ನಗುತಾ ಮಾರಿದೆ ಲಾಭ ಮಾಡಿದೆ

ನಗುತಾ ಮಾರಿದೆ ಲಾಭ ಮಾಡಿದೆ

ಪುಸ್ತಕದ ಲೇಖಕ/ಕವಿಯ ಹೆಸರು
ದಶರಥ
ಪ್ರಕಾಶಕರು
ಸಾವಣ್ಣ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೪

‘ಹ್ಯೂಮರೇ ಅಸೆಟ್ಟು ನಗುವೇ ಪ್ರಾಫಿಟ್ಟು' ಎನ್ನುವ ದಶರಥ ಅವರು ಬಿಸ್ ನೆಸ್ ಸೀಕ್ರೆಟ್ಸ್ ಅನ್ನು ತಿಳಿಸಿಕೊಡುವ ‘ನಗುತಾ ಮಾರಿದೆ ಲಾಭ ಮಾಡಿದೆ' ಎನ್ನುವ ಹೊಸ ಪುಸ್ತಕವೊಂದನ್ನು ಬರೆದು ಪ್ರಕಟಿಸಿದ್ದಾರೆ. ನಿಮಗೆ ವ್ಯವಹಾರ ಮಾಡುವುದರಲ್ಲಿ ಆಸಕ್ತಿ ಇದ್ದರೆ, ಈ ಕೃತಿಯಲ್ಲಿರುವ ಕೆಲವು ಟಿಪ್ಸ್ ಗಳನ್ನು ಬಳಸಿಕೊಳ್ಳಬಹುದು. ತಮ್ಮ ಪುಸ್ತಕದ ಬಗ್ಗೆ ದಶರಥ ಅವರು ಹೇಳುವುದು ಹೀಗೆ…

“ನಮ್ಮ ಊರಲ್ಲಿ ಒಬ್ಬ ಡಾಕ್ಟ್ರು ಮತ್ತು ಒಬ್ಬ ಬಿಸಿನೆಸ್ಮನ್ ಇದ್ದರು. ಅವರಿಬ್ಬರೂ ಭಾರಿ ಗೆಳೆಯರು. ಬಿಸಿನೆಸ್ಮನ್ ಯಾವಾಗಲೂ ಫ್ರೀ ಇದ್ದಾಗ ಡಾಕ್ಟ್ರ ಕ್ಲಿನಿಕ್ ಗೆ ಹೋಗಿ ಕೂರುತ್ತಿದ್ದರು. ಅವತ್ತೊಮೆ ಹಾಗೇ ಸಂಜೆ ಹೊತ್ತು ಕ್ಲಿನಿಕ್ ಗೆ ಹೋದಾಗ ಡಾಕ್ಟ್ರು ಕೈಯಲ್ಲಿ ಎಕ್ಸ್ರೇ ಹಿಡಿದುಕೊಂಡು ತಲೆ ಮೇಲೆ ಕೈಹೊತ್ತುಕೊಂಡು ಕೂತಿದ್ದರು. ಅವರ ಮುಂದೆ ಒಬ್ಬ ವ್ಯಕ್ತಿ ಕುಳಿತಿದ್ದ. ಬಿಸಿನೆಸ್ಮನ್ ಬಂದಾಗ ಡಾಕ್ಟ್ರು ಸ್ವಲ್ಪ ಹೊತ್ತು ಕೂರಲು ತಿಳಿಸಿದರು. ರೋಗಿಯನ್ನು ಕಳುಹಿಸಿ ಬಂದ ಮೇಲೆ ಬಿಸಿನೆಸ್ಮನ್ ಬಳಿ ಮಾತನಾಡುತ್ತಾ, `ಭಾರಿ ವಿಚಿತ್ರ ಕೇಸ್ ಗುರು, ಅವನ ಎಡ ಭುಜ ನೋವು. ಯಾವ ಮದ್ದಿಗೂ ಕಡಿಮೆಯಾಗುತ್ತಿಲ್ಲ. ಎಕ್ಸ್ರೇ, ಸ್ಕ್ಯಾನ್ ಮಾಡಿಸಿದರೆ ಏನು ಸಮಸ್ಯೆ ಇದೆ ಅಂತಲೇ ತಿಳಿಯುತ್ತಿಲ್ಲ. ಇನ್ನು ಕೊನೆಗೆ ಸರ್ಜರಿ ಮಾಡಲು ಸಲಹೆ ಕೊಡಬೇಕು ಅಂದುಕೊಂಡಿದ್ದೇನೆ' ಎಂದರು.

