ನಗರವಾಸಿ ಗ್ರಾಹಕರೊಡನೆ ಸಾವಯವ ಕೃಷಿಕರ ಕರಾರು

ನಗರವಾಸಿ ಗ್ರಾಹಕರೊಡನೆ ಸಾವಯವ ಕೃಷಿಕರ ಕರಾರು

ಚಕ್ರಿ ಬಾಯಿ ಮತ್ತು ಇತರ ೨೫೦ ಕೃಷಿಕರ ಬದುಕಿನಲ್ಲಿ ೧೭ ಜೂನ್ ೨೦೧೮ ಒಂದು ವಿಶೇಷ ದಿನ. ಅವರೆಲ್ಲರೂ ತೆಲಂಗಾಣದ ಜಹೀರ್ಬಾದ್ ಹತ್ತಿರದ ಅರ್ಜುನನಾಯಕ್ ಹಟ್ಟಿಯವರು. ಆ ದಿನ ಅವರ ಹಟ್ಟಿಗೆ ೧೨೦ ಕಿಮೀ ದೂರದ ರಾಜಧಾನಿ ಹೈದರಾಬಾದಿನಿಂದ ಸುಮಾರು ೧೦೦ ಗ್ರಾಹಕರು ಬಂದಿದ್ದರು – ಕೃಷಿಕರು ಮತ್ತು ಗ್ರಾಹಕರ ನಡುವಣ “ಕರಾರು ಪತ್ರ” ಸಹಿ ಮಾಡಲಿಕ್ಕಾಗಿ.

ಇದೇನು ಕರಾರು ಪತ್ರ? ಇದು ಗ್ರಾಹಕರಿಂದ ಕೃಷಿಕರು ನಿರ್ದಿಷ್ಟ ಹಣ ಪಡೆದು, ಅದಕ್ಕೆ ಬದಲಾಗಿ ಒಂದು ವರುಷದ ಅವಧಿಯಲ್ಲಿ ವಿವಿಧ ಕೃಷಿಉತ್ಪನ್ನಗಳನ್ನು ಒದಗಿಸುವ ಒಪ್ಪಂದದ ಕರಾರು ಪತ್ರ. ಇದರ ಅನುಸಾರ ರೂ.೨೫,೦೦೦ ಮತ್ತು ರೂ.೧೨,೫೦೦ ಬೆಲೆಯ ಎರಡು ಪ್ಯಾಕೇಜುಗಳಿವೆ. ಈ ಹಣಕ್ಕೆ ಬದಲಾಗಿ, ೬ ವಿಧದ ಧಾನ್ಯ, ೪ ವಿಧದ ದ್ವಿದಳ ಧಾನ್ಯ, ಎರಡು ವಿಧದ ಎಣ್ಣೆಕಾಳು ಮತ್ತು ಬೆಲ್ಲವನ್ನು ರೈತರು ಗ್ರಾಹಕರಿಗೆ ನೀಡುತ್ತಾರೆ. ಉದಾಹರಣೆಗೆ ರೂ.೨೫,೦೦೦ ಪಾವತಿಸಿದ ಗ್ರಾಹಕರಿಗೆ ಒಂದು ವರುಷದಲ್ಲಿ ಒದಗಿಸುವ ವಸ್ತುಗಳು: ೨೫ ಕಿಗ್ರಾ ಸಣ್ಣಜೋಳ ಅಥವಾ ಸಜ್ಜೆ ಹಿಟ್ಟು, ೩೦ ಕಿಗ್ರಾ ರಾಗಿ ರವೆ, ೪೦ ಕಿಗ್ರಾ ತೊಗರಿ ಬೇಳೆ, ೪೦ ಕಿಗ್ರಾ ಹೆಸರು ಬೇಳೆ, ೨೫ ಕಿಗ್ರಾ ಉದ್ದು, ೮ ಕಿಗ್ರಾ ಬೆಲ್ಲ ಹಾಗೂ ಇನ್ನೂ ಕೆಲವು ಕೃಷಿಉತ್ಪನ್ನಗಳು. ರೂ.೧೨,೫೦೦ ಪಾವತಿಸಿದ ಗ್ರಾಹಕರಿಗೆ ಇವೆಲ್ಲದರ ಅರ್ಧ ಭಾಗದಷ್ಟು ಕೃಷಿಉತ್ಪನ್ನಗಳ ಸರಬರಾಜು.

