ನಗೆನಗಾರಿ ಸಂಪಾದಕೀಯ : ನಾವಿನ್ನೂ ಬದುಕಿದ್ದೇವೆ!

ನಗೆನಗಾರಿ ಸಂಪಾದಕೀಯ : ನಾವಿನ್ನೂ ಬದುಕಿದ್ದೇವೆ!

ಬರಹ

ಬಗಲಲ್ಲೇ ಕೂತ ಶತ್ರು ನಮ್ಮೊಡನೆ ಹರಟೆಗೆ ಕೂತವನಂತೆ ವರ್ತಿಸುತ್ತಾ ಒಳಗೊಳಗೇ ಕತ್ತಿ ಮಸೆಯುತ್ತಾ, ತನ್ನ ಆಯುಧಗಳನ್ನು, ಮುಳ್ಳುಗಳನ್ನು ಹರಿತಗೊಳಿಸುತ್ತಾ, ಅವುಗಳನ್ನು ಪರೀಕ್ಷಿಸುವ ಮನಸ್ಸಾದಾಗ ನಮ್ಮ ಮೇಲೆ ಪ್ರಯೋಗಿಸುತ್ತಾ ಹತ್ತು ಇಪ್ಪತ್ತೋ, ನೂರೂ, ಸಾವಿರವೋ ಹೀಗೆ ಲೆಕ್ಕ ಹಿಡಿಯುವ ಪ್ರಯಾಸ ತೆಗೆದುಕೊಳ್ಳದೆ ತಿಗಣೆಗಳಂತೆ ನಮ್ಮನ್ನು ಹೊಸಕಿ ಹಾಕುತ್ತಿದ್ದಾನೆ. ಈ ಕಾರ್ಯಕ್ರಮ ತೀರಾ ಇತ್ತೀಚಿನಮುಂಬೈನ ನಡುಗಿದಲ್ಲವಾದರೂ ಮೊನ್ನೆ ಸಿ ಹಾಕಿದ ಭಯೋತ್ಪಾದಕರ ದಾಳಿ ಹಾಗೂ ಘಟಿಸಿದ ಭೀಕರ ಕಾಳಗ, ಮೃತರಾದ ದೇಶ ವಿದೇಶಗಳ ನಾಗರೀಕರು, ವೀರ ಸೇನಾನಿಗಳು, ಟಿವಿಯಲ್ಲಿ ಧ್ವನಿಯೆತ್ತದೆ ಮಾತಾಡಿ ಉಗ್ರರನ್ನು ‘ಉಗ್ರ'ವಾಗಿ ದಂಡಿಸುವ ಆಶ್ವಾಸನೆ ಕೊಟ್ಟು ಭಾಷಣ ಮುಗಿಸಿದ ಪ್ರಧಾನಿ, ಜನರನ್ನು ಸಗಟು ಓಟುಗಳಂತೆ ಬಿಟ್ಟು ಬೇರಾವ ರೀತಿಯಲ್ಲೂ ಕಾಣಲು ಅಶಕ್ತವಾಗಿರುವ ನಮ್ಮ ನೇತಾಗಳು, ಕೆಲಸಕ್ಕೆ ಬಾರದ ಒಣ ವೇದಾಂತ, ಸದಾ ಬಳಿಯಲ್ಲೇ ಇಟ್ಟುಕೊಂಡಿರುವ ‘ಸಂಯಮಿ'ಯ ವೇಷ, ಉಸಿರಾಟಕ್ಕಿಂತ ಹೆಚ್ಚು ಸಹಜವಾಗಿರುವ ಬೇಜವಾಬ್ದಾರಿಯನ್ನು ಯಥಾವತ್ತಾಗಿ ಪ್ರದರ್ಶಿಸುತ್ತಾ ಒಂದಷ್ಟು ಹೊತ್ತು ಬಾಡಿಗೆ ತಂದ ದೇಶಪ್ರೇಮ, ಕಾಳಜಿ, ಉತ್ಸಾಹಗಳನ್ನು ತೋರ್ಪಡಿಸಿ ತಮ್ಮ ಯಾವತ್ತಿನ ನಿದ್ದೆಗೆ ಜಾರಿಕೊಳ್ಳುವ ಜನ ಸಾಮಾನ್ಯರನ್ನೆಲ್ಲಾ ನೋಡಿದ ನಂತರ ಒಂದು ಘೋಷಣೆಯನ್ನು ಮಾಡಲೇ ಬೇಕಿದೆ: ನಾವಿನ್ನೂ ಬದುಕಿದ್ದೇವೆ!

