ಧ್ಯಾನದಿಂದ ಹೊಸ ಬದುಕು (ಭಾಗ ೧)
ಜೆನ್ ಗುರುಗಳೊಬ್ಬರಲ್ಲಿ ಶಿಷ್ಯನೊಬ್ಬ ಕೇಳಿದ ಪ್ರಶ್ನೆ: "ಗುರುಗಳೇ, ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ. ಇಂತಹ ಮಹಾತ್ಮರಾಗಲು ನೀವೇನು ಮಾಡಿದಿರಿ?" ತಕ್ಷಣ ಗುರುಗಳ ಉತ್ತರ, “ನನಗೆ ಹಸಿವಾದಾಗ ತಿಂದೆ ಮತ್ತು ನಿದ್ದೆ ಬಂದಾಗ ಮಲಗಿದೆ.”
ಚಕಿತನಾದ ಶಿಷ್ಯ ಕೇಳಿದ, "ಗುರುಗಳೇ, ಎಲ್ಲರೂ ಇದನ್ನು ಮಾಡುತ್ತಾರೆ. ಹಾಗಿರುವಾಗ ಇದರಲ್ಲಿ ವಿಶೇಷ ಏನಿದೆ?” ಈ ಪ್ರಶ್ನೆಗೆ ಗುರುಗಳ ಮಾರ್ಮಿಕ ಉತ್ತರ, “ಎಲ್ಲರೂ ಇದನ್ನು ಮಾಡುವುದಿಲ್ಲ. ಅವರೆಲ್ಲ ಏನು ಮಾಡುತ್ತಾರೆಂದು ಗಮನಿಸು. ಅವರು ಹಸಿವಿಲ್ಲದಿದ್ದರೂ ರುಚಿಯ ಚಪಲದಿಂದ ತಿನ್ನುತ್ತಾರೆ. ನಿದ್ದೆ ಬಾರದಿದ್ದರೂ ಮಲಗಿ ನಿದ್ರಿಸಲು ಚಡಪಡಿಸುತ್ತಾರೆ; ಹಾಸಿಗೆಯಲ್ಲಿ ಮಲಗಿ, ಯಾವುದೋ ಸಮಸ್ಯೆಯಿಂದ ಪಾರಾಗುವುದು ಹೇಗೆಂದು ಗಂಟೆಗಟ್ಟಲೆ ಚಿಂತಿಸುತ್ತಾರೆ.”
ನಮ್ಮೆಲ್ಲರ ಅವಸ್ಥೆ ಇದೇ ಅಲ್ಲವೇ? ಯಾರಿಗೂ ಯಾವುದಕ್ಕೂ ಪುರುಸೊತ್ತಿಲ್ಲ. ಎಲ್ಲರಿಗೂ ಯಾವಾಗಲೂ ಗಡಿಬಿಡಿ. ಮನೆ, ಶಾಲೆ, ಆಫೀಸು, ಅಂಗಡಿ, ಮಾರುಕಟ್ಟೆ, ಮಾಲ್, ಮೀಟಿಂಗ್, ವಾಹನ, ಆಸ್ಪತ್ರೆ - ಎಲ್ಲಿದ್ದರೂ ಮುಳ್ಳಿನ ಮೇಲಿದ್ದಂತೆ ಚಡಪಡಿಕೆ. ಯಾವ ವಾಹನದಲ್ಲಿ ಪ್ರಯಾಣಿಸಿದರೂ, ಇನ್ನಷ್ಟು ವೇಗವಾಗಿ ಸಾಗುವ ಹಪಾಹಪಿ. ವಿಮಾನ ಏರಿ ಹಾರುವವರಿಗೂ ಇನ್ನೂ ಬೇಗ ಸಾಗಬೇಕೆಂಬ ಅವಸರ!
