ನಕ್ಷತ್ರಲೋಕದ ವಿಸ್ಮಯಗಳು ! (ಭಾಗ ೨)
ಕೆಲವು ವಿಶೇಷ ವರ್ಗದ ನಕ್ಷತ್ರಗಳು ತಮ್ಮಷ್ಟಕ್ಕೆ ತಾವೇ ಸುತ್ತುತ್ತಾ ರೇಡಿಯೋ ಅಲೆಗಳೊಂದಿಗೆ ಅಸ್ಥಿರ ಬೆಳಕನ್ನು ಹೊರಹೊಮ್ಮಿಸುತ್ತಿರುತ್ತವೆ. ಈ ನಕ್ಷತ್ರಗಳು ಅತ್ಯಂತ ಹೆಚ್ಚು ದ್ರವ್ಯವನ್ನು ಹೊಂದಿದ್ದು ಕೊನೆಯಲ್ಲಿ ಕುಗ್ಗಿ ನ್ಯೂಟ್ರಾನ್ ನಕ್ಷತ್ರಗಳಾಗಿ ಮಾರ್ಪಟ್ಟು ರೇಡಿಯೋ ಅಲೆಗಳನ್ನು ನಿಯಮಿತವಾಗಿ ಹೊರಹಾಕುತ್ತವೆ. ಇವು ಹೊರಹೊಮ್ಮಿಸುವ ರೇಡಿಯೋ ತರಂಗಗಳು ನಮ್ಮ ಭೂಮಿಯ ಮೇಲಿನ ತರಂಗಗಳಿಗೆ ತಡೆಯೊಡ್ಡುತ್ತವೆ. ಇಂಥ ನಕ್ಷತ್ರಗಳು ನಮ್ಮ ಗ್ಯಾಲಕ್ಸಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಂಡುಬರುತ್ತವೆ.
ಸೂಪರ್ ನಕ್ಷತ್ರಗಳು: ಒಂದು ನ್ಯೂಟ್ರಾನ್ ನಕ್ಷತ್ರವು ಸೂಪರ್ ನೋವಾ ಸ್ಫೋಟದಿಂದ ಹುಟ್ಟಿ ಕೊನೆಯಲ್ಲಿ ಗುರುತ್ವದಿಂದ ಕುಗ್ಗಿ ನಮ್ಮ ಸೂರ್ಯನಿಗಿಂತ ಸ್ವಲ್ಪ ಹೆಚ್ಚು ರಾಶಿಯನ್ನು ಹೊಂದಿರುತ್ತದೆ. ಕೊನೆಯಲ್ಲಿ ಇನ್ನೂ ಗುರುತ್ವದಿಂದ ಕುಗ್ಗಿ ಒಂದು ಪುಟ್ಟ ಪೊಟ್ಟಣದ ಗಾತ್ರವನ್ನು ಹೊಂದಿದಾಗ ಅದು ಕಪ್ಪು ರಂಧ್ರ ಎನಿಸಿಕೊಳ್ಳುತ್ತದೆ. ಇವು ವಿಶ್ವದಲ್ಲೇ ಅತ್ಯಂತ ಹೆಚ್ಚು ಸಾಂದ್ರತೆಯುಳ್ಳ ನಕ್ಷತ್ರಗಳು ! ಕೇವಲ ಒಂದು ಚಮಚ ಕಪ್ಪು ರಂಧ್ರದ ವಸ್ತು ೧೦೦ ಕೋಟಿ ಟನ್ ಗಳಷ್ಟು ಭಾರವಿರುತ್ತದೆ ಈ ಭೂಮಿಯ ಮೇಲೆ. ಈ ಕಪ್ಪುರಂಧ್ರಗಳು ಹೊರಹಾಕುವ ಗಾಮಾ ಕಿರಣಗಳ ಒಟ್ಟು ಶಕ್ತಿ ೧೦೦,೦೦೦,೦೦೦,೦೦೦,೦೦೦,೦೦೦ ಸೂರ್ಯನು ಹೊರಹಾಕುವ ಶಕ್ತಿಗೆ ಸಮವೆಂದು ನಾಸಾದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
