ನಕಲಿ ಆನೆದಂತ ಪತ್ತೆಗೆ “ಸಿಟಿ” ಸ್ಕಾನ್

ನಕಲಿ ಆನೆದಂತ ಪತ್ತೆಗೆ “ಸಿಟಿ” ಸ್ಕಾನ್

“ಸಿಟಿ” ಸ್ಕಾನಿಗೂ ಆನೆದಂತಕ್ಕೂ ಎಲ್ಲಿಗೆಲ್ಲಿಯ ಸಂಬಂಧ? ಆನೆದಂತದ ಸಾಚಾತನ ಸಾಬೀತು ಪಡಿಸಲು “ಸಿಟಿ” ಸ್ಕಾನಿನ ಬಳಕೆಯೇ ಆ ಸಂಬಂಧ.
ಈ ಸಾಧನೆ ಮಾಡಿದವರು ಬೆಂಗಳೂರಿನ ಮೂವರು ವೈದ್ಯರು. ಆ ಮೂಲಕ ಇಬ್ಬರು ಆರೋಪಿಗಳಿಂದ ಪೊಲೀಸರು ವಶ ಪಡಿಸಿಕೊಂಡ ಆರು ಆನೆದಂತಗಳು ನಕಲಿ ಎಂಬುದನ್ನು ಖಚಿತ ಪಡಿಸಲು ಪೊಲೀಸರಿಗೆ ಈ ವೈದ್ಯರಿಂದ ಸಹಾಯ.
ಮಾರ್ಚ್ ೨೦೧೪ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನಿನ ಪೊಲೀಸರಿಂದ ಕೆಂಗೆಲ್ ಹನುಮಂತಯ್ಯ ರಸ್ತೆಯಲ್ಲಿ ಆನೆದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ. ವನ್ಯಜೀವಿ ರಕ್ಷಣಾ ಕಾಯಿದೆ ಪ್ರಕಾರ ಆ ವ್ಯಕ್ತಿಗಳ ವಿರುದ್ಧ ಆರೋಪ ಹೊರಿಸಬೇಕಾದರೆ ಆನೆದಂತಗಳ ಸಾಚಾತನ ಖಚಿತ ಪಡಿಸಿಕೊಳ್ಳುವುದು ಅಗತ್ಯ.
ಪೊಲೀಸರು ಈ ಕೆಲಸಕ್ಕಾಗಿ ಸಂಪರ್ಕಿಸಿದ್ದು ಬೆಂಗಳೂರಿನ ಭಾರತೀಯ ವಿಜ್ನಾನ ಸಂಸ್ಥೆಯನ್ನು. ಈ ಸಂಸ್ಥೆಗೆ ಸಹಕರಿಸಿದ ಬೆಂಗಳೂರಿನ ಮೂವರು ವೈದ್ಯರು, ಆ ಆನೆದಂತಗಳನ್ನು ಲೋಹ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸಿನಿಂದ ಮಾಡಲಾಗಿದೆ ಎಂದು ತೋರಿಸಿಕೊಟ್ಟರು.
ಗಾಯತ್ರಿ ಆಸ್ಪತ್ರೆಯ ವೈದ್ಯರಾದ ಡಾ. ಸುನಿಲ್ ಮಲ್ಲೇಶ್, ಫ್ರೆಂಡ್ಸ್ ಫಾರ್ ಆನಿಮಲ್ಸ್ ಎಂಬ ಸಂಘಟನೆಯ ಸದಸ್ಯರು. ಇದು ಆನೆ ಸಂರಕ್ಷಣಾ ಕಾರ್ಯಕರ್ತರ ಹಾಗೂ ಸ್ವಯಂಸೇವಕರ ಸಂಘಟನೆ. ಆನೆದಂತಗಳ ಸಾಚಾತನ ಪತ್ತೆ ಮಾಡಲು ಪರಿಣತರ ತಂಡ ಪ್ರಯತ್ನಿಸುತ್ತಿದೆ ಎಂಬ ಸುದ್ದಿ ತಿಳಿದಾಗ, ಅವರು ಸಹಕರಿಸಲು ಮುಂದಾದರು. ರಾಡೊಕ್ಸ್ ಡಯಾಗ್ನೊಸ್ಟಿಕ್ಸ್ ಮತ್ತು ಇಮೇಜಿಂಗ್ ಪ್ರೈ. ಲಿಮಿಟೆಡ್ನ ವೈದ್ಯರಾದ ಡಾ. ಸಂದೀಪ್ ಬಲ್ಲಾಳ್ ಮತ್ತು ಡಾ. ಸುರೇಶ್ ರೆಡ್ಡಿ ಜೊತೆ ಚರ್ಚಿಸಿದರು. ಅನಂತರ, ಇವರು ಮೂವರು ಆ ಆನೆದಂತಗಳ “ಸಿಟಿ” (ಕಂಪ್ಯೂಟರೈಸ್ಡ್ ಟೊಮೊಗ್ರಫಿ) ಸ್ಕಾನ್ ಮಾಡಲು ನಿರ್ಧರಿಸಿದರು.
