ನಗರದ ಇಲಿ ಮತ್ತು ಹಳ್ಳಿಯ ಇಲಿ

ನಗರದ ಇಲಿ ಮತ್ತು ಹಳ್ಳಿಯ ಇಲಿ

ನಗರದ ಇಲಿ ಮತ್ತು ಹಳ್ಳಿ ಇಲಿ ದಾಯಾದಿಗಳು. ಅದೊಂದು ದಿನ ಹಳ್ಳಿ ಇಲಿಯ ಮನೆಗೆ ನಗರದ ಇಲಿ ಬಂತು. ಅವುಗಳ ಸಂಭಾಷಣೆ ಕೇಳೋಣ.

ಹಳ್ಳಿ ಇಲಿ: ನನ್ನ ಪುಟ್ಟ ಮನೆಗೆ ಬಾ. ಇಲ್ಲಿ ಕತ್ತಲು. ಆದರೆ, ನನ್ನ ಹಿತ್ತಿಲು ದೊಡ್ಡದು. ಹಿಂಬದಿಯಲ್ಲಿರುವ ಭತ್ತದ ಹೊಲಗಳು ವಿಶಾಲವಾಗಿವೆ ಮತ್ತು ಬಯಲುಗಳು ಶುಚಿಯಾಗಿವೆ.

ನಗರದ ಇಲಿ: ನಿನ್ನ ಮನೆಯಲ್ಲಿ ಬಹಳ ಕತ್ತಲು. ನಿನ್ನ ಮನೆಯಲ್ಲಿ ವಿದ್ಯುದ್ದೀಪಗಳು ಇಲ್ಲವೇ?
ಹಳ್ಳಿ ಇಲಿ: ಇಲ್ಲ, ಇಲ್ಲ. ಆದರೆ ಸೂರ್ಯ ಚೆನ್ನಾಗಿ ಬೆಳಗುತ್ತಾನೆ. ಬಾ, ಭತ್ತ ತಿನ್ನು. ಅಥವಾ  ನಿನಗೆ ಜೋಳ ಇಷ್ಟವೇ?

ನಗರದ ಇಲಿ: ಬೇಡ, ನಾನು ಭತ್ತ ತಿನ್ನೋಲ್ಲ. ಮತ್ತು ನನಗೆ ಜೋಳ ಇಷ್ಟವಿಲ್ಲ. ನಿನ್ನ ಆಹಾರ ಇಷ್ಟೇ ಏನು?
ಹಳ್ಳಿ ಇಲಿ: ಕೆಲವೊಮ್ಮೆ ಬಹಳ ಧಾನ್ಯಗಳು ಇರುತ್ತವೆ. ಕೊಯ್ಲಿನ ಸಮಯದಲ್ಲಿ ರೈತರು ಸ್ವಲ್ಪ ಭತ್ತ ಇಟ್ಟುಕೊಳ್ಳುತ್ತಾರೆ. ನಮಗೆ ಜೋಳ ಮತ್ತು ಹೆಸರುಕಾಳೂ ಸಿಗುತ್ತದೆ.

ನಗರದ ಇಲಿ: ನೀವು ಇಷ್ಟನ್ನೇ ತಿನ್ನುವುದೇ? ಭತ್ತ, ಜೋಳ ಮತ್ತು ಹೆಸರುಕಾಳು? ನಿಮಗೆ ಬೆಣ್ಣೆ ಮಾತು ಚೀಸ್ ಸಿಗೋದಿಲ್ಲವೇ? ಮಾಂಸ ಸಿಗೋದಿಲ್ಲವೇ?
ಹಳ್ಳಿ ಇಲಿ: ಇಲ್ಲ, ನನಗೆ ಬೆಣ್ಣೆ ಮತ್ತು ಚೀಸ್ ಸಿಗೋದಿಲ್ಲ. ಕೆಲವೊಮ್ಮೆ ಔತಣದಲ್ಲಿ ಉಳಿದ ಮಾಂಸ ಸಿಗುತ್ತದೆ.

