ನಗರದಲ್ಲಿ ವಾಸ, ಹಳ್ಳಿಯಲ್ಲಿ ಸಾವಯವ ತರಕಾರಿ ಕೃಷಿ
ಪ್ರತಿ ತಿಂಗಳೂ ಕೊನೆಯ ಮೂರು ಭಾನುವಾರಗಳಲ್ಲಿ ಮಂಗಳೂರಿನ ಪಂಜೆ ಮಂಗೇಶ ರಾಮ್ ರಸ್ತೆಯಲ್ಲಿ ಸಾವಯವ ಹಣ್ಣು-ತರಕಾರಿ-ಧಾನ್ಯ ಸಂತೆ ಸಂಘಟಿಸುತ್ತಿರುವ "ಸಾವಯವ ಕೃಷಿಕ ಗ್ರಾಹಕ ಬಳಗ”ವು ವಿಷಮುಕ್ತ ಊಟದ ಬಟ್ಟಲು ಆಂದೋಲನದ ಅಂಗವಾಗಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಆಸಕ್ತ ಸದಸ್ಯರು ಸಾಮೂಹಿಕವಾಗಿ ತರಕಾರಿ ಬೆಳೆಯುವ ಯೋಜನೆ ರೂಪಿಸಿದೆ.
ಆರೋಗ್ಯ ವೃದ್ಧಿಗೆ ಸಾವಯವ ಆಹಾರ ಸೇವಿಸಬೇಕು ಎಂಬ ಅರಿವು ನಿಧಾನವಾಗಿ ಹೆಚ್ಚೆಚ್ಚು ಜನರಲ್ಲಿ ಮೂಡುತ್ತಿದೆ. ನಗರವಾಸಿಗಳಂತೂ ಸಾವಯವ ತರಕಾರಿಗಾಗಿ ಸದಾ ಹಂಬಲಿಸುತ್ತಾರೆ. ತಾಜಾ ತರಕಾರಿ ಮಾರುಕಟ್ಟೆಯಲ್ಲಿ ಸಿಕ್ಕರೂ ಅದು ಪರಿಪೂರ್ಣ ಸಾವಯವ ಅಲ್ಲ. ಮನೆಯ ಸುತ್ತಮುತ್ತ ಬೆಳೆಯೋಣವೆಂದರೆ ಜಾಗದ ಕೊರತೆ. ಹೀಗಾಗಿ ನಗರವಾಸಿಗಳಿಗೆ ಸದಾ ಸಾವಯವದ್ದೇ ಚಿಂತೆ. ನಗರವಾಸಿಗಳ ಈ ಸಮಸ್ಯೆಯನ್ನು ಮನಗಂಡ ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗವು ಸಾವಯವ ಗ್ರಾಹಕರಿಗಾಗಿ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ.
“ಸಾವಯವ ತರಕಾರಿ ನಾವೇ ಬೆಳೆಸಿ ಬಳಸೋಣ” ಎಂಬ ಯೋಜನೆಯನ್ನು ಬಳಗವು ಹಮ್ಮಿಕೊಂಡಿದೆ. ನಗರದ ಸಾವಯವ ಗ್ರಾಹಕರು ಒಟ್ಟಾಗಿ ಒಂದು ಪ್ರದೇಶದಲ್ಲಿ ತಮಗೆ ತರಕಾರಿಗಳನ್ನು ಬೆಳೆದು ತಮ್ಮ ಮನೆಗೆ ಒಯ್ದು