ಬಿಸಿನೆಸ್ಮನ್ ಕೇಳುವುದನ್ನೆಲ್ಲಾ ಕೇಳಿ ಕೊನೆಗೆ, `ಅವನು ಏನು ಕೆಲಸ ಮಾಡುತ್ತಾನೆ' ಎಂದು ಕೇಳಿದರು. ಅದಕ್ಕೆ ಡಾಕ್ಟ್ರು ಅವನೊಬ್ಬ ಸೇಲ್ಸ್ಮನ್ ಎಂದರು. ಅದನ್ನು ಕೇಳಿ ಬಿಸಿನೆಸ್ ಮೆನ್ ನಕ್ಕು, `ಅವನು ಇನ್ನೊಮ್ಮೆ ಬಂದಾಗ ಅವನ ಬೈಕ್ ಒಮ್ಮೆ ಮೆಕ್ಯಾನಿಕ್ ಬಳಿ ಚೆಕ್ ಮಾಡಿಸಲು ಹೇಳಿ' ಎಂದರು. ಡಾಕ್ಟ್ರು ಯಾಕೆ ಎಂದು ಕೇಳಿದರು. ಆದರೆ ಬಿಸಿನೆಸ್ಮನ್ ಯಾಕೆ ಎಂದು ಹೇಳಲಿಲ್ಲ. ಮರುದಿನ ಅವನು ಬಂದಾಗ ಅವನಿಗೆ ಬೈಕ್ ಮೆಕ್ಯಾನಿಕ್ ಬಳಿ ಚೆಕ್ ಮಾಡಿಸಿ ಆಮೇಲೆ ಒಂದು ವಾರ ಬಿಟ್ಟು ಬರಲು ತಿಳಿಸಿದರು. ಒಂದು ವಾರ ಬಿಟ್ಟು ಬಂದವನೇ ರೋಗಿ ಸಂತೋಷವಾಗಿದ್ದ. `ಮೆಕ್ಯಾನಿಕ್ ಬಳಿ ಹೋಗಿದ್ದೆ ಸರ್, ಅವನು ಹ್ಯಾಂಡಲ್ ಸರಿ ಮಾಡಿಕೊಟ್ಟ. ಈಗ ಸರಿಹೋಯಿತು. ಕೈನೋವಿಲ್ಲ' ಎಂದು ಎದ್ದು ಹೋದ. ಬಿಸಿನೆಸ್ಮನ್ ಬಂದಾಗ ಡಾಕ್ಟ್ರು ಇದನ್ನೆಲ್ಲಾ ಹೇಳಿ, ನಿಮಗೆ ಈ ವಿಚಾರ ಹೇಗೆ ಗೊತ್ತಾಯ್ತು ಎಂದು ಕೇಳಿದರು. ಅದಕ್ಕೆ ಬಿಸಿನೆಸ್ಮನ್, `ನೀವು ವೈದ್ಯರಾಗಿ ಆಲೋಚಿಸಿದಿರಿ. ನಾನು ಬಿಸಿನೆಸ್ಮನ್ ಆಗಿ ಅವನ ಕೆಲಸದ ಕುರಿತು ಯೋಚಿಸಿದೆ. ಅವನು ದಿನವಿಡೀ ಬೈಕ್ ಮೇಲೆ ಕುಳಿತು ಓಡಾಡುತ್ತಾನೆ. ಅವನು ಕುಳಿತುಕೊಳ್ಳುವ ರೀತಿ ಸರಿ ಇರಲಿಕ್ಕಿಲ್ಲ ಎಂದು ಹೊಳೆಯಿತು. ಅದೇ ಸರಿಯಾಯಿತು' ನೋಡಿ ಎಂದರು. ನಾವು ಸಾಮಾನ್ಯವಾಗಿ ಕೆಲವು ಸಮಸ್ಯೆಗಳನ್ನು ಒಂದೇ ದಿಕ್ಕಿನಿಂದ ನೋಡುತ್ತಿರುತ್ತೇವೆ. ಆದರೆ ಮನಸ್ಸು ಸ್ವಲ್ಪ ಹಗುರ ಮಾಡಿಕೊಂಡು ಬೇರೆ ದಿಕ್ಕಿನಿಂದ ನೋಡಿದರೆ ಥಟ್ ಅಂತ ಪರಿಹಾರ ಸಿಕ್ಕಿಬಿಡಬಹುದು ಎಂದು ಹೇಳುವುದಕ್ಕೆ ಈ ಕತೆ ಹೇಳಿದೆ.

