ಧ್ಯಾನ ಮಾತು ಮತ್ತು ಧ್ವನಿ
*ರಾಜಗೋಪಾಲ್ ಎಂ. ಅವರ "ಧ್ಯಾನ, ಮಾತು ಮತ್ತು ಧ್ವನಿ"*
ಕರ್ನಾಟಕ ಸಂಘ (ಪುತ್ತೂರು- 574201, ದಕ್ಷಿಣ ಕನ್ನಡ ಜಿಲ್ಲೆ)ವು 2002ರಲ್ಲಿ ಪ್ರಕಾಶಿಸಿದ ಉಡುಪಿ ಹಿರಿಯಡಕದ ರಾಜಗೋಪಾಲ ಎಂ. ಅವರ " ಧ್ಯಾನ, ಮಾತು ಮತ್ತು ಧ್ವನಿ" , "ಹಿಮಾಲಯ - ಯಾತ್ರೆ - ಒಂದು ದರ್ಶನ" ಹಾಗೂ "ರಂಗಾಯಣದ ಗಾಂಧಿ" ಎಂಬ ಮೂರು ಲೇಖನಗಳ ಸಂಕಲನ, " ಧ್ಯಾನ, ಮಾತು ಮತ್ತು ಧ್ವನಿ". 4 + 60 ಪುಟಗಳ ಕೃತಿಯ ಬೆಲೆ 36 ರೂಪಾಯಿ.
"ಧ್ಯಾನವೆಂದರೆ, ಏಕಾಂತದಲ್ಲಿ ಕುಳಿತು, ಕಣ್ಣು ಮುಚ್ಚಿ ಏಕಾಗ್ರತೆಯಿಂದ ಯಾವುದೋ ಅಕ್ಷರವನ್ನೋ, ಆಕೃತಿಯನ್ನೋ, ಬೆಳಕನ್ನೋ ಕುರಿತು ಚಿಂತಿಸುವುದು ಮಾತ್ರ - ಎಂದಲ್ಲ. ತಾನು ನೋಡಲೇಬೇಕಾದ, ಅಧ್ಯಯಿಸಲೇಬೇಕಾದ ಚಿಂತಿಸಲೇಬೇಕಾದ, ಹಾಗೆ ಮಾಡದಿದ್ದರೆ ತನ್ನ ಇಡೀ ಇರುವಿಕೆಗೆ ಅರ್ಥವಿಲ್ಲ ಎಂದನ್ನಿಸುವ ಘಟನೆ ಎದುರಾದಾಗ ಒಬ್ಬ ಧೀಮಂತ ತನ್ನ ಇಡೀ "ಇರುವಿಕೆ'ಯನ್ನು ಅದರ ಮೇಲೆ ಕೇಂದ್ರೀಕರಿಸುತ್ತಾನೆ. ಈ ಕ್ರೀಯೆಯನ್ನು ತರ್ಕ, ಇಲ್ಲವೇ ಮನಃಶಾಸ್ತ್ರದಿಂದ ಸೆರೆ ಹಿಡಿಯಲಾಗುವುದಿಲ್ಲ. ಇತರ ಎಲ್ಲಾ ಅನಗತ್ಯ ಚಿಂತನೆಗಳನ್ನು ಬದಿಗೊತ್ತಿ ಆತ ಈ ಘಟನೆಯನ್ನೇ ಸರಕಾಗಿಸಿಕೊಂಡು, ಅತ್ಯಂತ ತುರ್ತಿನಿಂದ ಅತ್ಯಂತ ಆಳವಾಗಿ, ಕತ್ತಲನ್ನು ತಡವಿ, ಕೆಡವಿ ಸತ್ಯವನ್ನು ಕಂಡುಕೊಳ್ಳುತ್ತಾನೆ. ಇದರಲ್ಲಿ ಬೌದ್ಧಿಕ ಕಸರತ್ತು ಇರುವುದಿಲ್ಲ ; ತಾತ್ವಿಕ ತಾಕಲಾಟಗಳು ತಲೆ ಹಾಕುವುದಿಲ್ಲ. ಆದ್ದರಿಂದ, ದೊರಕುವ ಅನುಭವ, ಕಾಣ್ಕೆ, ಶುದ್ಧವಾಗಿರುತ್ತದೆ. ಯಾರ, ಯಾವುದರ ಹಂಗೂ ಇಲ್ಲದ ಈ ತೊಡಗುವಿಕೆಯೇ ಒಟ್ಟು ಬದುಕಿನ ಬಗ್ಗೆ ಲವಲವಿಕೆಯಿಂದ ಕೂಡಿರುತ್ತದೆ ; ಆತನಿಗೆ ಕೊನೆಗೆ ಶಾಂತಿಯನ್ನು ಕೊಡುತ್ತದೆ. ಆದರೆ ಒಟ್ಟಾರೆಯಾಗಿ ಈ ಕ್ರೀಯೆಗೆ ಅತ್ಯಧಿಕವಾದ ಮಾನಸಿಕ ಧಾರ್ಡ್ಯ ಅಗತ್ಯವಿರುತ್ತದೆ."
