ನಕ್ಸಲೀಯರ ನಾಡಿನಲ್ಲಿ ರವಿ ಬೆಳಗೆರೆ

ನಕ್ಸಲೀಯರ ನಾಡಿನಲ್ಲಿ ರವಿ ಬೆಳಗೆರೆ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ರವಿ ಬೆಳಗೆರೆ ಪ್ರಕಾಶನ, ರಾಜರಾಜೇಶ್ವರಿ ನಗರ, ಬೆಂಗಳೂರು - ೫೬೦೦೯೮
ಪುಸ್ತಕದ ಬೆಲೆ
ರೂ. ೧೩೫.೦೦, ಮುದ್ರಣ: ೨೦೨೩

ರವಿ ಬೆಳಗೆರೆಯವರ ಅಕಾಲ ನಿಧನದ ಬಳಿಕ ಅವರು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬರೆದ, ಪ್ರಕಟವಾಗದೇ ಉಳಿದಿದ್ದ, ಅಪೂರ್ಣವಾಗಿದ್ದ ಬರಹಗಳು ಒಂದೊಂದಾಗಿ ಪುಸ್ತಕರೂಪದಲ್ಲಿ ಹೊರ ಬರುತ್ತಿದೆ. ಅದೇ ಸಾಲಿಗೆ ಸೇರುವ ಒಂದು ಪುಸ್ತಕ ಇತ್ತೀಚೆಗೆ ಹೊರ ಬಂದಿದೆ. ಈ ಪುಸ್ತಕದ ಬಹಳಷ್ಟು ವಿಷಯಗಳನ್ನು ರವಿ ಬೆಳಗೆರೆ ತಮ್ಮ ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಬರೆದಿದ್ದಾರೆ. ಒಂದು ಸಮಯದಲ್ಲಿ ನಕ್ಸಲ್ ಚಳುವಳಿಯ ಮೇಲೆ ಒಲವಿದ್ದ ರವಿ ಬೆಳಗೆರೆ ಪತ್ರಕರ್ತರಾಗಿದ್ದ ಸಮಯದಲ್ಲಿ ಪೀಪಲ್ಸ್ ವಾರ್ ಗ್ರೂಪ್ ಸಂಸ್ಥಾಪಕ ಕೊಂಡಪಲ್ಲಿ ಸೀತಾರಾಮಯ್ಯ ಅವರ ಸಂದರ್ಶನ ಮಾಡಿದ್ದರು. ಈ ಸಂದರ್ಶನದ ಪೂರ್ಣ ಪಾಠವನ್ನು 'ನಕ್ಸಲೀಯರ ನಾಡಿನಲ್ಲಿ ರವಿ ಬೆಳಗೆರೆ' ಎನ್ನುವ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.

ಪುಸ್ತಕದ ಬೆನ್ನುಡಿಯಲ್ಲಿ ರವಿ ಬೆಳಗೆರೆಯವರು ಬರೆದ ಮಾತುಗಳು ಇವೆ. ಇಲ್ಲಿ ಅವರು ಬರೆಯುತ್ತಾರೆ “ ಈ ಪುಸ್ತಕದ ಮೂಲಕ ತೆಲುಗುನಾಡಿನ ವೃದ್ಧನೊಬ್ಬನ ಜೀವನ ಚರಿತ್ರೆಯನ್ನು ನೀವು ಓದಲಿದ್ದೀರಿ. ಆತನೊಂದಿಗೆ ನಾನು ದಿನಗಟ್ಟಲೆ ಓಡಾಡಿದ್ದೇನೆ. ಊಟ ಮಾಡಿದ್ದೇನೆ. ಆತನ ಅನುಭವಗಳನ್ನು ನನ್ನವೇ ಅನ್ನುವಷ್ಟರ ಮಟ್ಟಿಗೆ ಅನುಭವಿಸಿ ಈ ನೂರಾರು ಪುಟಗಳ ಬರವಣಿಗೆ ಮಾಡಿದ್ದೇನೆ. ಇದನ್ನೆಲ್ಲ ಬರೆಯುತ್ತಿದ್ದ ದಿನಗಳು, ನನ್ನ ಬದುಕಿನ ಯಾತನಾಮಯ ದಿನಗಳಾಗಿದ್ದವು. ‘ಕರ್ಮವೀರ'ದ ನೌಕರಿ ಬಿಟ್ಟಿದ್ದೆ. ಮನೆಯಲ್ಲಿ ಬಡತನವಿತ್ತು. ಹೇಗೋ ಒಂದೂವರೆ ಸಾವಿರ ರೂಪಾಯಿ ಹೊಂಚಿಕೊಂಡು, ನನ್ನ ಸಹೋದ್ಯೋಗಿಯೊಬ್ಬರ ಕೆಮರಾ ಹಿಡಿದುಕೊಂಡು ಕೊಂಡಪಲ್ಲಿಯವರನ್ನು ಅರಸುತ್ತಾ ಆಂಧ್ರದ ಕಾಡುಗಳಿಗೆ ನುಗ್ಗಿಬಿಟ್ಟೆ. ನನ್ನನ್ನು ಮಿತ್ರನಂತೆ, ಸಂಗಾತಿಯಂತೆ ಮಗನಂತೆ ನಡೆಸಿಕೊಂಡರು ಕೊಂಡಪಲ್ಲಿ ಸೀತಾರಾಮಯ್ಯ, ಇಂಥದೊಂದು ಬರವಣಿಗೆಗೆ ಆ ವೃಧ್ಧನನ್ನು ಒಪ್ಪಿಸಿದ್ದೇ ದೊಡ್ದ ಸಾಹಸವಾಯಿತು. ನಾನೇನು ನೆಹರೂನಾ? ಇಂದಿರಾಗಾಂಧೀನಾ? ನನ್ನ ಬದುಕಿನ ಕತೆ ಯಾಕೆ ಬರೀತಿಯಾ? ಎಂದು ಕೇಳಿದ್ದರು ಆತ.