“ಸಿಟಿ” ಸ್ಕಾನ್ ಮೂಲಕ ಎಲುಬಿನ ಸಾಂದ್ರತೆ ಮತ್ತು ಖನಿಜಾಂಶ ಪತ್ತೆ ಮಾಡಲು ಸಾಧ್ಯ. ಹಾಗಾಗಿ, ಪೊಲೀಸರು ವಶ ಪಡಿಸಿಕೊಂಡ ಆನೆದಂತಗಳನ್ನು ಹಲವು ಬಾರಿ ಸ್ಕಾನ್ ಮಾಡಿದರು. ಮೂರು ತಿಂಗಳ ಪರಿಶೀಲನೆಯ ನಂತರ, ಆ ಆನೆದಂತಗಳು ಸಾಚಾ ಅಲ್ಲ, ಅವು ನಕಲಿ ಎಂಬ ತೀರ್ಮಾನಕ್ಕೆ ಬಂದರು.
“ಸಿಟಿ” ಸ್ಕಾನ್ ತಂತ್ರಜ್ನಾನವನ್ನು ಮನುಷ್ಯರ ದೇಹಾರೋಗ್ಯ ಪರೀಕ್ಷೆಗಾಗಿ ಬಳಸಲಾಗುತ್ತದೆ: ಗಾಯಗಳು, ಎಲುಬಿನ ಬಿರುಕುಗಳು, ಹೆಪ್ಪುಗಟ್ಟಿದ ರಕ್ತ, ಗೆಡ್ಡೆಗಳು ಮತ್ತು ಸೋಂಕುಗಳ ಪರಿಶೀಲನೆಗಾಗಿ. ಎಲುಬಿನ ಸಾಂದ್ರತೆ ಪರೀಕ್ಷೆಗಾಗಿಯೂ ಈ ತಂತ್ರಜ್ನಾನ ಬಳಕೆಯಲ್ಲಿದೆ. ಆದ್ದರಿಂದ, ಆನೆದಂತಗಳ ಸಾಚಾತನ ಪರೀಕ್ಷೆಗೆ “ಸಿಟಿ” ಸ್ಕಾನ್ ತಂತ್ರಜ್ನಾನವೇ ಅತ್ಯುತ್ತಮ ಎಂದು ಅವರು ನಿರ್ಧರಿದ್ದರು.
ಆ ಆನೆದಂತಗಳಿಗೆ ಯಾವುದೇ ಹಾನಿ ಮಾಡದೆ ಪರೀಕ್ಷಿಸಿದ್ದು “ಸಿಟಿ” ಸ್ಕಾನ್ ವಿಧಾನದ ವಿಶೇಷತೆ. ಆನೆದಂತಗಳ ಪರೀಕ್ಷೆಗೆ ರಾಸಾಯನಿಕ ವಿಧಾನಗಳೂ ಬಳಕೆಯಲ್ಲಿವೆ; ಆದರೆ ಆ ವಿಧಾನಗಳಲ್ಲಿ ಆನೆದಂತಗಳಿಗೆ ಹಾನಿಯಾಗುತ್ತದೆ. ಅದಲ್ಲದೆ, ಆ ಪರೀಕ್ಷೆಗೆ ಹೆಚ್ಚು ದಿನಗಳು ಅವಶ್ಯ.
ಅರಣ್ಯ ಇಲಾಖೆ ಪ್ರತಿ ವರುಷ ಇಂತಹ ೧೦ – ೧೨ ಪ್ರಕರಣಗಳನ್ನು ತೀರ್ಮಾನಿಸಬೇಕಾಗುತ್ತದೆ. ಅವುಗಳಲ್ಲಿ     ೯ – ೧೦ ಪ್ರಕರಣಗಳಲ್ಲಿ ಆನೆದಂತಗಳು ನಕಲಿ ಎಂದು ಪತ್ತೆಯಾಗುತ್ತದೆ. ಭಾರತೀಯ ವಿಜ್ನಾನ ಸಂಸ್ಥೆಯ  ಇಕಾಲಾಜಿಕಲ್ ವಿಜ್ನಾನ ಕೇಂದ್ರದ ಆನೆ-ಪರಿಣತರಾದ ಪ್ರೊ. ಆರ್. ಸುಕುಮಾರ್ ಪ್ರಕಾರ, ಏಷ್ಯಾದ ಆನೆದಂತಗಳ ಪ್ರಕರಣಗಳಲ್ಲಿ ನಕಲಿ ಆನೆದಂತಗಳು ಜಾಸ್ತಿ. ಆದರೆ, ಆಫ್ರಿಕಾದ ಆನೆದಂತಗಳ ಪ್ರಕರಣಗಳಲ್ಲಿ ನಕಲಿ ಹಾವಳಿ ಕಡಿಮೆ.
ಆನೆದಂತಗಳ ವ್ಯಾಪಾರ ನಿಷೇಧಿತ ವಹಿವಾಟು. ಇದರಲ್ಲಿ ನಕಲಿಗಳ ಪತ್ತೆಗೆ ಹಾಗೂ ಅಪರಾಧ ಸಾಬೀತಿಗೆ ಪರಿಣಾಮಕಾರಿ ವಿಧಾನವೊಂದು ಬೆಳಕಿಗೆ ಬಂದಿರುವುದು ಸಮಾಧಾನದ ವಿಷಯ.