“ನಾನು ನಿಮ್ಮೊಂದಿಗಿದ್ದೇನೆ ಎಂಬುದನ್ನು ಈ ಕರಾರು ಪತ್ರದ ಮೂಲಕ ನಮ್ಮರೈತರಿಗೆ ಘೋಷಿಸುತ್ತಿದ್ದೇನೆ” ಎನ್ನುತ್ತಾರೆ ತೆಲುಗು ಟಿವಿ ರಂಗದ ಝಾನ್ಸಿ ರಾಣಿ. “ಇದು ಹಣ ಹೂಡಿಕೆ ಮಾಡಿ ಲಾಭ ಮಾಡಿಕೊಳ್ಳುವ ವ್ಯವಹಾರವಲ್ಲ. ಕೇವಲ ಗ್ರಾಹಕಳಾಗಿ ಈ ಸಂಬಂಧಕ್ಕೆ ನಾನು ಕೈ ಹಾಕಿಲ್ಲ. ರೈತರಿಗೆ ಬೆಂಬಲ ನೀಡಲಿಕ್ಕಾಗಿ ನಾನೂ ಜೊತೆಗೂಡಿದ್ದೇನೆ. ಆಹಾರಪದ್ಧತಿ ಬದಲಾಯಿಸಬೇಕೆಂಬ ಬಯಕೆಯೂ ನನ್ನಲ್ಲಿದೆ” ಎಂಬುದು ಅವರ ವಿವರಣೆ.

ಆರೋಗ್ಯಪೂರ್ಣ ಜೀವನದ ಬಯಕೆ ಈ ಯೋಜನೆಯ ಮೂಲದಲ್ಲಿದೆ. ಭಾರತೀಯರು ಅಕ್ಕಿ ಮತ್ತು ಗೋಧಿ ಸೇವನೆ ಕಡಿಮೆ ಮಾಡಬೇಕಾಗಿದೆ; ಅವುಗಳ ಬದಲಾಗಿ ಹೆಚ್ಚು ಆರೋಗ್ಯದಾಯಕ ಧಾನ್ಯಗಳನ್ನು ಸೇವಿಸುವುದು ಒಳ್ಳೆಯದು. ಅಂತಹ ಧಾನ್ಯಗಳನ್ನು ಬೆಳೆಸಲು ಕಡಿಮೆ ನೀರು ಮತ್ತು ಕಡಿಮೆ ಗೊಬ್ಬರಗಳು ಸಾಕೆಂಬುದು ಗಮನಾರ್ಹ. ಮುಖ್ಯವಾಗಿ, ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿಯ ಆಹಾರ ಬದಲಾಯಿಸಿದರೆ, ಆರೋಗ್ಯಪೂರ್ಣ ಬದುಕಿಗೆ ಸಹಾಯ.

“ಕೃಷಿಕರು ಒಂದು ಅಥವಾ ಎರಡು ವಿಧದ ಧಾನ್ಯ ಅಥವಾ ದ್ವಿದಳಧಾನ್ಯ ಮಾತ್ರ ಒದಗಿಸುತ್ತೇವೆಂದು ಒಪ್ಪಂದ ಮಾಡಿಕೊಳ್ಳಬಹುದಾಗಿತ್ತು. ಆದರೆ, ನಮ್ಮ ಗ್ರಾಮೀಣ ಪ್ರದೇಶಗಳ ಕೃಷಿಯ ತಳಿವೈವಿಧ್ಯವನ್ನು ಮತ್ತು ಬಹುಬೆಳೆಗಳನ್ನು ನಗರವಾಸಿಗಳ ಊಟದ ಬಟ್ಟಲಿಗೆ ವರ್ಗಾಯಿಸುವುದು ಮತ್ತು ಅಗ್ಗದ ಅಕ್ಕಿಯನ್ನೇ ತಿನ್ನುತ್ತಿರುವ ಗ್ರಾಹಕರಿಗೆ ಉತ್ತಮ ಬದಲಿ ಆಹಾರ ಒದಗಿಸುವುದು ನಮ್ಮ ಉದ್ದೇಶ” ಎನ್ನುತ್ತಾರೆ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಯ ನಿರ್ದೇಶಕರಾದ ಪಿ.ವಿ. ಸತೀಶ್. ಈ ಒಪ್ಪಂದ ಆ ಸೊಸೈಟಿಯದೇ ಯೋಜನೆ.

