ನಂದಿನಿ ಮತ್ತು ಅಮುಲ್...
ಧರ್ಮದ ಅಮಲಿನಲ್ಲಿ ಬದುಕಿಗೇ ಬೆಂಕಿ ಹಚ್ಚಿಕೊಳ್ಳುವುದು ಬೇಡ. ರಾಜಕೀಯ ಎಂಬುದು ಸಮಾಜದ ಕ್ರಮಬದ್ಧ ಮುಂದುವರಿಕೆಯ ಒಂದು ಭಾಗ ಮಾತ್ರ. ಚುನಾವಣೆಗಳು ನಮ್ಮ ನಡುವಿನ ಕೇವಲ 15 ದಿನಗಳ ಒಂದು ಸ್ಪರ್ಧೆ ಮಾತ್ರ. ಪಕ್ಷಗಳು ಒಂದು ಸೈದ್ಧಾಂತಿಕ ಸಂಘಟನೆಗಳು ಮಾತ್ರ. ಆದರೆ ಆ ನೆಪದಲ್ಲಿ ನಮ್ಮ ಸ್ವಾಭಿಮಾನ, ಸಂಸ್ಕೃತಿ, ಬದುಕಿನ ಕ್ರಮವನ್ನೇ ನಿಯಂತ್ರಣ ಪಡೆಯುವ ಎಲ್ಲಾ ಪ್ರಯತ್ನಗಳನ್ನು ನಮಗೆ ನೇರವಾಗಿ ಸಂಬಂಧಿಸಿರದಿದ್ದರೂ ಅದನ್ನು ಬಹಿರಂಗವಾಗಿ ವಿರೋಧಿಸಲೇ ಬೇಕು.
ಸ್ವಾತಂತ್ರ್ಯ ಚಳವಳಿ, ಭ್ರಷ್ಟಾಚಾರದ ವಿರುದ್ಧ ಹೋರಾಟ, ಜಾತಿ ಪದ್ದತಿಯ ನಿರ್ಮೂಲನಾ ಆಂದೋಲನ ಎಲ್ಲವೂ ಈ ಪರಿಧಿಯಲ್ಲಿ ಬರುತ್ತದೆ. ಇದೀಗ ಕೇಂದ್ರದ ಸಚಿವರೊಬ್ಬರು ಸಹಕಾರ ತತ್ವದ ಅಡಿಯಲ್ಲಿ ಗುಜರಾತಿನ ಹಾಲು ಒಕ್ಕೂಟದ ಜೊತೆ ಕರ್ನಾಟಕ ಹಾಲು ಮಹಾ ಮಂಡಲವನ್ನು ವಿಲೀನಗೊಳಿಸಿ ಬೃಹತ್ ಶಕ್ತಿ ಕೇಂದ್ರ ಸ್ಥಾಪಿಸಿ ವ್ಯಾಪಾರ ವಹಿವಾಟು ವಿಸ್ತರಿಸುವ ಮಾತನ್ನಾಡಿದ್ದಾರೆ. ಅವರಿಗಿರುವ ಜನಪ್ರಿಯತೆ ಮತ್ತು ರಾಜಕೀಯ ಶಕ್ತಿಯ ಕಾರಣ ಅದನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರುವ ಸಾಧ್ಯತೆಯೂ ಇದೆ ನಾವು ಮೌನವಾಗಿದ್ದರೆ.
ಈಗಾಗಲೇ ಆರ್ಥಿಕ - ವ್ಯಾವಹಾರಿಕ ಕೇಂದ್ರಿತ ಅಭಿವೃದ್ಧಿಯ ಸಮಾಜದಿಂದಾಗಿ ದೇಹ ಮನಸ್ಸುಗಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ನೋಡುತ್ತಿದ್ದೇವೆ. ಮಣ್ಣಿನ ಸಹಜ ಸ್ವಾಭಾವಿಕ ಬದುಕನ್ನು ನಿರ್ಲಕ್ಷಿಸಿ ಅನ್ಯ ಸಂಸ್ಕೃತಿಯ ಕೃತಕ ಹಣ ಕೇಂದ್ರಿತ ಬದುಕಿನ ಪ್ರಭಾವಕ್ಕೆ ಒಳಗಾಗಿ ದುರಂತ ಜೀವನದತ್ತ ಸಾಗುತ್ತಿದ್ದೇವೆ. ಹಣ ಬದುಕಿನ ಸಂತೃಪ್ತಿಯ ಒಂದು ಸಾಧನ ಮಾತ್ರ. ಅದು ಸದಾ ಮನುಷ್ಯನ ನಿಯಂತ್ರಣದಲ್ಲಿ ಇರಬೇಕು. ಆದರೆ ಈಗ ಹಣವೇ ಮನುಷ್ಯನನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಮನುಷ್ಯ ಹಣದ ಜೀತದಾಳಾಗಿದ್ದಾನೆ.
