ನಕ್ಸಲ್ ಚಳುವಳಿಗೆ ಹೊಡೆತ

ನಕ್ಸಲ್ ಚಳುವಳಿಗೆ ಹೊಡೆತ

ನಕ್ಸಲೀಯ ಮುಖಂಡ ವಿಕ್ರಂ ಗೌಡನ ಹತ್ಯೆಯೊಂದಿಗೆ ನಕ್ಸಲ್ ನಿಗ್ರಹ ದಳವು ಮಲೆನಾಡಿನಲ್ಲಿ ನಕ್ಸಲೀಯ ಪಿಡುಗು ಮಟ್ಟ ಹಾಕುವಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದೆ. ಉಡುಪಿಯ ಹೆಬ್ರಿ ತಾಲೂಕಿನ ಪೀತಬೈಲು ಎಂಬಲ್ಲಿ ವಿಕ್ರಂ ಗೌಡನನ್ನು ಎನ್ ಕೌಂಟರ್ ನಲ್ಲಿ ಕೊಲ್ಲಲಾಗಿದೆ. ಕೇರಳದಲ್ಲಿ ೧೯ ಪ್ರಕರಣಗಳೂ ಸೇರಿದಂತೆ ಆತನ ಮೇಲೆ ೬೦ಕ್ಕೂ ಅಧಿಕ ಕೇಸ್ ಗಳು ದಾಖಲಾಗಿದ್ದವು. ಈಗಾಗಲೇ ಅವನತಿಯ ಹಾದಿಯಲ್ಲಿರುವ ನಕ್ಸಲ್ ಚಳುವಳಿಗೆ ವಿಕ್ರಂ ಗೌಡನ ಹತ್ಯೆಯು ಮತ್ತೊಂದು ದೊಡ್ದ ಹೊಡೆತ ನೀಡಿರುವುದು ಸುಳ್ಳಲ್ಲ.

ದಶಕಗಳ ಹಿಂದೆ ಮಲೆನಾಡಿನಲ್ಲಿ ನಕ್ಸಲ್ ಪಿಡುಗು ತೀವ್ರವಾಗಿತ್ತು. ಮಲೆನಾಡಿನ ತಪ್ಪಲಲ್ಲಿರುವ ಬಡಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ, ಅವರ ಸಮಸ್ಯೆಗಳ ವಿರುದ್ಧವಾಗಿ ಹೋರಾಟ ನಡೆಸುವುದಾಗಿ ಹೇಳಿಕೊಳ್ಳುತ್ತಿದ್ದ ನಕ್ಸಲರ ಕುರಿತಂತೆ ಆ ಭಾಗದ ಜನರ ಬೆಂಬಲವೂ ಕಂಡುಬಂದಿತ್ತು. ಆದರೆ ಸಮಸ್ಯೆ ಪರಿಹಾರಕ್ಕೆ ಅವರು ನಡೆಸುತ್ತಿರುವುದು ಬಂದೂಕಿನ ಹೋರಾಟ ಎಂಬುದು ಜನರಿಗೆ ಯಾವಾಗ ಅರಿವಾಯಿತೋ ಹಾಗೂ ಈ ಬಂದೂಕಿನ ಹೋರಾಟದಲ್ಲಿ ಹಲವಾರು ಜನರು ಜೀವ ಕಳಕೊಂಡರೋ ಆಗ ನಕ್ಸಲರಿಗೆ ಜನಬೆಂಬಲ ಕಡಿಮೆಯಾಯಿತು. ಇದರ ಜತೆಗೇ ಪೋಲೀಸರು ಕೂಡ ನಕ್ಸಲೀಯರ ವಿರುದ್ಧ ತೀವ್ರ ಕಾರ್ಯಾಚರಣೆ ಆರಂಭಿಸಿದ್ದರಿಂದಾಗಿ ಕೆಲವರು ನಕ್ಸಲ್ ಮುಖಂಡರು ಸಾವಿಗೀಡಾಗಿ ನಕ್ಸಲ್ ಚಳುವಳಿ ಕ್ಷೀಣಗೊಳ್ಳುತ್ತಾ ಬಂದಿತ್ತು. ಇತೀಚಿನ ದಿನಗಳಲ್ಲಿ ಕಸ್ತೂರಿ ರಂಗನ್ ವರದಿಯ ಅನುಷ್ಟಾನವನ್ನು ವಿರೋಧಿಸುವ ನೆಪದಲ್ಲಿ ನಕ್ಸಲರು ಮತ್ತೆ ಚಿಗುರಿಕೊಳ್ಳುವ ಸಂಕೇತವನ್ನು ತೋರಿದ್ದರು. ಮಲೆನಾಡಿನಲ್ಲಿ ಸಕ್ರಿಯರಾಗುವ ಪ್ರಯತ್ನಗಳನ್ನೂ ನಡೆಸಿದ್ದರು. ಆದರೀಗ ವಿಕ್ರಂ ಗೌಡನ ಹತ್ಯೆಯು ಈ ಪ್ರಯತ್ನಕ್ಕೆ ಮತ್ತೆ ಹೊಡೆತ ನೀಡಿದೆ.