ನಗರದ ಇಲಿ: ನೀನು ಯಾವತ್ತಾದರೂ ಕೇಕ್ ಅಥವಾ ಬಿಸ್ಕಿಟಿನ ರುಚಿ ನೋಡಿದ್ದೀಯಾ?
ಹಳ್ಳಿ ಇಲಿ: ಇಲ್ಲ, ನಾನು ಅವನ್ನು ಈ ವರೆಗೆ ತಿಂದೇ ಇಲ್ಲ. ಆದರೆ ಕೆಲವೊಮ್ಮೆ ನನಗೆ ಬಾಳೆ, ಮಾವು ಮತ್ತು ಪಪ್ಪಾಯಿ ಇಂತಹ ಹಣ್ಣುಗಳು ಸಿಗುತ್ತವೆ. ಈ ಹಳದಿ ಹಣ್ಣುಗಳೆಂದರೆ ನನಗೆ ಬಹಳ ಇಷ್ಟ.

ನಗರದ ಇಲಿ: ನಿನ್ನನ್ನು ನೋಡಿದಾಗ ನನಗೆ ಪಾಪ ಅನಿಸುತ್ತದೆ. ನೀನು ಅತ್ಯುತ್ತಮ ತಿನಿಸುಗಳಾದ ಹ್ಯಾಮ್, ಚಿಕನ್ ಅಥವಾ ಹೋಟ್-ಡಾಗ್ ಇವನ್ನೆಲ್ಲ ರುಚಿ ನೋಡಿಲ್ಲ. ನನ್ನ ಜೊತೆ ನಗರಕ್ಕೆ ಬಾ. ಅಲ್ಲಿ ದೊಡ್ಡದೊಡ್ಡ ಮನೆಗಳಿವೆ. ಮೂಟೆಮೂಟೆ ಆಹಾರ ಇರುವ ದೊಡ್ಡ ಮಾರುಕಟ್ಟೆಗಳಿವೆ. ರಾಶಿರಾಶಿ ಬಟ್ಟೆಗಳಿರುವ ಅಂಗಡಿಗಳಿವೆ. ಷೂ ಇತ್ಯಾದಿ ಹಲವಾರು ವಸ್ತುಗಳಿರುವ ಮಳಿಗೆಗಳಿವೆ.
ಹಳ್ಳಿ ಇಲಿ: ಸರಿ ಹಾಗಾದರೆ, ನಾನೀಗ ನಿನ್ನ ಜೊತೆ ನಗರಕ್ಕೆ ಹೊರಟೆ.

ಅಂತೂ ತನ್ನ ಹಳ್ಳಿ ದಾಯಾದಿಯೊಂದಿಗೆ ನಗರದ ಇಲಿ ನಗರಕ್ಕೆ ಬಂತು. ಅವರು ನಗರ ತಲಪಿದಾಗ ಕತ್ತಲಾಗಿತ್ತು.

ಹಳ್ಳಿ ಇಲಿ: ಅದ್ಯಾಕೆ ನಿನ್ನ ನಗರದಲ್ಲಿ ಇಷ್ಟು ಸದ್ದುಗದ್ದಲ? ನನ್ನ ಮನೆಯಲ್ಲಿ ರಾತ್ರಿಯಲ್ಲಿ ಎಲ್ಲವೂ ನಿಶ್ಶಬ್ದವಾಗಿರುತ್ತದೆ.
ನಗರದ ಇಲಿ: ಇಲ್ಲಿ ರಸ್ತೆಯಲ್ಲಿ ಕಾರುಗಳು, ಬಸ್ಸುಗಳು ಮತ್ತು ಟ್ರಕ್ಕುಗಳು ಓಡಾಡುತ್ತವೆ. ನಗರದ ಹಲವಾರು ಜನರು ರಾತ್ರಿ ಪ್ರಯಾಣಿಸುತ್ತಾರೆ. ಹಾಗಾಗಿ ಇಷ್ಟು ಸದ್ದುಗದ್ದಲ.
ಹಳ್ಳಿ ಇಲಿ: ಈ ಎಲ್ಲ ಸದ್ದುಗದ್ದಲದಿಂದಾಗಿ ನನಗೆ ತಲೆನೋವು ಬಂದಿದೆ.

