ನಕ್ಷತ್ರಗಳನ್ನು ಆಧರಿಸಿದ್ದ ಮಳೆ ಲೆಕ್ಕಾಚಾರ ಈಗ ತಲೆಕೆಳಗಾಗಿದೆ

ನಕ್ಷತ್ರಗಳನ್ನು ಆಧರಿಸಿದ್ದ ಮಳೆ ಲೆಕ್ಕಾಚಾರ ಈಗ ತಲೆಕೆಳಗಾಗಿದೆ

ಅದೊಂದು ಕಾಲವಿತ್ತು. ಆಯಾ ಕಾಲಾವಧಿಯ ನಕ್ಷತ್ರಗಳ ಆಧಾರದಿಂದ, ಎಷ್ಟು ಮಳೆ ಸುರಿಯುತ್ತದೆಂದು ಕರಾರುವಾಕ್ಕಾಗಿ ಹೇಳಬಹುದಾಗಿತ್ತು. ಈಗ ಹಾಗಿಲ್ಲ. ನಕ್ಷತ್ರಗಳೇನೂ ಬದಲಾಗಿಲ್ಲ, ಆದರೆ ಮಳೆ ಬದಲಾಗಿದೆ.

ಇದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೀಮಶಂಕರ ಪ್ರದೇಶದ ಮಹದೇವೋ ಕೊಲಿ ಬುಡಕಟ್ಟಿನ ರೈತರ ಅನುಭವ. ಕಳೆದ ೨೦ ವರುಷಗಳಿಂದ ಅಂಬೆಗಾವೊನ್ ತಾಲೂಕಿನ ಹತ್ತು ಹಳ್ಳಿಗಳ ಕೊಲಿಗಳು ಹವಾಮಾನ ಬದಲಾವಣೆ ಹಾಗೂ ಅದರ ಪರಿಣಾಮಗಳನ್ನು ದಾಖಲಿಸುತ್ತಿದ್ದಾರೆ. ಲಾಭರಹಿತ ಸಂಸ್ಥೆ “ಶಾಶ್ವತ್" ಅವರಿಗೆ ಮಾರ್ಗದರ್ಶನ ನೀಡುತ್ತಿದೆ.

ಎಂಬತ್ತು ವರುಷ ದಾಟಿದ ಧೊಂಡಾಭಾಯಿ ಅಸಾವ್‌ಲೆಗೆ ಹವಾಮಾನದ ಗುಣಲಕ್ಷಣಗಳಲ್ಲಿ ದಶಕಗಳ ಪರಿಣತಿ. ಬದಲಾದ ಮಳೆ ಮತ್ತು ಹವೆ ಬಗ್ಗೆ ಆ ವೃದ್ಧೆಯ ಮಾತು ಕೇಳಿ: "1970ರ ವರೆಗೆ ನಮ್ಮ ಪ್ರದೇಶದಲ್ಲಿ ಗಡಿಯಾರದ ಮುಳ್ಳಿನ ಚಲನೆಯಂತೆ ಮಳೆಪ್ರಮಾಣದ ಭವಿಷ್ಯ ಹೇಳಬಹುದಾಗಿತ್ತು. ನಕ್ಷತ್ರಗಳನ್ನು ಆಧರಿಸಿ, ನಮ್ಮ ಹೊಲದ ಕೆಲಸಗಳ ವೇಳಾಪಟ್ಟಿ ಹೊಂದಿಸಿಕೊಳ್ಳುತ್ತಿದ್ದೆವು. ನನಗೆ ವಯಸ್ಸು 40 ಆಗುವ ವರೆಗೆ ಒಮ್ಮೆಯೂ ಮಳೆ ಕೈಕೊಟ್ಟದ್ದು ನೆನಪಿಲ್ಲ." ವರುಷದ ಕಾಲಮಾನ 27 ನಕ್ಷತ್ರಗಳಲ್ಲಿ ಹಂಚಿಹೋಗಿತ್ತು. ಇಂತಹ ನಕ್ಷತ್ರದ ಕಾಲಾವಧಿಯಲ್ಲಿ ಇಂತಿಷ್ಟು ಮಳೆ ಎಂಬ ಲೆಕ್ಕ ಯಾವತ್ತೂ ತಪ್ಪಿರಲಿಲ್ಲ.