ಬಿಸಿನೆಸ್ ಗೆಲ್ಲಬೇಕಾದರೆ ನಾನಾ ದಿಕ್ಕಿನಿಂದ ನೋಡುವುದು, ಆಲೋಚಿಸುವುದು ಅನಿವಾರ್ಯ. ಬಿಸಿನೆಸ್ ಅಂತಲ್ಲ, ಬದುಕಿನಲ್ಲೂ ಈ ಥರ ಎಲ್ಲಾ ದಿಕ್ಕಿನಿಂದ ನೋಡುವ ಕ್ರಮ ಒಳ್ಳೆಯದು. ನಾವು ಪ್ರಸ್ತುತ ವಿಚಾರವನ್ನು ಬಿಸಿನೆಸ್ ಮಟ್ಟಿಗೆ ಮಾತ್ರ ಸೀಮಿತಗೊಳಿಸಿ ನೋಡಿದರೆ ಎಲ್ಲಾ ಥರ ಯೋಚಿಸಿ ನೋಡುವ ಕ್ರಮ ಹೇಗೆ ಸಾಧಿಸಬಹುದು ಅಂತ ಪ್ರಶ್ನೆ ಮೊಳೆಯಬಹುದು. ಅದಕ್ಕೆ ಉತ್ತರ ಹ್ಯೂಮರ್, ಹಾಸ್ಯಪ್ರಜ್ಞೆ. ಬಿಸಿನೆಸ್ ಗಳಲ್ಲಿ ಕ್ಲಿಷ್ಟಕರವಾದ ಸಂದರ್ಭಗಳು ಎದುರಾಗಬಹುದು. ಅಷ್ಟೇ ಏಕೆ, ನೀವು ಯಾವುದೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಯಾವುದೋ ಪ್ರೊಜೆಕ್ಟ್ ನಲ್ಲಿ, ನೀವು ನಿಭಾಯಿಸಬೇಕಾದ ಕರ್ತವ್ಯಗಳಲ್ಲಿ ಅಡೆತಡೆ ಬರುವುದು ನಿಶ್ಚಿತ. ಈ ಅಡೆತಡೆಗಳನ್ನು ಶಾಂತ ಮನಸ್ಥಿತಿಯಿಂದ ಎದುರಿಸುವ ಶಕ್ತಿ ನೀಡುವುದು ಹಾಸ್ಯ ಮನೋಭಾವ. ಪ್ರತಿಯೊಬ್ಬ ವ್ಯಕ್ತಿಯೂ ಪ್ರೆಷರ್ ಕುಕ್ಕರ್ ನಂತೆ ಇರುವ ಸಂದರ್ಭ ಇದು. ಸ್ವಲ್ಪ ನಕ್ಕರೆ, ನಕ್ಕು ಹಗುರಾದರೆ ಕೆಲಸ ಮಾಡುವುದು ಸುಲಭವಾಗುತ್ತದೆ. ತಂಡವಾಗಿ ಕೆಲಸ ಮಾಡುವುದು ಸಾಧ್ಯವಾಗುತ್ತದೆ. ಒಳ್ಳೆಯ ಫಲಿತಾಂಶ ಸಿಗುತ್ತದೆ. ಕಂಪನಿ ಬೆಳವಣಿಗೆ ಹೊಂದುತ್ತದೆ. ಈ ಎಲ್ಲಾ ಕಾರಣಗಳಿಂದಲೇ ಕೆಲಸ ಮಾಡುವ ಸ್ಥಳಗಳಲ್ಲಿ ಹ್ಯೂಮರ್ ಇರಬೇಕು ಅನ್ನುವುದು. ಹಾಸ್ಯ ಪ್ರವೃತ್ತಿಯಿಂದ ಏನು ಲಾಭ ಎಂದು ಯೋಚಿಸಿದರೆ ನಾನಾ ಕಾರಣಗಳು ಹೊಳೆಯುತ್ತವೆ.