“ನೀವು ನೆಹರೂ ಅಥವಾ ಇಂದಿರಾಗಾಂಧಿ ಅಲ್ಲವಾದುದರಿಂದಲೇ ಇದನ್ನು ಬರೀತಿದ್ದೀನಿ" ಎಂದು ಗಂಟುಬಿದ್ದೆ. ನೀವು ಮನಸ್ಸಿಟ್ಟು ಓದಿದಿರಾದರೆ-ಸೀತಾರಾಮಯ್ಯನವರ ಬದುಕಿನ ರೌದ್ರ- ರೋಮಾಂಚನ ಸೀಕ್ವೆನ್ಸುಗಳು ನಿಮ್ಮನ್ನು ತಲ್ಲಣಗೊಳಿಸುತ್ತವೆ. ಒಂದು ಆವೇಶ ಬಹುಕಾಲ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ನನ್ನಂತೆ ನೀವೂ ಯಾರದಾದರೊಂದು ಕೆಮರಾ ಕಡ ತಂದುಕೊಂಡು, ಅಗ್ನಿಯೋಧರ ಗಾಯನ ಕೇಳಲು ಆಂಧ್ರದ ಕಾಡು ಹುಡುಕಿಕೊಂಡು ಹೊರಡುತ್ತೀರಿ. ದಯವಿಟ್ಟು ಆ ಕೆಲಸ ಮಾಡಿ. ಜಗತ್ತಿನ unusual ಸಂಗತಿಗಳನ್ನು ಬರವಣಿಗೆಯಲ್ಲಿ ದಾಖಲಿಸುವುದಕ್ಕಿಂತ ದೊಡ್ಡ thrill ಮತ್ತೊಂದಿಲ್ಲ. ಥ್ರಿಲ್ಲೇ ಇಲ್ಲದೆ ಬದುಕುವುದು -ಬದುಕೇ ಅಲ್ಲ.” 

ಪುಸ್ತಕದ ಪ್ರಕಾಶಕರಾಗಿರುವ ರವಿ ಬೆಳಗೆರೆಯವರ ಪತ್ನಿ ಯಶೋಮತಿ ರವಿ ಬೆಳಗೆರೆಯವರು ತಮ್ಮ ಮಾತಿನಲ್ಲಿ ರವಿ ಬೆಳಗೆರೆಯವರ ಬಗ್ಗೆ, ಅವರ ಸಾಧನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಪತ್ರಿಕೆಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕ ಡಾ. ಎನ್ ಜಗದೀಶ್ ಕೊಪ್ಪ ಇವರು. ರವಿ ಬೆಳಗೆರೆಯವರ ಆತ್ಮೀಯ ವಲಯದಲ್ಲಿದ್ದ ಜಗದೀಶ್ ಕೊಪ್ಪ ಇವರು ತಮ್ಮ ಹಾಗೂ ಬೆಳಗೆರೆ ಅವರ ಆತ್ಮೀಯತೆಯನ್ನು ಹಾಗೂ ನಕ್ಸಲ್ ನೇತಾರ ಕೊಂಡಪಲ್ಲಿ ಸೀತಾರಾಮಯ್ಯನವರ ಬಗ್ಗೆ ಬರೆದಿದ್ದಾರೆ. ಅವರು ವ್ಯಕ್ತ ಪಡಿಸಿದ “ಅಂಧ್ರದ ಮಹಾನ್ ಹೋರಾಟಗಾರರ ಅನನ್ಯ ಕಥನ" ಎನ್ನುವ ಮಾತಿನ ಆಯ್ದ ಭಾಗ ಇಲ್ಲಿದೆ.

