ನಗರವಾಸಿಗಳಿಂದ ಸಾವಯವ ಭತ್ತ ಬೇಸಾಯ

ನಗರವಾಸಿಗಳಿಂದ ಸಾವಯವ ಭತ್ತ ಬೇಸಾಯ

ಜೂನ್ ೨೦೧೬ರಲ್ಲಿ “ಬನ್ನಿ, ಭತ್ತ ಬೆಳೆಯೋಣ” ಎಂದು ಗದ್ದೆಗಿಳಿದರು, ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಸದಸ್ಯರು. ಇದಕ್ಕೆ ೨೦೧೬ರ ಜನವರಿಯಿಂದ ಮೇ ತಿಂಗಳ ವರೆಗೆ ಗಂಜಿಮಠ ಹತ್ತಿರದ ಮೊಗರು ಗ್ರಾಮದಲ್ಲಿ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಸಿದ ಅನುಭವವೇ ಅವರಿಗೆ ಪ್ರೇರಣೆ. (ವಿವರಗಳಿಗೆ ಸಾವಯವ ಸಂಪದದ ನವಂಬರ್ ೨೦೧೬ ಸಂಚಿಕೆಯ “ನಗರದಲ್ಲಿ ವಾಸ, ಹಳ್ಳಿಯಲ್ಲಿ ಸಾವಯವ ತರಕಾರಿ ಕೃಷಿ” ಲೇಖನ ನೋಡಿ.)
ಬಳಗದ ಹತ್ತು ಸದಸ್ಯರು ಒಟ್ಟು ಸೇರಿ ಸಾವಯವ ಭತ್ತ ಬೇಸಾಯದ ಯೋಜನೆ ರೂಪಿಸಿದರು. ಇವರ ಉತ್ಸಾಹ ಕಂಡು ಭತ್ತ ಬೆಳೆಯಲು ತಮ್ಮ ಗದ್ದೆ ಒದಗಿಸಿದವರು ಕೆಂಜಾರಿನ ರಮೇಶ್. ಮಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಸಾಗುವ ಹಾದಿಯಲ್ಲಿ, ನಗರದಿಂದ ೧೦ ಕಿಮೀ ದೂರದಲ್ಲಿ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಎದುರು ಗುಡ್ಡದ ಬುಡದಲ್ಲಿದೆ ಅವರ ಗದ್ದೆ.
ನಗರವಾಸಿಗಳಾದ ಈ ಸದಸ್ಯರಿಗೆ ಈ ವರೆಗೆ ಭತ್ತದ ಬೇಸಾಯ ಮಾಡಿದ ಅನುಭವವಿಲ್ಲ. ಆದರೂ ಮಣ್ಣಿಗಿಳಿದು ಕೃಷಿ ಮಾಡಬೇಕೆಂಬ ಹುರುಪು. ಆರಂಭಿಕ ಭಂಡವಾಳ ರೂ.೨೦,೦೦೦ ಅವರೇ ಭರಿಸಿದರು. ಆ ಗದ್ದೆಯಲ್ಲಿದ್ದ ಕಳೆಗಳನ್ನು ಅವರೇ ಕಿತ್ತರು. ಅನಂತರ ಗದ್ದೆಯನ್ನು ಪವರ್ ಟಿಲ್ಲರಿನಿಂದ ಉಳುಮೆ ಮಾಡಿಸಿ, ಕೆಸರು ತುಂಬಿದ ಗದ್ದೆಯ ಪಾತಳಿ ಹದ ಮಾಡಲಿಕ್ಕಾಗಿ ತಾವೇ “ಹಲಗೆ ಹಾಕಿದರು”. ಸುಮಾರು ಒಂದು ಕಿಮೀ ದೂರದಿಂದ ೫೦ ಬುಟ್ಟಿ ಹಟ್ಟಿಗೊಬ್ಬರವನ್ನು ಅವರೇ ಹೊತ್ತು ತಂದು ಗದ್ದೆಗೆ ಹಾಕಿ, ಬಿತ್ತನೆಗೆ ಗದ್ದೆ ಸಜ್ಜುಗೊಳಿಸಿದರು. ಮೊಳಕೆ ಬರಿಸಿದ “ಕಜೆ ಜಯ” ಭತ್ತದ ತಳಿಯ ಒಂದು ಮುಷ್ಠಿ ಬೀಜ ಸಾಂಕೇತಿಕವಾಗಿ ಬಿತ್ತುವಾಗ ಈ ಸದಸ್ಯರಿಗಾದ ಅನುಭವ ಬರಹಕ್ಕೆ ಮೀರಿದ್ದು. ತದನಂತರ, ಆ ಗದ್ದೆಯಲ್ಲಿ ಭತ್ತದ ಬೀಜ ಬಿತ್ತಿ ಸಹಕರಿಸಿದವರು ಅನುಭವಿ ಕೃಷಿಕರಾದ ರಮೇಶ್. ಜೂನ್ ಕೊನೆಯ ವಾರದಲ್ಲಿ ಬಿತ್ತಿದ ಬೀಜಗಳಿಂದ ಭತ್ತದ ಸಸಿಗಳು ಮೇಲಕ್ಕೆದ್ದು ನೋಡನೋಡುತ್ತಿರುವಂತೆಯೇ ಗದ್ದೆಯೆಲ್ಲ ಹಸುರು ಪೈರಿನಿಂದ ತುಂಬಿತು. ಕ್ರಮೇಣ ಸಸಿಗಳಲ್ಲಿ ಹೂಗಳು ಮೂಡಿ, ತೆನೆಗಳು ತೂಗಾಡಿದವು. ನವಂಬರ್ ೨೦೧೬ರ ಆರಂಭದಲ್ಲಿ ಭತ್ತದ ಸಸಿಗಳ ಕೊಯ್ಲು ಮಾಡಿ, ತೆನೆಗಳನ್ನು ಬೇರ್ಪಡಿಸಿದಾಗ ಸಿಕ್ಕಿದ್ದು ಸುಮಾರು ಐದು ಕ್ವಿಂಟಾಲ್ ಭತ್ತ (ಸುಮಾರು ೪೦ ಸೆಂಟ್ಸ್ ಹೊಲದಿಂದ).
ಹೀಗೆ ಭತ್ತ ಬೆಳೆಸಿದ ಬಳಗದ ಸದಸ್ಯರಿಗೆ ಭತ್ತದ ಬೇಸಾಯದ ನೋವು ಮತ್ತು ತಾವೇ ಬೆಳೆಸಿದ ಭತ್ತದಿಂದ ಅಕ್ಕಿ ಮಾಡಿ ಉಣ್ಣುವ ನಲಿವು – ಇವೆರಡರ ಅನುಭವವೂ ಆಗಿದೆ. ಹೆಚ್ಚೆಚ್ಚು ನಗರವಾಸಿಗಳು ಇಂತಹ ಅನುಭವ ಗಳಿಸಲು ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಈ ಪ್ರಯೋಗ ಪ್ರೇರಣೆಯಾಗಲಿ.