ಬಳಸುವುದು ಇದರ ಉದ್ದೇಶ. ಇದರ ಜೊತೆಗೆ, ಸಾವಯವ ಎಂದರೇನು? ನಮ್ಮ ಆಹಾರವನ್ನು ನಾವೇ ಬೆಳೆಸುವುದು ಹೇಗೆ? ಅದರಲ್ಲಿ ಇರುವ ಶ್ರಮ ಮತ್ತು ಸವಾಲುಗಳೇನು? ನಮ್ಮ ಕೈಯಿಂದಲೇ ಬೆಳೆದ ತರಕಾರಿಯನ್ನು ಕಂಡಾಗ ಯಾವ ರೀತಿ ಸಂತೃಪ್ತ ಭಾವನೆ ಮೂಡುತ್ತದೆ? ಇವನ್ನೆಲ್ಲ ಗ್ರಾಹಕರಿಗೆ ತಿಳಿಸುವ ಉದ್ದೇಶವನ್ನೂ ಯೋಜನೆ ಒಳಗೊಂಡಿದೆ.ಸಾವಯವ ಕೃಷಿಕ ಗ್ರಾಹಕ ಬಳಗದ ಈ ಯೋಜನೆಗೆ ಮಂಗಳೂರಿನಿಂದ ಸುಮಾರು ೨೫ ಕಿ.ಮೀ. ದೂರದಲ್ಲಿರುವ ಗಂಜಿಮಠ ಗ್ರಾಮ ಪಂಚಾಯತಿಯ ಮೊಗರು ಗ್ರಾಮದ ಸಾವಯವ ಕೃಷಿಕ ಜಯಾನಂದರ ಸಹಕಾರ. ತನ್ನ ಒಂದು ಎಕರೆ ಗದ್ದೆಯನ್ನು ಅವರು ಇದಕ್ಕಾಗಿ ಒದಗಿಸಿದರು. ಮಾತ್ರವಲ್ಲ, ಬಳಗದ ಸದಸ್ಯರೊಂದಿಗೆ ಸೇರಿ ಅವರೂ ತರಕಾರಿ ಬೆಳೆಯಲು ಮುಂದಾದರು. ಈ ಗದ್ದೆಯಲ್ಲಿ ೨೦೧೬ರ ಜನವರಿ ೧೫ರಿಂದ ಮೇ ೧೫ರ ವರೆಗೆ ತರಕಾರಿಗಳನ್ನು ಬೆಳೆಯಲಾಯಿತು.
ಬಳಗದ ಆಸಕ್ತ ೨೫ ಸದಸ್ಯರು ಅಲ್ಲಿ ಸಾಮೂಹಿಕವಾಗಿ ತರಕಾರಿ ಬೆಳೆಯುವ ಸಂಕಲ್ಪ ಮಾಡಿದರು. ಅವರಿಂದ ಆರಂಭದಲ್ಲಿ ನಿಗದಿತ ಶುಲ್ಕ ತೆತ್ತು ಯೋಜನೆಗೆ ನೋಂದಾವಣೆ. ಪ್ರತಿಯೊಬ್ಬರೂ ತಿಂಗಳಿಗೆ ಕನಿಷ್ಠ ನಾಲ್ಕು ಬಾರಿ ಗದ್ದೆಗೆ ತೆರಳಿ ತರಕಾರಿಗೆ ನೀರು ಸಿಂಪಡಣೆ ಸಹಿತ ಅಗತ್ಯ ಕೆಲಸಗಳನ್ನು ಗದ್ದೆಯಲ್ಲಿ ಮಾಡಬೇಕು. ಅಲ್ಲಿ ಬೆಳೆದ ಫಸಲನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳೋಣ ಎಂಬ ಒಪ್ಪಂದದೊಂದಿಗೆ ಯೋಜನೆಗೆ ಚಾಲನೆ.
