ನಂಗೆ ಮತ್ತೆ ಅಳು ಬರ್ತಾ ಇದೆ...

ನಂಗೆ ಮತ್ತೆ ಅಳು ಬರ್ತಾ ಇದೆ...

" ನಾನು ........ನಾನು .........ನಿಶ್ಚಲ .....ಅಂತ, ಒಂದನೇ ಕ್ಲಾಸ್ ತನಕ ಓದ್ತಿದೀನಿ. ನಂಗೆ.....ನಂಗೆ  ಈವಾಗ ಆರು ವರ್ಷ ವಯಸ್ಸು. ನಂಗೆ.....ನಂಗೆ......ದಿನಾ ಅಳು ಬರುತ್ತೆ. ಯಾವಾಗಲೂ ಅಳ್ತಾನೇ ಇರ್ತೀನಿ. ಸ್ಕೂಲಲ್ಲಿ ಫ್ರೆಂಡ್ಸ್ ಎಲ್ಲಾ ಇದ್ರೂ ಅಳು ಮಾತ್ರ ಬರ್ತಾನೆ ಇರುತ್ತೆ. 

ಯಾಕೆ ಗೊತ್ತಾ. ನಂಗೆ.....ನಂಗೆ.......ತುಂಬಾ ತುಂಬಾ ಕಷ್ಟ ಇದೆ. ಅಮ್ಮ ಹೇಳ್ತಾಳೆ. ಕಷ್ಟ ಬಂದ್ರೆ ದೇವ್ರನ್ನ ಬೇಡ್ಕೋ ದೇವ್ರೇ ಎಲ್ಲಾ ಸರಿ ಮಾಡ್ತಾನೆ ಅಂತ. ನಾನು .....ನಾನು .....ದೇವ್ರನ್ನ ಬೇಡ್ಕೊಂಡೆ. ಸರಿ ಮಾಡಲೇ ಇಲ್ಲ. ಅದ್ಕೆ .....ಅದ್ಜೆ .....ಅಂಕಲ್, ಆಂಟಿ ನಿಮಗೆ ಕೇಳ್ತಿದೀನಿ. ಅಪ್ಪಾ ಅಮ್ಮಾ ಆಗೋದು ದಿನಾ ಜಗಳ ಆಡೋಕಾ. ಇಬ್ಬರು...... ಇಬ್ಬರು.......... ಫೈಟಿಂಗ್ ಮಾಡೋಕಾ. .....ಆಮೇಲೆ ಪಕ್ಕದ್ಮನೇವ್ರು ಬಂದು ಬಿಡಸ್ಬೇಕಾ.

ಅವೊತ್ತೊಂದಿನ ಪೋಲಿಸ್ ಅಂಕಲ್ ಬಂದು ಬಿಡಿಸಿದ್ರು, ನಮ್.....ನಮ್.....ಟೀಚರ್ ಹೇಳ್ತಾರೆ....ದೊಡ್ಡೋರಾದ್ಮೇಲೆ ಬುದ್ದಿ ಬರುತ್ತೆ ಅಂತಾ....ಹಂಗಾದ್ರೆ ನಮ್ಮಪ್ಪಾಅಮ್ಮಂಗೆ ಬುದ್ಧಿ ಬಂದಿಲ್ವಾ ..ಅಪ್ಪ ಯಾರೋ ಅಂಟಿ ಜೊತೆ ಮಾತಾಡ್ತಾರೆ ಅಂತ ಅಮ್ಮ ದಿನಾ ಜಗಳ ಮಾಡ್ತಾರೆ ......ಅಮ್ಮ ತಾತನ ಮನೆಯಿಂದ ಅಪ್ಪನ ಬಿಸಿನೆಸ್ ಗೆ ದುಡ್ಡು ತರ್ಲಿಲ್ಲ ಅಂತ ಜಗಳ ಮಾಡ್ತಾರೆ. 