ನಕ್ಷತ್ರಗಳ ಗುಡುಗುವಿಕೆ: ಭೂಮಿಯ ಒಳಭಾಗದಲ್ಲಿ ಭೂಕಂಪಗಳು, ನ್ಯೂಟ್ರಾನ್ ನಕ್ಷತ್ರಗಳ ಒಳಭಾಗದಲ್ಲೂ ಕಂಪನಗಳು ಉಂಟಾಗುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ರೀತಿಯ ಕಂಪನಗಳು, ಗಾಮಾ ಕಿರಣಗಳು ಮತ್ತು ಕ್ಷ-ಕಿರಣಗಳು ಸ್ಫೋಟಿಸುವುದರಿಂದ ಇಡೀ ನಕ್ಷತ್ರ ಭೂಮಿಯಂತೆ ಕಂಪಿಸಿ ಬಿಡುತ್ತದೆ. ವಿಭಿನ್ನ ರೀತಿಯಲ್ಲಿ ಸುತ್ತುವ ಗಿರಕಿ ಹೊಡೆಯುವ ನ್ಯೂಟ್ರಾನ್ ನಕ್ಷತ್ರವನ್ನು ಪಲ್ಸರ್ ಗಳು ಎಂದು ಕರೆಯುತ್ತಾರೆ. ಇಂತಹ ನಕ್ಷತ್ರಗಳಲ್ಲೂ ಇಂತಹ ಕಂಪನಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.
ನಕ್ಷತ್ರ ಗುಚ್ಛಗಳು: ಬಹುಸಂಖ್ಯೆಯ ನಕ್ಷತ್ರಗಳು ಅಲ್ಲಲ್ಲಿ ಗುಂಪುಗುಂಪಾಗಿ ಕಂಡುಬರುತ್ತವೆ. ಕೆಲವು ಗುಂಪುಗಳಲ್ಲಿ ನೂರಾರು ನಕ್ಷತ್ರಗಳಿದ್ದರೆ ಇನ್ನು ಕೆಲವು ಗುಂಪುಗಳಲ್ಲಿ ಹಲವು ದಶಲಕ್ಷ ನಕ್ಷತ್ರಗಳಿರಬಹುದು. ಇಂತಹ ನಕ್ಷತ್ರಗಳ ಗುಂಪನ್ನು ನಕ್ಷತ್ರ ಗುಚ್ಛ ಎಂದು ಕರೆಯುತ್ತಾರೆ. ಈ ನಕ್ಷತ್ರ ಗುಚ್ಛಗಳನ್ನು ಬರಿಗಣ್ಣಿನಿಂದಲೂ ನೋಡಬಹುದು. ಆದರೆ ನಕ್ಷತ್ರಗಳೇಕೆ ಹೀಗೆ ಗುಂಪುಗುಂಪಾಗಿ ಗುಚ್ಛಗಳ ರೂಪದಲ್ಲಿ ಕಂಡುಬರುತ್ತವೆ ಎಂಬುದು ವಿಜ್ಞಾನಿಗಳಿಗೆ ಇನ್ನೂ ನಿಗೂಢ !
