ನಕ್ಸಲ್ - ಗಾಂಧಿ - ಅಂಬೇಡ್ಕರ್ - ನಾವು ಮತ್ತು ವಿಕ್ರಂ ಗೌಡ ಎನ್ ಕೌಂಟರ್...

ನಕ್ಸಲ್ - ಗಾಂಧಿ - ಅಂಬೇಡ್ಕರ್ - ನಾವು ಮತ್ತು ವಿಕ್ರಂ ಗೌಡ ಎನ್ ಕೌಂಟರ್...

"ಗುರಿ ಅಥವಾ ಉದ್ದೇಶ ಎಷ್ಟು ಮುಖ್ಯವೋ ಆ ಗುರಿಯನ್ನು ತಲುಪುವ ಮಾರ್ಗವೂ ಸಹ ಅಷ್ಟೇ ಮುಖ್ಯ. ಅದನ್ನು ತಲುಪಲು ಸತ್ಯ, ಅಹಿಂಸೆ, ಸರಳತೆ, ನೈತಿಕತೆ ಮತ್ತು ಕಾನೂನಿನ ವ್ಯವಸ್ಥೆಗೆ ಗೌರವ ನೀಡಬೇಕು. ಯಾವುದೇ ಹಿಂಸೆ, ಕೋಪ, ವಂಚನೆ, ದ್ರೋಹ ಎಂಬ ಸಾಧನಗಳು ಒಳ್ಳೆಯದಲ್ಲ ಮತ್ತು ಅಪಾಯಕಾರಿ " ಎಂಬ ಅರ್ಥದ ಮಾತುಗಳನ್ನು ಮಹಾತ್ಮ ಗಾಂಧಿಯವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ನಕ್ಸಲ್ ಚಳುವಳಿಯ ಮುಂಚೂಣಿಯಲ್ಲಿದ್ದ ವಿಕ್ರಮ ಗೌಡ ಎಂಬ ವ್ಯಕ್ತಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಇದೇನು ಆಶ್ಚರ್ಯಕರ, ಅಸಹಜ ಘಟನೆಯೇನು ಅಲ್ಲ. ಇದು ಬಹುತೇಕ ನಿರೀಕ್ಷಿತವೇ. ಇಂದಲ್ಲ ನಾಳೆ ಅವರ ಜೀವ ಪೊಲೀಸರ ಗುಂಡಿಗೆ ಆಹುತಿಯಾಗಲೇಬೇಕಿತ್ತು. ಸುಮಾರು 20 ವರ್ಷಗಳಷ್ಟು ತಡವಾಗಿದ್ದೇ‌ ಅವರ ಅದೃಷ್ಟ. ಇದು ವಾಸ್ತವ. ಶೋಷಣೆಯ ವಿರುದ್ಧದ ಹೋರಾಟದಲ್ಲಿ ಜೀವತೆತ್ತ ವಿಕ್ರಂ ಗೌಡ ಅವರ ಆತ್ಮಕ್ಕೆ ಶಾಂತಿ ಕೋರುತ್ತಾ...