“ ಕೊಂಡಪಲ್ಲಿ ಸೀತಾರಾಮಯ್ಯ ಮತ್ತು ಅವರ ಸಹ ಹೋರಾಟಗಾರ ಕೆ.ಜಿ.ಸತ್ಯಮೂರ್ತಿಯಿಂದ ಹಿಡಿದು ಬಹುತೇಕ ಮಂದಿ ಹೋರಾಟದಿಂದ ವೈಯಕ್ತಿಕ ಬದುಕನ್ನು ಕಳೆದುಕೊಂಡರೇ ಹೊರತು ಏನನ್ನೂ ಸಂಪಾದಿಸಲಿಲ್ಲ. ಕೊಂಡಪಲ್ಲಿಯವರು ೨೦೦೨ರ ಎಪ್ರಿಲ್ ತಿಂಗಳಲ್ಲಿ ವಿಜಯವಾಡದ ಮೊಮ್ಮಗಳ ಮನೆಯಲ್ಲಿ ನಿಧನರಾದರೆ, ಕೆ ಜಿ ಸತ್ಯಮೂರ್ತಿಯವರು ಅದೇ ವಿಜಯವಾಡದಲ್ಲಿ ಲಾರಿ ಚಾಲಕನಾಗಿದ್ದ ಕಿರಿಯ ಪುತ್ರ ಪ್ರಸನ್ನ ಎಂಬಾತನ ನಿವಾಸದಲ್ಲಿ ೨೦೧೨ರ ಮೇ ತಿಂಗಳಲ್ಲಿ ನಿಧನರಾದರು. ಇವರು ಆಂಧ್ರಪ್ರದೇಶದಲ್ಲಿ ಸಂಪಾದಿಸಿದ್ದು “ಅಮರುಡು" ಅಂದರೆ ಸಾವಿಲ್ಲದ “ಅಮರರು" ಎಂಬ ಕೀರ್ತಿಯನ್ನು ಮಾತ್ರ. ರವಿ ಪ್ರಸ್ತುತ ಕೃತಿಯಲ್ಲಿ ನಕ್ಸಲರ ಹೋರಾಟದ ಕಥನದ ಜೊತೆಗೆ ನಾಯಕರ ವ್ಯಕ್ತಿ ಚಿತ್ರಣವನ್ನು ಅತ್ಯಂತ ಪರಿಣಾಮವಾಗಿ ಕಟ್ಟಿಕೊಟ್ಟಿದ್ದಾನೆ.” 

ಪುಸ್ತಕದ ತುಂಬೆಲ್ಲಾ ಕೊಂಡಪಲ್ಲಿ ಸೀತಾರಾಮಯ್ಯನವರ ಹಾಗೂ ಅವರ ಕುಟುಂಬದ, ಸಹಚರರ ಛಾಯಾಚಿತ್ರಗಳಿವೆ. ತುಂಬಾ ಹಿಂದಿನ ಚಿತ್ರಗಳಾದುದರಿಂದ ಅಷ್ಟೊಂದು ಸ್ಪಷ್ಟವಾಗಿಲ್ಲ. ೧೪೪ ಪುಟಗಳ ಈ ಪುಸ್ತಕದಲ್ಲಿ ನಕ್ಸಲ್ ನೇತಾರನೊಬ್ಬನ ಬದುಕಿನ ಪುಟಗಳನ್ನು ಅವರದ್ದೇ ಮಾತಿನಿಂದ ಅನಾವರಣಗೊಳಿಸಲಾಗಿದೆ. ಈ ಪುಸ್ರಕವನ್ನು “ಅನ್ಯಾಯದ ವಿರುದ್ಧ ತಿರುಗಿ ಬಿದ್ದು ಹೋರಾಡುವ ಸಮಸ್ತ ಕ್ರಾಂತಿಕಾರಿ ಮನಸುಗಳಿಗೆ" ಅರ್ಪಣೆ ಮಾಡಲಾಗಿದೆ.