ಧ್ಯಾನದಿಂದ ಹೊಸ ಬದುಕು (ಭಾಗ 2)

ಧ್ಯಾನದಿಂದ ಹೊಸ ಬದುಕು (ಭಾಗ 2)

ಧ್ಯಾನ ಎಂದರೇನು?
ಅದೊಂದು ಅನುಭವ. ಶಬ್ದಕೋಶದ ಪುಟ ನೋಡಿದರೆ, "ದೀರ್ಘ ಚಿಂತನೆ” ಅಥವಾ "ಯಾವುದೇ ಸತ್ಯ, ವಿಸ್ಮಯ ಅಥವಾ ಪವಿತ್ರ ವಸ್ತುವಿನ ಬಗ್ಗೆ ಮನಸ್ಸನ್ನು ನಿರಂತರವಾಗಿ ತೊಡಗಿಸುವುದು" ಎಂಬ ಅರ್ಥ ಸಿಗಬಹುದು. ಆದರೆ, ಧ್ಯಾನ ಇವೆಲ್ಲಕ್ಕಿಂತ ಮಿಗಿಲಾದ ಅನುಭವ. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು - ಅದೊಂದು ವಿವರಿಸಲಾಗದ ಅನುಭವ ಎಂಬ ಸತ್ಯ.

ಧ್ಯಾನವೆಂದರೆ ಇವೆಲ್ಲದರೊಂದಿಗೆ ಒಂದಾಗುವುದು: ಪ್ರಕೃತಿ, ಅನಂತ ವಿಶ್ವಚೈತನ್ಯ, ಮೌನ, ಈ ಕ್ಷಣ ಮತ್ತು ಸಾಕ್ಷೀಭಾವ. ಧ್ಯಾನವೆಂದರೆ ಪ್ರಕೃತಿಯೊಂದಿಗೆ ಒಂದಾಗುವುದು. ನಾನು ಬೇರೆ, ಪ್ರಕೃತಿ ಬೇರೆ ಅಲ್ಲ; ನಾನು ಬಂದಿರುವುದು ಪ್ರಕೃತಿಯಿಂದ, ಹೋಗಿ ಸೇರುವುದೂ ಅಲ್ಲಿಗೇ ಎಂಬ ಸತ್ಯವನ್ನು ಒಪ್ಪಿಕೊಳ್ಳುವುದು. ಪಂಚಭೂತಗಳಿಂದ ಆಗಿರುವ ಈ ಶರೀರ ಅಂತಿಮವಾಗಿ ಪಂಚಭೂತಗಳಲ್ಲಿ ವಿಲೀನ ಎಂಬ ಸತ್ಯಕ್ಕೆ ಶರಣಾಗುವುದು. ಸುತ್ತಲಿನ ಪ್ರಾಣಿಪಕ್ಷಿ ಜಲಚರ ಗಿಡ ಮರ ಬಳ್ಳಿ ಹುಲ್ಲು ಕಾಡು ಕಣಿವೆ ಬೆಟ್ಟ ಪರ್ವತ ಸರೋವರ ನದಿ ಸಮುದ್ರ ಸಾಗರ - ಇವುಗಳೊಂದಿಗಿನ ತಾದಾತ್ಮ್ಯ ಭಾವವೇ ಧ್ಯಾನ. ಪ್ರಕೃತಿಯ ಬಗ್ಗೆ ದೀರ್ಘವಾಗಿ ಮತ್ತು ಹಿತವಾದ ಭಾವದಿಂದ ಯೋಚಿಸಿದರೆ, ಅದನ್ನು ಕಾಣುತ್ತ, ಅನುಭವಿಸುತ್ತ ಅದರಲ್ಲಿ ಒಂದಾಗಲು ಸಾಧ್ಯ. ಮರದಿಂದ ಬಿದ್ದ ಬೀಜದಲ್ಲಿ, ಬಳ್ಳಿಯಿಂದ ಉದುರಿದ ಎಲೆಯಲ್ಲಿ, ನೆಲ ಸೀಳುವ ಸೂರ್ಯ ಕಿರಣದಲ್ಲಿ, ಗುಬ್ಬಚ್ಚಿಯ ಉಲಿಯಲ್ಲಿ - ಎಲ್ಲದರಲ್ಲಿಯೂ ಹೊಸ ಅರ್ಥದ ಕಾಣ್ಕೆ.