“ಮಳಿಗೆಯಲ್ಲಿ ಸಾವಯವ ಆಹಾರ ಖರೀದಿಸುವಾಗ ನಮ್ಮಲ್ಲಿ ಸುರಕ್ಷಿತ ಆಹಾರ ಖರೀದಿಸಿದ್ದೇವೆಂಬ ಭಾವ. ಆದರೆ ಈ ಯೋಜನೆಯಲ್ಲಿ ಪಾಲ್ಗೊಳ್ಳುವುದು ಅದಕ್ಕಿಂತಲೂ ಮಿಗಿಲಾದ ಅನುಭವ. ಇಂತಹ ಯೋಜನೆಯನ್ನು ಮುಂಚೆಯೇ ಶುರು ಮಾಡಬೇಕಿತ್ತು. ಇದು ನಮ್ಮ ದೇಶದಲ್ಲಿ ಕೃಷಿಕ-ಗ್ರಾಹಕ ಸಂಬಂಧಕ್ಕೊಂದು ಹೊಸ ಮಾದರಿ; ಯಾಕೆಂದರೆ, ಈ ಮಾದರಿಯಲ್ಲಿ ರೈತರಿಗೆ ನೇರವಾಗಿ ಬೆಂಬಲ ಸೂಚಿಸುವ ಮೂಲಕ ಗ್ರಾಹಕರು ಹೆಚ್ಚಿನ ಬದ್ಧತೆ ತೋರಿಸುತ್ತಿದ್ದಾರೆ” ಎನ್ನುವುದು ಹೈದರಾಬಾದ್ ವಿಶ್ವವಿದ್ಯಾಲಯದ ಪ್ರೊಫೆಸರ್ ವಿನೋದ್ ಪವರಾಲ ಅವರ ಅಭಿಪ್ರಾಯ.

ತೆಲಂಗಾಣದ ಜಹೀರಾಬಾದ್ ಪ್ರದೇಶದ ರೈತರು ಅನುಸರಿಸುವ ಕೃಷಿಪದ್ಧತಿಯಲ್ಲಿ ಬೆಳೆ ಬೆಳೆಸುವ ವೆಚ್ಚ ಕಡಿಮೆ. ಹಾಗಾಗಿ, ಅಲ್ಲಿನ ರೈತರು ಸಾಲದ ವಿಷವರ್ತುಲದಲ್ಲಿ ಸಿಕ್ಕಿ ಬೀಳುವುದಿಲ್ಲ. ಹಲವು ತಲೆಮಾರುಗಳಿಂದ ಬಿತ್ತುತ್ತಿರುವ ದೇಸಿ ಬೀಜಗಳನ್ನೇ ಅವರು ಈಗಲೂ ಬಿತ್ತುತ್ತಾರೆ. ಅಲ್ಲಿ ಮಣ್ಣು ಮತ್ತು ಹವಾಮಾನ ಅವಲಂಬಿಸಿ, ಯಾವ ಬೀಜ ಬಿತ್ತಬೇಕೆಂದು ಅಲ್ಲಿನ ರೈತ ಸಮುದಾಯದ ಮಹಿಳೆಯರೇ ನಿರ್ಧರಿಸುತ್ತಾರೆ. ಗಮನಿಸಿ: ಅಲ್ಲಿನ ರೈತರೊಂದಿಗೆ ಕಳೆದ ಮೂವತ್ತು ವರುಷಗಳಿಂದ ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿ ಕೆಲಸ ಮಾಡುತ್ತಿದೆ; ಈ ಅವಧಿಯಲ್ಲಿ ಅಲ್ಲಿ ಸಾಲದ ಹೊರೆಯಿಂದ ಒಬ್ಬನೇ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ.

ಅಲ್ಲಿಂದ ಕೆಲವೇ ಕಿಲೋಮೀಟರುಗಳ ದೂರದಲ್ಲಿರುವ ಮೇಡಕ್ ಮತ್ತು ವಾರಂಗಲ್ ಜಿಲ್ಲೆಗಳಲ್ಲಿ ಪರಿಸ್ಥಿತಿ ತದ್ವಿರುದ್ಧ. ಅಲ್ಲಿ ಪ್ರತಿ ವರುಷ ಹಲವಾರು ರೈತರ ಆತ್ಮಹತ್ಯೆ. ಅಂಕೆಸಂಖ್ಯೆಗಳ ಪ್ರಕಾರ, ರೈತರ ಆತ್ಮಹತ್ಯೆಯಲ್ಲಿ ತೆಲಂಗಾಣ ರಾಜ್ಯಕ್ಕೆ ದೇಶದಲ್ಲಿ ಮೂರನೇ ಸ್ಥಾನ. ಆ ಜಿಲ್ಲೆಗಳ ರೈತರಿಗೆ ಹೋಲಿಸಿದಾಗ, ಜಹೀರಾಬಾದ್ ಪ್ರದೇಶದ ರೈತರು, ಮುಖ್ಯವಾಗಿ ಮಹಿಳೆಯರು, ಕೃಷಿಯ ಅಂತಃಸತ್ವವನ್ನು ಉಳಿಸಿಕೊಂಡಿದ್ದಾರೆ.