"ಧ್ಯಾನ, ಮಾತು ಮತ್ತು ಧ್ವನಿ" ಕೃತಿಯಲ್ಲಿ ಲೇಖಕರು ನೋಡಿದ, ಕಂಡ ಧ್ಯಾನ, ಮಾತು ಮತ್ತು ಧ್ವನಿ ಎಂತಹದ್ದು ಎಂಬುದನ್ನು ಓದುಗರು ಮೇಲಿನ ಅವರ ಮಾತುಗಳಿಂದ ಅರ್ಥಮಾಡಿಕೊಳ್ಳಬಹುದು. ಕೃತಿಯ ಮೊದಲ ಲೇಖನದಲ್ಲಿ ಲೇಖಕರ ಆಶಯದ ಧ್ಯಾನಿಸಿದ ವ್ಯಕ್ತಿತ್ವಗಳ ಧ್ಯಾನ, ಮಾತು ಮತ್ತು ಧ್ವನಿಗಳನ್ನು ನಮ್ಮೆದುರು ಆಪ್ತವಾಗಿ ಹರವಿ ಕೊಟ್ಟಿದ್ದಾರೆ.
ಲೇಖಕರು ಕಟ್ಟಿಕೊಟ್ಟ ಧ್ಯಾನದ ಶಕ್ತಿ , ಆಳ - ಅಗಲ ಅಗಾಧವಾದುದೇ. ಅದನ್ನು ಲೇಖಕರು ವಿಶದಪಡಿಸುವುದು ಈ ಕೆಳಗಿನಂತೆ:
"ಚಿಂತಿಸಬಲ್ಲ ಯಾವ ಮನುಷ್ಯನಿಗೂ ಅಂತಃಪ್ರಜ್ಞೆ ಇರುತ್ತದೆ. ಅದು ಒಂದು ಘಟನೆಯನ್ನು, ವಸ್ತುವನ್ನು, ವ್ಯಕ್ತಿಯನ್ನು, ಯೋಚನೆಯನ್ನು, ಪ್ರೀತಿಯಿಂದ, ವಿವೇಕದಿಂದ ನೋಡುತ್ತದೆ. ಅದು ಕೇವಲ 'ಭೌತಿಕ' ಮನುಷ್ಯನನ್ನಲ್ಲ, 'ವ್ಯಕ್ತಿ' ಯ ಇಡೀ ವ್ಯಕ್ತಿತ್ವವನ್ನು ಒಳಗೊಂಡಿರುತ್ತದೆ. ಧ್ಯಾನಿಸುವ ವ್ಯಕ್ತಿ, ತನ್ನ ಅಂತಃಸಾಕ್ಷಿಗೆ ಶರಣು ಹೋಗಲೇಬೇಕಾಗುತ್ತದೆ. ಆದ್ದರಿಂದ, ಅಂತಃಸಾಕ್ಷಿಗೆ ವಿರುದ್ಧ ಹೋದಾಗಲೆಲ್ಲ, ಅದು ನಮ್ಮನ್ನು ಎಚ್ಚರಿಸುತ್ತದೆ. ಆದ್ದರಿಂದ ಕೆಲವೊಮ್ಮ ಧ್ಯಾನ ನಮ್ಮೊಂದಿಗೆ ನಾವು ನಡೆಸುವ ಸಂವಾದವನ್ನು ಪ್ರತಿನಿಧೀಕರಿಸುತ್ತದೆ; ಮತ್ತು ನಮ್ಮ ನಿಜವಾದ ವ್ಯಕ್ತಿತ್ವದ ಧ್ವನಿಯಾಗುತ್ತದೆ".