ನಮ್ಮದು ಅತ್ಯಂತ ಶ್ರೇಷ್ಠವಾದ ನಾಡು. ದೇವರು ಭೂಮಿಯೆಂಬ ಗೋಲದ ಮೇಲೆ ನಮ್ಮನ್ನು ಸೃಷ್ಟಿಸಿ ಉಳಿದವರಿಗೆ ಆದರ್ಶವಾಗಿ ಎಂದು ಹರಸಿ ಕಳುಹಿಸಿದ. ನಾವು ದೇವರಿಗೆ ಅತ್ಯಂತ ಪ್ರೀತಿ ಪಾತ್ರರಾದ ಜನರು.
ಇಲ್ಲವಾದರೆ ಜಗತ್ತಿಗೆ ಬಟ್ಟೆ ತೊಡುವ ಸಂಸ್ಕಾರ ತಿಳಿಯದಿದ್ದ ಕಾಲದಲ್ಲಿ ನಾವು ಭೂಮಿಯ
ಮೇಲಿನ ಸಮಸ್ತ ಜ್ಞಾನವನ್ನು ಬಾಚಿ ಹೊಟ್ಟೆ ತುಂಬಿಸಿಕೊಂಡು ಆಕಾಶಕ್ಕೂ ಹಾರಲು
ಸಾಧ್ಯವಾಗುತ್ತಿತ್ತೇ? ಖಂಡಿತಾ ಇಲ್ಲ. ಬಡತನ, ನಿರಕ್ಷರತೆ, ನಿರುದ್ಯೋಗ, ಅನಾರೋಗ್ಯ, ಅವ್ಯವಸ್ಥೆ, ಭ್ರಷ್ಠಾಚಾರ ಭಯೋತ್ಪಾದನೆ,
ಮೂಲಭೂತವಾದಗಳನ್ನು ಹೇಗೆ ಎದುರಿಸಿ ಜಯಿಸಬೇಕು ಎಂಬುದಕ್ಕೆ ಜಗತ್ತಿನ ಎಲ್ಲಾ ದೇಶಗಳು
ಆದರ್ಶವಾಗಿ ಕಾಣಬಹುದಾದ ರಾಷ್ಟ್ರವೊಂದು ಭೂಮಿಯ ಮೇಲಿದೆಯೆಂದರೆ ಅದು ನಮ್ಮ ಹೆಮ್ಮೆಯ
ಭಾರತ ಮಾತ್ರ. ನಾವು ಆ ದೇವನ ಪರಿಪೂರ್ಣ ಸೃಷ್ಠಿ. ನಾವು ಇತರರಿಂದ ಕಲಿಯುವುದು ಏನೂ ಇಲ್ಲ. ನಾವು ಜಗತ್ತಿಗೆ ಕಲಿಸಬೇಕಾದ್ದು ಬಹಳ ಇದೆ. ನಮಗೆ ಅವರ ನೀತಿಗಳು, ಅವರ ಕಾರ್ಯ ವಿಧಾನಗಳು ಮಾದರಿಯಾಗಬೇಕಿಲ್ಲ. ನಮಗೆ ಬೇಕಾದ ಮೊಬೈಲ್ ಫೋನು, ಕಾರು, ಟಿವಿ, ಕಂಪ್ಯೂಟರುಗಳನ್ನು ಅವರು ತಯಾರು ಮಾಡಿಕೊಡುತ್ತಾರೆ. ಹೊಸ ಹೊಸ ಸಂಶೋಧನೆಗಳನ್ನು ಅವರು ಮಾಡುತ್ತಾರೆ, ಹೊಸ ಜ್ಞಾನ ಸೃಷ್ಟಿ ಅವರಲ್ಲಿ ಆಗುತ್ತದೆ. ಭದ್ರತೆಗೆ ಹೊಸ ಕ್ರಮಗಳ ಬಗ್ಗೆ ಅವರು ಹಗಲು ರಾತ್ರಿ ಶ್ರಮಿಸಿ ಕಷ್ಟ ಪಡುತ್ತಾರೆ. ತಮ್ಮ ಮೇಲೆ ಆಕ್ರಮಣ ಮಾಡಿದವರನ್ನು ಅಟ್ಟಾಡಿಸಿ ಹೊಡೆಯುವ ನಿರ್ಧಾರ ಮಾಡಿ ವಿನಾಕಾರಣ ಯುದ್ಧಗಳಿಗೆ ಕಾರಣರಾಗುತ್ತಾರೆ, ಶತ್ರುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ!