ನಮ್ಮ ದೇಶದ ಬಹುಪಾಲು ಪ್ರದೇಶದಲ್ಲಿ ಇಂದು ನಾವು ಕಾಣುತ್ತಿರುವುದು ವಿಷಮಯ ಕೃಷಿ; ರಾಸಾಯನಿಕ ಗೊಬ್ಬರಗಳು ಮತ್ತು ಪೀಡೆನಾಶಕಗಳನ್ನು ಮಣ್ಣಿಗೆ ಸುರಿಯುತ್ತಾ, ಭೂಮಿಗೆ ನೇರವಾಗಿ ವಿಷ ತುಂಬಿಸಲಾಗುತ್ತಿದೆ. ಆದರೆ ಇಂದು ನಮಗೆ ಬೇಕಾಗಿರುವುದು ವಿಷಮುಕ್ತ ಕೃಷಿ ಮತ್ತು ವಿಷಮುಕ್ತ ಆಹಾರ.

ಈ ನಿಟ್ಟಿನಲ್ಲಿ, ವಿಷಮುಕ್ತ ಆಹಾರಕ್ಕಾಗಿ ಮಾಲ್ ಹಾಗೂ ಮಳಿಗೆಗಳನ್ನು ಅವಲಂಬಿಸುವ ಬದಲಾಗಿ, ವಿಷಮುಕ್ತ ಆಹಾರ ಉತ್ಪಾದಿಸುವ ಪ್ರಕ್ರಿಯೆಯಲ್ಲಿ ಕೃಷಿಕರ ಜೊತೆಗಾರರಾಗಲು ನಗರವಾಸಿಗಳು ಮುಂದಾದದ್ದು ಐತಿಹಾಸಿಕ ಬೆಳವಣಿಗೆ. ಭಾರತದಲ್ಲೇ ಮೊದಲನೆಯದಾದ ತೆಲಂಗಾಣದ ಈ ನಗರವಾಸಿ ಗ್ರಾಹಕರು ಬೆಂಬಲಿಸುವ ವಿಷಮುಕ್ತ ಕೃಷಿ ಇತರ ರಾಜ್ಯಗಳಿಗೂ ಮಾದರಿಯಾಗಲಿ.

ಫೋಟೋ: ತೆಲಂಗಾಣದ ಜಹೀರಾಬಾದಿನ ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿ ಸಂಘಟಿಸಿದ ಅಂತರರಾಷ್ಟ್ರೀಯ ಬೀಜ ದಿನ ಕಾರ್ಯಕ್ರಮದಲ್ಲಿ ೨೬ ಗ್ರಾಮಗಳ ಮಹಿಳಾ ಪ್ರತಿನಿಧಿಗಳು ಪ್ರತಿಯೊಂದು ಗ್ರಾಮದಿಂದ ತಂದ ೫೦ ಬಗೆಯ ಸಿರಿಧಾನ್ಯಗಳ ಬೀಜಗಳನ್ನು ಪ್ರದರ್ಶಿಸಿರುವುದು. ಫೋಟೋ ಕೃಪೆ: ದ ಹಿಂದೂ ದಿನಪತ್ರಿಕೆ

ಗಮನಿಸಿ: ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿಯ ಸ್ಥಾಪಕರಾದ ಪಿ.ವಿ. ಸತೀಶ್ ಅವರು 19-3-2023ರಂದು ನಮ್ಮನ್ನು ಅಗಲಿದರು. ಗ್ರಾಮೀಣ ಬಡಜನರ ಬದುಕು ಬದಲಾಯಿಸಲಿಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಮಳೆಯಾಶ್ರಿತ ರೈತರ ಪಾರಂಪರಿಕ ಜ್ನಾನವನ್ನು ಅಪಾರವಾಗಿ ಗೌರವಿಸಿದವರು. ಆಗಿನ ಆಂಧ್ರದ ಜಹೀರಾಬಾದ್ ಪ್ರದೇಶದಲ್ಲಿ ಮಳೆಯಾಶ್ರಿತ ರೈತರ ಮಿಶ್ರಬೆಳೆ ಪದ್ಧತಿಯನ್ನು ಪುನಶ್ಚೇತನಗೊಳಿಸಿದವರು. ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸಲು ನಿರಂತರವಾಗಿ ಶ್ರಮಿಸಿದ ಅವರು "ಮಿಲ್ಲೆಟ್ ಮ್ಯಾನ್" ಎಂದು ಹೆಸರುವಾಸಿಯಾದರು. ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಹೋರಾಟಗಳನ್ನು ಸಂಘಟಿಸಿ, ಸುಪ್ರೀಂ ಕೋರ್ಟಿನ ಮೆಟ್ಟಲನ್ನೂ ಏರಿ, ಜನಹಿತಕ್ಕಾಗಿ ದಿಟ್ಟವಾಗಿ ಹೋರಾಡಿದವರು.