೧.  ಒತ್ತಡ ಕಡಿಮೆ ಮಾಡುತ್ತದೆ. ನಕ್ಕಷ್ಟು ನಾವು ಹಗುರವಾಗುತ್ತೇವೆ.
೨.  ಕಂಪನಿಯಲ್ಲಿ ಉತ್ಪಾದಕತೆ ಹೆಚ್ಚಾಗುತ್ತದೆ. ತಮಾಷೆ ವಾತಾವರಣವಿದ್ದರೆ ಕೆಲಸ ಸಾಗಿದ್ದೇ ಗೊತ್ತಾಗುವುದಿಲ್ಲ.
೩.  ಸಂವಹನ ಸುಲಭವಾಗುತ್ತದೆ. ಮುಖ ಗಂಟಿಕ್ಕಿಕೊಂಡು ಮಾತನಾಡುವ ಅವಶ್ಯಕತೆ ಇರುವುದಿಲ್ಲ.
೪.  ಹಾಸ್ಯದಿಂದ ಸೆರೆಟೋನಿನ್ ಹಾರ್ಮೋನು ಬಿಡುಗಡೆಯಾಗುವುದರಿಂದ ಫೋಕಸ್ ಹೆಚ್ಚಾಗುತ್ತದೆ. ಮೆದುಳು ಹೆಚ್ಚು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತದೆ.
೫.  ನಿರ್ಧಾರ ತೆಗೆದುಕೊಳ್ಳುವ ಗುಣ ಒಲಿಯುತ್ತದೆ. ಪಾಸಿಟಿವ್ ಮನಸ್ಥಿತಿ ಇದ್ದಾಗ ನಿರ್ಧಾರಗಳನ್ನು ಸುಲಭವಾಗಿ ತೆಗೆದುಕೊಳ್ಳಬಹುದು.
೬.  ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಶಕ್ತಿ ಇರುತ್ತದೆ. ಯಾವುದೇ ತೊಂದರೆಯನ್ನು ಚಿಟಿಕೆ ಮಾತ್ರದಲ್ಲಿ ಸರಿ ಮಾಡುವ ಸಾಮರ್ಥ್ಯ ಹಾಸ್ಯಪ್ರಜ್ಞೆಗೆ ಇದೆ.
೭. ಖುಷಿ ಖುಷಿಯಾಗಿದ್ದಷ್ಟು ಹೊತ್ತು ಜ್ಞಾಪಕ ಶಕ್ತಿ ಜಾಸ್ತಿಯಾಗುತ್ತದೆ.
೮. ನಗುವಿನಿಂದ ನಂಬಿಕೆ ಗಳಿಸಬಹುದು. ಜನರು ನಿಮ ಮೇಲೆ ಹೆಚ್ಚು ಹೆಚ್ಚು ನಂಬಿಕೆ ಇಟ್ಟಷ್ಟು ಜವಾಬ್ದಾರಿ ಹೆಚ್ಚಾಗುತ್ತದೆ. ಗೆಲುವು ದೊಡ್ಡದಾಗುತ್ತಾ ಹೋಗುತ್ತದೆ.