 

(ಚಿತ್ರ ಕೃಪೆ: 

http://ssrichardmontgomery.com )

 

ಅವರೆಲ್ಲಾ ಮೂರ್ಖರು. ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದು ಅವರಿಗೆ ತಿಳಿದಿಲ್ಲ. ಭಾರತವೆಂಬ ಪುಣ್ಯ ಭೂಮಿಯಿಂದ ಅವರು ಕಲಿಯಬೇಕಾದ ಪಾಠಗಳು ಸಾಕಷ್ಟಿವೆ. ತಮ್ಮ ದೇಶದ ಬಹುದೊಡ್ಡ ಕಟ್ಟಡಕ್ಕೆ ವಿಮಾನವನ್ನು ನುಗ್ಗಿಸಿ, ಸಾವಿರಾರು ಮಂದಿಯನ್ನು ಒಸಾಮ ಕೊಂದಾಗಆಧುನಿಕ ನಾಗರೀಕತೆಯ ಗಗನ ಚುಂಬಿಗಳ ಎದೆಯೊಳಗೆ ಬಂಡಾಯದ ವಿಮಾನ ನುಗ್ಗಿಸಿ ಆತ ಹರಿಸಿದ ರಕ್ತದಲ್ಲಿ, ಹೊಸ ಮುಂಜಾವಿನ ಬೆಳ್ಳಿ ರೇಖೆಗಳು ಪ್ರತಿಫಲಿಸುತ್ತಿದ್ದವು' ಎಂದು ಸುಮಧುರವಾದ ಕಾವ್ಯವನ್ನು ರಚಿಸಿ ‘ಅಮರ'ರಾಗುವುದನ್ನು ಬಿಟ್ಟು ಆತನ ಯಕಃಶ್ಚಿತ್ ತಪ್ಪಿಗೆ ಒಸಾಮನ ತಲೆ ತೆಗೆಯ ಹೊರಟು ಬಿಡುತ್ತಾರೆ ಹೆಡ್ಡರು. ಕಣ್ಣಿಗೆ ಕಣ್ಣು ಎಂದು ಹೊರಟರೆ ಜಗತ್ತೇ ಕುರುಡಾಗುತ್ತದೆಯಲ್ಲವೇ? ನಮ್ಮ ಕಣ್ಣು ಹೋದರೂ ಚಿಂತೆಯಿಲ್ಲ ಜಗತ್ತು ಕುರುಡಾಗಬಾರದು. ನಮಗೆ ಕಣ್ಣುಗಳಿದ್ದರೇ ತಾನೆ ಕುರುಡಾಗಲು ಸಾಧ್ಯ? ನಮ್ಮ ಕಣ್ಣುಗಳನ್ನೇ ನಾವು ಕಿತ್ತು ಬಿಟ್ಟರೆ? ಎಂದು ಆಲೋಚಿಸುವ ಮುತ್ಸದ್ಧಿತನ ಆ ಯಹೂದಿ ದೇಶದವರಿಗೆ ಯಾವಾಗ ಬಂದೀತು? ನಮ್ಮಲ್ಲಿ ಸಿರಿ ಸಂಪತ್ತು ಇದ್ದರಲ್ಲವೇ ಕಳ್ಳ ಕಾಕರ ಕಾಟ, ಅದಕ್ಕೆ ಪೊಲೀಸು, ಕಾನೂನಿನ ರಕ್ಷಣೆಯ ಹುಡುಕಾಟ, ಊಟಕ್ಕೆ ಗತಿಯಿಲ್ಲದೆ, ಹಸಿವೆಯಿಂದ ನರಳಿ ನರಳು ಸಾಯುವ ಸ್ಥಿತಿಗೆ ನಾವು ಬಂದುಬಿಟ್ಟರೆ? ಅವ್ಯಾವ ಚಿಂತೆಯೂ ಇರದು. ನಾವು ಶಿಕ್ಷಿತರಾಗಿ ಎಲ್ಲವನ್ನೂ ತಿಳಿಯ ಹೊರಟರೆ ಅಲ್ಲವೇ ಭಿನ್ನಾಭಿಪ್ರಾಯಗಳು ಬರುವುದು, ಅನ್ಯಾಯಗಳ ವಿರುದ್ಧ ಧ್ವನಿಯೆತ್ತಬೇಕು ಅನ್ನಿಸುವುದು... ಒಂದಕ್ಷರ ಕಲಿಯದಿರುವ ನಿರ್ಧಾರ ಮಾಡಿ ಗಟ್ಟಿ ಮನಸ್ಸು ಮಾಡಿದರೆ ಇವೆಲ್ಲ ಸಮಸ್ಯೆಗಳೇ ಇರುವುದಿಲ್ಲ. ಇಂತಹ ಸರಳ ಸತ್ಯಗಳನ್ನು ನಾವು ಕಂಡುಕೊಂಡಿದ್ದೇವೆ. ದೇವರ ನಿಜವಾದ ಪ್ರಜೆಗಳು ನಾವೇ. ಬದುಕು ಇರುವುದು ಈ ಭೂಮಿಯ ಮೇಲೆ ಅಲ್ಲ ಎಂಬುದು ನಮಗಷ್ಟೇ ಗೊತ್ತು ಹೀಗಾಗಿ ನಾವು ಇಲ್ಲಿಯ ಸಮಸ್ಯೆಗಳನ್ನು ಪರಿಹರಿಸುವ ಕಷ್ಟ ತೆಗೆದುಕೊಳ್ಳುವುದಿಲ್ಲ. ನಾವೇ ಶಾಶ್ವತವಲ್ಲ ಎಂದ ಮೇಲೆ ನಮ್ಮ ಸಮಸ್ಯೆಗಳು ಶಾಶ್ವತವೇ?