ನಂದಿನಿ ಎಂಬ ಹೆಸರಿನ ಉತ್ಪನ್ನಗಳ ಹಾಲು ಮಹಾ ಮಂಡಲದ ವಿಲೀನದ ಸುದ್ದಿಯ ಸನ್ನಿವೇಶದಲ್ಲಿ ಅದು ಕರ್ನಾಟಕದ ಜನಜೀವನದಲ್ಲಿ ಹಾಸು ಹೊಕ್ಕಾಗಿರುವುದರ ಬಗ್ಗೆ ಸ್ವಲ್ಪ ಮಾಹಿತಿ.
ಕೆ ಎಂ ಎಫ್. ಮತ್ತು ಕೃಷಿಕರು ಕಟ್ಟಿಕೊಂಡ ಬದುಕು. ನಿಜಕ್ಕೂ ಒಂದು ಇಡೀ ಸಮುದಾಯವನ್ನು - ಪೀಳಿಗೆಯನ್ನು ಸಾಕಿ ಸಲುಹಿ ಅವರ ಶಿಕ್ಷಣ ಆರೋಗ್ಯ ವಸತಿ ಮದುವೆಗಳಿಗೆ ಸಾಕಷ್ಟು ಕೊಡುಗೆ ನೀಡಿ ನಿರುದ್ಯೋಗ ಸಮಸ್ಯೆಯ ಮೇಲಿನ ಒತ್ತಡ ಕಡಿಮೆ ಮಾಡಿ ಈ ಕ್ಷಣಕ್ಕೂ ಇರುವುದರಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕದ ಕಾಮಧೇನು ಕರ್ನಾಟಕ ಹಾಲು ಮಹಾ ಮಂಡಲ. ಬಹುಶಃ ರೈತ ಆತ್ಮಹತ್ಯೆಗಳು ಇನ್ನಷ್ಟು ನಿಯಂತ್ರಣ ಮೀರಿ ಹೋಗದಿರಲು ಕಾರಣ ಈ ಕ್ರಮಬದ್ಧ ಹೈನುಗಾರಿಕೆ ಎಂದು ನಿಸ್ಸಂಶಯವಾಗಿ ಹೇಳಬಹುದು.
ಗ್ರಾಮೀಣ ಬದುಕಿನ ಬಡತನದ ನಿವಾರಣೆಯಲ್ಲಿ ಈ ಸಂಸ್ಥೆಯ ಪಾತ್ರ ಅತ್ಯಂತ ಮಹತ್ವದ್ದು. ಅದರಲ್ಲೂ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಣೆಯಲ್ಲಿ ಕೆ ಎಂ ಎಫ್ ಅನ್ನು ಮರೆಯಲು ಸಾಧ್ಯವೇ ಇಲ್ಲ. ಎಷ್ಟೊಂದು ಜನ ಹಸು ಕಟ್ಟಿಕೊಂಡು ಮಕ್ಕಳನ್ನು ಓದಿಸುತ್ತಿದ್ದಾರೆ, ಎಷ್ಟೊಂದು ಜನ ಇದರಲ್ಲಿ ಸಂಪಾದಿಸಿದ ಹಣದಿಂದ ಮನೆಕಟ್ಟಿಕೊಂಡಿದ್ದಾರೆ, ಎಷ್ಟೊಂದು ಜನ ಇದರಿಂದಾಗಿ ತಮ್ಮ ಮಕ್ಕಳಿಗೆ ಮದುವೆ ಮಾಡಿದ್ದಾರೆ ಎಂಬುದನ್ನು ಗಮನಿಸಿದಾಗ ಅದರ ಬಗ್ಗೆ ಹೆಮ್ಮೆಯಾಗುತ್ತದೆ.
ಹಾಲಿನ ಬೆಲೆಯಲ್ಲಿ ಮೂಲ ರೈತರಿಗೆ ಸ್ವಲ್ಪ ಕಡಿಮೆ ಹಣ ಪಾವತಿಯಾಗುತ್ತಿರುವುದು ನಿಜ. ಆದರೆ ಹಾಲಿನ ಗುಣಮಟ್ಟ, ಹಾಲು ಉತ್ಪಾದಕರಿಗೆ ಸಮಯಕ್ಕೆ ಸರಿಯಾಗಿ ಹೆಚ್ಚಿನ ಮೋಸವಿಲ್ಲದೆ ಕ್ರಮಬದ್ಧ ಹಣ ಪಾವತಿ, ಇಡೀ ರಾಜ್ಯದ ಜನರಿಗೆ ಸಮಯಕ್ಕೆ ಸರಿಯಾಗಿ ಹಾಲು ತಲುಪಿಸುವ ವ್ಯವಸ್ಥೆ, ಹಾಲಿನ ಇನ್ನಿತರ ಅತ್ಯಂತ ರುಚಿಕರವಾದ ಮತ್ತು ಪೌಷ್ಟಿಕಾಂಶ ಭರಿತ ಉತ್ಪನ್ನಗಳು ಹೀಗೆ ಒಂದು ದೊಡ್ಡ ಸಾಧನೆ ಹಾಲು ಮಹಾ ಮಂಡಲ ಮಾಡಿದೆ ಮತ್ತು ಮಾಡುತ್ತಲಿದೆ.
