ನಗುವೆಂಬ ಮಹಾ ಅಸ್ತ್ರ
ಹೌದಲ್ವ? ನಗು ಮಹಾ ಅಸ್ತ್ರವೇ ಸರಿ. ಇದಕೆ ಯಾವುದೂ ಸರಿಸಾಟಿ ಇರದು. ಎರಡು ಉರಿದ ಮನಸುಗಳ ಮತ್ತೆ ಬೆಳಗಿಸುವ ಸಾಮರ್ಥ್ಯವಿರುವುದು ಒಂದು ಮುಗುಳ್ನಗುವಿಗೆ ಮಾತ್ರ. ನಗುವಿನಲ್ಲೂ ಹಲವು ಬಗೆ. ಮುಗುಳ್ನಗು, ಮೂವತ್ತೆರಡು ಹಲ್ಲು ಕಾಣುವ ಹಾಗೆ ನಗು, ಹ್ಹ,ಹ್ಹ ಎಂದು ಎಲ್ಲರಿಗೂ ಕಾಣುವಂತೆ, ಕೇಳಿಸುವಂತೆ ನಗು, ಮೌನ ನಗು, ಎರಡೇ ಎರಡು ಹಲ್ಲು ಕಾಣಿಸುವ ಸಣ್ಣ ನಗು, ಇಡೀ ದೇಹವನ್ನೇ ಕುಲುಕಾಡಿಸುವ ನಗು, ಕಣ್ಣಂಚಿನ, ತುಟಿಯಂಚಿನ ನಗು. ಅಟ್ಟಹಾಸದ ನಗು... ಅಬ್ಬಾ! ಎಷ್ಟು ವೈವಿಧ್ಯದ ನಗುಗಳು ಅಲ್ಲವೇ? ಇದೆಲ್ಲ ಸಮಯ, ಸಂದರ್ಭಕ್ಕೆ ಸರಿಯಾಗಿ ಬರುವ ನಗುಗಳು. ವೇದಿಕೆಯಲ್ಲಿ ನಗಿಸುವ ವಿದೂಷಕ, ಹಾಸ್ಯಗಾರನ ನಗು ತಡೆಯಲಾಗದ ಒಂದು ಕ್ಷಣದ್ದು. ಹೊಟ್ಟೆ ಹುಣ್ಣಾಗಿಸೋ ನಗು ಹೇಳಬಹುದು. ನಕ್ಕು ನಕ್ಕು ಹೊಟ್ಟೆ ಹುಣ್ಣಾಯ್ತು ಹೇಳ್ತೇವೆ. ಇವೆಲ್ಲ ಮಾತಿನ ಓಘಗಳು, ಧಾಟಿ ಅಷ್ಟೆ. ಹಾಗೆಯೇ ಬಲವಂತದ ನಗು, ಕೃತಕ ನಗು ಸಹ ಇದೆ.
ನಮ್ಮ ಬಂಧುಗಳ ಪೈಕಿ ಯಾರಿಗೋ ನಗು ಹೆಚ್ಚಾಗಿ ಕರುಳು ಹಿಡ್ಕೊಂಡ ಹಾಗೆ ಆಗಿ ಕೊನೆಗೆ ವೈದ್ಯರ ಭೇಟಿಯಾದ್ದೂ ಇದೆ. ನಗುವಾಗಲೂ ಜಾಗ್ರತೆ ಬೇಕು. ಎಷ್ಟು ಬೇಕಾದರೂ ನಗೋಣ, ಬೇರೆಯವರನ್ನು ಆಡಿಕೊಂಡು ನಗುವುದು, ವ್ಯಂಗ್ಯ ನಗು ಬೇಡ. ಇದರಿಂದ ಹೃದಯ ಘಾಸಿಗೊಳಗಾಗಬಹುದು. ಒಮ್ಮೆ ಮನಕೆ ನೋವಾದರೆ ಹೊರಬರಲಾಗದು. ಬಂದರೂ ಮೊದಲಿನಂತಿರದು. ಒಡೆದ ಕನ್ನಡಿ ಜೋಡಿಸಿದರೆ ಮೊದಲಿನಂತೆ ಮುಖ ನೋಡಲಾಗದಲ್ಲವೇ? ಮುದ್ದು ಮಗುವಿನ ನಗು ಕೋಟಿ ರೂಪಾಯಿಗೆ ಸಮ. ಮನದ ನೋವೆಲ್ಲ ಮಾಯವಾಗಲು ಔಷಧಿ ಈ ನಗು. ನಲ್ಲೆಯ ನಗು ಸೂರ್ಯರಶ್ಮಿಯಂತೆ. ಎಷ್ಟೇ ವೈಮನಸ್ಸು, ಜಗಳವಿದ್ದರೂ ನಗು ಹೃದಯಗಳನ್ನು ಬೆಸೆಯಬಲ್ಲುದು.