"ಕ್ರಿಸ್ತ, ಗಾಂಧಿ - ಇಬ್ಬರೂ ಪ್ರಬುದ್ಧ ಚಿಂತಕರು, ಅಸಾಧಾರಣ ಧ್ಯಾನಿಗಳು ಮತ್ತು ತಮ್ಮ ಧ್ಯಾನಗಳಿಗೆ ದಕ್ಕಿದಷ್ಟನ್ನು ಸಮರ್ಥವಾಗಿ ಧ್ವನಿಯಾಗಿಸಿದವರು. ಹಾಗಾಗಿ ಅವರ ಭೀಕರ ಅಂತ್ಯಗಳಿಗೆ ಕಾರಣವಾದ ಸನ್ನಿವೇಶ ಮತ್ತು ಹಿನ್ನೆಲೆಗಳನ್ನು ಅದ್ಯಯಿಸುವುದೆಂದರೆ ಅವರ ಧ್ಯಾನಗಳನ್ನು ಆಲಿಸುವುದು ಮತ್ತು ಅವರ ಮಾತುಗಳನ್ನು ನಾವೇ ಧ್ಯಾನಿಸುವುದು" ಎಂದೆನ್ನುವ ರಾಜಗೋಪಾಲ್ ಎಂ. ಅವರು, ಮೇಲಿನ ಈ ಮಾತಿಗೆ ಪೂರಕವಾಗಿ ಕೆಳಗಿನಂತೆ ಇನ್ನೂ ಸ್ಪಷ್ಟಪಡಿಸುತ್ತಾ ಬರೆಯುತ್ತಾರೆ...
"ಒಬ್ಬನೇ ಆಳವಾಗಿ ಚಿಂತಿಸಿದರೆ, ಅದು ಧ್ಯಾನವಾಗುತ್ತದೆ; ಸಾಮೂಹಿಕವಾಗಿ ಚಿಂತಿಸಿದರೆ ಅದು ಒಂದು ಜನಾಂಗದ ಅಳಲಾಗುತ್ತದೆ. ಈ ಅಳಲು ಶಬ್ದಗಳಲ್ಲಿ ವ್ಯಕ್ತವಾದಾಗ ಅದು ಪ್ರಾರ್ಥನೆಯಾಗುತ್ತದೆ. ಪ್ರಾರ್ಥನೆಯ ಸ್ವರೂಪವನ್ನು ಮೂಲಭೂತವಾಗಿ ಅಧ್ಯಯಿಸಿದವರು ಕ್ರಿಸ್ತ ಮತ್ತು ಗಾಂಧಿ".
ಈ ಮೊದಲ ಮತ್ತು ಬಹಳ ಮಹತ್ವದ ಲೇಖನದಲ್ಲಿ ಪತಂಜಲಿ, ಪರಮಹಂಸ, ರಮಣ, ವ್ಯಾಸ, ಬೇಂದ್ರೆ, ಲೋಹಿಯಾ, ಕುಮಾರ ಗಂಧರ್ವ, ಅಭಿನವ ಗುಪ್ತ, ಅರವಿಂದ ಘೋಷ್, ಜೆಕೆ, ಲಂಕೇಶ್, ಗೋಪಾಲಕೃಷ್ಣ ಅಡಿಗ, ಮಂಡೇಲಾ, ಕೆ. ವಿ. ಸುಬ್ಬಣ್ಣ, ಡಾನ್ ವಾನ್, ಜೆನ್, ಲಿಂಕನ್, ಕಾಸ್ಟ್ರೋ, ಹೋಚಿಮಿನ್, ದಾಸ್ತೊವ್ ಸ್ಕಿ, ಮಾರ್ಕ್ವಿಸ್, ಪಿಕಾಸೊ, ಟಾಲ್ ಸ್ಟಾಯ್, ಶೇಕ್ಸ್ ಪಿಯರ್, ಮಿಲನ್ ಕುಂದೇರಾ, ಕನ್ಫೂಷಿಯಸ್, ಎರಿಕ್ ಫ್ರಾಮ್, ಕಾಫ್ಕಾ, ಏಲಿಯಟ್, " ಚೆ" ಗುವೆರಾ ಮೊದಲಾದವರ "ಧ್ಯಾನ, ಮಾತು ಮತ್ತು ಧ್ವನಿ"ಗಳನ್ನು ಗುರುತಿಸುವ ಅಮೋಘವೂ, ಅನನ್ಯವೂ ಆದ ಕೆಲಸವನ್ನು ಲೇಖಕರು ಮಾಡಿದ್ದಾರೆ.