ಮಳೆಲೆಕ್ಕ ಈಗ ಬದಲಾಗಲು ಕಾರಣವೇನು? ಎಂಬುದನ್ನು ಧೊಂಡಾಭಾಯಿ ಮಾತುಗಳಲ್ಲೇ ಕೇಳೋಣ. 1970ರ ಆರಂಭದಲ್ಲಿ ಪಕ್ಕದ ಗುಡ್ಡಗಳಲ್ಲಿ ಇದ್ದಿಲು ಕಂಟ್ರಾಕ್ಟ್‌-ದಾರರು ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯಲು ಆರಂಭಿಸಿದಾಗಿನಿಂದ ಮಳೆಯ ವೇಳಾಪಟ್ಟಿ ಬದಲಾಯಿತು. "ಸುಮಾರು ಹತ್ತು ವರುಷ ವಿಸ್ತಾರ ಗುಡ್ಡಪ್ರದೇಶದಲ್ಲಿ ಕಂಟ್ರಾಕ್ಟ್-ದಾರರು ಮರಗಳ ಮಾರಣಹೋಮ ಮಾಡಿ, ದೊಡ್ಡ ಫರ್ನೇಸುಗಳಲ್ಲಿ ಇದ್ದಿಲು ತಯಾರಿಸಿದರು. ಪ್ರತಿ ವರುಷ ಹಲವು ತಿಂಗಳುಗಳ ಕಾಲ ಗುಡ್ಡದ ಬದಿಗಳಲ್ಲಿ ಹಗಲೂರಾತ್ರಿ ಫರ್ನೇಸಿನ ಬೆಂಕಿ ಉರಿಯುತ್ತಿತ್ತು.”

ಇಂತಹ ಅರಣ್ಯನಾಶಕ್ಕೆ ತಡೆ ಬಿದ್ದದ್ದು 1990ರಲ್ಲಿ - “ಶಾಶ್ವತ್" ಸಂಸ್ಥೆಯ ಬೆಂಬಲದಿಂದ ಐವತ್ತು ಹಳ್ಳಿಗಳ ಜನರು ತಮ್ಮ ದೇವ್‌ರಾಯಿ (ಪವಿತ್ರಕಾಡು)ಗಳನ್ನು ಉಳಿಸಲು ಹೋರಾಟ ನಡೆಸಿದಾಗ. ಗುಡ್ಡಗಳನ್ನು ಬೋಳು ಮಾಡಿದ ನಂತರ ಏನಾಯಿತೆಂದು ಪಿಂಪರ್-ಗಣಿ ಗ್ರಾಮದ ದಾವ್‌ದಾಜಿ ಗವಾರಿ ನೆನಪು ಮಾಡಿಕೊಳ್ಳುತ್ತಾರೆ, "ನಮ್ಮ ಪ್ರದೇಶದಲ್ಲಿ ಉಷ್ಣತೆ ಹೆಚ್ಚಾಯಿತು ಮತ್ತು ಗಾಳಿ ಬಿರುಸಾಗಿ ಬೀಸತೊಡಗಿತು. ಇವೆರಡರಿಂದಾಗಿ ನಮ್ಮ ಬೆಳೆಗಳಿಗೆ ತೊಂದರೆಯಾಯಿತು.”

