ಧ್ಯಾನದಿಂದ ಹೊಸ ಬದುಕು (ಭಾಗ 3)

ಧ್ಯಾನದಿಂದ ಹೊಸ ಬದುಕು (ಭಾಗ 3)

ಧ್ಯಾನ ಮಾಡುವುದು ಹೇಗೆ?
ಧ್ಯಾನ ದೊಡ್ದ ಸಾಧನೆ. ಧ್ಯಾನದ ಪೂರ್ಣ ಅನುಭವ ಸಿಗಬೇಕಾದರೆ ಪಾಲಿಸಬೇಕಾದ ಕೆಲವು ನಿಯಮಗಳು: ಧ್ಯಾನ ಮಾಡುವಾಗ ಸ್ವಲ್ಪ ಹಸಿವಾಗಿರಬೇಕು, ಸ್ವಲ್ಪ ಸುಸ್ತಾಗಿರಬೇಕು ಮತ್ತು ಯಾವುದೇ ನಿರೀಕ್ಷೆ ಇರಬಾರದು. ಅಂದರೆ, ಆಹಾರ ಸೇವನೆಗೂ ಧ್ಯಾನಕ್ಕೂ ಕನಿಷ್ಥ ಅರ್ಧ ಗಂಟೆಯ ಅಂತರ ಇರಬೇಕು. ಹೆಚ್ಚು ಹಸಿವಾದಾಗ ಅಥವಾ ಹೆಚ್ಚು ಸುಸ್ತಾದಾಗ ಧ್ಯಾನ ಮಾಡಿದರೆ ನಿದ್ದೆ ಬರುತ್ತದೆ. ಹಾಗಾಗಿ, ಕಷಾಯ ಅಥವಾ ಆರೋಗ್ಯಕರ ಪಾನೀಯ ಕುಡಿದು ಹಸಿವು ನಿವಾರಿಸಿಕೊಂಡು ಅರ್ಧ ಗಂಟೆಯ ನಂತರ ಧ್ಯಾನ ಮಾಡಬೇಕು. ಹಾಗೆಯೇ ತೀರಾ ಸುಸ್ತಾಗಿದ್ದಾಗ, ಅರ್ಧ ತಾಸು ಆರಾಮವಾಗಿ ಕುಳಿತು ಅಥವಾ ಶವಾಸನ ಮಾಡಿ ದಣಿವು ಪರಿಹರಿಸಿಕೊಂಡ ನಂತರ ಧ್ಯಾನ ಮಾಡಬೇಕು.

“ನಾನೀಗ ಮಾಡುವ ಧ್ಯಾನದಿಂದ ನನಗೇನೋ ಸಿಗುತ್ತದೆ” ಎಂಬ ನಿರೀಕ್ಷೆ ಇದ್ದರೆ, ಧ್ಯಾನದಿಂದ ಪ್ರಯೋಜನವಾಗದು. ಯಾಕೆಂದರೆ, ಏನೋ ಮಾಡಿದರೆ ಏನೋ ಪರಿಣಾಮ ಆಗುತ್ತದೆ. ಆದರೆ ಧ್ಯಾನದಲ್ಲಿ ನಾವು ಏನೂ ಮಾಡುವುದಿಲ್ಲ; ಹಾಗಾಗಿ ಏನೂ ಸಿಗುವುದಿಲ್ಲ. ಧ್ಯಾನದ ಅನುಭವ ಮಾತ್ರ ನಮ್ಮದಾಗುತ್ತದೆ. ಪ್ರತಿ ದಿನವೂ ಒಂದೇ ಸ್ಥಳದಲ್ಲಿ ಮತ್ತು ಒಂದೇ ಸಮಯದಲ್ಲಿ ಧ್ಯಾನ ಮಾಡಿದರೆ ಒಳ್ಳೆಯ ಅನುಭವ ನಮ್ಮದಾಗುತ್ತದೆ.

ಮಾನ್ಯ ಡಿ.ವಿ. ಗುಂಡಪ್ಪನವರು ಧ್ಯಾನ ಹೇಗೆ ಮಾಡಬೇಕೆಂದು ಸರಳವಾಗಿ ವಿವರಿಸಿದ್ದಾರೆ:
ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ
ವರಯೋಗ ಸೂತ್ರವಿದು - ಮಂಕುತಿಮ್ಮ

ಧ್ಯಾನ ಮಾಡಬೇಕಾದರೆ, ನಮ್ಮ ಮನಸ್ಸು ದೇವಾಲಯದಂತೆ ಪವಿತ್ರವಾಗಿರಬೇಕು. ಅಂತಹ ಮನಸ್ಸಿನಲ್ಲಿ ಎರಡು ಕೋಣೆ ಮಾಡಬೇಕು - ಹೊರಕೋಣೆ ಮತ್ತು ಒಳಕೋಣೆ. ಹೊರಕೋಣೆಯಲ್ಲಿ ನಮ್ಮ ದೈನಂದಿನ ಚಟುವಟಿಕೆಗಳಿಗೆ ಗಮನ ನೀಡಬೇಕು. ಒಳಕೋಣೆಯಲ್ಲಿ ಮೌನ ತುಂಬಿರಬೇಕು; ಆ ಮೌನದ ಶಾಂತಿಯಲ್ಲಿ ವಿರಮಿಸಿವುದೇ ಧ್ಯಾನ. ಇದು, ಡಿವಿಜಿಯವರಿತ್ತ ಧ್ಯಾನದ ವರಯೋಗ ಸೂತ್ರ. ಇದು ಸರಳವೂ ಹೌದು, ಗಹನವೂ ಹೌದು.

