ಧ್ಯಾನಕ್ಕೊಂದು ಅರ್ಥ ನೀಡಿದ ಬುದ್ದ...!

ಧ್ಯಾನಕ್ಕೊಂದು ಅರ್ಥ ನೀಡಿದ ಬುದ್ದ...!

ಮೌನಕ್ಕೊಂದು ಮಾತು ಕಲಿಸಿದ ಮಹಾವೀರ, ಸಮಾಜವನ್ನೇ ಸಾಹಿತ್ಯವಾಗಿಸಿದ ವ್ಯಾಸ, ಯೋಗವನ್ನೇ ಆರೋಗ್ಯವಾಗಿಸಿದ ಪತಂಜಲಿ, ಆಕಾಶ ಅಲೆದಾಡಿದ ಆರ್ಯಭಟ, ತಂತ್ರಕ್ಕೊಂದು ಶಕ್ತಿ ನೀಡಿದ ಚಾಣಕ್ಯ, ಸಾಮ್ರಾಜ್ಯದ ಸರದಾರನಾದರೂ ಪ್ರಾಣಹಾನಿಗೆ ಮಿಡಿದ ಅಶೋಕ, ಧಾರ್ಮಿಕ ನಂಬಿಕೆಗಳಿಗೆ ನೀರೆರೆದ ಶಂಕರಾಚಾರ್ಯ, ಪ್ರೇಮ ಪತ್ರಗಳಿಗೆ ಜೀವ ತುಂಬಿದ ಕಾಳಿದಾಸ, ಸಮಾನತೆಗೊಂದು ಸ್ಪರ್ಶ ಕೊಟ್ಟ ಬಸವಣ್ಣ, ಸ್ಥಿತ ಪ್ರಜ್ಞೆಗೆ ಉದಾಹರಣೆಯಾದ ಅಕ್ಕ ಮಹಾದೇವಿ, ಮನುಷ್ಯ ಜನ್ಮ ಜಾಲಾಡಿದ ಅಲ್ಲಮ, ಮಾತನ್ನೊಂದು ಮಂತ್ರವಾಗಿಸಿದ ವಿವೇಕಾನಂದ, ಭಕ್ತಿಯ ಪರಾಕಾಷ್ಠೆ ತಲುಪಿದ ಪರಮಹಂಸ, ಗುರುಗಳಿಗೆ ಗುರುವಾದ ರಮಣ, ಭಜನೆಗಳಿಗೆ ಭಾವ ತುಂಬಿದ ಮೀರಾ ಬಾಯಿ, ಶಿಕ್ಷಣದ ಮಹತ್ವ ಸಾರಿದ ಸಾವಿತ್ರಿ ಬಾಯಿ ಪುಲೆ, ಕವಿತ್ವವನ್ನು ಜನಪರವಾಗಿಸಿದ ರವೀಂದ್ರನಾಥ ಟಾಗೋರ್, ಸಸ್ಯಗಳ ಭಾವನೆಗಳಿಗೆ ಕಿವಿಯಾದ ಜಗದೀಶ್ ಚಂದ್ರ ಬೋಸ್, ಹೋರಾಟಕ್ಕೊಂದು ನೆಲೆ ನೀಡಿದ ಗಾಂಧಿ, ಮಾನವೀಯತೆಯನ್ನೇ ಉಸಿರಾಡಿದ, ಅಧ್ಯಯನವನ್ನೇ ಬೆಳಕಾಗಿಸಿದ ಅಂಬೇಡ್ಕರ್, ದೇಶ ಭಕ್ತಿಗೆ ಸ್ಫೂರ್ತಿಯಾದ ಭಗತ್ ಸಿಂಗ್, ಸ್ವಾತಂತ್ರ್ಯಕ್ಕೇ ಸಮರ್ಪಿತನಾದ ಸುಭಾಷ್, ಸೇಡನ್ನು ಸಹ್ಯವಾಗಿಸಿದ ಉದೋಮ್ ಸಿಂಗ್, ಕ್ರೀಡೆಯ ದೈವಿಕ ಸಾಧನೆಗೆ ನೆನಪಾಗುವ ಹಾಕಿ ಮಾಂತ್ರಿಕ ಧ್ಯಾನ್ ಚಂದ್, ಉದ್ಯಮವನ್ನೇ ಅಭಿವೃದ್ಧಿಯಾಗಿಸಿದ ಜೆಮ್ ಶೆಡ್ ಜೀ ಟಾಟಾ, ಸರಳತೆಗೆ ಸಂಕೇತವಾದ ಶಾಸ್ತ್ರಿ, ಚಿಂತನೆಗೆ ಚಿಗುರೊಡೆಸಿದ ಲೋಹಿಯಾ, ಪ್ರಕೃತಿಯನ್ನೇ ಅಕ್ಷರಕ್ಕಿಳಿಸಿದ ಕುವೆಂಪು, ಸೇವೆಯನ್ನೇ ಬದುಕಾಗಿಸಿದ  ತೆರೇಸಾ, ಅತಿರೇಕದ ಆನಂದವನ್ನು ಉಣಬಡಿಸಿದ ಓಶೋ, ದೇವರನ್ನು ಕಲ್ಲಾಗಿಸಿದ ಪೆರಿಯಾರ್, ಆಧುನಿಕ ಭಾರತದ ಶಿಲ್ಪಿಯಾದ ನೆಹರು, ವಿಶ್ವ ಗುರುವಿಗೆ ಹತ್ತಿರದ ಚಿಂತಕ ಜಿಡ್ಡು ಕೃಷ್ಣಮೂರ್ತಿ, ಅಧಿಕಾರವನ್ನೇ ಸಾಮಾನ್ಯವಾಗಿಸಿದ ಮಾಣಿಕ್ ಸರ್ಕಾರ್, ವಿಶ್ವ ಮಾನವ ಪ್ರಜ್ಞೆಯ ಕುವೆಂಪು, ಮುಗ್ದತೆಯನ್ನೇ ಮಾತನಾಡಿಸಿದ ಕಲಾಂ, 16 ವರ್ಷ ಉಪವಾಸ ಸತ್ಯಾಗ್ರಹ ಮಾಡಿ ಇತಿಹಾಸ ಸೃಷ್ಟಿಸಿದ ಶರ್ಮಿಳಾ ಇರೋಂ, ಆಧ್ಯಾತ್ಮವನ್ನೇ ಕಾಯಕವಾಗಿಸಿ ಸಾವಿಗೆ ಸವಾಲಾದ ಸಿದ್ದಗಂಗೆಯ ಶಿವಣ್ಣ...