ಎರಡರಿಂದ ಐದು ತಿಂಗಳ ಅವಧಿಯಲ್ಲಿ ಫಸಲು ನೀಡಬಲ್ಲ ಹತ್ತಾರು ಬಗೆಯ ತರಕಾರಿಗಳನ್ನು ಬೆಳೆಸಲು ಗದ್ದೆಯನ್ನು ಹದಗೊಳಿಸಲಾಯಿತು. ಲೆಕ್ಕಪರಿಶೋಧಕರು, ಸಾಫ್ಟ್ ವೇರ್ ಉದ್ಯೋಗಿಗಳು, ಉದ್ಯಮಿಗಳು, ಪ್ರಾಧ್ಯಾಪಕರು, ನಿವೃತ್ತ ಯೋಧರು, ಗೃಹಿಣಿಯರು ಹಾರೆ, ಪಿಕ್ಕಾಸು, ಕತ್ತಿ ಹಿಡಿದು ಉತ್ಸಾಹದಿಂದ ಕೆಲಸ ಮಾಡಿದರು. ಗದ್ದೆಯಲ್ಲಿ ರಚಿಸಲಾದ ಏರು ಸಾಲುಗಳಿಗೆ ಸುಡುಮಣ್ಣು, ಸೆಗಣಿ, ಹಟ್ಟಿಗೊಬ್ಬರ ಹಾಕಿ, ತರಕಾರಿ ಬೆಳೆಗೆ ಸಿದ್ಧಗೊಳಿಸಲಾಯಿತು.
ಬಳಗದ ಸದಸ್ಯರ ಮುತುವರ್ಜಿಯಿಂದಾಗಿ ಹಾಗೂ ಕಾರ್ಯದರ್ಶಿ ರತ್ನಾಕರ ಕುಳಾಯಿ ಅವರ ಮುಂದಾಳುತನದಿಂದಾಗಿ ಯೋಜನೆ ಯಶಸ್ವಿಯಾಯಿತು. ಅಲ್ಲಿ ಸಾವಯವ ಪದ್ಧತಿಯಲ್ಲಿ ಹರಿವೆ, ಬಸಳೆ, ಪಾಲಕ್, ಅಲಸಂಡೆ, ನೆಲಕಡಲೆ, ಮೂಲಂಗಿ, ಗೆಣಸು, ಸೌತೆ ಹಾಗೂ ಕಲ್ಲಂಗಡಿ ಬೆಳೆದ ಸಾಧನೆ ಸದಸ್ಯರದು. ಸಾವಯವ ತರಕಾರಿ ಸ್ವತಃ ಬೆಳೆದು ಆಸ್ವಾದಿಸಿದ ಸಂತೋಷಕ್ಕೆ ಬೆಲೆ ಕಟ್ಟಲಾಗದು. ಜೊತೆಗೆ, ಇನ್ನು ಮುಂದೆ ತಾವೇ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಯುವ ಆತ್ಮವಿಶ್ವಾಸ ಈ ಸದಸ್ಯರಲ್ಲಿ ತುಂಬಿದೆ. ನಗರವಾಸಿಗಳ ಸಾವಯವ ತರಕಾರಿ ಕೃಷಿಯ ಉತ್ಸಾಹ ಕಂಡು ಆ ಗ್ರಾಮದ ಕೆಲವು ಯುವಕರೂ ಯೋಜನೆಗೆ ಕೈಜೋಡಿಸಿದ್ದು ವಿಶೇಷ.
ಹಳ್ಳಿಯ ಜನರು ಏರುಗತಿಯಲ್ಲಿ ನಗಕ್ಕೆ ವಲಸೆ ಬರುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಸಾವಯವ ಬಳಗದ ಸದಸ್ಯರು ನಗರದಿಂದ ಹಳ್ಳಿಗೆ ಹೋಗಿ ಸಾವಯವ ತರಕಾರಿ ಬೆಳೆಯುವ ಮೂಲಕ ಹೊಸ ಬೆಳವಣಿಗೆಗೆ ನಾಂದಿ ಹಾಡಿದ್ದಾರೆ. ಈ ಸಾವಯವ ಕೃಷಿ ಪ್ರಯೋಗದ ಯಶಸ್ಸಿನ ಸುದ್ದಿ ಕೇಳಿ, ಹೊಸ ಸದಸ್ಯರು ಬಳಗಕ್ಕೆ ಸೇರಿಕೊಳ್ಳುತ್ತಿದ್ದಾರೆ.
“ವಿಷಮುಕ್ತ ಊಟದ ಬಟ್ಟಲು ಆಂದೋಲನ ೨೦೧೫-೧೬ ಕಥನ” ಪುಸ್ತಕದಿಂದ.