ನಕ್ಸಲ್ ಚಳುವಳಿಯ ಉದ್ದೇಶದ ಬಗ್ಗೆ ನಮಗೆ ಸಹಾನುಭೂತಿ ಇದೆ ಮತ್ತು ಬೆಂಬಲವಿದೆ. ಆದರೆ ಅವರ ಮಾರ್ಗದ ಬಗ್ಗೆ ತೀವ್ರ ವಿರೋಧವಿದೆ, ಆಕ್ರೋಶವಿದೆ, ಧಿಕ್ಕಾರವಿದೆ, ಹಾಗೆಯೇ ಪೋಲೀಸ್ ಎನ್ ಕೌಂಟರ್ ನಿಜ, ಅನಿವಾರ್ಯ ಮತ್ತು ಅವರ ಹೇಳಿಕೆಗಳು ವಾಸ್ತವ ಆಗಿದ್ದಲ್ಲಿ ಪೋಲೀಸರ ಕರ್ತವ್ಯ ನಿಷ್ಠೆ ಮತ್ತು ಶ್ರಮದ ಬಗ್ಗೆ ಮೆಚ್ಚುಗೆಯಿದೆ. ನಕ್ಸಲ್ ಎಂಬುದೇನು ಕೆಟ್ಟ ಪದವೂ ಅಲ್ಲ, ಹಿಂಸಾತ್ಮಕವಾದ, ಅಸಂವಿಧಾನಿಕ ಅರ್ಥವೂ ಅಲ್ಲ. ನಕ್ಸಲ್ ಎಂಬುದು ಪಶ್ಚಿಮ ಬಂಗಾಳದ ನಕ್ಸಲ್ ಬಾರಿ ಎಂಬ ಒಂದು ಊರಿನ ಹೆಸರು. ಅಲ್ಲಿ ಗೆರಿಲ್ಲಾ ಮಾದರಿಯ ಸಶಸ್ತ್ರ ಹೋರಾಟ ಪ್ರಾರಂಭವಾಗಿ, ಹಾಗೇ ಮುಂದುವರಿದು  ಕಮ್ಯುನಿಸಂ ಸಿದ್ದಾಂತದ ಚಳುವಳಿಯ, ಹೋರಾಟದ ಸೈದ್ಧಾಂತಿಕ ಹಿನ್ನೆಲೆಯ ಭಾಗವಾಗಿರುವ ಒಂದು ಹೋರಾಟವನ್ನು ಪ್ರತಿನಿಧಿಸುವ ಪದವಷ್ಟೇ.

ಬಹುಶಃ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಈ ನಕ್ಸಲ್ ಚಿಂತನೆ, ಮನೋಭಾವ ಈ ಸಮಾಜದಲ್ಲಿ ಒಂದಲ್ಲ ಒಂದು ಬಾರಿ ಮೂಡಿಯೇ ಇರುತ್ತದೆ. ಅದರಲ್ಲೂ ಇಂದಿನ ಭ್ರಷ್ಟಾಚಾರದ ಯುಗದಲ್ಲಿ ನಮಗೆ ಅನ್ಯಾಯವಾದಾಗ ಅದಕ್ಕೆ ಕಾರಣರಾದವರನ್ನು ಹೊಡೆಯುವ ಅಥವಾ ಕೊಲ್ಲುವಷ್ಟು ಕೋಪ ಬರುತ್ತದೆ. ಅದನ್ನೇ ನಕ್ಸಲ್ ಮನೋಭಾವ ಎನ್ನಬಹುದು. ಇದನ್ನು ಸರಳವಾಗಿ ಹೇಳಬೇಕೆಂದರೆ ನಕ್ಸಲ್ ಎಂಬುದು ಒಂದು ಬಂಡಾಯ, ಒಂದು ವಿರೋಧ, ಒಂದು ಪ್ರತಿಭಟನೆ, ಅಂದರೆ ಯಾವುದೇ ರೀತಿಯ ಶೋಷಣೆ, ಅನ್ಯಾಯ, ಅಕ್ರಮ, ಭ್ರಷ್ಟಾಚಾರ, ಅಸಮಾನತೆ, ಅಮಾನವೀಯತೆಯನ್ನು ಕಂಡಾಗ ಸಿಡಿದೆಳುವ ಮನೋಭಾವವೇ ನಕ್ಸಲಿಸಂ. ಆದರೆ ಅದು ಹಿಂಸಾತ್ಮಕವಾದರೆ ಅದು ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧ.

