ನಕ್ಷತ್ರಗಳ ಜೀವನ ಯಾತ್ರೆ ! (ಭಾಗ ೨)

ಸೂರ್ಯನ ರಾಶಿಗಿಂತ ೧.೪ ರಾಶಿ ಕಡಿಮೆ ಇರುವ ನಕ್ಷತ್ರಗಳ ಸಾವು ಒಂದು ಸೋಜಿಗ ! ಈ ಹಂತದಲ್ಲಿ ಸಮ್ಮಿಲನ ಕ್ರಿಯೆ ನಿಂತು ಹೋಗುವುದರಿಂದ ಉಷ್ಣತೆ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದಾಗಿ ನಕ್ಷತ್ರ ಗಾತ್ರದಲ್ಲಿ ಕಡಿಮೆಯಾಗಿ ‘ಶ್ವೇತ ಕುಬ್ಜ' ಹಂತವನ್ನು ತಲುಪುತ್ತದೆ. ಒಂದು ಅರ್ಥದಲ್ಲಿ ‘ಶ್ವೇತ ಕುಬ್ಜ' ಸಂಪಾದನೆಯಿಲ್ಲದ ಒಬ್ಬ ವಯೋವೃದ್ಧನಂತೆ. ! ಇದು ವೃದ್ಧಾಪ್ಯದ ಕೊನೆಯ ಹಂತ. ಕಾಲಾನಂತರದಲ್ಲಿ ಶ್ವೇತ ಕುಬ್ಜ ತಾಪ ಕಡಿಮೆಯಾಗುತ್ತ ಹೋದಂತೆ ಹೆಚ್ಚು ಹೆಚ್ಚು ಮಸುಕಾಗುತ್ತ ಹೋಗುತ್ತದೆ. ಹೀಗೆ ಕ್ರಮೇಣ ಬೆಳಕು ಹೊರಹೊಮ್ಮುವುದು ನಿಲ್ಲುತ್ತದೆ. ಆಗ ಇದು ತಣ್ಣಗಾಗಿರುವ ನಕ್ಷತ್ರ. ಈ ಹಂತವನ್ನು ‘ಕೃಷ್ಣ ಕುಬ್ಜ' ಎಂದು ಕರೆಯುತ್ತಾರೆ. ಇದೇ ನಕ್ಷತ್ರದ ಕೊನೆಯ ಹಂತವೆಂದರೆ ಸಾವು. ಅಂದರೆ ವಿಶ್ವದಿಂದ ಮರೆಯಾದಂತೆ.
ಮಧ್ಯಮ ವರ್ಗದ ಜನ ಸ್ವಲ್ಪ ಆಸ್ತಿಯನ್ನು ಮಾಡಿ ಸಾಯುವಂತೆ ಈ ರಾಶಿಯ ನಕ್ಷತ್ರಗಳು ತಮ್ಮ ಗರ್ಭದಲ್ಲಿ ಹೀಲಿಯಂ ಧಾತುಗಳು ಪುನಃ ಪುನಃ ಸಮ್ಮಿಲನಗೊಂಡು ಕಾರ್ಬನ್, ಆಕ್ಸಿಜನ್, ಮೆಗ್ನೀಷಿಯಂ, ಸಿಲಿಕಾನ್ ... ಕೊನೆಯಲ್ಲಿ ಗರ್ಭ. ಕಬ್ಬಿಣವನ್ನು ಉತ್ಪಾದಿಸುವ ಹೊತ್ತಿಗೆ ನಕ್ಷತ್ರ ಅಪಾರ ಉಷ್ಣತೆಯಿಂದ ಕುದಿಯತೊಡಗುತ್ತದೆ. ಕೊನೆಗೊಮ್ಮೆ ನಕ್ಷತ್ರ ತನ್ನ ಅಪಾರ ಉಷ್ಣತೆಯಿಂದಾಗಿ ಸ್ಫೋಟಗೊಳ್ಳುತ್ತದೆ. ಈ ಸ್ಫೋಟವನ್ನೇ ‘ಸೂಪರ್ ನೋವಾ’ ಎನ್ನುತ್ತಾರೆ.