ನಕ್ಷತ್ರಗಳನ್ನು ಅವಲಂಬಿಸಿ ಹಳ್ಳಿಯ ಹೊಲಗಳಲ್ಲಿ ನಡೆಯುತ್ತಿದ್ದ ಕೆಲಸಗಳನ್ನು ಧೊಂಡಾಭಾಯಿ ವಿವರಿಸುತ್ತಾರೆ, "ನನ್ನ ಬಾಲ್ಯ ಮತ್ತು ಯೌವನದಲ್ಲಿ ಪ್ರತಿ ವರುಷವೂ ಸಿರಿಧಾನ್ಯಗಳನ್ನು ಬಿತ್ತುತ್ತಿದ್ದದ್ದು ಅಕ್ಷಯ ತೃತೀಯದ ದಿನ. ಕೃತ್ತಿಕ ನಕ್ಷತ್ರದಲ್ಲಿ ಸಣ್ಣ ಮಳೆ ಸುರಿದ ನಂತರ ಎಪ್ರಿಲ್-ಮೇಯಲ್ಲಿ ಅಕ್ಷಯ ತೃತೀಯಾದ ಪವಿತ್ರದಿನ ಬರುತ್ತಿತ್ತು. ಅದಾದ ನಂತರ, ರೋಹಿಣಿ ನಕ್ಷತ್ರದಿಂದ ಆರಂಭವಾಗುತ್ತಿದ್ದ ಸಣ್ಣ ಮಳೆ ಆಗಾಗ ಬರುತ್ತಲೇ ಇತ್ತು. ಹೀಗೆ ಮಳೆ ಶುರುವಾದಾಗ ಭತ್ತದ ಸಸಿಗಳನ್ನು ತಯಾರು ಮಾಡುತ್ತಿದ್ದೆವು. ಮೃಗ ನಕ್ಷತ್ರದಲ್ಲಿ ಮಳೆ ಜೋರಾದಾಗ ಅವನ್ನು ನಾಟಿ ಮಾಡುತ್ತಿದ್ದೆವು.”

ಜಾವೊಜಿ ಗವಾರಿ ದನಿಗೂಡಿಸುತ್ತಾರೆ. ಮಳೆಗಾಲದ ಆರಂಭದ ನಕ್ಷತ್ರಗಳ ಕಾಲಾವಧಿಯ ಸಣ್ಣ ಮಳೆಯಿಂದ ಎಳೆಸಸಿಗಳು ಬೇರೂರಲು ಅನುಕೂಲ. ಅನಂತರ, ಸುರಿಯುತ್ತಿದ್ದ ಜೋರು ಮಳೆ, ಬೇರೂರಿದ ಸಸಿಗಳ ವೇಗದ ಬೆಳವಣಿಗೆಗೆ ಪೂರಕ. ಅದಾದ ನಂತರದ ನಕ್ಷತ್ರಗಳ ಕಾಲಾವಧಿಯಲ್ಲಿ ಆಗಾಗ ಬೀಳುತ್ತಿದ್ದ ಮಳೆ, ಕಾಳು ತುಂಬಲು ಸಹಾಯಕ. ದೀಪಾವಳಿಯ ಹೊತ್ತಿಗೆ, ಪೈರು ಕಟಾವಿಗೆ ತಯಾರಾದಾಗ, ಮಳೆ ಮಾಯವಾಗುತ್ತಿತ್ತು. ಮತ್ತೆ ಮಳೆ ಬರೋದು ಮುಂದಿನ ಮಳೆಗಾಲದ ಆರಂಭದಲ್ಲಿ.

ಈಗ ಅದೆಲ್ಲ ಅಲ್ಲಿನ ಹಿರಿಯರ ನೆನಪು ಮಾತ್ರ. ಗುಡ್ಡಗಳ ಅರಣ್ಯನಾಶದ ನಂತರ, ಮಳೆಗಾಲದ ಆರಂಭ ಪ್ರತಿ ವರುಷವೂ ಒಂದೆರಡು ದಿನ ವಿಳಂಬವಾಗ ತೊಡಗಿತು. 1980ರ ಹೊತ್ತಿಗೆ ರೋಹಿಣಿ ಮಳೆ ಮಾಯವಾಯಿತು. ಹಾಗಾಗಿ ಮೃಗ ನಕ್ಷತ್ರದಲ್ಲಿ ಬೀಜ ಬಿತ್ತಬೇಕಾಯಿತು. ೧೯೯೦ರ ದಶಕದ ಕೊನೆಯ ವರೆಗೆ ಏಕರೂಪವಾಗಿದ್ದ ಮೃಗ ನಕ್ಷತ್ರ ಮಳೆ, ಅನಂತರ ಕೈಕೊಟ್ಟಿತು.

