ನಕ್ಷತ್ರಗಳ ಜೀವನ ಯಾತ್ರೆ ! (ಭಾಗ ೧)

ನಕ್ಷತ್ರಗಳ ಜೀವನ ಯಾತ್ರೆ ! (ಭಾಗ ೧)

ನಕ್ಷತ್ರಗಳಿಗೆ ಹುಟ್ಟು - ಸಾವು ಇದೆಯಾ? : ಖಂಡಿತ ! ನಕ್ಷತ್ರಗಳು ನಮ್ಮ ಹಾಗೆ ಹುಟ್ಟುತ್ತವೆ - ಸಾಯುತ್ತವೆ. ನಿಮಗೆ ಗೊತ್ತಾ? ನಕ್ಷತ್ರಗಳಿಗೂ ಬಾಲ್ಯ, ಯೌವ್ವನ, ಮುಪ್ಪು ಎಲ್ಲಾ ಇದೆ. ನಕ್ಷತ್ರಗಳ ಹುಟ್ಟು ಹೇಗೆ ಗೊತ್ತಾ? ವಿಶ್ವದಲ್ಲಿ ಹೈಡ್ರೋಜನ್ ಅನಿಲ ದುಂಡಗಾಗಿ ಒಂದು ನಕ್ಷತ್ರ ಹುಟ್ಟುತ್ತೆ. ಇದನ್ನೇ ‘ಆದಿ ನಕ್ಷತ್ರ’ ಎನ್ನುತ್ತಾರೆ.

ಆದಿ ನಕ್ಷತ್ರ - ನಕ್ಷತ್ರದ ಬಾಲ್ಯ ಸ್ಥಿತಿ? : ಆಗ ತಾನೇ ಹುಟ್ಟಿದ ಮಗು ಎಷ್ಟು ಸೋಜಿಗವೋ ಅಷ್ಟೇ ವಿಸ್ಮಯ ಈ ‘ಆದಿ ನಕ್ಷತ್ರ' ಹುಟ್ಟಿದ ಮಗು ಕೆಲವೇ ತಿಂಗಳಲ್ಲಿ ತನ್ನ ಆಟ ಪಾಠಗಳನ್ನು ಆರಂಭಿಸುವಂತೆ, ಆದಿ ನಕ್ಷತ್ರ ತನ್ನದೇ ಆದ ಗುರುತ್ವದಿಂದ ಕುಸಿಯುತ್ತಾ ಹೋಗುತ್ತದೆ.

ಆದಿ ನಕ್ಷತ್ರದ ಕುಸಿತದ ಪರಿಣಾಮ? : ಆದಿ ನಕ್ಷತ್ರ ಕುಸಿಯುತ್ತಾ ಹೋದಂತೆ ಗಾತ್ರ ಚಿಕ್ಕದಾಗತೊಡಗುತ್ತದೆ. ಇದರಿಂದ ಕ್ರಮೇಣ ಉಷ್ಣತೆ ಹೆಚ್ಚುತ್ತಾ ಹೋಗುತ್ತದೆ. ಈ ರೀತಿ ಉಷ್ಣತೆ ಮಿಲಿಯನ್ ಡಿಗ್ರಿಗಳಷ್ಟು ಏರುತ್ತಾ ಹೋಗುತ್ತದೆ. 

ಅಗಾಧ ಉಷ್ಣತೆಯ ಪರಿಣಾಮ -ಹೈಡ್ರೋಜನ್ ಮಿಲನ ಕ್ರಿಯೆ: ಆದಿ ನಕ್ಷತ್ರದ ಒಳಭಾಗದಲ್ಲಿ ಮಿಲಿಯನ್ ಡಿಗ್ರಿಗಳಷ್ಟು ಉಷ್ಣತೆ ಉಂಟಾದಾಗ ಮತ್ತೊಂದು ವಿಶೇಷ ಕ್ರಿಯೆ ನಡೆಯುತ್ತದೆ. ಅದೇ ‘ಹೈಡ್ರೋಜನ್ ಮಿಲನ ಕ್ರಿಯೆ'. ಇದರಿಂದ ಮತ್ತೊಂದು ವಿಶೇಷ ಧಾತು ‘ಹೀಲಿಯಂ’ ರೂಪುಗೊಳ್ಳುತ್ತೆ. ಮನುಷ್ಯ ತನ್ನ ಹದಿಹರೆಯದ ಸ್ಥಿತಿಯಲ್ಲಿ ಹೇಗೆ ಮಾನಸಿಕ ಸ್ಥಿತಿಗಳಿಂದ ಜರ್ಜರಿತಗೊಳ್ಳುತ್ತಾನೆಯೋ ಹಾಗೆಯೇ ಈ ನಕ್ಷತ್ರದ ಸ್ಥಿತಿಯೂ ಕೂಡ ! ನಕ್ಷತ್ರದ ಈ ಸ್ಥಿತಿಯಲ್ಲಿ ಎರಡು ಬಹು ಮುಖ್ಯ ಕ್ರಿಯೆಗಳು ಈ ನಕ್ಷತ್ರವನ್ನು ಹಣ್ಣುಗಾಯಿ- ನೀರುಗಾಯಿ ಮಾಡಿಬಿಡುತ್ತವೆ. ನಿಮಗೆ ಆಶ್ಚರ್ಯವೆನಿಸಬಹುದು ! ಮೊದಲು ಬಂದ ಗುರುತ್ವ ನಕ್ಷತ್ರವನ್ನು ಕುಗ್ಗಿಸುತ್ತಾ ಹೋದನೆ, ಆನಂತರ ಏರಿದ ಉಷ್ಣತೆ ನಕ್ಷತ್ರವನ್ನು ಹಿಗ್ಗಿಸುತ್ತಾ ಹೋಗುತ್ತದೆ. ಈ ಹಿಗ್ಗುವಿಕೆ ಮತ್ತು ಕುಗ್ಗುವಿಕೆ ಸಮನಾದಾಗ ನಕ್ಷತ್ರ ಸ್ಥಿರ ಸ್ಥಿತಿಯನ್ನು ಪಡೆಯುತ್ತದೆ. ಇದನ್ನೇ ‘ಸ್ಥಿರ ನಕ್ಷತ್ರ’ ಎನ್ನುತ್ತಾರೆ.