ಈ ವರ್ಷ ಅಕ್ಟೋಬರ್ ೬ ವಿಶ್ವ ನಗುವಿನ ದಿನವಂತೆ. ಅಕ್ಟೋಬರ್ ತಿಂಗಳ ಮೊದಲ ಶುಕ್ರವಾರದ ನಗುವಿಗೆ ಮೀಸಲು. ನಾವು ಯಾವಾಗಲೂ ನಗೋಣ ಅಲ್ವೇ? ನಗು ದೇಹಕ್ಕೆ ಟಾನಿಕ್ ಇದ್ದಂತೆ. ರಕ್ತದೊತ್ತಡ ನಿಯಂತ್ರಿಸಲು ಹದವಾದ ನಗು ಸಹಕಾರಿಯಂತೆ. ನಗುವಿಗೆ ಜಾತಿಭೇದವಿಲ್ಲ, ಧರ್ಮ, ವಯಸ್ಸು, ದೇಶ, ಕಾಲದ ಪರಿವೆಯಿಲ್ಲ. ದೇಹದ ಚೈತನ್ಯದ ಚಿಲುಮೆಯ ಪ್ರೇರೇಪಣೆ ನಗುವಿಂದ ಸಿಗಬಹುದು. ಒತ್ತಡ ನಿವಾರಣೆ, ವ್ಯಾಯಾಮ, ಮುಖದ ಸೌಂದರ್ಯ ನಗುವಲ್ಲಿದೆ. ಅಪರಿಚಿತರ ಮಧ್ಯವರ್ತಿ ಈ ನಗು.
ಪುರಾಣಗಳಲ್ಲಿ ನೋಡಿದರೆ ಪಾಂಚಾಲಿಯ ನಗು ಮಹಾಭಾರತ ಯುದ್ಧವನ್ನೇ ಸೃಷ್ಟಿಸಿತು. (ಬೇರೆಯೂ ಕಾರಣವಿದೆ) ತುಂಬಿದ ಸಭೆಯಲ್ಲಿ ಅಂಗ ದೇಶದ ಅರಸ, ಕೌರವನ ಸಖ ಕರ್ಣನ ಕೈತಟ್ಟಿದ ನಗು, ದಕ್ಷಾಧ್ವರದ ದೇವತೆಗಳ ವ್ಯಂಗ್ಯ ನಗು ಮಾಡಬಾರದ್ದನ್ನು ಮಾಡಿಸಿದ ಉದಾಹರಣೆಗಳಿವೆ. ನಾಲ್ಕು ಜನರೆದುರು ನಗೆಪಾಟಲಿಗೆ ಈಡಾಗದಂತೆ ನಗುವಿರಲಿ. ಮೂರು ದಿನದ ಬದುಕಿನ ಹಾದಿಯಲಿ ನಗುನಗುತ್ತಾ ಇರೋಣ.
(ಅಕ್ಟೋಬರ್ ೬ - ವಿಶ್ವ ನಗುವಿನ ದಿನ)
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