ಲು ಸಾಕಷ್ಟು ಫಸಲು ಆಗಿರುವಂತೆ ಕಾಣುತ್ತಿದೆ. ಅದನ್ನ ಇನ್ನಷ್ಟು ಹೆಚ್ಚಿಸಲು, ಇದೀಗ ತಾನೆ ಇನ್ನೊಂದು ಬರೆದು ಸೇರಿಸಿಬಿಟ್ಟೆ - 'ಧೂಮ ಸ್ನಾನ' ಈ ಬಾರಿ ಸಿಗರೇಟಲ್ಲ, ಅದನ್ನ ಸೇದುವವನ ಸುತ್ತ ಹೆಣೆದಿದ್ದು! - ಸ್ಪೂರ್ತಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್! ಆ ಸರಳ ಕವನ ಈ ಕೆಳಗಿನ ಲಿಂಕಿನಲ್ಲಿದೆ ನೋಡಿ. ಮತ್ತೆ ಧನ್ಯವಾದಗಳು :-) - ನಾಗೇಶ ಮೈಸೂರು http://sampada.net/…
Submitted by nageshamysore Tue, 07/02/2013 - 21:21

In reply to by ksraghavendranavada

ನಾವಡರೆ ನಮಸ್ಕಾರ...ಒಂದಾನೊಂದು ಕಾಲದಲ್ಲಿ ಆ 'ವೈಭವವೂ' ಇತ್ತು , ಬಿಟ್ಟು ವರ್ಷಾಂತರಗಳೆ ಕಳೆದು ಹೋಯ್ತು. ಆದರೂ ನೆನಪಿನ ಶಕ್ತಿಯನ್ನು ಆಧರಿಸಿ, ಕಂಡದ್ದು ಕೇಳಿದ್ದೂ ಬೆರೆಸಿ ಈ ರೂಪದಲ್ಲಿ ಬಂತು ನೋಡಿ. ಇದರ ಜತೆಗೆ ನೆಂಚಿಕೊಳ್ಳಲು ಇದೀಗ ತಾನೆ 'ಧೂಮ ಸ್ನಾನ' ಅಂತ ಇನ್ನೊಂದು ಸೇರಿಸಿದ್ದೇನೆ ನೋಡಿ, ಲಿಂಕು ರಾಮಕುಮಾರರ ಪ್ರತಿಕ್ರಿಯೆಯಡಿ ಹಾಕಿದ್ದೇನೆ. ಈ ಬಾರಿಯೂ ಖಂಡಿತ ಕೈಯಲ್ಲಿ ಸಿಗರೇಟು ಹಿಡಿಯದೆ, ಬರಿ ನೆನಪಿನ ಶಕ್ತಿ, ಕಂಡಿದ್ದೂ, ಕೇಳಿದ್ದು ಅಷ್ಟನ್ನೆ ಸೇರಿಸಿ ಹೆಣೆದಿದ್ದು ಸ್ವಾಮಿ...! ಪ್ರತಿಕ್ರಿಯೆಗೆ ಮತ್ತೆ ಧನ್ಯವಾದಗಳು :-) ನಾಗೇಶ ಮೈಸೂರು.
Submitted by ರಾಮಕುಮಾರ್ Tue, 07/02/2013 - 21:51

In reply to by nageshamysore

ಸಿಗರೇಟು ಬಿಡುವುದು ಸುಮಾರು ಜನರಿಗೆ "ಬಿಟ್ಟೆನೆಂದರೂ ಬಿಡದೀ ಮಾಯೆ!".ನೀವು ಬಿಟ್ಟದ್ದು ಓದಿ ಖುಷಿಯಾಯಿತು. ಅಂದ ಹಾಗೆ,ನನ್ನ ಪ್ರಕಾರ ಕಾವ್ಯ ಅನುಭವ ಜನ್ಯವಾಗಿಯೆ ಇರಬೇಕಿಂದಿಲ್ಲ. ಕುಡಿಯದ ರಾಜರತ್ನಂ ರತ್ನನ ಪದ ಬರೆದಿಲ್ಲವೆ!
Submitted by nageshamysore Wed, 07/03/2013 - 03:28

In reply to by ರಾಮಕುಮಾರ್

ಸಿಗರೇಟು ಬಿಡುವ ಬಗ್ಗೆ ಮಾತೆ ಇದೆಯಲ್ಲಾ - 'ಬಿಡುವುದು ಸುಲಭ, ಈಗಾಗಲೆ ಎಷ್ಟೊ ಬಾರಿ ಬಿಟ್ಟಿದ್ದೇನೆ' ಅಂತ :-) ಅನುಭವಜನ್ಯದಷ್ಟೆ ಸಮರ್ಥವಾಗಿ ಅನುಭಾವವೂ ಸೃಜನಾತ್ಮಕ ಸೃಷ್ಟಿಗಿಳಿಯಲು ಸಾಧ್ಯ ಎಂದು ರಾಜರತ್ನಂ ತರದವರು ಎಂದೊ ತೋರಿಸಿಬಿಟ್ಟಿದ್ದಾರೆ - ಆ ನಿಟ್ಟಿನಲ್ಲಿ ನಿಮ್ಮ ಮಾತು ಖಂಡಿತ ನಿಜ. ಕಥೆಗಾರನ ಮನಸ್ಸು ಸಿಕ್ಕಿದ ಸೂಕ್ಷ್ಮ ಎಳೆಯನ್ನೆ ಹಿಡಿದು, ಚಿಂತನೆ ಆಲೋಚನೆಗಳ ಜತೆ ಬೆಸೆಯುತ್ತ ಪರಿಧಿಯನ್ನು ವಿಸ್ತರಿಸುತ್ತ ಹೋದಾಗ ಅದರ ಬೆನ್ನಲ್ಲಿರುವುದು ಬರಿಯ ಅನುಭವವಷ್ಟೆ ಅಲ್ಲದೆ ಕಲ್ಪನೆ, ನೋಡಿದ, ಕೇಳಿದವುಗಳ ಪ್ರಭಾವ, ಪರಿಸರ..ಹೀಗೆ ಏನೆಲ್ಲ ಅಂಶಗಳು ಕೆಲಸಮಾಡುತ್ತವೆ ಅನಿಸುತ್ತದೆ. ಒಟ್ಟಾರೆ ಸೃಷ್ಟಿಗೆ ಬೇಕಾದ ಮೂಲ ಸೃಜನಶೀಲತೆ ಇದ್ದರೆ ಉಳಿದಿದ್ದೆಲ್ಲ ತಂತಾನೆ ಸಲಕರಣೆಗಳಾಗಿ ಸಹಕರಿಸುತ್ತವೇನೊ.. - ನಾಗೇಶ ಮೈಸೂರು
Submitted by venkatb83 Wed, 07/03/2013 - 17:30