ಅನಂತರ, ನಗರದ ಇಲಿ ಮತ್ತು ಹಳ್ಳಿ ಇಲಿ ದೊಡ್ಡ ಮನೆಯನ್ನು ತಲಪಿದವು.

ನಗರದ ಇಲಿ: ಒಳಗೆ ಬಾ. ಇದು ನನ್ನ ಒಡೆಯನ ಮನೆ. ಇದು ದೊಡ್ಡದಾಗಿದೆಯಲ್ಲವೇ? ಚಂದವಿದೆಯಲ್ಲವೇ?
ಹಳ್ಳಿ ಇಲಿ: ಹೌದು, ಹೌದು. ಆದರೆ, ಆ ದೊಡ್ಡ ಪ್ರಕಾಶವಾನವಾದ ಲೈಟುಗಳು ಏನವು? ದೊಡ್ಡ ನಕ್ಷತ್ರಗಳೇ?
ನಗರದ ಇಲಿ: ಅಲ್ಲ, ಅವು ವಿದ್ಯುತ್ ಲೈಟುಗಳು. ಮೇಜಿನಲ್ಲಿರುವ ತಿನಿಸುಗಳನ್ನು ನೋಡು. ಇಲ್ಲಿ ಬಾ, ತೋರಿಸುತ್ತೇನೆ.
ಹಳ್ಳಿ ಇಲಿ ಮೇಜಿನಲ್ಲಿದ್ದ ತಿನಿಸುಗಳನ್ನು ನೋಡಿತು. ಚಿಕನ್ ಇತ್ಯಾದಿ ತಿನಿಸುಗಳು ಅಲ್ಲಿದ್ದವು.
ನಗರದ ಇಲಿ: ಇದನ್ನು ತಿನ್ನು, ಎಷ್ಟು ರುಚಿಯಾಗಿದೆ ನೋಡು! ಇಲ್ಲಿದೆ ಚೀಸ್. ಇದನ್ನು ಬ್ರೆಡ್ ಜೊತೆ ತಿನ್ನು. ಕೇಕ್ ಮತ್ತು ಬಿಸ್ಕಿಟುಗಳು ಇಲ್ಲಿವೆ. ಬಾ, ಬಾ. ಇಬ್ಬರೂ ತಿನ್ನೋಣ.

ನಗರದ ಇಲಿ ತನ್ನ ದಾಯಾದಿಗೆ ಸ್ವಲ್ಪ ಚೀಸ್ ಮತ್ತು ಬ್ರೆಡ್ ಕೊಟ್ಟಿತು. ಕೇಕ್ ಮತ್ತು ಬಿಸ್ಕಿತ್, ಚಿಕನ್ ಮತ್ತು ಹ್ಯಾಮ್ ಇವನ್ನೆಲ್ಲ ಕೊಟ್ಟಿತು. ಅವೆರಡು ಇಲಿಗಳು ಖುಷಿಯಿಂದ ತಿನ್ನುತ್ತಿದ್ದಾಗ ಅಲ್ಲಿಗೆ ಎರಡು ದೊಡ್ಡ ನಾಯಿಗಳು ಬಂದವು. ಅವು ಬೌ, ಬೌ, ಎಂದು ಜೋರಾಗಿ ಬೊಗಳ ತೊಡಗಿದವು.

