ನಂಬಿಕೆಯೆನ್ನುವ ಮೂಲ ಮಂತ್ರ

ನಂಬಿಕೆಯೆನ್ನುವ ಮೂಲ ಮಂತ್ರ

ಇತ್ತೀಚಿನ ದಿನಗಳಲ್ಲಿ ದುಬಾರಿಯಾದ ವಸ್ತುವೆಂದರೆ ಅದು ನಂಬಿಕೆ ಮಾತ್ರ. ಮೊದಲು ಮನುಷ್ಯನ ಮಾತಿನ ಮೇಲೆ, ಅವನ ಕೆಲಸದ ಮೇಲೆ, ಕೊಟ್ಟ ಸಾಲದ ಮೇಲೆ ಹೀಗೆಲ್ಲ ನಂಬಿಕೆಯಿಂದಲೇ ಕೆಲಸ ಸಾಗುತ್ತಿತ್ತು. ಇದು ಮೊದಲು ಕಳೆದುಕೊಂಡಾಗ ಮನೆಯಲ್ಲಿ ಸಾಕು ಪ್ರಾಣಿಯಾಗಿ ನಾಯಿ ಹುಟ್ಟಿಕೊಂಡಿತು, ನಂತರದ ದಿನಮಾನಗಳಲ್ಲಿ ವಾಚಮನ್ ಹುಟ್ಟಿಕೊಂಡ, ಬರಬರುತ್ತ ಇವೆರಡನ್ನು ಬಿಟ್ಟು ಈಗ ಸಿಸಿಟಿವಿಯ ಮೇಲೆ ಅತೀವ ನಂಬಿಕೆ ಬಂದಿದೆ.

ನಂಬಿಕೆಯು ಕನ್ನಡಿಯಂತಿರಬೇಕು ಅದು ಒಡೆದುಹೋದರೆ ಮರಳಿ ಕೂಡಿಸಲು ಸರ್ವತಃ ಸಾಧ್ಯವಿಲ್ಲ. ಅದರಲ್ಲಿ ಬಿಂಬ ಕಾಣಬಹುದು ಮೊದಲಿನ ಸ್ಥಿತಿ ಕಾಣುವುದು ಅಸಾಧ್ಯ. ನಂಬಿಕೆಯೆ ದೇವರು ಎಂದು ಕೆಲವು ಅನುಭವಿಕರು ಹೇಳುತ್ತಾರೆ. ಆದರೆ ಅದನ್ನು ಎಂದು ಪ್ರಾಮಾಣಿಕರಾದವರು ಕಳೆದುಕೊಳ್ಳಬಾರದು. ಜೀವ ಹೋದರೂ ಚಿಂತೆಯಿಲ್ಲ ಇದನ್ನು ಉಳಿಸಿಕೊಳ್ಳಬೇಕು ಅಂದಾಗ ಮಾತ್ರ ಅದಕ್ಕೆ ಬೆಲೆ. ಈ ನಂಬಿಕೆಯ ಒಂದು ನಿದರ್ಶನ ನೋಡೋಣ.

ಒಂದು ಆಶ್ರಮದಲ್ಲಿ ಒಬ್ಬ ಋಷಿಯಿದ್ದ. ಆ ಆಶ್ರಮದಲ್ಲಿ ಸುಮಾರು ಜನ ಶಿಷ್ಯರಿದ್ದರು. ಆತ ಪ್ರತಿನಿತ್ಯ ಊರೆಲ್ಲ ಭಿಕ್ಷಾಟನೆ ಮಾಡಿ ಬಂದಿರುವ ಭಕ್ತರಿಗೆಲ್ಲ ಊಟವನ್ನು ಹಾಕುತಿದ್ದ. ಆಶ್ರಮದಲ್ಲಿ ಊಟಕ್ಕೇನು ಕೊರತೆಯಿರಲಿಲ್ಲ, ಇಲ್ಲಿ ಬರಬರುತ್ತ ಶಿಷ್ಯರ ಸಂಖ್ಯೆ ಜಾಸ್ತಿಯಾಗುವುದರ ಜೊತೆಗೆ ಸೋಮಾರಿಗಳ ಸಂಖ್ಯೆಯು ಬೆಳೆಯಿತು. ತಾವು ಗುರುವಿನ ಅನುಯಾಯಿಗಳು ಎಂದು ಹೇಳುತ್ತ ಅವರು ಅಲ್ಲೆ ಠಿಕಾಣಿ ಹೂಡಿದರು. ಋಷಿಗೆ ದಿಗಿಲು ಬಡಿಯಿತು. ಆಗ ಭಿಕ್ಷಾಟನೆಗಾಗಿ ತನ್ನ ಈ ಸೋಮಾರಿ ಶಿಷ್ಯರನ್ನೇ ಊರತುಂಬ ತಿರುಗಲು ಕಳಿಸುತ್ತಿದ್ದ. ಹೀಗೆ ಕೆಲವು ದಿನಗಳು ಕಳೆದವು.