ನಕ್ಷತ್ರ ಸೈನಿಕರು: ಅತ್ಯಂತ ಸಾಂದ್ರ ನ್ಯೂಟ್ರಾನ್ ನಕ್ಷತ್ರಗಳನ್ನು ಮಾಗ್ನೇಟರ್ಸ್ ಎಂದು ಕರೆಯುತ್ತಾರೆ. ಇವು ನಮ್ಮ ಭೂಮಿಯ ಮೇಲಿರುವ ಕಾಂತಗೋಳದ ಶಕ್ತಿಗಿಂತ ನೂರಾರು ಕೋಟಿಗಳಿಗಿಂತಲೂ ಹೆಚ್ಚು ಕಾಂತಕ್ಷೇತ್ರ ಬಲವನ್ನು ಹೊಂದಿರುತ್ತದೆ. ಇವು ಒಂದು ರೀತಿಯಲ್ಲಿ ಸೈನಿಕ ನಕ್ಷತ್ರಗಳಿದ್ದಂತೆ ! ಇವು ಪ್ರತಿ ೧೦ ಸೆಕೆಂಡಿಗಳಿಗೊಮ್ಮೆ ಕ್ಷ-ಕಿರಣಗಳ ಮಿಂಚನ್ನು, ಕೆಲವೊಮ್ಮೆ ಗಾಮಾ ಕಿರಣಗಳ ಮಿಂಚನ್ನು ಹೊರಹಾಕಿ ನಕ್ಷತ್ರ ಲೋಕದ ಸೈನಿಕರಂತೆ ವರ್ತಿಸುತ್ತವೆ. ೧೯೭೯ರಲ್ಲಿ ಒಂಬತ್ತು ಆಕಾಶ ನೌಕೆಗಳು ಇಂತಹ ವಿಕಿರಣಗಳನ್ನು ಪತ್ತೆ ಹಚ್ಚಿವೆ. ಈ ವಿಕಿರಣಗಳು ಸೂಪರ್ ನೋವಾ ಎನ್೪೯ರಿಂದ ಹೊರಹೊಮ್ಮಿದ್ದು, ಇದು ನಮ್ಮ ಸೂರ್ಯ ಸಾವಿರ ವರ್ಷಗಳಲ್ಲಿ ಹೊರಹೊಮ್ಮಿಸಿದ ಶಕ್ತಿಗೆ ಸಮನಾಗಿದೆಯಂತೆ!
ಬಾಹ್ಯಾಕಾಶದ ವಜ್ರಗಳು: ನಮ್ಮ ಸೂರ್ಯನಷ್ಟು ದ್ರವ್ಯರಾಶಿಯುಳ್ಳ ನಕ್ಷತ್ರಗಳು ಹೈಡ್ರೋಜನ್ ಸಮ್ಮಿಲನ ಕ್ರಿಯೆಯನ್ನು ನಡೆಸಿ ಅಪಾರ ಶಕ್ತಿಯನ್ನು ಹೊಂದುತ್ತದೆ. ಈ ಶಕ್ತಿಯಿಂದ ನಕ್ಷತ್ರದ ಹೊರಾವರಣ ಕಳಚಿ ಕೇವಲ ನಕ್ಷತ್ರದ ಗರ್ಭ ಮಾತ್ರ ಉಳಿಯುತ್ತದೆ. ಇದನ್ನು ಶ್ವೇತ ಕುಬ್ಜ (ವೈಟ್ ಡ್ವಾರ್ಫ್) ಎನ್ನುತ್ತಾರೆ (ಚಿತ್ರ ಗಮನಿಸಿ). ಈ ಗರ್ಭ ಸುಮಾರು ೫೦ ಕಿ.ಮೀ. ವ್ಯಾಸವನ್ನು ಹೊಂದಿದ್ದು ಇಂಗಾಲ ಮತ್ತು ಆಮ್ಲಜನಕಗಳು ಹರಳುಗಟ್ಟಿ ವಜ್ರದಂತೆ ಗೋಚರಿಸುತ್ತದೆ. ಇಂತಹ ವಜ್ರವೊಂದನ್ನು ಸೆಂಟಾರಿಸ್ ನಕ್ಷತ್ರ ಪುಂಜ ಬಿಪಿಎಂ ೩೭೦೯೩ ರಲ್ಲಿ ಗುರುತಿಸಲಾಗಿದೆ. ಇದು ೫ ದಶಲಕ್ಷ ಕೋಟಿ ಪೌಂಡ್ ಭಾರವಿದೆಯಂತೆ ! ಇದರ ಶುದ್ಧತೆಯನ್ನು ಹೇಳುವುದಾದರೆ ೧೦ ದಶಲಕ್ಷ ಕೋಟಿ ಕೋಟಿ ಕ್ಯಾರೆಟ್ ಗಳಂತೆ !
(ಮುಗಿಯಿತು)
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