ನಗೆ ತುಂತುರು

ನಗೆ ತುಂತುರು

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್ ಎನ್ ಶಿವಸ್ವಾಮಿ
ಪ್ರಕಾಶಕರು
ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೦.೦೦, ಮುದ್ರಣ: ೨೦೧೫

ನಕ್ಕರೆ ಅದೇ ಸ್ವರ್ಗ ! ನಗಬೇಕು, ನಗೆ ಬೇಕು ಬರಡು ಬದುಕಿನಲ್ಲಿ ! ಮುದುಡಿದ ಮನಸ್ಸಿಗೆ ನಗೆಯಂಥ ಸಿಹಿಮದ್ದು ಇನ್ನೊಂದಿಲ್ಲ ! ಈ ಧಾವಂತದ ದಿನಗಳಲ್ಲಿ  ನಗುವನ್ನು ಮರೆಯುವಂತೆಯೇ ಇಲ್ಲ. ನೀವು ಕಿಸೆಯಲ್ಲಿರಿಸಿಕೊಳ್ಳಬಹುದಾದ ಈ ‘ನಗೆ ತುಂತುರು' ತುಣುಕುಗಳನ್ನು ರಚಿಸಿರುವ ಶ್ರೀ ಎಸ್ ಎನ್ ಶಿವಸ್ವಾಮಿಯವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದರು. ಖ್ಯಾತ ನಗೆ ಬರಹಗಾರರು, ಕಚಗುಳಿಯಾಡಿಸಿ ನಗಿಸುವಂಥ ಈ ತುಣುಕುಗಳಿಗೆ ಶ್ರೀ ಹರಿಣಿ ಸೊಗಸಾದ ಚಿತ್ರ ರಚಿಸಿದ್ದಾರೆ. ನಿಮ್ಮ ನಗು ಬರಿಯ ಮುಗುಳಿನಲ್ಲಿ ಮುಗಿಯುವುದಿಲ್ಲ ; ಚಟಾರನೆ ಸಿಡಿದು ಅರಳುತ್ತದೆ. ಓದಿ ನಕ್ಕು ಮನಸ್ಸನ್ನು ಹಗುರ ಮಾಡಿ. 

ಇದು ‘ನಗೆ ತುಂತುರು' ಬೆನ್ನುಡಿಯಲ್ಲಿ ಕಂಡ ಮಾತುಗಳು. ಈ ಪುಟ್ಟ ಪಾಕೆಟ್ ಪುಸ್ತಕದಲ್ಲಿರುವ ನಗೆಹನಿಗಳನ್ನು ಓದುತ್ತಾ ಓದುತ್ತಾ ಮುಗಿದದ್ದೇ ತಿಳಿಯುವುದಿಲ್ಲ ಅಷ್ಟು ಸೊಗಸಾಗಿವೆ ಮತ್ತು ಹಾಸ್ಯ ಕಡಲಿನಲ್ಲಿ ತೇಲಾಡಿಸುತ್ತವೆ. ಅದರ ಒಂದೆರಡು ಸ್ಯಾಂಪಲ್ ಇಲ್ಲಿವೆ…

ಕಾಳಪ್ಪ ಬಾಡಿಗೆಗೆ ಹೊಸದಾಗಿ ಒಂದು ಮನೆ ನೋಡಿದ್ದ. ಬಾಡಿಗೆ ಅಡ್ವಾನ್ಸ್ ಕೊಡುವುದಕ್ಕೆ ಮೊದಲು, ಅದೇ ವಠಾರದಲ್ಲಿ ವಾಸ ಮಾಡುತ್ತಿದ್ದ ಮನೆ ಮಾಲೀಕನನ್ನು ಕೇಳಿದ.

“ನನಗೆ ಒಂದೇ ಒಂದು ಸಂದೇಹ. ವಠಾರದಲ್ಲಿ ಬೊಗಳೋ ನಾಯಿ ಇದೆಯಾ?”

ಮನೆ ಮಾಲೀಕ ಅವಸರವಸರವಾಗಿ “ಇಲ್ಲ ಇಲ್ಲ, ನಾಯಿ ಕಂಡರೆ ನನಗಾಗೋಲ್ಲ ಇಲ್ಲಿ ಯಾರ ಮನೇಲೂ ನಾಯಿ ಸಾಕಿಲ್ಲ.” ಅಂತ ಸಮಾಧಾನ ಹೇಳಿದ.

ಕಾಳಪ್ಪ “ ಸದ್ಯ, ಒಳ್ಳೇದಾಯ್ತು. ನಮ್ಮನೇಲಿ ಎರಡು ನಾಯಿಗಳಿವೆ. ಅವುಗಳು ಅಸಾಧ್ಯವಾಗಿ ಬೊಗಳುತ್ತವೆ. ಅದನ್ನು ಕೇಳಿ ತಡಕೊಳ್ಳೋದರಲ್ಲೇ ನನಗೆ ಸಾಕೋ ಸಾಕು ಅನ್ನಿಸಿದೆ" ಅಂತ ನಿಟ್ಟುಸಿರಿಟ್ಟ.!