ಕರ್ನಾಟಕದಲ್ಲಷ್ಟೇ ಅಲ್ಲದೆ ಇಡೀ ದೇಶದಲ್ಲಿ ನಕ್ಸಲೀಯ ಚಳುವಳಿ ಈಗ ಅವನತಿಯ ಅಂಚಿನಲ್ಲಿದೆ. ಒಂದೆಡೆಯಿಂದ ನಕ್ಸಲರು ಜನಬೆಂಬಲ ಕಳೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆಯಿಂದ ನಕ್ಸಲ್ ನಿಗ್ರಹ ದಳಗಳು ನಕ್ಸಲೀಯರನ್ನು ನಿರ್ಮೂಲ ಮಾಡುವಲ್ಲಿ ಸಫಲವಾಗುತ್ತಿದೆ. ನಕ್ಸಲ್ ಪಿಡುಗು ಶೇ. ೯೦ರಷ್ಟು ನಿವಾರಣೆಯಾಗಿದ್ದು, ನಕ್ಸಲೀಯರನ್ನು ಸಂಪೂರ್ಣ ನಿರ್ನಾಮಗೊಳಿಸುವ ದಿನಗಳು ಸಮೀಪಿಸುತ್ತಿವೆ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೆಲ ಸಮಯದ ಹಿಂದಷ್ಟೇ ನುಡಿದಿದ್ದರು. ಅದೇನೋ ಸರಿ, ಆದರೆ ಕಾಡಿನಲ್ಲಿ ಬಂದೂಕು ಹಿಡಿದುಕೊಂಡು ತಿರುಗಾಡುವ ನಕ್ಸಲರಷ್ಟೇ ಅಪಾಯಕಾರಿಗಳು ನಮ್ಮ ನಡುವೆ ಇದ್ದುಕೊಂಡೇ ಸುಭಗರಂತೆ ನಟಿಸುವ ‘ನಗರ ನಕ್ಸಲರು’ ಕೂಡಾ. ಯುವಕರ ತಲೆಯಲ್ಲಿ ಕ್ರಾಂತಿಯ ಭ್ರಾಂತಿಯನ್ನು ತುಂಬಿ ಅವರು ಬಂದೂಕು ಹಿಡಿಯುವಂತೆ ಪ್ರೇರೇಪಿಸುವ ಇವರು ಮಾತ್ರ ನಗರದಲ್ಲಿ ಐಷಾರಾಮದ ಜೀವನ ನಡೆಸುತ್ತಿದ್ದಾರೆ. ಸತ್ತ ನಕ್ಸಲರ ಕುರಿತಂತೆ ಕಣ್ಣೀರು ಸುರಿಸುತ್ತಾರೆ. ಈಗ ವಿಕ್ರಂ ಗೌಡನ ಹತ್ಯೆಯ ಕುರಿತಂತೆಯೂ ಕೆಲವರಿಂದ ಅನುಕಂಪದ ನುಡಿಗಳು ಕೇಳತೊಡಗಿವೆ. ನಕ್ಸಲರಿಂದ ಸಾವಿಗೀಡಾದ ಅಮಾಯಕ ಜನರ ಕುರಿತಂತೆ ಇವರ ಹೃದಯ ವಿಡಿಯುವುದಿಲ್ಲ ಎಂಬುದೇ ಸೋಜಿಗ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೧-೧೧-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