ಸರ್ಕಾರದ ಸ್ವಾಯತ್ತ ಸಂಸ್ಥೆಯಾದ್ದರಿಂದ ರಾಜಕೀಯ, ಭ್ರಷ್ಟಾಚಾರ, ಅವ್ಯವಹಾರ ಎಲ್ಲವೂ ಸ್ವಲ್ಪ ಪ್ರಮಾಣದಲ್ಲಿ ಇದ್ದರೂ ಒಟ್ಟಾರೆಯಾಗಿ ಕೆಳ ಮಧ್ಯಮ ವರ್ಗದ ಜನರಿಗೆ ಈಗಲೂ ಆಶಾಕಿರಣವಾಗಿರುವುದು ವಾಸ್ತವಿಕ ಸತ್ಯ. ಕೆಲವು ಬರಗಾಲ ಪೀಡಿತ ಪ್ರದೇಶಗಳು ಸೇರಿ ರಾಜ್ಯದ ಬಹುತೇಕ ಭಾಗಗಳಲ್ಲಿ ಈ ಪಶುಸಂಗೋಪನೆ ಅನೇಕ ಜನರ ಜೀವನಾಧಾರ ಎಂಬುದನ್ನು ಗಮನಿಸಿ ಒಮ್ಮೆ ನಿಮ್ಮ ಗಮನಕ್ಕೆ ತರುವ ಒಂದು ಸಣ್ಣ ಪ್ರಯತ್ನ.
ಅಧಿಕಾರದ ಕೇಂದ್ರೀಕರಣ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ. ಅದನ್ನು ಮೇಲುಸ್ತುವಾರಿ ಮಾಡುವುದು ಸಹ ಕಷ್ಟ. ಅಪಾಯದ ಸಾಧ್ಯತೆಗಳು ಹೆಚ್ಚು. ಆದರೆ ಕೆಲವು ವ್ಯಕ್ತಿಗತ ನ್ಯೂನತೆಗಳ ನಡುವೆಯೂ ವಿಕೇಂದ್ರೀಕರಣ ಸಾಮಾನ್ಯ ಜನರ ಜೀವನಮಟ್ಟ ಸುಧಾರಣೆಯ ದೃಷ್ಟಿಯಿಂದ ಅತ್ಯಂತ ಉಪಯುಕ್ತ ಆಡಳಿತ ವ್ಯವಸ್ಥೆ. ಜೊತೆಗೆ ಒಂದು ವೇಳೆ ಹಾಲು ಒಕ್ಕೂಟಗಳ ಕೇಂದ್ರೀಕರಣದಿಂದ ರೈತರಿಗೆ ದೂರದೃಷ್ಟಿಯಿಂದ ಅತ್ಯಂತ ಲಾಭದಾಯಕ ಎಂಬುದು ನಿಜವೇ ಆಗಿದ್ದರೆ ಅದನ್ನು ಆ ಕ್ಷೇತ್ರದ ತಜ್ಞರು ಹೇಳಬೇಕು. ಯಾವುದೋ ಪಕ್ಷದ ರಾಜಕಾರಣಿಯಲ್ಲ ಅಥವಾ ಮಂತ್ರಿಯಲ್ಲ.
ಸಾಮಾನ್ಯ ಜ್ಞಾನದಿಂದ ನೋಡುವುದಾದರು ಒಂದು ಸಂಸ್ಥೆ ಯಶಸ್ವಿಯಾಗಿ ನಡೆಯುತ್ತಿರುವಾಗ ಅನೇಕ ಜನರ ಜೀವನಾಧಾರ ಆಗಿರುವಾಗ ಅನಾವಶ್ಯಕವಾಗಿ ಅದನ್ನು ಕೆದಕಿ ಇಲ್ಲದ ಅಪಾಯಕ್ಕೆ ನೂಕುವುದು ಏಕೆ. ನಂದಿನಿ ಪಾಲಿಗೆ ಅದನ್ನು ಬಿಡಿ. ಅಮುಲ್ ಪಾಡಿಗೆ ಅದನ್ನು ಬಿಡಿ. ಸಮಸ್ಯೆ ಬಂದಾಗ ಪರಿಹರಿಸೋಣ ಅಥವಾ ಸಮಸ್ಯೆ ಇರುವ ಸಂಸ್ಥೆಯನ್ನು ಸರಿಪಡಿಸೋಣ. ಅದು ಬಿಟ್ಟು ಯಾವುದೋ ಒಳ ಉದ್ದೇಶದಿಂದ ದಯವಿಟ್ಟು ರಾಜಕೀಯ ನಿರ್ಧಾರ ಮಾಡಿ ನಮ್ಮನ್ನು ತೊಂದರೆಗೆ ಸಿಲುಕಿಸಬೇಡಿ. ಕರ್ನಾಟಕದ ಜನರು ಸಹ ಮೌನವಾಗಿದ್ದು ರಾಜಕೀಯ ಕಾರಣಗಳಿಗಾಗಿ ಒಂದು ಯಶಸ್ವಿ ಸಂಸ್ಥೆಯನ್ನು ಬಲಿಕೊಡಬೇಡಿ.
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