ನಗರದ ಇಲಿ: ಅಯ್ಯೋ, ನಾಯಿಗಳು ಬಂದಿವೆ! ನಾವಿಲ್ಲಿಂದ ಓಡೋಣ ಬಾ.
ಹಳ್ಳಿ ಇಲಿ: ಸ್ವಲ್ಪ ಹೊತ್ತು ಇಲ್ಲಿರೋಣ. ನಾವು ಇವನ್ನೆಲ್ಲ ತಿನ್ನಬೇಕಲ್ಲವೇ?
ನಗರದ ಇಲಿ: ಬೇಡ, ಬೇಡ. ಅವೆಲ್ಲ ಅಲ್ಲಿರಲಿ. ಈ ನಾಯಿಗಳು ನಮ್ಮನ್ನು ಕೊಂದೇ ಬಿಡುತ್ತವೆ. ಇಲ್ಲಿಂದ ಜೋರಾಗಿ ಓಡು.

ಎರಡೂ ಇಲಿಗಳು ಕತ್ತಲು ತುಂಬಿದ ಬಿಲದೊಳಗೆ ಓಡಿ ಹೋದವು. ನಾಯಿಗಳಿಗೆ ಅವನ್ನು ಹಿಡಿಯಲಾಗಲಿಲ್ಲ. ಹಳ್ಳಿ ಇಲಿಗೆ ಎಷ್ಟು ಭಯವಾಯಿತೆಂದರೆ, ಅದಕ್ಕೆ ಮಾತನಾಡಲಿಕ್ಕೂ ಸಾಧ್ಯವಾಗಲಿಲ್ಲ.

ನಗರದ ಇಲಿ: ಬಚಾವ್! ನಾಯಿಗಳು ಹೊರಟು ಹೋಗಿವೆ. ನಾವು ಈಗ ಪುನಃ ಅಲ್ಲಿಗೆ ಹೋಗಿ ತಿನ್ನೋಣ.
ಹಳ್ಳಿ ಇಲಿ: ಅಯ್ಯೋ, ಬೇಡವೇ ಬೇಡ. ನನಗೆ ಈಗ ಹೆದರಿಕೆಯಿಂದಾಗಿ ತಿನ್ನಲು ಸಾಧ್ಯವೇ ಇಲ್ಲ. ನಾನು ನನ್ನ ಮನೆಗೆ ವಾಪಾಸು ಹೋಗುತ್ತೇನೆ. ಇಲ್ಲಿ ಬದುಕಲು ನನ್ನಿಂದ ಸಾಧ್ಯವೇ ಇಲ್ಲ. ನಿನ್ನ ನಗರದಲ್ಲಿ ಬಹಳ ಸದ್ದುಗದ್ದಲ. ನಿನಗೆ ವಿವಿಧ ತಿನಿಸುಗಳೇನೋ ಸಿಗುತ್ತವೆ. ಆದರೆ ನಾವು ಇಲ್ಲಿ ಸುರಕ್ಷಿತರಲ್ಲ. ನಮ್ಮ ಹಳ್ಳಿಯಲ್ಲಿ ಬದುಕುವುದೇ ಒಳ್ಳೆಯದು. ಅಲ್ಲಿ ಎಲ್ಲವೂ ನಿಶ್ಶಬ್ದವಾಗಿರುತ್ತದೆ. ಅಲ್ಲಿಯ ನಾಯಿಗಳು ಸ್ನೇಹಭಾವದಿಂದ ಇರುತ್ತವೆ. ಅಲ್ಲಿದ್ದರೆ ನಾನು ಹೆಚ್ಚು ದಿನ ಬದುಕುತ್ತೇನೆ.

ಆದ್ದರಿಂದ, ಹಳ್ಳಿ ಇಲಿ ತನ್ನ ಹಳ್ಳಿಗೆ ಹಿಂತಿರುಗಿತು. ತನ್ನ ನೆಮ್ಮದಿಯ ಪುಟ್ಟ ಮನೆಗೆ ಮರಳಿತು.

ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟ್ ಪುಸ್ತಕ “ರೀಡ್ ಮಿ ಎ ಸ್ಟೋರಿ”
ಚಿತ್ರಕಾರ: ಡಾನಿಲೊ ರೆಯಸ್