ಬಸವಣ್ಣನವರ ಕನಸಿನ, ಅಂಬೇಡ್ಕರ್ ಅವರ ಆಶಯದ ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಡುವ ಒಂದು ಮಾರ್ಕ್ಸ್ ವಾದದ ಸೈದ್ಧಾಂತಿಕ ನಿಲುವೇ ನಕ್ಸಲಿಸಂ. ಆದರೆ ಅದನ್ನು ಹಿಂಸಾ ಮಾರ್ಗದಲ್ಲಿ ಸಾಧಿಸುವ ಅತ್ಯಂತ ಕೆಟ್ಟ, ಮೂರ್ಖತನದ, ಮಕ್ಕಳಾಟದ, ಬಾಲಿಶ ಮಾರ್ಗವೇ ನಕ್ಸಲಿಸಂ ಎಂದು ಅನೇಕ ಜನರಿಂದ ಬಿಂಬಿತವಾಗಿದೆ. ನಿಜಕ್ಕೂ ನಕ್ಸಲ್ ಎಂಬುದು ಈ ವೇಳೆಗಾಗಲೇ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳಬೇಕಾಗಿತ್ತು. ಕೆಲವು ರಾಜ್ಯಗಳ ಕೆಲವೇ ಕೆಲವು ಸಂಘಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಕಡೆ ಅದು ಪ್ರಾಮುಖ್ಯತೆ ಕಳೆದುಕೊಂಡಿದೆ. ಕರ್ನಾಟಕದಲ್ಲಿಯಂತು ಅದು ಸಾಧ್ಯವೂ ಇಲ್ಲ, ಅದರ ಅವಶ್ಯಕತೆಯೂ ಇಲ್ಲ.

ನಿಜಕ್ಕೂ ಮುಖ್ಯ ವಾಹಿನಿಯಲ್ಲಿ ಈ ವ್ಯವಸ್ಥೆಯ ದೌರ್ಜನ್ಯದ ವಿರುದ್ಧ ಹೋರಾಡಲು ಅನೇಕ ಮಾರ್ಗಗಳಿವೆ. ಶೋಷಣೆಯ ರೂಪಗಳು ಸಹ ಸಾಕಷ್ಟು ಬದಲಾಗುತ್ತಿದೆ. ಆಗ ಜಮೀನ್ದಾರರು, ಶ್ರೀಮಂತರು ಕೂಲಿ ಕಾರ್ಮಿಕರ ಮೇಲೆ ನಡೆಸುತ್ತಿದ್ದ ದೌರ್ಜನ್ಯ, ಶೋಷಣೆ ಇದೀಗ ಅಷ್ಟಾಗಿ ಕಂಡು ಬರುತ್ತಿಲ್ಲ. ಆದರೆ ಅದೇ ರೀತಿಯಲ್ಲಿ  ಆದರೆ ಬೇರೆ ರೂಪದಲ್ಲಿ, ಪರೋಕ್ಷವಾಗಿ ಕಾರ್ಪೊರೇಟ್ ಸಂಸ್ಕೃತಿ ಯುವ ಜನಾಂಗವನ್ನು ಶೋಷಿಸುತ್ತಿದೆ. ಅದರ ವಿರುದ್ಧ ಹೋರಾಡಬೇಕಾಗಿದೆ. ಅದನ್ನು ಕೆಲವರು ನಗರ ನಕ್ಸಲಿಸಂ ಎಂದು ಕರೆಯುತ್ತಾರೆ. ಆ ಹೋರಾಟ ಮತ್ತು ಹಾಗೆ ಕರೆಸಿಕೊಳ್ಳುವುದು ತಪ್ಪೇನು ಅಲ್ಲ, ಅದಕ್ಕಾಗಿ ಸಂಕೋಚ ಪಡುವಂತದ್ದೇನು ಇಲ್ಲ. ಅದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಈ ಸಂವಿಧಾನದ ಅಡಿಯಲ್ಲಿ, ಮಾನವೀಯತೆಯ ನೆಲೆಯಲ್ಲಿ, ಅನ್ಯಾಯದ ವಿರುದ್ಧ ಪ್ರತಿಭಟನೆ, ಸತ್ಯಾಗ್ರಹ, ಹೋರಾಟ, ಚಳವಳಿ, ಘೋಷಣೆಗಳನ್ನು ಕೂಗುತ್ತಾ ಜನರನ್ನು ಒಗ್ಗೂಡಿಸಿ, ಜಾಗೃತಗೊಳಿಸುವುದು, ಚುನಾವಣಾ ರಾಜಕೀಯದಲ್ಲಿ ಯಶಸ್ಸು ಗಳಿಸುವುದರಲ್ಲಿ ಯಾವ ತಪ್ಪೂ ಇಲ್ಲ.