'ಸ್ಥಿರ ನಕ್ಷತ್ರ’ಕ್ಕೆ ಒಂದು ಉದಾಹರಣೆಯೆಂದರೆ ನಮ್ಮ ಸೂರ್ಯ ! ಆಶ್ಚರ್ಯವೆನಿಸಬಹುದು. ನಮ್ಮ ಸೂರ್ಯನೇ ಒಂದು ಸ್ಥಿರ ನಕ್ಷತ್ರ. ಇದನ್ನೇ ನಕ್ಷತ್ರದ ‘ಯೌವನ ಕಾಲ' ಎನ್ನಬಹುದು. ಈಗಾಗಲೇ ಸೂರ್ಯ ಐದು ಬಿಲಿಯನ್ ವರ್ಷಗಳನ್ನು ಪೂರೈಸಿದ್ದಾನೆ. ನೆನಪಿಡಿ, ನಮ್ಮ ಸೂರ್ಯನಿಗೆ ಇನ್ನೂ ಐದು ಬಿಲಿಯನ್ ವರ್ಷಗಳ ಆಯಸ್ಸಿದೆ.

ನಕ್ಷತ್ರದ ಮಧ್ಯ ವಯಸ್ಥ ಸ್ಥಿತಿ ‘ಕೆಂಪು ದೈತ್ಯ' (Red Giant) : ಮನುಷ್ಯ ಮಧ್ಯಮಯಸ್ಕ ಸ್ಥಿತಿಗೆ ಬಂದಾಗ ಸಾಮಾನ್ಯವಾಗಿ ಹೊಟ್ಟೆ ಉಬ್ಬಿ ದಪ್ಪನಾಗಿ ಕಾಣುತ್ತಾನೆ. ಅಂತೆಯೇ ನಮ್ಮ ಸ್ಥಿರ ನಕ್ಷತ್ರ ಕೂಡಾ ಹಿಗ್ಗಿ ದೊಡ್ದವನಾಗಿ ಬಿಡ್ತಾನೆ. ಯಾಕೆ ಗೊತ್ತಾ? ಸ್ಥಿರ ನಕ್ಷತ್ರದ ಮಧ್ಯಭಾಗ ಹೀಲಿಯಂನಿಂದ ತುಂಬಿದ ಮೇಲೆ ಹೊರಕವಚದಲ್ಲಿನ ಹೈಡ್ರೋಜನ್ ಸಮ್ಮಿಲನದಿಂದ ಉಷ್ಣತೆ ಹೆಚ್ಚಿ ಕೆಂಪು ಕೆಂಪಾಗಿ ಉಬ್ಬಿ ದೊಡ್ದವನಾಗ್ತಾನೆ. ಇದನ್ನೇ ‘ಕೆಂಪು ದೈತ್ಯ' ಎನ್ನುತ್ತಾರೆ. ಒಂದು ನಕ್ಷತ್ರದ ಸಾವಿನ ನಿರ್ಧಾರ ಈ ಹಂತದಿಂದ ಪ್ರಾರಂಭವಾಗುತ್ತದೆ. ಈ ಹಂತದಲ್ಲಿ ನಕ್ಷತ್ರದ ದ್ರವ್ಯರಾಶಿ ಪ್ರಮುಖ ಪಾತ್ರ ವಹಿಸುತ್ತದೆ. ‘ಕೆಂಪು ದೈತ್ಯ' ಸ್ಥಿತಿಯಲ್ಲಿ ಅಪಾರ ಉಷ್ಣತೆಯಿಂದ ಹೊರಕವಚ ಉಬ್ಬಿ ಕಳಚಿಕೊಂಡು ‘ವಸ್ತುರಾಶಿ' ಹೊರಕ್ಕೆ ಚಿಮ್ಮುತ್ತದೆ. ಈಗ ಉಳಿಯುವ ನಕ್ಷತ್ರದ ವಸ್ತುರಾಶಿ ಅದರ ಮುಂದಿನ ಹಂತಗಳು ಹಾಗೂ ಸಾವಿನ ಸ್ಥಿತಿಯನ್ನು ನಿರ್ಧರಿಸುತ್ತದೆ.

(ಇನ್ನೂ ಇದೆ)

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