ದಿನಾ ಇದನ್ನೇ ನೋಡಿ...ನೋಡಿ ....ನಂಗೆ ಅಳು ಬರ್ತಾನೆ ಇರುತ್ತೆ. ಒಂದಿನ.....ಒಂದಿನ......ಟಿವಿಯಲ್ಲಿ ನೋಡ್ದೆ. ಪುಟ್ಡ ಬೇಬಿನ ಅವರಪ್ಪ ಅಮ್ಮ ಜೋಕಾಲಿ ಆಡುಸ್ತಾ....ಆಡುಸ್ತಾ ......  ಚಂದಮಾಮ ಕಥೆ ಹೇಳ್ತಾ ...... ಹೇಳ್ತಾ .......... ಚಾಕಲೇಟ್ ತಿನ್ನುಸ್ತಾ ಇದ್ರು......ನಂಗೂ ನಮ್ಮಪ್ಪಾಅಮ್ಮ ಹಂಗೇ ಆಡಿಸ್ಬೇಕು ಅಂತ ಇಷ್ಟ. ಆದ್ರೆ......ಆದ್ರೆ......ಅವರು ದಿನಾ ಜಗಳಾನೇ ಆಡ್ತಿರ್ತಾರೆ.... 

ಅದೂ ಅಲ್ದೆ .....ಇಬ್ಬರೂ ಜಗಳಾ ಆಡ್ದಾಗ ಬೇರೆಯವರೆಲ್ಲಾ ಬಂದು ನಿಂಗೆ....ನಿಂಗೆ ಅಪ್ಪಾ ಬೇಕಾ.....ಅಮ್ಮಾ ಬೇಕಾ......ಅಂತ ಕೇಳ್ತಾರೆ. ಆಗಾ ನಂಗೆ ಜಾಸ್ತಿ....ಜಾಸ್ತಿ....ಅಳು ಬರುತ್ತೆ. ನಂಗೆ....ನಂಗೆ ಇಬ್ರೂ ಬೇಕು.ಆದ್ರೆ ಇಬ್ರೂ ಸಿಕ್ತಾಇಲ್ಲ. ಅಜ್ಜಿ ಹೇಳ್ತಾಳೆ ಎಲ್ಲಾರ್ ಮನೇಲೂ ಇದೇ ಗೋಳು ಅಂತ.

ಆಂಟಿ, ಅಂಕಲ್ ನಿಮ್ಮನೇಲೂ ಜಗಳಾ ಆಡ್ತೀರಾ. ನಿಮ್ ಮಗೂನು ಹಿಂಗೇ ಅಳುತ್ತಾ ....ನಂಗೇ ಮತ್ತೆ ಅಳು ಬರ್ತಾ ಇದೆ......

ದೇವ್ರನ್ನ ಕೇಳ್ಕೋತೀನಿ .....ದೇವ್ರೆ ದೇವ್ರೇ ನನ್ನ .....ನನ್ನ ......ಯಾವೊತ್ತೂ ದೊಡ್ಡದಾಗಿ ಮಾಡಬೇಡ. ನಾನು ಮಗುವಾಗೇ ಇರ್ತೀನಿ .... ದೊಡ್ಡೋರಾದ್ರೆ ಜಗಳಾ ಮಾಡ್ತಾನೇ ಇರ್ಬೇಕಾಗುತ್ತೆ ...... ಹೂಂ.....ಹೂಂ....ಹೂಂ....ಹೂಂ.......ಹೂಂ.....

Sorry ...

  • ಜ್ಞಾನ ಭಿಕ್ಷಾ ಪಾದಯಾತ್ರೆಯ  229 ನೆಯ ದಿನ ದಾವಣಗೆರೆ ನಗರದಿಂದ ಸುಮಾರು ‌27 ಕಿಲೋಮೀಟರ್ ದೂರದ ಹೆಮ್ಮನ ಬೈತೂರು ಗ್ರಾಮ ತಲುಪಿ, ಅಲ್ಲಿ ವಾಸ್ತವ್ಯ ಹೂಡಿದ ಸಂದರ್ಭದಲ್ಲಿ ಬರೆದ ಲೇಖನ ಇದು..

ಮುಂದಿನ ದಾರಿ ಚಿತ್ರದುರ್ಗ ಜಿಲ್ಲೆಯ ಮಾರ್ಗಸೂಚಿ.

ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು, ಚಿತ್ರದುರ್ಗ ನಗರ, ಹೊಳಲ್ಕೆರೆ, ಹೊಸದುರ್ಗ, ಸಾಣೇಹಳ್ಳಿ ಅಜ್ಜಂಪುರ ( ಚಿಕ್ಕಮಗಳೂರು ಪ್ರವೇಶ )

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