ಆದರೆ ಯಾವುದೇ ವ್ಯಕ್ತಿಯನ್ನು, ಅನಿವಾರ್ಯ ಮತ್ತು ಜೀವ ರಕ್ಷಣಾತ್ಮಕ ಪರಿಸ್ಥಿತಿಯನ್ನು ಹೊರತುಪಡಿಸಿ ಹಲ್ಲೆ ಮಾಡುವುದು, ಕೊಲ್ಲುವುದು ಖಂಡಿತವಾಗಿಯೂ ನಾಗರಿಕ ಸಮಾಜಕ್ಕೆ, ನಮ್ಮ ಸಂವಿಧಾನಕ್ಕೆ ಮಾಡುವ  ಅವಮಾನವಾಗಿದೆ ಮತ್ತು ಅಪರಾಧವಾಗುತ್ತದೆ. ಕರ್ನಾಟಕದಲ್ಲಿ ಇನ್ನು ಹೆಚ್ಚೇನು ನಕ್ಸಲರು ಇದ್ದಂತೆ ಇಲ್ಲ. ಕೆಲವೇ ಕೆಲವು ನಕ್ಸಲರು ಈಗ ಕಾಡಿನಲ್ಲಿ ತಪ್ಪಿಸಿಕೊಂಡು ಅಲೆದಾಡುತ್ತಿರಬಹುದು. ದಯವಿಟ್ಟು ಯಾರಾದರೂ ಅವರನ್ನು ಸಂಪರ್ಕಿಸಿ ಪೊಲೀಸ್ ಗುಂಡಿಗೆ ಬಲಿಯಾಗುವ ಮೊದಲೇ ಸರ್ಕಾರ ಘೋಷಿಸಿರುವ ಪ್ಯಾಕೇಜ್ ಅಡಿಯಲ್ಲಿ ಅವರನ್ನು ಶರಣಾಗುವಂತೆ ಮಾಡಬೇಕಾಗಿದೆ.

ಈಗಲೂ ನಕ್ಸಲ್ ಚಳವಳಿಯ ಹಿಂಸಾ ಮಾರ್ಗದ ಅವಶ್ಯಕತೆ ಇದೆಯೇ? ಮುಖ್ಯವಾಹಿನಿಯ ಪ್ರಜಾಪ್ರಭುತ್ವದ ರಾಜಕೀಯ ಮಾರ್ಗ ಒಳ್ಳೆಯ ಆಯ್ಕೆಯಾಗಬಹುದಲ್ಲವೇ? ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್, ಛತ್ತೀಸ್ಗಡ, ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಬಿಹಾರದ ಕೆಲವು ಭಾಗಗಳು ಮುಂತಾದ ಕಡೆ ಕೇಳಿ ಬರುತ್ತದೆ. ಸೈದ್ಧಾಂತಿಕ ಸ್ಪಷ್ಟತೆ ಇದ್ದರೂ ಮಾರ್ಗದಲ್ಲಿ ಎಡವುತ್ತಿರುವ ನಕ್ಸಲರು, ಸ್ವಾತಂತ್ರ್ಯ ಬಂದು 77 ವರ್ಷಗಳ ನಂತರವೂ ಪ್ರಜಾಪ್ರಭುತ್ವ ಇಷ್ಟೊಂದು ಗಟ್ಟಿಯಾಗಿ, ಆಳವಾಗಿ, ತಾಂತ್ರಿಕವಾಗಿ ಮುಂದುವರಿದಿರುವಾಗ, ಸಮೂಹ ಸಂಪರ್ಕ ಕ್ರಾಂತಿಯಾಗಿರುವಾಗ, ಈಗಲೂ ಶಸ್ತ್ರಾಸ್ತ್ರ ಹೋರಾಟ ಮಾಡುತ್ತಾ, ಹಿಂಸೆಯನ್ನು ನಂಬಿಯೇ ತಮ್ಮ ಹೋರಾಟ ಮಾಡುವ ಈ ಚಳವಳಿ ನಿಜಕ್ಕೂ ವಿಷಾದನೀಯ ಮತ್ತು ಅತ್ಯಂತ ಮೂರ್ಖತನದ್ದು.