***

ತಮ್ಮ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ಬೆಕ್ಕನ್ನು ಹೊರಗೆ ಹಾಕಿ ಬಾಗಿಲು ಮುಚ್ಚಿಕೊಂಡು ಬಂದು ತಾನು ಮಲಗೋದು ಮಾದೇವಯ್ಯನ ಪಾಲಿಗೆ ಬಂದ ನಿತ್ಯದ ಕೆಲಸ. ಒಂದು ದಿನ ಮಾದೇವಯ್ಯ ರಾತ್ರಿ ಬಹಳ ಹೊತ್ತಿನವರೆಗೆ ಮಲಗದೆ ಬಾಗಿಲ ಹತ್ತಿರವೇ ಕೂತು ತೂಕಡಿಸುತ್ತಿದ್ದ. ಅಕಸ್ಮಾತ್ ಎಚ್ಚರ ಗೊಂಡ ಅವನ ಅಮ್ಮ ಬಂದು ಅವನನ್ನು ನೋಡಿ “ಮಾದೇವಾ, ಇನ್ನೂ ಮಲಗಿಲ್ಲವೇನೋ? ಯಾಕೋ?” ಅಂತ ಕೇಳಿದಳು.

ಮಾದೇವಯ್ಯಾ “ಬೆಕ್ಕು ಮನೇಲಿಲ್ಲ. ಎಲ್ಲೋ ಹೋಗಿದೆ. ಅದು ಬಂದ ಮೇಲೆ ಅದನ್ನು ಹೊರಗೆ ಕಳುಹಿಸಿ ಬಾಗಿಲು ಹಾಕ್ಕೊಂಡು ಮಲಕ್ಕೋಬೇಕು" ಅಂದ.

***

ಪ್ರವಾಸಿಗಳ ಆಕರ್ಷಣೆಗೆಂದು ಒಂದು ಬಸ್ ಕಂಪೆನಿ ಹೀಗೊಂದು ಸೌಲಭ್ಯಗಳ ಪಟ್ಟಿ ಜಾಹೀರಾತು ಮಾಡಿತು !

“ಸುವ್ಯವಸ್ಥಿತ ಸಾರಿಗೆ ಸಂಸ್ಥೆಯ ಸುಸಜ್ಜಿತ ಬಸ್ಸುಗಳಲ್ಲಿ ಸುಖ ಪ್ರಯಾಣ. ಹೊಯ್ಸಳ ದೇವಾಲಯಗಳ ಮೂರು ದಿನಗಳ ಯಾತ್ರೆ, ವಸತಿ, ಊಟ, ಬಿಸಿ ನೀರು ಸ್ನಾನ ಒಳಗೊಂಡಂತೆ ಪ್ರತಿಯೊಬ್ಬರಿಗೆ ಮುನ್ನೂರೇ ರೂಪಾಯಿ ಚಾರ್ಜು !”

ಇದನ್ನು ನೋಡಿದ ಒಬ್ಬಾತ ಪ್ರವಾಸ ಹೋಗಲು ನಿಶ್ಚಯ ಮಾಡಿದ. ಟಿಕೇಟ್ ಕೊಳ್ಳುವಾಗ ಮಾತ್ರ ಸ್ವಲ್ಪ ಚೌಕಾಶಿ ಮಾಡಿ ಮೂವತ್ತು ರೂಪಾಯಿ ಕಡಿಮೆ ಮಾಡಿಕೊಳ್ಳಬೇಕೆಂದು ಬಸ್ ಕಂಪೆನಿಯ ಮ್ಯಾನೇಜರನ್ನು ಕೇಳಿಕೊಂಡ. ಮ್ಯಾನೇಜರು, “ಇದೇನ್ರಿ ಹೀಗೆ ಕೇಳ್ತೀರಿ? ಈಗಾಗಲೇ ಸಾಕಷ್ಟು ಕಡಿಮೆ ದರ ನಿಶ್ಚಯ ಮಾಡಿದ್ದೀವಿ!” ಅಂದರು. 

ಪ್ರವಾಸಿ “ಸ್ನಾನ ಒಳಗೊಂಡು, ಅಂತ ನೀವು ಚಾರ್ಜು ಮಾಡಿದ್ದೀರಿ. ಆ ಸೌಲಭ್ಯ ನನಗೆ ಬೇಕಾಗಿಲ್ಲ. ನಾನು ವಾರಕ್ಕೊಂದೇ ದಿನ ಸ್ನಾನ ಮಾಡೋದು" ಅಂದ!

***

ಸುಮಾರು ೬೦ ಪುಟಗಳ ಈ ಪುಸ್ತಕವನ್ನು ಕೊಂಡು ಓದಿದರೆ ಮನಸ್ಸೂ ಹಗುರವಾಗುತ್ತದೆ. ಈಗಂತೂ ನಗೆಹನಿಗಳ ಪುಸ್ತಕಗಳು ಪ್ರಕಟವಾಗುವುದೇ ಬಹಳ ಕಡಿಮೆ. ಆದರೂ ಈ ಪುಸ್ತಕ ಮೂರು ಮುದ್ರಣಗಳನ್ನು ಕಂಡಿದೆ.