ನಗುನಗುತಾ ನಲಿ ನಲಿ, ಏನೇ ಆಗಲಿ...
ವಿಶ್ವದಲ್ಲಿ ನಾಗರಿಕತೆಯ ಉಗಮ ದಾಖಲಾಗಿರುವ ದಿನದಿಂದ ಇಂದಿನವರೆಗೂ ಆಗಾಗ ಅನೇಕ ರೀತಿಯ ಆಘಾತಗಳನ್ನು ಈ ಸಮಾಜ ಅನುಭವಿಸುತ್ತಾ ಬಂದಿದೆ. ಕಾಡಿನ ಕ್ರೂರ ಮೃಗಗಳಿಂದ, ಪ್ರಾಕೃತಿಕ ಅವಘಡಗಳಿಂದ, ರಾಜರುಗಳ ಆಕ್ರಮಣಗಳಿಂದ, ಭಯಂಕರ ಯುದ್ದಗಳಿಂದ, ಹುಚ್ಚು ಸರ್ವಾಧಿಕಾರಿಗಳಿಂದ ಬರಗಾಲದಿಂದ, ಅನೇಕ ರೋಗ ರುಜಿನಗಳಿಂದ ಎಲ್ಲಾ ಶತಮಾನಗಳಲ್ಲೂ ಆತಂಕ ಎದುರಿಸಿದೆ.
ಕೆಲವು ವರ್ಷಗಳ ಹಿಂದಿನ ಕೊರೋನಾ ವೈರಸ್, ಹೀಗೆ ಆಯಾ ಕಾಲಕ್ಕೆ ಅದೇ ಭಯಾನಕ. ಯಾವುದೂ ಹೆಚ್ಚು ಅಲ್ಲ ಕಡಿಮೆಯೂ ಅಲ್ಲ. ಕೆಲವು ಇಂಗ್ಲೀಷ್ ಸಿನಿಮಾಗಳಲ್ಲಿ ಬೇರೆ ಲೋಕದಿಂದ ದಾಳಿ ಇಡುವ ಏಲಿಯನ್ ಗಳ ವಿರುದ್ಧ ಹೋರಾಡುವ ದೃಶ್ಯಗಳನ್ನು ನೋಡಿರಬಹುದು. ಅವು ಮಾಡುವ ಅನಾಹುತಗಳು ಮತ್ತು ಕೊನೆಗೆ ಅವುಗಳ ವಿರುದ್ಧ ಜಯ. ಇದೂ ಸಹ ಅದೇ ರೀತಿ. ಆದರೆ ಅದು ಸಿನಿಮಾ, ಇದು ವಾಸ್ತವ.
ಡಾರ್ವಿನ್ನ ಸಾರ್ವಕಾಲಿಕ ಸಿದ್ದಾಂತದಂತೆ ಬಲಿಷ್ಠವಾದದ್ದು ಮಾತ್ರ ಉಳಿಯುತ್ತದೆ. ಮನುಷ್ಯ ಉಳಿವಿಗಾಗಿ ಹೋರಾಡುತ್ತಿದ್ದಾನೆ. ಈ ಸಮಯದಲ್ಲಿ ನಿಜವಾಗಲೂ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಬಹಳಷ್ಟು ಅಗ್ನಿ ಪರೀಕ್ಷೆಗೆ ಒಳಪಡುತ್ತದೆ. ಮಾನಸಿಕ ಕಿರಿಕಿರಿ ಉಂಟುಮಾಡುತ್ತದೆ. ಅದಕ್ಕಾಗಿ ಸ್ವಲ್ಪ ಅನುಕೂಲಕರ ಪರಿಸ್ಥಿತಿಯ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು ಈ ಕೆಲವು ವಿಧಾನಗಳನ್ನು ಅನುಸರಿಸಬಹುದು.
1) ಯೋಗ, ಪ್ರಾಣಾಯಾಮ, ಧ್ಯಾನ, ವ್ಯಾಯಾಮ, ಯಾವುದಾದರೂ ಲಲಿತ ಕಲೆಗಳು, ನೃತ್ಯಗಳ ಮೊರೆ ಹೋಗಬಹುದು. ದೈಹಿಕವಾಗಿ ದುರ್ಬಲರಾದವರು ಧ್ಯಾನ ಮತ್ತು ಪ್ರಾಣಾಯಾಮದಿಂದ ಸಾಕಷ್ಟು ಮಾನಸಿಕ ಲಾಭ ಪಡೆಯಬಹುದು.
2) ಇಲ್ಲಿಯವರೆಗೂ ಓದಲು ಸಾಧ್ಯವಾಗದ ಯಾವುದಾದರೂ ಆಸಕ್ತಿಯ ಪುಸ್ತಕಗಳನ್ನು ಓದಲು ಪ್ರಾರಂಭಿಸಬೇಕು. ಖಂಡಿತ ಓದು ನಿಮ್ಮನ್ನು ಮಾನಸಿಕ ಖಿನ್ನತೆಯಿಂದ ಪಾರು ಮಾಡುತ್ತದೆ.