ವರುಷಗಳು ಸರಿದಂತೆ ಪರಿಸ್ಥಿತಿ ಬಿಗಡಾಯಿಸಿತು. 2009ರಲ್ಲಿ ಬೀಜ ಬಿತ್ತನೆ ಒಂದು ತಿಂಗಳು ತಡವಾಯಿತು. “ಕಳೆದ ನಾಲ್ಕೈದು ವರುಷಗಳಲ್ಲಿ ಮಳೆಗಾಲದಲ್ಲಿ ಎರಡು ಕಾಲಾವಧಿ ಕಾಣುತ್ತಿದ್ದೇವೆ. ಆರಂಭದಲ್ಲಿ ಜೋರಾಗಿ ಸುರಿವ ಮಳೆ, ಅನಂತರ ಒಂದು ತಿಂಗಳು ಮಳೆ ಕಣ್ಮರೆ. ಪುನಃ ಮಳೆ ಸುರಿಯತೊಡಗಿ, ಕೊಯ್ಲಿನ ವರೆಗೂ ಮಳೆ ಮುಂದುವರೀತದೆ” ಎನ್ನುತ್ತಾರೆ ದಾವ್‌ದಾಜಿ.

ಭೀಮಾಶಂಕರ ಮತ್ತು ದಿಂಭೆ - ಇಲ್ಲಿರುವ ಹವಾಮಾನ ಪರಿವೀಕ್ಷಣಾಲಯಗಳು, ಈ ಹಳ್ಳಿಗರು ತಮ್ಮ ಅನುಭವದಿಂದ ಹೇಳುವುದನ್ನು ಖಚಿತಪಡಿಸುತ್ತವೆ. ಭೀಮಾಶಂಕರದಲ್ಲಿ 1990ರಲ್ಲಿ ಸುರಿದ ಮಳೆ 7,000 ಮಿಮೀ. ಅದು 19 ವರುಷಗಳ ನಂತರ (2009ರಲ್ಲಿ) 5,000 ಮಿಮೀ ಪ್ರಮಾಣಕ್ಕೆ ಕುಗ್ಗಿದೆ. ಹಾಗೆಯೇ ದಿಂಭೆಯಲ್ಲಿ ಮಳೆ 2,500 ಮಿಮೀ.ನಿಂದ 1,500 ಮೀಮೀ ಪ್ರಮಾಣಕ್ಕೆ ಇಳಿದಿದೆ. ಒಟ್ಟಾರೆಯಾಗಿ ಅಸಹಾಯಕ ಹಳ್ಳಿಗರಿಗೆ ಬದಲಾದ ಮಳೆಯಿಂದಾಗಿ ಬದುಕು ಸಾಗಿಸುವುದೇ ಸವಾಲಾಗಿದೆ.

ಕರ್ನಾಟಕದ ಕರಾವಳಿಯಲ್ಲಿ ಮತ್ತು ಮಲೆನಾಡಿನಲ್ಲಿಯೂ ಕಳೆದ ಮೂವತ್ತು ವರುಷಗಳಲ್ಲಿ ಮಳೆಯ ಬದಲಾವಣೆ ಆಗಿರುವುದು ಖಂಡಿತ. ಇಲ್ಲಿಯೂ ನಕ್ಷತ್ರಗಳನ್ನು ಆಧರಿಸಿ ಮಳೆ ಪ್ರಮಾಣ ಅಂದಾಜು ಮಾಡುತ್ತಿದ್ದ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ. ಒಟ್ಟಾರೆಯಾಗಿ ಅಸಹಾಯಕ ಕೃಷಿಕರಿಗೆ ಬದಲಾದ ಮಳೆಯಿಂದಾಗಿ ಬದುಕು ಸಾಗಿಸುವುದೇ ಸವಾಲಾಗಿದೆ.

ಫೋಟೋ: ಆಕಾಶದಲ್ಲಿ ನಕ್ಷತ್ರಗಳು …. ಕೃಪೆ: ಅನ್‌ಸ್ಪ್ಲಾಶ್.ಕೋಮ್