ಈ ಕ್ಷಣದಲ್ಲಿ ನೆನಪಾದ ಕೆಲವು ವಿಶಿಷ್ಟ ವಿಶೇಷ ಮಾನವರು. ಭಾರತದ ಮಟ್ಟಿಗೆ ಎಲ್ಲಾ ಕ್ಷೇತ್ರಗಳಲ್ಲೂ ಅದ್ಭುತ ಸಾಧನೆ ಮಾಡಿದ ಅನೇಕರಿದ್ದಾರೆ. ಇದು ಕೇವಲ ಸಾಂಕೇತಿಕ. ನಿಮ್ಮ ನೆನಪುಗಳಲ್ಲಿ ಮೂಡುವ ಇನ್ನೂ ಕೆಲವು ಸಾಧಕರನ್ನು ಇಲ್ಲಿ ಸ್ವಾಗತಿಸುತ್ತಾ… ಇಂದಿನ ಮಾಧ್ಯಮಗಳ ವಿಕೃತ ಸುದ್ದಿಗಳಿಗಿಂತ ನಮ್ಮ ಮಕ್ಕಳಿಗೆ ಕನಿಷ್ಠ ಈ‌ ಸಾಧಕರನ್ನು ಮತ್ತೆ ಮತ್ತೆ ನೆನಪಿಸುವ ಒಂದು ಪ್ರಯತ್ನ ಮಾಡುತ್ತಲೇ ಇರೋಣ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