ಲೇಖಕರಿಗಿರುವ ಅಪಾರವಾದ ಓದು ಮತ್ತು ಅವರ ವಿಶಾಲವೂ, ವಿಶಿಷ್ಟವೂ ಆದ ದೃಷ್ಟಿಕೋನದ ಪರಿಚಯವೂ ಇಲ್ಲಿ ಸ್ಪಷ್ಟವಾಗಿ ಓದುಗರಿಗೆ ಗೋಚರಿಸುತ್ತದೆ.
ಎರಡನೆಯ ಲೇಖನ " ಹಿಮಾಲಯ - ಯಾತ್ರೆ - ಒಂದು ದರ್ಶನ". ಸಾಮಾನ್ಯ ಪ್ರವಾಸಿಗರು ನೋಡುವ ಹಿಮಾಲಯದ ಪ್ರವಾಸ ಕಥನವಲ್ಲ ಇದು. ರಾಜಗೋಪಾಲ್ ರವರನ್ನು ಹತ್ತಿರದಿಂದ ನೋಡಿದವರಿಗೆ ಮತ್ತು ಇವರ ಇತರ ಕೃತಿಗಳನ್ನು ಓದಿದವರಿಗೆ ರಾಜಗೋಪಾಲ್ ರವರ ವ್ಯಕ್ತಿತ್ವ ತಿಳಿದಿರಲು ಸಾಧ್ಯ. ಉಳಿದವರಿಗೆ ಈ ಲೇಖನವನ್ನು ಓದಿದರೆ ಮಾತ್ರ ರಾಜಗೋಪಾಲ್ ರವರದು ಹಿಮಾಲಯ ಯಾತ್ರೆ ಅಲ್ಲ, ದರ್ಶನ ಎಂಬುದು ಮನದಟ್ಟಾಗಲು ಸಾಧ್ಯ.
ನನ್ನ ಮೇಲಿನ ಮಾತಿಗೆ ಪೂರಕವಾಗಿದೆ, ಅವರ ಈ ಕೆಳಗಿನ ಮಾತುಗಳು. "ಸುಮಾರು ಇಪ್ಪತ್ತು ವರ್ಷಗಳಿಂದ ಅನೂಚಾನವಾಗಿ ಹಿಮಾಲಯದ ತಪ್ಪಲುಗಳನ್ನು, ಬೆಟ್ಟಗಳನ್ನು, ಕಣಿವೆಗಳನ್ನು ಸಮಯ ಸಿಕ್ಕಾಗಲೆಲ್ಲ ಸುತ್ತುತ್ತಿರುವ ನನಗೆ ನನ್ನ ಯಾವ ಯಾನವೂ ಮೇಲೆ ವಿವರಿಸಿದ ಒಂದು ಯಾತ್ರೆಯ ಪರಿಧಿಯಲ್ಲಿ ಸೇರುವಂತೆ ತೋರುತ್ತಿಲ್ಲ. ಇದಕ್ಕಾಗಿ ನಾನು ಅದನ್ನು ಒಂದು ದರ್ಶನವೆಂದು ಹೆಸರಿಸಿದ್ದೇನೆ. ಬಾಹ್ಯವಾಗಿ ನಮ್ಮ ಕಣ್ಣುಗಳಿಗೆ ತೋರುವಂಥದ್ದು ಮಾತ್ರವಲ್ಲದೆ, ಅದರ ಬಗ್ಗೆ ನಾವು ಯೋಚಿಸಿದಾಗ ನಮಗೆ ಹೊಳೆದು ಬಿಡುವ ಅರ್ಥಗಳು, ಓದಿನಿಂದ ಬರುವ ಪರಿಕರಗಳು, ಸ್ಥಳೀಯರೊಂದಿಗೆ ಮಾತುಕತೆಯೊಂದಿಗೆ ಪ್ರಕಾಶಕ್ಕೆ ಬರುವ ಸತ್ಯದ ಎಳೆಗಳು, ಪ್ರಕೃತಿ ತಾನಾಗಿ ವ್ಯಕ್ತಪಡಿಸುವ ಭಾವಗಳು - ಎಲ್ಲವೂ ಸೇರಿಕೊಂಡಿವೆ".