ನ್ಯೂಟ್ರಾನ್ ನಕ್ಷತ್ರ: ‘ಸೂಪರ್ ನೋವಾ’ ಸ್ಫೋಟದಿಂದ ಹೊರಕ್ಕೆಸೆಯುವ ಅನಿಲದ ರಾಶಿಯನ್ನೇ ‘ನೆಬುಲಾ’ ಎಂದು ಕರೆಯುತ್ತಾರೆ. ಈ ವಸ್ತುವು ಹೊಸ ನಕ್ಷತ್ರಗಳ ಉಗಮಕ್ಕೆ ನಾಂದಿ ಹಾಡುತ್ತದೆ. ವಸ್ತುರಾಶಿ ಹೊರಕ್ಕೆ ಚಿಮ್ಮಿದ ನ್ಂತರ ಉಳಿಯುವ ನಕ್ಷತ್ರದ ಗರ್ಭದಲ್ಲಿ ನ್ಯೂಟ್ರಾನ್ ಕಣಗಳು ಮಾತ್ರ ಉಳಿದಿರುತ್ತವೆ. ಆದುದರಿಂದ ಈ ಹಂತವನ್ನು ‘ನ್ಯೂಟ್ರಾನ್ ನಕ್ಷತ್ರ' ಎನ್ನುತ್ತಾರೆ. ಈ ವಿಶ್ವದ ಗರ್ಭದಲ್ಲಿ ಈ ನಕ್ಷತ್ರ ಮರೆಯಾಗಿ ಸಾವನ್ನು ಕಾಣುತ್ತದೆ.
ಸೂರ್ಯನ ದ್ರವ್ಯರಾಶಿಗಿಂತ ೩೦ ಪಟ್ಟು ಅಧಿಕ ರಾಶಿಯುಳ್ಳ ನಕ್ಷತ್ರಗಳ ಅಂತ್ಯ. ಈ ನಕ್ಷತ್ರಗಳಲ್ಲಿ ಇನ್ನೂ ಹೆಚ್ಚಿನ ಧಾತುಗಳು ಉಂಟಾಗಿ ಕೊನೆಗೊಮ್ಮೆ ‘ಸೂಪರ್ ನೋವಾ’ ಸ್ಫೋಟದಿಂದ ಛಿದ್ರವಾಗುತ್ತದೆ. ಉಳಿಯುವ ಗರ್ಭದ ದ್ರವ್ಯರಾಶಿ ಹೆಚ್ಚು ಹೆಚ್ಚು ಗುರುತ್ವದಿಂದ ಕುಸಿಯತೊಡಗುತ್ತದೆ.
ಕಪ್ಪು ಕುಳಿ ಅಥವಾ ಬ್ಲ್ಯಾಕ್ ಹೋಲ್: ಅಪಾರ ಗುರುತ್ವದಿಂದ ಉಂಟಾಗುವ ಕುಸಿತದ ಪರಿಣಾಮವೇ ನಕ್ಷತ್ರದ ‘ಅತ್ಯಧಿಕ ಸಾಂದ್ರತೆ'. ಈ ಕುಸಿತ ಒಂದು ಹಂತವನ್ನು ಮುಟ್ಟಿದಾಗ ಅದರಿಂದ ಹೊರಡುವ ಬೆಳಕು ಸ್ಥಗಿತಗೊಳ್ಳುತ್ತದೆ. ಹೀಗೆ ಆ ನಕ್ಷತ್ರದಿಂದ ಬೆಳಕು ಹೊರಹೊಮ್ಮುವುದು ನಿಂತಾಗ ಆ ನಕ್ಷತ್ರ ನಮ್ಮ ಕಣ್ಣಿನಿಂದ ಮರೆಯಾಗುತ್ತದೆ. ನೆನಪಿಡಿ ! ಅಧಿಕ ಸಾಂದ್ರತೆಯಲ್ಲಿ ಈ ನಕ್ಷತ್ರ ಆ ಜಾಗದಲ್ಲೇ ಇರುತ್ತದೆ. ಆದರೆ ನಮ್ಮ ಕಣ್ಣಿಗೆ ಮಾತ್ರ ಕಾಣುವುದಿಲ್ಲ. ಇಂತಹ ನಕ್ಷತ್ರದ ಸ್ಥಿತಿಯನ್ನೇ ‘ಕಪ್ಪು ಕುಳಿ' ಅಥವಾ ಬ್ಲ್ಯಾಕ್ ಹೋಲ್ ಎಂದು ಕರೆಯುತ್ತಾರೆ.(ಚಿತ್ರ ನೋಡಿ) ಈ ಕಪ್ಪು ಕುಳಿ ತನ್ನ ಬಳಿ ಬಂದ ಯಾವುದೇ ನಕ್ಷತ್ರ ಅಥವಾ ಇತರೆ ಆಕಾಶ ಕಾಯಗಳನ್ನು ‘ಗುಳುಂ’ ಮಾಡಬಲ್ಲವು.
(ಮುಗಿಯಿತು)
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