ಮನೆಗೆ ಮರಳಿದಾಗ ಇಂತಹ ಗಡಿಬಿಡಿಯಿಂದ ಬಿಡುಗಡೆಯುಂಟೇ? ಇಲ್ಲ. ಮುಗಿಯದ ಮನೆಗೆಲಸಗಳು; ಪತ್ರಿಕೆ ಓದಿ, ಟೆಲಿವಿಷನ್ ಸೀರಿಯಲ್ಗಳನ್ನು ನೋಡಿ, ಫೇಸ್ಬುಕ್ ಮತ್ತು ವಾಟ್ಸ್-ಆಪ್ನ ಸಂದೇಶಗಳನ್ನೆಲ್ಲ ನೋಡಿ/ ಓದಿ ಮುಗಿಸಬೇಕಾದ ಒತ್ತಡ. ಈ ಎಲ್ಲ ಒತ್ತಡಗಳ ಸುಳಿಗೆ ಸಿಲುಕಿರುವ ನಾವು ನಿರಾಳವಾಗಿ ಯೋಚಿಸುವ ಕಲೆಯನ್ನೇ ಕಳೆದುಕೊಂಡಿದ್ದೇವೆ.
ಈಗ ಮನೆಯಲ್ಲಿ ಹುಡುಗ ಅಥವಾ ಹುಡುಗಿ ಸುಮ್ಮನೆ ಯೋಚಿಸುತ್ತಾ ಕೂತಿದ್ದರೆ ತಂದೆತಾಯಿ ಏನೆನ್ನುತ್ತಾರೆ? "ಯಾಕೆ ಸುಮ್ಮನೆ ಕೂತಿದ್ದಿ? ಏನಾದರೂ ಕೆಲಸ ಮಾಡು” ಅಥವಾ “ಅದ್ಯಾಕೆ ಏನೋ ಯೋಚನೆ ಮಾಡ್ತಾ ಹೊತ್ತು ಹಾಳು ಮಾಡುತ್ತಿ? ಏನಾದರೂ ಓದಿಕೋ, ಪರೀಕ್ಷೆ ಹತ್ತಿರ ಬಂತಲ್ಲ” ಎಂದು ಮಕ್ಕಳ ಯೋಚನಾ ಲಹರಿಗೆ ಅಡ್ಡಿ ಮಾಡುತ್ತಾರೆ. ಹೆತ್ತವರ ಇಂತಹ ಆದೇಶಗಳ ಅರ್ಥವೇನು? “ನಿರಾಳವಾಗಿ ಯೋಚನೆ ಮಾಡುತ್ತಾ ಕೂರುವುದು ಆರೋಗ್ಯಕರ ಲಕ್ಷಣವಲ್ಲ; ಅದು ವ್ಯರ್ಥ ಕಾಲಹರಣ.”
ಬೇಸಗೆ ರಜೆಯಲ್ಲಾದರೂ ಮಕ್ಕಳು ನಿರಾಳವಾಗಿರಲು ಹೆತ್ತವರು ಬಿಡುತ್ತಾರೆಯೇ? ಇಲ್ಲ. ಡ್ರಾಯಿಂಗ್ ಕ್ಲಾಸ್, ಸಂಗೀತ ಅಭ್ಯಾಸ, ಬೇಸಿಗೆ ಶಿಬಿರ, ನೃತ್ಯ ತರಬೇತಿ, “ನೀಟ್" ಕೋಚಿಂಗ್, ಕಂಪ್ಯೂಟರ್ ಕೋರ್ಸ್, ಕ್ರಿಕೆಟ್ ಕ್ಯಾಂಪ್, ವ್ಯಕ್ತಿತ್ವ ವಿಕಸನ ಶಿಬಿರ - ಇಂತಹ ತರಬೇತಿಗಳಿಗೆ ಮಕ್ಕಳನ್ನು ಸೇರಿಸುತ್ತಾರೆ. ಅಲ್ಲಿ ತಮ್ಮ ಮಕ್ಕಳು ಎಲ್ಲ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಗೆಲ್ಲಬೇಕೆಂಬ ಒತ್ತಾಯ. "ಮುಂದಿನ ಕ್ಲಾಸಿನ ಪಾಠಗಳನ್ನು ಈಗಲೇ ಓದಿ ರಾಂಕ್ ಗಳಿಸಲು ತಯಾರಾಗು” ಎಂಬ ಬಲವಂತ. ಇವೆಲ್ಲದರ ಜೊತೆಗೆ ತಮ್ಮ ಮಕ್ಕಳು ಟೆಲಿವಿಷನ್ ಪ್ರದರ್ಶನಗಳಲ್ಲಿ ಮಿಂಚಬೇಕೆಂದು ಅವರನ್ನು ಸ್ಪರ್ಧೆಗೆ ನುಗ್ಗಿಸಿ, ತಮ್ಮ ಮಕ್ಕಳಿಗೆ “ಓಟು" ನೀಡಬೇಕೆಂದು ಸಿಕ್ಕಸಿಕ್ಕ ವಾಟ್ಸ್-ಆಪ್ ಗ್ರೂಪುಗಳಲ್ಲಿ ಪ್ರಚಾರ.