ನಿತ್ಯ ನಿರಂತರ 'ಧ್ಯಾನಿ' ಯೇ ಆಗಿರುವ ರಾಜಗೋಪಾಲ್ ಎಂ. ಅವರು ಹಿಮಾಲಯವನ್ನು ದರ್ಶಿಸಿ ಎರಡು ಕೃತಿಗಳನ್ನು ಬರೆದಿದ್ದಾರೆ. ಈ ಎರಡು ಕೃತಿಗಳಿಗಿಂತ ಮೊದಲು ಬಂದ ಕೃತಿಯೇ ಇಲ್ಲಿ ನಮ್ಮ ಮುಂದಿರುವ ಕೃತಿ.
ಹಿಮಾಲಯದ ಎಲ್ಲಾ ಮಗ್ಗುಲುಗಳನ್ನು ಪ್ರೀತಿ ಮತ್ತು ಶ್ರದ್ಧೆಯಿಂದ ಸ್ಪರ್ಶಿಸಿರುವ ರಾಜಗೋಪಾಲ್ ರವರು, ಆ ಸ್ಪರ್ಶ ಮಾತ್ರದಿಂದ ಹಿಮಾಲಯದ ಪ್ರಕಾಶವನ್ನು ಮತ್ತು ಪ್ರಭುತ್ವ ಸೃಷ್ಟಿಸಿದ , ಸೃಷ್ಟಿಸುತ್ತಿರುವ ಕತ್ತಲೆಯನ್ನು ತಮ್ಮ ಈ ಲೇಖನದ ಮೂಲಕ ಅನಾವರಣಗೊಳಿಸಿದ್ದಾರೆ.
"ಒಂದು ನಿರ್ಧಿಷ್ಟ ಜಾಗವನ್ನು ಸಂದರ್ಶಿಸುವುದೆಂದರೆ, ಅಲ್ಲಿನ ಇತಿಹಾಸವನ್ನು, ಅಲ್ಲಿನ ಜನರನ್ನು, ಅವರ ಸಮಸ್ಯೆಗಳನ್ನು, ಅವರ ತತ್ವಗಳನ್ನು ತಟ್ಟುವುದು; ಅವರ ಸಮಸ್ಯೆಗಳನ್ನು ತನ್ನದಾಗಿಸುವುದು, ಪ್ರತಿಕ್ರಿಯಿಸುವುದು, ತನ್ನ ಪಾಲಿಗೆ ದಕ್ಕಿದಷ್ಟನ್ನು ತನ್ನ ಸತ್ಯವಾಗಿಸುವುದು. ಆದ್ದರಿಂದ ಪ್ರಕೃತಿಯನ್ನು, ಜನರನ್ನು ತನ್ನ ಒಳಿತಿಗೆ ಹೇಗೆ ಉಪಯೋಗಿಸಬಹುದು ಎನ್ನುವುದು ಸಾಮಾನ್ಯ ಟೂರಿಸ್ಟರ ಚಿಂತನೆಯಾದರೆ ಜನರೊಂದಿಗೆ ಬೆರೆತು ದೊರಕಿದ ಅನುಭವವನ್ನು, ತನ್ನೊಳಗಿನ ತನ್ನನ್ನು ತಿಳಿಯಲು ಉದ್ಧೇಶಿಸುವ, ಧ್ಯಾನವೇ ಋಷಿಯ ಧ್ಯೇಯವಾಗುತ್ತದೆ" ಎನ್ನುವ ಲೇಖಕರ ಮಾತು ಈ ಲೇಖನದ ಮೂಲಕ ಧ್ವನಿಯಾಗಿದೆ.
ಮೂರನೆಯದು 'ರಂಗಾಯಣ'ವು ಪ್ರದರ್ಶಿಸಿದ ಮತ್ತು ಪ್ರದರ್ಶಿಸುತ್ತಿರುವ " ಗಾಂಧಿ ವರ್ಸಸ್ ಗಾಂಧಿ" ನಾಟಕದ ಕುರಿತಾದ ಲೇಖನ. ಈ ಲೇಖನ ವಿಮರ್ಶಾ ಲೋಕಕ್ಕೆ ರಾಜಗೋಪಾಲ್ ರವರ ಒಂದು ವಿಶಿಷ್ಟ ಕಾಣ್ಕೆಯಾಗಿದೆ.
ರಾಜಗೋಪಾಲ್ ಎಂ. ರವರ ಯಾವುದೇ ಕೃತಿ ಇರಲಿ, ಓದಿದವನಿಗೆ ಅಲ್ಲಿ ಸಿಗುವುದು ಒಂದು ಅಪರೂಪದ, ಆನಂದದ ಅನುಭೂತಿ.
~ *ಶ್ರೀರಾಮ ದಿವಾಣ* ಉಡುಪಿ