ಭಾರತದಂತ ಬೃಹತ್ ಶಕ್ತಿಯುತ ಸೈನಿಕ ಮತ್ತು ಪೊಲೀಸ್ ವ್ಯವಸ್ಥೆಯ ವಿರುದ್ಧ ಕೆಲವೇ ಜನ, ಕೆಲವೇ ಶಸ್ತ್ರಾಸ್ತ್ರಗಳ ಮೂಲಕ ಹೆದರಿಸುವ, ಬೆದರಿಸುವ ಮಾರ್ಗಗಳಿಂದ ತಮ್ಮ ಯೋಜನೆ ಕಾರ್ಯರೂಪಕ್ಕೆ ತರುವ ಯೋಚನೆಯೇ ಅತ್ಯಂತ ಬಾಲಿಶವಾದದ್ದು. ಅನ್ಯಾಯದ ವಿರುದ್ಧ, ಶೋಷಣೆಯ ವಿರುದ್ಧ, ದುರ್ಬಲರ ಪರವಾಗಿ ತಮ್ಮ ತನು ಮನ ಧನವನ್ನು ಧಾರೆ ಎರೆದು  ಹೋರಾಡುವುದು ಉತ್ತಮ ಮಾರ್ಗವೇನೋ ನಿಜ. ಆದರೆ ಅದಕ್ಕಾಗಿ ಶಸ್ತ್ರ ಮತ್ತು ಅದರ ಮೂಲಕ ಹಿಂಸೆಯನ್ನು ಖಂಡಿತವಾಗಿಯೂ ಈ ನೆಲದ ಯಾವ ನಾಗರಿಕರು ಒಪ್ಪಲು ಸಾಧ್ಯವಿಲ್ಲ.

ನಿಜಕ್ಕೂ ನಕ್ಸಲರಿಗೆ ಆದರ್ಶಗಳಾಗಿ, ಸೈದ್ಧಾಂತಿಕ ಮಾದರಿಯಾಗಿ, ದಾರಿ ತೋರಬಹುದಾದ ಇಬ್ಬರು ವ್ಯಕ್ತಿಗಳೆಂದರೆ ಮಹಾತ್ಮಾ ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್. ಒಂದು ಚಳವಳಿ, ಅದರ ಹಿನ್ನೆಲೆ, ಅದರ ಮಾರ್ಗ, ಅದರ ಗುರಿ, ಅದನ್ನು ಸಾಧಿಸುವ ರೀತಿ ನೀತಿ, ಸ್ಪಷ್ಟತೆ, ಪ್ರಾಮಾಣಿಕತೆ ಈ ವಿಷಯದಲ್ಲಿ ಮಹಾತ್ಮ ಗಾಂಧಿ ನಿಜಕ್ಕೂ ಇಡೀ ವಿಶ್ವದ ಎಲ್ಲ ಹೋರಾಟಗಳಿಗೆ ಮಾದರಿಯಾಗುತ್ತಾರೆ. ಹಾಗೆಯೇ ಆ ಹೋರಾಟಗಳ ಯಶಸ್ಸು, ಕ್ರಮಬದ್ಧತೆ, ಅದು ಪ್ರಾಯೋಗಿಕವಾಗಿ, ಆಡಳಿತಾತ್ಮಕವಾಗಿ ಜಾರಿಯಾಗಬೇಕಾದರೆ ಅದಕ್ಕೆ ಅನುಸರಿಸಬೇಕಾದ ಆಡಳಿತಾತ್ಮಕ ಸ್ಪಷ್ಟತೆ ಬಾಬಾ ಸಾಹೇಬರ ಸಂವಿಧಾನಾತ್ಮಕ ಮೌಲ್ಯಗಳಲ್ಲಿ ಅಡಗಿದೆ. ಈ ಇಬ್ಬರ ಯೋಚನೆ ಶಕ್ತಿಯನ್ನು ಪ್ರಾಮಾಣಿಕವಾಗಿ ಮತ್ತು ವ್ಯಾಪಕವಾಗಿ ಬಳಸಿಕೊಳ್ಳಲು ನಕ್ಸಲರಿಗೆ ಸಾಧ್ಯವಾಗುವುದೇ ಆದರೆ ಖಂಡಿತವಾಗಲೂ ಈ ಜನರ ನಡುವೆ ಅವರು ತಮ್ಮ ಆಶಯಗಳನ್ನು ಪೂರೈಸಿಕೊಳ್ಳುವ ಎಲ್ಲ ಸಾಧ್ಯತೆಗಳು ಇದೆ ಮತ್ತು ಆ ಸಾಧ್ಯತೆಗಳು ಅನಿವಾರ್ಯ ಸಹ.