ಅಮೇರಿಕಾ, ಇಸ್ರೇಲುಗಳು ನಮ್ಮಿಂದ ಕಲಿಯುವಂಥದ್ದು ತುಂಬಾ ಇದೆ. ಭಯೋತ್ಪಾದನೆ ನಿಗ್ರಹಿಸುತ್ತೇವೆ ಎಂದು ಹೊರಡುವುದಾಗಲೀ, ಭಯೋತ್ಪಾದಕರಿಗೆ ಅನ್ನ ನೀರು ಕೊಟ್ಟು ಆಶ್ರಯ ನೀಡುತ್ತಿರುವವರನ್ನು ನಾಶ ಮಾಡುತ್ತೇವೆ ಎಂದಾಗಲೀ ಹೊರಡುವುದು ಮೂರ್ಖತನವಾಗುತ್ತದೆ. ಪಾಪ ಭಯೋತ್ಪಾದಕರೂ ಮನುಷ್ಯರೇ ಅಲ್ಲವೇ? ಪರಿಸ್ಥಿತಿಯಿಂದಾಗಿ ಆತ ಆ ಮಾರ್ಗ ಹಿಡಿದಿದ್ದಾನೆ. ಒಂದು ವೇಳೇ ನಾವೇ ಆ ಸ್ಥಾನದಲ್ಲಿದ್ದರೂ ಹಾಗೇ ಮಾಡುತ್ತಿರಲಿಲ್ಲವೇ? ಭಯೋತ್ಪಾದನೆ ಅಸಲಿಗೆ ಸಮಸ್ಯೆಯೇ ಅಲ್ಲ. ಭಯೋತ್ಪಾದಕ ನಮ್ಮನ್ನು ಕೊಂದರೆ ಏನು ಮಾಡಿದ ಹಾಗಾಯಿತು? ನಮ್ಮ ದೇಹ ನಾಶವಾಯಿತು ಅಷ್ಟೇ! ಅದಕ್ಕಿಂತ ಹೆಚ್ಚಿನದನ್ನೇನೂ ಆತ ಮಾಡಲಾರ. ನಮ್ಮ ಶಾಶ್ವತವಾದ, ಚಿರನೂತನವಾದ ಆತ್ಮವನ್ನು ಆತ ಮುಟ್ಟಲೂ ಸಾಧ್ಯವಾಗದು. ಅಂತಹವರನ್ನು ನಿಗ್ರಹಿಸಬೇಕು, ನಿವಾರಿಸಬೇಕು ಎಂದೆಲ್ಲಾ ಮಾತಾಡುವುದು ಬಾಲಿಶವಲ್ಲವೇ?

ಅದಕ್ಕಾಗಿ ಘಂಟಾಘೋಷವಾಗಿ ಹೇಳೋಣ: ನಾವು ಭಾರತೀಯರು, ನಾವಿನ್ನೂ ಬದುಕಿದ್ದೇವೆ. ಜಗತ್ತು ನಮ್ಮನ್ನು ನೋಡಿ ಬುದ್ಧಿ ಕಲಿಯಲಿ. ದೇವರ ಅಪೂರ್ವ ಸೃಷ್ಟಿಯಾದ ನಾವು ಇಲ್ಲಿಂದ ಖಾಲಿಯಾಗುವುದರೊಳಗೆ ಜಗತ್ತು ನಮ್ಮನ್ನು ಅರಿತುಕೊಳ್ಳಲಿ, ನಮ್ಮನ್ನು ಅನುಕರಿಸಲಿ.