ಧಾವಂತದಿಂದ ಪಾರಾಗುವ ದಾರಿ
ಇವೆಲ್ಲ ಧಾವಂತದಿಂದ ಪಾರಾಗಲು ಇರುವ ಒಂದೇ ಒಂದು ದಾರಿ ಅಂತರ್ಮುಖಿಯಾಗುವುದು. ಇದನ್ನು ಮಾನ್ಯ ಡಿ.ವಿ. ಗುಂಡಪ್ಪನವರು ಸರಳವಾಗಿ ಹೀಗೆ ತಿಳಿಸಿದ್ದಾರೆ: "ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ, ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ, ವಸ್ತು ಸಾಕ್ಷಾತ್ಕಾರ ಅಂತರೀಕ್ಷಣೆಯಿಂದ, ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ.”
ಪುಸ್ತಕಗಳನ್ನು ಓದಿ ಪಡೆಯುವ ಜ್ನಾನ, ತಲೆಯ ಮೇಲೆ ಇಟ್ಟುಕೊಂಡ ಮಣಿಯಂತೆ. ಅದು ಏನಿದ್ದರೂ ಬಾಹ್ಯಮೂಲದಿಂದ ಗಳಿಸಿದ್ದು. ಅದು ಯಾವತ್ತೂ ನಮ್ಮೊಳಗಿನಿಂದ ಮೂಡಿ ಬರುವ ಅರಿವು ಆಗುವುದಿಲ್ಲ. ನಮ್ಮ ಅಂತರಾಳದಿಂದ ಬೆಳೆದು ಬರುವ ಅರಿವು, ತರುವಿನಿಂದ ಚಿಮ್ಮುವ ಹೂವಿನಂತೆ. ಅದೇ ರೀತಿಯಲ್ಲಿ, ನಮಗೆ ವಸ್ತು ಸಾಕ್ಷಾತ್ಕಾರ ಆಗುವುದು ಅಂತರೀಕ್ಷಣೆ ಮಾಡುತ್ತಾ ಪಡೆಯುವ ಒಳನೋಟದಿಂದಲೇ ಹೊರತು ಪುಸ್ತಕಗಳಿಂದ ಪಡೆಯುವ ಪಾಂಡಿತ್ಯದಿಂದ ಅಲ್ಲ ಎಂದು ಅವರು ತಿಳಿಸಿದ್ದಾರೆ.
ಹೀಗೆ ಅಂತರ್ಮುಖಿಯಾದಾಗ, ನಮ್ಮ ಮನಸ್ಸಿನಾಳದಲ್ಲಿ ಪ್ರಶ್ನೆಗಳು ಹುಟ್ಟುತ್ತವೆ:
ನಾನು ಯಾಕಾಗಿ ಬದುಕಿದ್ದೇನೆ?
ನನ್ನ ಜೀವನದ ಗುರಿ ಏನು?
ಅದನ್ನು ಸಾಧಿಸುವ ದಾರಿ ಯಾವುದು?
ಇಂತಹ ಚಿಂತನೆಗಳಿಗೆ ನಮ್ಮನ್ನು ಒಡ್ಡುವ ಪ್ರಕ್ರಿಯೆಯೇ ಧ್ಯಾನ. ಈ ಪ್ರಕ್ರಿಯೆಯಿಂದಲೇ ಹೊಸ ಬದುಕಿನ ಆರಂಭ.