ಧ್ಯಾನದ ಪ್ರವೇಶ:
ಪ್ರತಿ ದಿನ ೧೫ ನಿಮಿಷ ಹೀಗೆ ಧ್ಯಾನ ಮಾಡಿ: ನೆಲದಲ್ಲಿ ಅಥವಾ ಕುರ್ಚಿಯಲ್ಲಿ ಆರಾಮವಾಗಿ ಕುಳಿತುಕೊಳ್ಳಿ. ಬೆನ್ನಿಗೆ ಆಧಾರವಿರಲಿ (ಇಲ್ಲವಾದರೆ ಬೆನ್ನು ನೋವು ಬಂದೀತು.) ಶರೀರದಲ್ಲಿ ಎಲ್ಲಿಯೂ ಬಿಗಿತನ ಇರಬಾರದು; ಎಲ್ಲ ಅಂಗಾಂಗಗಳು ಸಡಿಲವಾಗಿರಲಿ. ಅಂಗೈಗಳನ್ನು ತೊಡೆಯಲ್ಲಿ ಮೇಲ್ಮುಖವಾಗಿ ಇಟ್ಟುಕೊಳ್ಳಿ (ಯಾವುದೇ ಮುದ್ರೆ ಬೇಕಾಗಿಲ್ಲ.) ಕಣ್ಣುಗಳನ್ನು ಮುಚ್ಚಿಕೊಳ್ಳಿ. ಈಗ ನಿಮ್ಮ ನಾಲ್ಕು ಪಂಚೇದ್ರಿಯಗಳು ಧ್ಯಾನಕ್ಕೆ ಪೂರಕ.

ಐದನೆಯ ಪಂಚೇದ್ರಿಯವಾದ ಕಿವಿಯಿಂದ ಕೇಳುವ ಶಬ್ದಗಳನ್ನು ಅವಗಣನೆ ಮಾಡುತ್ತಾ ಇರಿ. ಕ್ರಮೇಣ ಅವುಗಳಿಂದ ನಿಮಗೆ ಕಿರಿಕಿರಿಯಾಗುವುದಿಲ್ಲ. ಹತ್ತು ಸಲ ದೀರ್ಘವಾಗಿ ಉಸಿರಾಟ ಮಾಡಿ. ಅನಂತರ, ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ. ಉಸಿರಾಟದ ವೇಗ, ಹೃದಯದ ಬಡಿತ ನಿಧಾನ ಆಗುತ್ತಿರುವುದನ್ನು ಗಮನಿಸಿ. ತದನಂತರ, ನಿಮ್ಮ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ. ತಂಪಾದ ಗಾಳಿ ಶ್ವಾಸಕೋಶಗಳಿಗೆ ಹೋಗುತ್ತಾ ಚೈತನ್ಯ ತುಂಬುವುದನ್ನು, ಬಿಸಿಯಾದ ಗಾಳಿ ಹೊರ ಬರುತ್ತಾ ದೇಹ ಹಗುರ ಎನಿಸುವುದನ್ನು ಅನುಭವಿಸಿ.

ನಿಧಾನವಾಗಿ ನಿಮ್ಮ ಯೋಚನೆಗಳನ್ನು ಗಮನಿಸಿ. ನೀವಾಗಿ ಯಾವುದೇ ಯೋಚನೆ ಹುಟ್ಟು ಹಾಕಬೇಡಿ, ಯಾವುದೇ ಯೋಚನೆ ಮುಂದುವರಿಸಬೇಡಿ, ಯಾವುದೇ ಯೋಚನೆಗೆ ಅಂಟಿಕೊಳ್ಳಬೇಡಿ. ಅದಾಗಿ ಬರುವ ಯೋಚನೆಗಳನ್ನು ಬಿಟ್ಟುಬಿಡಿ, ನೀವು ಬಾನಿನಲ್ಲಿ ಹಾರಿಸುತ್ತಿರುವ ಗಾಳಿಪಟದ ದಾರ ಬಿಟ್ಟು ಬಿಡುವಂತೆ. ಅದಕ್ಕಾಗಿ ಒಂದು ಕ್ಷಣ ನಿಮ್ಮ ಅಮ್ಮನ ಮುಖ ಅಥವಾ ಓಂ ಮಂತ್ರ ನೆನಪು ಮಾಡಿಕೊಳ್ಳಿ. ಹೀಗೆ ಪ್ರತಿಯೊಂದು ಯೋಚನೆಯನ್ನು ಅದರ ಪಾಡಿಗೆ ಅದು ಹಾದು ಹೋಗಲು ಅನುವು ಮಾಡಿಕೊಟ್ಟು, ವಾಪಾಸು ಉಸಿರಾಟದ ಲಯದ ಮೇಲೆ ಗಮನವಿರಿಸುತ್ತಾ ಇರಿ. ಬಹಳ ನಿಧಾನವಾಗಿ ಮನಸ್ಸಿನ ಆಳಕ್ಕೆ ಆಳಕ್ಕೆ ಇಳಿಯುತ್ತಾ, ಅಲ್ಲಿರುವ ಅಖಂಡ ಮೌನದಲ್ಲಿ ಒಂದಾಗಿ.