ಹೀಗೆ ಪಟ್ಟಿ ಮಾಡುತ್ತಾ ಹೋದರೆ ನಾನಾ ಕಾರಣಗಳು ಸಿಗುತ್ತಾ ಹೋಗುತ್ತವೆ. ಆ ಕಾರಣದಿಂದಾಗಿಯೇ ಕೆಲಸದ ಜಾಗದಲ್ಲಿ ಹ್ಯೂಮರ್ ಎಷ್ಟು ಮುಖ್ಯ ಅನ್ನುವುದನ್ನು ಯಶಸ್ವಿ ಬಿಸಿನೆಸ್ಮನ್ಗಳೆಲ್ಲಾ ಹೇಳುತ್ತಾ ಇರುತ್ತಾರೆ. ಈ ಪುಸ್ತಕವೂ ಅಂಥದ್ದೊಂದು ಪ್ರಯತ್ನ. ಹ್ಯೂಮರ್ ಯಾಕೆ ಮುಖ್ಯ ಅನ್ನುವುದರಿಂದ ಹಿಡಿದು ಹಾಸ್ಯಪ್ರಜ್ಞೆಯನ್ನು ನಮದಾಗಿಸಿಕೊಳ್ಳಲು ಏನೇನು ಮಾಡಬೇಕು ಎಂಬುದನ್ನೆಲ್ಲವನ್ನೂ ವಿಸ್ತ್ರತವಾಗಿ ವಿವರಿಸಲಾಗಿದೆ. ಹಾಸ್ಯಪ್ರಜ್ಞೆ ಅನ್ನುವುದು ಜನದಿಂದಲೇ ಬರುವ ಜನಜಾತ ಪ್ರತಿಭೆಯಲ್ಲ. ಹಾಸ್ಯಪ್ರಜ್ಞೆಯನ್ನು ಯಾರು ಕೂಡ ಕಲಿಯಬಹುದು. ಅದರಿಂದ ಮತ್ತೊಂದಷ್ಟು ಮಂದಿಯನ್ನು ನಗಿಸಬಹುದು. ನೀವು ನಗಿಸಿದಷ್ಟು ಹೊತ್ತು ಎದುರಿಗಿರುವವರು ನಿಮ್ಮ ಮಾತು ಆಲಿಸುತ್ತಿರುತ್ತಾರೆ. ಎಷ್ಟು ಕಾಲ ಮಂದಿ ನಿಮ್ಮ ಮಾತನ್ನು ಕೇಳುತ್ತಾರೋ ಅಷ್ಟೂ ಸಮಯ ನೀವು ಎಲ್ಲರ ದೃಷ್ಟಿಗೆ ಬೀಳುತ್ತಿರುತ್ತೀರಿ. ನಿಮನ್ನು ನೋಡುವಷ್ಟೂ ಹೊತ್ತು ನೀವು ಗೆಲ್ಲುತ್ತಿರುತ್ತೀರಿ.

ಈ ಪುಸ್ತಕ ಯಾಕೆ ಮುಖ್ಯ ಅನ್ನುವುದು ಓದುತ್ತಾ ಓದುತ್ತಾ ನಿಮಗೇ ಅರ್ಥವಾಗುತ್ತದೆ. `ಎಷ್ಟು ನಗಲು ಸಾಧ್ಯವೋ, ಅಷ್ಟು ನಕ್ಕು ಬಿಡಿ. ಯಾವಾಗಲೂ ನಗ್ತಾ ಇರಿ. ನಗುವುದು ನಮಗೆ ಮತ್ತು ನಮ್ಮ ಜೊತೆ ಇರುವವರಿಗೆ ಮಾಡಬಹುದಾದ ತುಂಬಾ ಸಿಹಿಯಾದ ನೆರವು' ಎಂದು ಜಗದ್ವಿಖ್ಯಾತ ಕವಯಿತ್ರಿ ಮಾಯಾ ಏಂಜೆಲೋ ಹೇಳಿದ್ದಾರೆ. ಈ ಪುಸ್ತಕದ ಕೊನೆಯ ಪುಟ ಓದಿ ಮುಗಿಸಿದ ನಂತರ ಈ ಸಿಹಿಯಾದ ನೆರವು ನಿಮಗೂ ಸಿಗಲಿ ಮತ್ತು ಮತ್ತೊಬ್ಬರಿಗೆ ನೆರವು ನೀಡುವ ಶಕ್ತಿ ನಿಮದಾಗಲಿ ಎಂದು ಆಶಿಸುತ್ತೇನೆ.”