ಧ್ಯಾನವೆಂದರೆ ಅನಂತವಾದ ವಿಶ್ವಚೈತನ್ಯದೊಂದಿಗೆ ಒಂದಾಗುವುದು. ಅನಂತ ಆಕಾಶವನ್ನೊಮ್ಮೆ ಗಮನಿಸಿ. ಭೂಮಿಯ ಉಪಗ್ರಹ ಚಂದ್ರ, ಸೂರ್ಯನೆಂಬ ನಕ್ಷತ್ರದ ಸುತ್ತ ಸುತ್ತುವ ಗ್ರಹಗಳು, ಅಸಂಖ್ಯ ನಕ್ಷತ್ರಗಳು, ಈ ಸೌರವ್ಯೂಹವನ್ನು ಒಳಗೊಂಡ ಕ್ಷೀರಪಥವೆಂಬ ನಕ್ಷತ್ರಪುಂಜ, ಅಂತಹ ಲಕ್ಷಗಟ್ಟಲೆ ನಕ್ಷತ್ರಪುಂಜಗಳು, ನಿರಂತರವಾಗಿ ಬೆಳೆಯುತ್ತಿರುವ ಅನಂತವಾದ ವಿಶ್ವ. ಅಬ್ಬ, ಇದನ್ನೆಲ್ಲ ಗ್ರಹಿಸುವುದೇ ದೊಡ್ಡ ಸವಾಲು. ಈ ಸವಾಲನ್ನು ಎದುರಿಸುವುದೇ ಧ್ಯಾನದ ದೊಡ್ಡ ಹೆಜ್ಜೆ. ಯಾಕೆಂದರೆ, ಈ ವಿಶ್ವದಲ್ಲಿ ಎಲ್ಲವೂ ಕರಾರುವಾಕ್. ಹಾಗಿರಬೇಕಾದರೆ, ಅದು ಎಂತಹ ಅಗಾಧ ಚೈತನ್ಯ! ಆ ಚೈತನ್ಯದೆದುರು ನಾನೊಂದು ಧೂಳಿನ ಕಣವೂ ಅಲ್ಲ. ಆ ವಿಶ್ವಚೈತನ್ಯದಲ್ಲಿ ಒಂದಾಗುತ್ತ ಮುನ್ನಡೆಯುವುದೇ ಧ್ಯಾನದ ಸಾಧನೆ.
ಧ್ಯಾನ ಎಂದರ ಮೌನದಲ್ಲಿ ಒಂದಾಗುವುದು. ಧ್ಯಾನದಲ್ಲಿ ಮುಳುಗಿ, ನಮ್ಮ ಮನಸ್ಸಿನ ಆಳಕ್ಕೆ ಇಳಿದಂತೆ, ಅದು ತಳವಿಲ್ಲದ ಪಾತ್ರೆ ಎಂದು ಅರಿವಾಗುತ್ತದೆ. ಇದನ್ನೇ “ನಭದ ಬಯಲೊಳು ಅನಂತ, ಮನದ ಗುಹೆಯೊಳು ಅನಂತ” ಎಂದಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಆಕಾಶದ ಎತ್ತರಕ್ಕೆ ಏರಿದಂತೆ, ಮನಸ್ಸಿನ ಆಳಕ್ಕೆ ಇಳಿಯಲಿಕ್ಕೂ ಧ್ಯಾನದಲ್ಲಿ ಅಭ್ಯಾಸ ಮಾಡಬೇಕು. ಯಾಕೆಂದರೆ, ಮನದಾಳದಲ್ಲಿದೆ ಅಖಂಡ ಮೌನ. ಆ ಮೌನದಲ್ಲಿ ಒಂದಾದಾಗ ಎಲ್ಲವೂ ನಿರಾಳ. ಅಂದರೆ, ಯಾವ ಚಿಂತೆಯೂ ನಮ್ಮನ್ನು ಬಾಧಿಸದು, ಯಾವ ಕಷ್ಟವೂ ಅಲುಗಾಡಿಸಲು. ಅವೆಲ್ಲವನ್ನೂ ಮೀರಿ ನಿಲ್ಲಲು ಸಾಧ್ಯವಾಗುತ್ತದೆ.