3) ನಿಮ್ಮ ಆಸಕ್ತಿಯ ಏನನ್ನಾದರೂ ಬರೆಯಲು ಪ್ರಾರಂಭಿಸಿ. ಕನಿಷ್ಠ ದಿನಚರಿ ಅಥವಾ ಬದುಕಿನ ನೆನಪಿನ ಪುಟಗಳಾದರೂ ದಾಖಲಿಸಿರಿ. ಇದು ಓದಿಗಿಂತ ಹೆಚ್ಚು ಸಮಾಧಾನಕರ ಪರಿಣಾಮ ನಿಮ್ಮ ಮನಸ್ಸಿನ ಮೇಲೆ ಬೀರುತ್ತದೆ.
4) ಹಳೆಯ ಗೆಳೆಯರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ತೃಪ್ತಿಯಾಗುವಷ್ಟು ಮಾತನಾಡಿ. ಅದನ್ನು ವಿರಾಮದ ಎಲ್ಲಾ ದಿನಗಳಲ್ಲಿಯೂ ಮುಂದುವರಿಸಿ. ಅಕ್ಷರದ ಚಾಟ್ ಗಳಿಗಿಂತ ನೇರ ಮಾತುಗಳು ನಿಮ್ಮನ್ನು ಉಲ್ಲಸಿತರಾಗಿಡುತ್ತದೆ.
5) ಮಕ್ಕಳು ಮನೆಯವರೊಂದಿಗೆ ಚೆಸ್, ಕೇರಂ, ಹಾವು ಏಣಿಯಾಟ, ಚೌಕಾಬಾರ ಮುಂತಾದ ಆಟಗಳನ್ನು ಆಡಬಹುದು. ಇದು ನಿಮ್ಮ ಬಹುತೇಕ ಸಮಯ ಆಕ್ರಮಿಸುತ್ತದೆ. ಸಮಯ ಕಳೆಯುವುದೇ ತಿಳಿಯುವುದಿಲ್ಲ.
6) ಕುಟುಂಬ ಸ್ವಲ್ಪ ದೊಡ್ಡದಿದ್ದರೆ ಚೀಟಿ ಬರೆದು ಕಳ್ಳ ಪೋಲೀಸ್ ಆಟ, ಅಂತ್ಯಾಕ್ಷರಿ, ಖಾಲಿ ಹಾಳೆಯ ಮೇಲೆ ಚುಕ್ಕಿಯಿಟ್ಟು ಜೋಡಿಸುವುದು, ಕಣ್ಣಾ ಮುಚ್ಚಾಲೆ, ಯಾವುದಾದರೂ ವಸ್ತುಗಳನ್ನು ಮನೆಯಲ್ಲಿ ಮುಚ್ಚಿಟ್ಟು ಹುಡುಕುವುದು ಮುಂತಾದ ಆಟಗಳನ್ನು ಆಡಬಹುದು. ಇದು ಸ್ವಲ್ಪ ಖುಷಿ ಕೊಡುತ್ತದೆ.
7) ಸರಳ ರೀತಿಯ ಅಡುಗೆಗಳ ಪ್ರಯೋಗ ಮಾಡಬಹುದು. ಇಲ್ಲಿಯವರೆಗೂ ಮನೆಯಲ್ಲಿ ಯಾರು ಅಡುಗೆ ಮಾಡುತ್ತಿದ್ದರೋ ಅದನ್ನು ಬದಲಾಯಿಸಿ ಮತ್ತೊಬ್ಬರು ಒಂದಷ್ಟು ಪ್ರಯತ್ನಿಸಬಹುದು. ಆದರೆ ಮಿತ ಆಹಾರ ಒಳ್ಳೆಯದು.
8) ಆರೋಗ್ಯದ ಕಾರಣಕ್ಕಾಗಿ ಉಪವಾಸ ವ್ರತಗಳನ್ನು ಸಹ ಮಾಡಬಹುದು. ಹೌದು ಏಕತಾನತೆ ಮುರಿಯಲು ವೈದ್ಯರ ಸಲಹೆ ಮೇರೆಗೆ ಉಪವಾಸ ದೇಹ ಮತ್ತು ಮನಸ್ಸಿನ ನಿಯಂತ್ರಣಕ್ಕೆ ಒಳ್ಳೆಯ ಮದ್ದು.
ಅದು ಅವರವರ ಆರೋಗ್ಯ ಸ್ಥಿತಿ ಅವಲಂಬಿಸಿರುತ್ತದೆ.
9) ಅನುಕೂಲ ಇದ್ದರೆ ಅತ್ಯುತ್ತಮ ಸಿನಿಮಾ ನೋಡಬಹುದು ಮತ್ತು ಸಂಗೀತ ಆಲಿಸಬಹುದು. ಇವು ಖಂಡಿತವಾಗಿ ನಿಮ್ಮನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ಕೆಲವೊಮ್ಮೆ ಆಳವಾಗಿ ಯೋಚಿಸುವಂತೆ ಪ್ರೇರೇಪಿಸುತ್ತದೆ.