ಧ್ಯಾನದ ಮುಕ್ತಾಯ:
ಧ್ಯಾನವನ್ನು ನಿಧಾನವಾಗಿ ಪ್ರವೇಶಿಸಿದಂತೆ, ಧ್ಯಾನದಿಂದ ನಿಧಾನವಾಗಿ ಹೊರಬರಬೇಕು (ಒಮ್ಮೆಲೇ ಕಣ್ಣು ಬಿಟ್ಟು ಏಳಬಾರದು; ತಲೆಸುತ್ತು ಬಂದೀತು.) ಮನಸ್ಸು ನಿರಾಳವಾಗಿರುವುದನ್ನು ಒಮ್ಮೆ ಪೂರ್ತಿಯಾಗಿ ಅನುಭವಿಸಿ. ಸರಿಯಾಗಿ ಧ್ಯಾನ ಮಾಡಿದ್ದರೆ, ಅದರ ಫಲದ ಅನುಭವ ಆದೀತು. ಅದನ್ನು ನಿಮ್ಮ ವೈರಿಗಳಿಗೆ ಮತ್ತು ಅತ್ಯಂತ ಪ್ರೀತಿಯ ವ್ಯಕ್ತಿಗೆ ದಾನ ಮಾಡಿ, ಅವರ ಒಳಿತನ್ನು ಹಾರೈಸಿ. ಯಾವುದೇ ಒಳ್ಳೆಯ ಕೆಲಸ (ಕೇವಲ ನಿಮ್ಮ ಲಾಭಕ್ಕಾಗಿ ಅಲ್ಲ, ಸಮಾಜದ ಒಳಿತಿಗಾಗಿ) ಮಾಡಬೇಕೆಂದು ಯೋಜಿಸಿದ್ದರೆ, ಆ ಕೆಲಸ ಸಾಧಿಸುವ ಸಂಕಲ್ಪ ಮಾಡಿ.

ಅನಂತರ, ನಿಮ್ಮ ಅಂಗೈಗಳನ್ನು ಒಂದಕ್ಕೊಂದು ಉಜ್ಜಿಕೊಂಡು, ಕಣ್ಣುಗಳಿಗೆ ಒತ್ತಿಕೊಳ್ಳಿ; ಮೂರು ಸಲ ಹೀಗೆ ಮಾಡಿ. ಅದಾದ ನಂತರ, ಒಂದು ಕ್ಷಣ ಕಣ್ಣು ಬಿಟ್ಟು, ನಿಮ್ಮ ಸುತ್ತಲು ಎಲ್ಲವೂ ಚೆನ್ನಾಗಿರುವುದನ್ನು ಗಮನಿಸಿ. ತಕ್ಷಣ ಕಣ್ಣು ಮುಚ್ಚಿಕೊಂಡು, ನೀವು ಈಗಷ್ಟೇ ಕಂಡ ಚೆನ್ನಾಗಿರುವ ಪರಿಸರವನ್ನು ಒಂದು ನಿಮಿಷ ಅನುಭವಿಸಿ. ಅಂತಿಮವಾಗಿ, ಕಣ್ಣು ಬಿಡಿಸಿ, ನಿಧಾನವಾಗಿ ಎದ್ದು, ನಿಮ್ಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.

ಧ್ಯಾನ ನಿರಂತರ
ಧ್ಯಾನದ ಹಾದಿಯಲ್ಲಿ ಸಾಗುತ್ತಾ, ದಿನದಿನವೂ ನಾವು ಎಚ್ಚರವಾಗಿರುವ ೧೬ರಿಂದ ೧೮ ಗಂಟೆಗಳಲ್ಲಿ ಧ್ಯಾನದ ಸ್ಥಿತಿಯಲ್ಲೇ ಇರಲು ಅಭ್ಯಾಸ ಮಾಡಿಕೊಳ್ಳಬೇಕು. ಇದು ನಿಜವಾದ ಸಾಧನೆ. ಪ್ರತಿ ದಿನದ ೧೫ ನಿಮಿಷಗಳ ಧ್ಯಾನ ಈ ಸಾಧನೆಗೆ ಪ್ರವೇಶಿಕೆ ಮಾತ್ರ. ನಿರಂತರವಾಗಿ ಧ್ಯಾನ ಸ್ಥಿತಿಯಲ್ಲಿದ್ದರೆ ನಮ್ಮಲ್ಲಿ ನೆಮ್ಮದಿ ತುಂಬಿಕೊಳ್ಳುತ್ತದೆ. ಇದುವೇ ಸುಂದರ ಬದುಕಿನ ದಾರಿ.