ನಗೆ ಸಿಂಚನ
ಕಳೆದ ಹಲವಾರು ವರ್ಷಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಯಜ್ಞ ನಾರಾಯಣ ಉಳ್ಳೂರ್ ತಮ್ಮ ಬಿಡುವಿನ ವೇಳೆಯಲ್ಲಿ ಲೇಖನ, ಹಾಸ್ಯ ಲೇಖನಗಳನ್ನು ಬರೆಯುವ ಹವ್ಯಾಸ ಇರಿಸಿಕೊಂಡಿದ್ದಾರೆ. ಈಗಾಗಲೇ ಹಲವು ಹಾಸ್ಯ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಬರೆದು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ೨೦ ಲೇಖನಗಳನ್ನು ಈ ಪುಟ್ಟ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ.
ಯಜ್ಞನಾರಾಯಣ ಇವರು ತಮ್ಮ ‘ಎರಡು ಮಾತು' ಹೇಳುವುದು ಹೀಗೆ -” ಇಂದಿನ ಸಮಾಜದಲ್ಲಿ ನಗುವವರ ಸಂಖ್ಯೆ ಕಡಿಮೆಯಾಗಿದೆ. ವೇಗದ ಮತ್ತು ಒತ್ತಡದ ಬದುಕಿನಲ್ಲಿ ನಗುವುದಕ್ಕೆ ಸಮಯವಾದರೂ ಎಲ್ಲಿ? ಇದು ಹಲವರ ಪ್ರಶ್ನೆ. ನಗುವು ಮಾನವನ ಆರೋಗ್ಯವೃದ್ಧಿಗೆ ಸಹಕಾರಿ ಎಂಬುದು ವೈಜ್ಞಾನಿಕ ಸತ್ಯ. ಮನಃಪೂರ್ವಕವಾಗಿ ನಗುವುದರಿಂದ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುವುದರಲ್ಲೂ ಸಂಶಯವಿಲ್ಲ. ನಗುವು ಮನಸ್ಸಿಗೆ ಉಲ್ಲಾಸವನ್ನೂ, ಚೈತನ್ಯವನ್ನೂ ನೀಡುತ್ತದೆ. ನಗುವು ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ನಮ್ಮ ಸುತ್ತಲಿನವರತ್ತ ಬೀರಿದ ಒಂದು ನಗುವು ತುಂಬಾ ಪರಿಣಾಮ ಬೀರಬಲ್ಲುದು. ಇಲ್ಲಿನ ಲೇಖನಗಳು ಓದುಗರ ಮುಖದಲ್ಲಿ ತುಸುವಾದರೂ ನಗು ಅರಳುವಂತೆ ಮಾಡಿದಲ್ಲಿ ನನ್ನ ಶ್ರಮ ಸಾರ್ಥಕ.”
ಪುಟ್ಟದಾಗಿರುವ ನಗೆ ಬರಹಗಳನ್ನು ಓದುವುದೇ ಒಂದು ಸುಂದರ ಅನುಭವ. ಲೇಖನಕ್ಕೆ ಪೂರಕ ಚಿತ್ರಗಳೂ ಇವೆ. ಚಿತ್ರಗಳು ಸ್ವಲ್ಪ ದೊಡ್ಡ ಗಾತ್ರದಲ್ಲಿದ್ದರೆ ಚೆನ್ನಾಗಿರುತ್ತಿತ್ತು. ಸುಮಾರು ೭೦ ಪುಟಗಳ ಈ ಕೃತಿಯನ್ನು ಯಜ್ಞನಾರಾಯಣ ಇವರು ತಮ್ಮ ತಂದೆ ದಿ.ವೆಂಕಟರಮಣ ಉಳ್ಳೂರ್ ನರಸೀಪುರ ಹಾಗೂ ತಾಯಿ ದಿ. ಮೂಕಾಂಬಿಕಾ ಅಮ್ಮನವರಿಗೆ ಅರ್ಪಣೆ ಮಾಡಿದ್ದಾರೆ.