ಹಿಂಸೆಯಿಂದ ಏನನ್ನು ಸಾಧಿಸುವುದು ಸಾಧ್ಯವಾಗುವುದಿಲ್ಲ. ಜೊತೆಗೆ ಒಂದು ವೇಳೆ ಹಿಂಸೆಯಿಂದ ಏನನ್ನಾದರೂ ಸಾಧಿಸುವುದು ಸಾಧ್ಯವಾದರೂ ಅದರಿಂದ ಆಗುವ ದುಷ್ಪರಿಣಾಮಗಳ ಮುಂದೆ ಫಲಿತಾಂಶ ಪ್ರಯೋಜನಕ್ಕೇ ಬರುವುದಿಲ್ಲ. ಕೆಲವು ಕಡೆ ನಕ್ಸಲರಿಂದ ಪೊಲೀಸರ ಹತ್ಯೆ, ಮತ್ತೆ ಕೆಲವು ಕಡೆ ಪೊಲೀಸರಿಂದ ನಕ್ಸಲರ ಹತ್ಯೆ, ಇಬ್ಬರೂ ಸಹ ತಮ್ಮ ಕರ್ತವ್ಯಗಳಲ್ಲಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಇಬ್ಬರು ಬಹುತೇಕ ಕೆಳ ಮಧ್ಯಮ ಮತ್ತು ಬಡತನದ ಜೀವನಶೈಲಿ ಹೊಂದಿರುವವರು. ಇದನ್ನು ಎಷ್ಟು ದಿನ ಸಹಿಸಿಕೊಳ್ಳುವುದು. ಈ ಸುದ್ದಿಗಳು ನಾಗರೀಕ ಸಮಾಜಕ್ಕೆ ಕಪ್ಪು ಚುಕ್ಕೆಗಳಾಗುತ್ತವೆ, ಹೃದಯವಂತರಿಗೆ ಕರುಳು ಹಿಂಡುತ್ತದೆ. ಅನಾವಶ್ಯಕವಾಗಿ ತಮ್ಮ ಅಮೂಲ್ಯ ಜೀವಗಳನ್ನು ಬಲಿಕೊಡುವುದು ಖಂಡಿತ ಒಪ್ಪುವ ಮಾತಲ್ಲ. ಸರಳವಾಗಿ ಸಾಮಾನ್ಯ ಜನರಿಗಾಗಿ ನಕ್ಸಲಿಸಂ ಬಗ್ಗೆ ಸಣ್ಣ ಮಾಹಿತಿ ನಾಳಿನ ಲೇಖನದಲ್ಲಿ…

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