ಧ್ಯಾನ ಎಂದರೆ ಈ ಕ್ಷಣದಲ್ಲಿ ಒಂದಾಗುವುದು ಅಂದರೆ ತತ್‌ಕ್ಷಣದಲ್ಲಿ ಬದುಕುವುದು. ನಮ್ಮ ನೆಮ್ಮದಿಗೆ ಅಡ್ದಿ ಮಾಡುವುದೇನು? ಗತ ಕಾಲದ ಘಟನೆಗಳ ನೋವು ಮತ್ತು ಭವಿಷ್ಯತ್ ಕಾಲದ ಬಗೆಗಿನ ಭಯ. ಆದದ್ದನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗೆಯೇ, ಆಗುವುದನ್ನೂ ಬದಲಾಯಿಸಲು ಸಾಧ್ಯವಿಲ್ಲ. ಸುನಾಮಿ, ಕೇದಾರನಾಥದ ಘಟಸ್ಫೋಟ, ಶ್ರೀನಗರ, ಚೆನ್ನೈ ಮತ್ತು ಕೇರಳವನ್ನು ಕಂಗಾಲಾಗಿಸಿದ ಮಹಾನೆರೆಗಳು, ೨೦೨೦ರಲ್ಲಿ ಇಡೀ ಜಗತ್ತೇ ಹೈರಾಣಾಗುವಂತೆ ಮಾಡಿದ ಕೊರೊನಾ ವೈರಾಣು - ಇದು ಯಾವುದನ್ನೂ ತಪ್ಪಿಸಲು ಸಾಧ್ಯವಿರಲಿಲ್ಲ. ಹಾಗಿರುವಾಗ, ಆ ನೋವು ಮತ್ತು ಭಯದಿಂದ ಕಳಚಿಕೊಂಡು, ಈಗಿನ ಕ್ಷಣದಲ್ಲಿ ನಿರಾಳವಾಗಿ ಇರಬೇಕು.
ಧ್ಯಾನ ಎಂದರೆ ಸಾಕ್ಷೀಭಾವದಲ್ಲಿ ಒಂದಾಗುವುದು. ಅಂದರೆ, ಒಂದು ಕೆಲಸ ಮಾಡುತ್ತಲೇ, ಅದರಿಂದ ಮಾನಸಿಕವಾಗಿ ದೂರ ನಿಂತು “ನಾನೇನು ಮಾಡುತ್ತಿದ್ದೇನೆ” ಎಂಬುದನ್ನು ಗಮನಿಸುವುದು. (ಇದನ್ನು ಸ್ಥಿತಪ್ರಜ್ನತೆ ಎನ್ನಬಹುದು.) ಇದನ್ನು ಅಭ್ಯಾಸ ಮಾಡದಿದ್ದರೆ, ನಾವು ನಮ್ಮ ಕೆಲಸದಲ್ಲಿ ಸಂಪೂರ್ಣ ಮುಳುಗಿ, ಅದರ ಪರಿಣಾಮಗಳನ್ನು ಗಮನಿಸಲು ಅಸಮರ್ಥರಾಗುತ್ತೇವೆ. ಇದರಿಂದಾಗಿಯೇ ಜಗಳ, ಕಲಹ, ದೊಂಬಿ, ಭಯೋತ್ಪಾದನೆ ಹಾಗೂ ಯುದ್ಧಗಳು. ಇವೆಲ್ಲದರಿಂದ ಅಂತಿಮವಾಗಿ ಸಾಧಿಸುವುದೇನು? ಎಂಬ ಪ್ರಶ್ನೆಗೆ ಮುಖಾಮುಖಿಯಾಗಲು ಕಲಿಯದಿದ್ದರೆ, ಇವಕ್ಕೆಲ್ಲ ಅಂತ್ಯವಿಲ್ಲ. ಧ್ಯಾನದಲ್ಲಿ ನಮ್ಮ ಯೋಚನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಈ ಸಾಕ್ಷೀಭಾವ ಬೆಳೆಸಿಕೊಳ್ಳಲು ಸಾಧ್ಯ.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ದಿನನಿತ್ಯದ ಜೀವನದಿಂದ ಓಡಿ ಹೋಗುವುದು ಧ್ಯಾನವಲ್ಲ; ದಿನನಿತ್ಯದ ಜೀವನಕ್ಕೆ ತಯಾರಾಗುವುದೇ ಧ್ಯಾನ.