In reply to by nageshamysore

೨-ಎರಡು ಧೂಮಪಾನಕವನ ... ಬರೀ ಸಿಗರೇಟು ಘಾಟು ಇಲ್ಲಿ ...!! ಏನೋ ಗೀಚಿರುವೆ "ಕೆಲ ಸಿಗರೇಟು ಬಲು ಚೋಟು ಇನ್ಕೆಲವು ಮೋಟು ಏನಾದ್ರೂ ಬಲು ಘಾಟು ಬಿಡೋದು ಹೊಗೆ ನಮ್ಮೇಲೆ ನಮಗೇನ ಹಗೆ .." !! ಅಂದ್ ಹಾಗೆ ನಾವೂ ಒಮ್ಮೆ ಈ ಬಗ್ಗೆ ಒಂದು ಚರ್ಚೆ ನಡೆಸಿದ್ದೆವು (ಸಂಪದ ಸೇರಿದ ಹೊಸತರಲ್ಲಿ) ಇಲ್ಲಿದೆ ಲಿಂಕ್ ಉ..!! ನಾಗೇಶ್ ಅವರೇ ಇದ್ದಕ್ಕಿದ್ದಂತೆ ೨ ಎರಡು ಧೂಮ ಕವನ ಬರೆಯಲು ಸ್ಪೂರ್ತಿ ಏನು? ಶುಭವಾಗಲಿ \।/
Submitted by venkatb83 Wed, 07/03/2013 - 17:31

In reply to by venkatb83

ಅಂದ್ ಹಾಗೆ ನಾವೂ ಒಮ್ಮೆ ಈ ಬಗ್ಗೆ ಒಂದು ಚರ್ಚೆ ನಡೆಸಿದ್ದೆವು (ಸಂಪದ ಸೇರಿದ ಹೊಸತರಲ್ಲಿ) ಇಲ್ಲಿದೆ ಲಿಂಕ್ ಉ..!! http://sampada.net/…
Submitted by nageshamysore Wed, 07/03/2013 - 18:36

In reply to by venkatb83

ಸಪ್ತಗಿರಿಯವರೆ ಹಳೆ ಕೊಂಡಿಯ ಸಿಗರೇಟು ಚರ್ಚೆ ಚೆನ್ನಾಗಿದೆ! ಅಲ್ಲಿಗೆ ನನ್ನ ಅನುಭವವನ್ನು ಸೇರಿಸಬೇಕೆಂದರೆ : ಒಂದು ದಿನ ಅಂದುಕೊಂಡೆ, 'ಈ ಹೊತ್ತಿನಿಂದ ಬಿಟ್ಟು ಬಿಡುತ್ತೇನೆ' ಅಂತ. ಅಷ್ಟೆ! ಜತೆಯಲ್ಲೆ ಇನ್ನೊಂದು ಅಂದುಕೊಂಡಿದ್ದೆ - ತಿರುಗಿ ಸೇದಬೇಕೆನ್ನುವ ಒತ್ತಡ ಅಧಿಕವಾದರೆ ಅದನ್ನು ನಿಯಂತ್ರಿಸುವ ಬದಲು , ಶರಣಾಗಿ ಮತ್ತೆ ಸೇದುವುದು ಎಂದು. ಕಾರಣ - ನಿಯಂತ್ರಿಸಬೇಕೆಂದು ಬಲವಂತ ಮಾಡಿದಷ್ಟು ಆ ಬಲವಂತದ ಒತ್ತಡ ಮತ್ತಷ್ಟು ಒತ್ತಡವಾಗಿ ಮತ್ತೆ ಬೆನ್ನಿಗೆ ಬಿದ್ದು ಕಾಡಲಾರಂಭಿಸುತ್ತದೆ. ಆ ಮಟ್ಟಕ್ಕೆ ಹೋಗುವ ಮೊದಲೆ, ಅದನ್ನು ಆರಿಸಿ , ಮತ್ತೆ ಹೊಸ ವ್ರತ ಆರಂಭಿಸುವುದು ಕ್ಷೇಮವೆಂಬ ಅನಿಸಿಕೆಯಲ್ಲಿ. ಅಚ್ಚರಿಯೆಂದರೆ ಮತ್ತೆ ಸೇದಬೇಕೆಂದು ಅನಿಸಲೆ ಇಲ್ಲ! ಈಗ ಪಕ್ಕದಲ್ಲೆ ಯಾರಾದರೂ ಸೇದುತ್ತಿದ್ದರೂ ಪ್ರಲೋಭನೆಯಾಗುವುದಿಲ್ಲ - ನಾಗೇಶ ಮೈಸೂರು