10) ಮೊಬೈಲ್ ನಲ್ಲಿರುವ ಅನೇಕ ಹೊಸ ಹೊಸ ತಾಂತ್ರಿಕ ಸಾಧ್ಯತೆಗಳನ್ನು ಕಲಿಯಲು ಪ್ರಯತ್ನಿಸಬಹುದು. ಸದಾ ವೇಗದ ಜೀವನದಲ್ಲಿ ನಾವು ಕನಿಷ್ಠ ಉಪಯೋಗ ಮಾತ್ರ ತಿಳಿದಿರುತ್ತೇವೆ. ಆದರೆ ಇಂದಿನ ಸ್ಮಾರ್ಟ್ ಫೋನ್ ಗಳಲ್ಲಿ ವಿಶ್ವ ರೂಪ ದರ್ಶನ ಪಡೆಯಬಹುದು.
11) ಮಾತಿನ ಸಂತೆಯಲ್ಲಿ ಮರೆಯಾಗಿದ್ದ ಮೌನದ ದಿವ್ಯತೆಯನ್ನು ಹಿಡಿದಿಡಲು ಪ್ರಯತ್ನಿಸಬಹುದು. ಮೌನ ತುಂಬಾ ಕಠಿಣ. ಆದರೆ ಅದು ಒಮ್ಮೆ ಅನುಭವಕ್ಕೆ ಸಿಕ್ಕರೆ ತುಂಬಾ ಪರಿಣಾಮಕಾರಿ. ಅದೊಂದು ಅನುಭಾವ. ಸಾಧ್ಯವಾದರೆ ಪ್ರಯತ್ನಿಸಿ.
12) ಇದು ನನಗೆ ಹೊಳೆದ ಕೆಲವು ವಿಷಯಗಳು ಮಾತ್ರ. ಇದರ ಜೊತೆಗೆ ನಿಮಗೂ ಹಲವಾರು ವಿಧಾನಗಳು ತಿಳಿದಿರುತ್ತದೆ. ನಾನು ಈ ಮೂಲಕ ಮತ್ತೊಮ್ಮೆ ನೆನಪಿಸುತ್ತಿದ್ದೇನೆ ಅಷ್ಟೆ.
ಇದರ ಜೊತೆ ಖಂಡಿತವಾಗಿಯೂ ಬಡಜನರನ್ನು ಜ್ಞಾಪಿಸಿಕೊಳ್ಳಲೇ ಬೇಕು. ಸರ್ಕಾರಗಳು ಏನೇ ಹೇಳಿದರು ಈ ಆಡಳಿತ ಯಂತ್ರ ಅವರನ್ನು ಮುಟ್ಟುವುದು ತುಂಬಾ ಕಷ್ಟವಿದೆ. ಅವರು ಯಾವುದೇ ದಾಖಲೆ ಹೊಂದಿರದೆ ಲೆಕ್ಕಕ್ಕೇ ಸಿಗುವುದಿಲ್ಲ. ಉಳ್ಳವರು ಮತ್ತು ದಾನ ಮಾಡುವ ಮನಸ್ಸಿರುವವರು ಅವರಿಗೆ ಕೈಲಾದ ಸಹಾಯ ಮಾಡಬಹುದು.
ಮುಖ್ಯವಾಗಿ ರಾಜ್ಯ ರಾಜಧಾನಿಗಳ, ದೊಡ್ಡ ನಗರಗಳ ಬಸ್ ನಿಲ್ದಾಣ, ರೈಲು ನಿಲ್ದಾಣ, ಫ್ಲೈ ಓವರ್ ಗಳ ಬಳಿ ಮಲಗುವವರ ಸ್ಥಿತಿ ನಾಯಿಗಿಂತ ಕಡೆಯಾಗಿರುತ್ತದೆ. ನಾವು ಎಷ್ಟು ಸಾಧ್ಯವೋ, ಎಲ್ಲಿ ಸಾಧ್ಯವೋ, ಎಷ್ಟು ಅನುಕೂಲವೋ ಅದನ್ನು ಬಳಸಿಕೊಂಡು ಇಂತಹವರಿಗೆ ಸಹಾಯ ಮಾಡಲು ಪ್ರಯತ್ನಿಸೋಣ. ಅದು ಉಪಕಾರವಲ್ಲ ಕರ್ತವ್ಯ ಎಂದು ಭಾವಿಸೋಣ. ದಿನಗೂಲಿ ನೌಕರರು ಸಹ ಇದೇ ವ್ಯಾಪ್ತಿಯಲ್ಲಿ ಬರುತ್ತಾರೆ. ಇಷ್ಟೆಲ್ಲದರ ನಡುವೆಯೂ ಈ ಸಿನೆಮಾ ಹಾಡು ಗುನುಗುನಿಸುತ್ತಿರಿ. ನಗುನಗುತಾ ನಲಿ ನಲಿ, ಏನೇ ಆಗಲಿ...
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