ಋಷಿಗೆ ಏನು ಮಾಡಬೇಕೆಂಬುದು ತಿಳಿಯದಾಯಿತು. ನನಗೂ ವಯಸ್ಸಾಗುತ್ತ ಬಂತು ನನ್ನ ಆಶ್ರಮವನ್ನು ನನ್ನ ನಂತರ ನೋಡಿಕೊಂಡು ಹೋಗುವ ಒಬ್ಬ ಒಳ್ಳೆಯ ಶಿಷ್ಯನನ್ನು ಹೇಗೆ ಪತ್ತೆಹಚ್ಚಲಿ ಎನ್ನುತ್ತ ಕೊನೆಗೆ ಒಂದು ಉಪಾಯ ಹೂಡಿದ. ಅದೇನೆಂದರೆ ಆ ಊರಿನ ಕಮ್ಮಾರನ ಕುಲುಮೆಯ ಹತ್ತಿರ ಎಲ್ಲರನ್ನೂ ಸಭೆ ಕರೆದು ನೋಡಿ ಶಿಷೋತ್ತಮರೆ, ನಮ್ಮ ಆಶ್ರಮಕ್ಕೆ ನಮ್ಮ ನಂತರ ಒಳ್ಳೆಯ ಉತ್ತರಾಧಿಕಾರಿಯನ್ನು ನಾವು ನೇಮಿಸಬೇಕಾಗಿದ್ದು, ತಾವು ಕುಲುಮೆಯಲ್ಲಿನ ಕಾದ ಕಬ್ಬಿಣದ ಸರಳನ್ನು ಹಿಡಿಯಬೇಕು. ಸ್ವಲ್ಪವೂ ವಿಚಲಿತರಾಗಬಾರದು ಎಂದು ನಿರ್ಬಂಧವನ್ನು ಹೇಳುತ್ತ ‘ಬನ್ನಿ, ಒಬ್ಬಬ್ಬರಾಗಿ ಮುಂದೆ ಬನ್ನಿ,’ ಮೊದಲು ನಾನೆ ಕುಳವನ್ನು ಹಿಡಿಯುತ್ತೇನೆಂದು ಹಿಡಿದೆ ಬಿಟ್ಟರು ಅವರ ಕೈ ಸುಡಲಿಲ್ಲ. ಇದನ್ನು ನೋಡಿ ಸೋಮಾರಿ ಶಿಷ್ಯರೆಲ್ಲ ಒಂದು ಕ್ಷಣ ನಾವು ಸಾಯುವುದು ನಿಶ್ಚಿತವೆಂದು ಅಲ್ಲಿಂದ ಪರಾರಿಯಾದರು. ಒಬ್ಬ ಶಿಷ್ಯ ಮಾತ್ರ ಅಲ್ಲಿಯೇ ನಿಂತಿದ್ದ. ಗುರುಗಳು ಆ ಶಿಷ್ಯನನ್ನು ಕುರಿತು, 'ಶಿಷ್ಯ.. ನೀನೇಕೆ ಹೋಗಲಿಲ್ಲ, ನಿನಗೆ ಭಯವಾಗಲಿಲ್ಲವೆ ಎಂದಾಗ, ಗುರುಗಳೆ ನಿಮ್ಮ ಕೈಗಳನ್ನು ಸುಡದ ಆ ಕುಳವು ನನ್ನ ಕೈ ಸುಡುವುದೆ ಹಿಡಿದು ದೇವರನ್ನು ನೆನೆದರಾಯಿತು' ಎಂದು ಮನದಾಳದ ಮಾತುಗಳನ್ನು ಅರುಹಿದ. ಋಷಿಗೆ ಸಂತಸವಾಯಿತು. ನಮ್ಮ ಆಶ್ರಮಕ್ಕೆ ಒಬ್ಬ ಉತ್ತಮ ಉತ್ತರಾಧಿಕಾರಿ ಸಿಕ್ಕುಬಿಟ್ಟ ಎಂದು ಹರ್ಷದಲ್ಲಿ ಮುಳುಗಿದರು. ನಂಬಿಕೆಯೆಂದರೆ ಇದೆಯಲ್ಲವೆ?

ಶ್ವಾಸ ಇರುವವರೆಗೆ ವಿಶ್ವಾಸ (ನಂಬಿಕೆ) ಇರಬೇಕು ಅದನ್ನು ಕಳೆದುಕೊಂಡರೆ ಜಗತ್ತಿನಲ್ಲಿ ಇದ್ದು ಸತ್ತಂತೆ. ನಂಬಿಕೆಯನ್ನು ಗಳಿಸಲು ವರ್ಷಗಳೇ ಬೇಕು, ಕಳೆದುಕೊಳ್ಳಲು ಕೆಲವೇ ಸೆಕೆಂಡುಗಳು ಸಾಕು. ಹಾಗಾಗಿ ನಾವು ನೀವೆಲ್ಲ ನಂಬಿಕೆಯ ರೂವಾರಿಗಳಾಗಿ ಸಮಾಜದಲ್ಲಿ ಬದುಕೋಣ.

-ಶಂಕರಾನಂದ ಹೆಬ್ಬಾಳ

ಚಿತ್ರ ಕೃಪೆ: ಇಂಟರ್ನೆಟ್ ತಾಣ