ನಡೆದಾಡುವ ದೇವರು ಎಡವಿದ್ದು ಉಂಟು…!

ನಡೆದಾಡುವ ದೇವರು ಎಡವಿದ್ದು ಉಂಟು…!

ದೇವರು ಎಂಬ ಕಲ್ಪನೆಯೇ ಅದ್ಬುತ. ಸರ್ವಶಕ್ತ, ಸರ್ವವ್ಯಾಪಿ, ಸರ್ವವನ್ನು ಒಳಗೊಂಡ ಸಮಸ್ತ ಸೃಷ್ಟಿಯ ಸಂಕೇತ. ಜಾತಿ ಮತ ಧರ್ಮ ಭಾಷೆ ಪ್ರದೇಶಗಳನ್ನು ಮೀರಿದ ಪರಮೋಚ್ಚ ನಿಷ್ಕಲ್ಮಶ ಸ್ಥಿತಿ. ಮನುಷ್ಯನೊಬ್ಬ ದೇವರಾಗವುದು ಈ ಸ್ಥಿತಿ ತಲುಪಿದಾಗ...

ಸ್ವಾತಂತ್ರ್ಯ ನಂತರ ಕರ್ನಾಟಕದ ಸಾಮಾಜಿಕ ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಡೆದಾಡುವ ದೇವರು ಎಂದು ಪ್ರಸಿದ್ಧರಾದವರು ಸಿದ್ದಗಂಗೆಯ ಶಿವಕುಮಾರ ಸ್ವಾಮಿಗಳು ಮತ್ತು ಇದೀಗ ಅಸ್ತಂಗತರಾದ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮಿಗಳು. ಸಿದ್ದಗಂಗಾ ಶ್ರೀಗಳು ಕಾಯಕ ಯೋಗಿಗಳು. ನಡೆದಾಡುವ ದೇವರು ಎಂಬುದಕ್ಕಿಂತ ನುಡಿದಾಡಿದ ಮನುಷ್ಯ ಎಂಬುದು ಹೆಚ್ಚು ಸೂಕ್ತ. 

ಸಿದ್ದೇಶ್ವರ ಸ್ವಾಮಿಗಳು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಹಣ ಅಧಿಕಾರ ಪ್ರಶಸ್ತಿಗಳನ್ನು ತಿರಸ್ಕರಿಸಿ ಸ್ವಾಮಿತ್ವದ ದೈವಿಕ ಪ್ರಜ್ಞೆಯನ್ನು ಜನರಲ್ಲಿ ಮೂಡಿಸಿದವರು. ಸಮಕಾಲೀನ ಸಮಾಜದ ಬಹಳಷ್ಟು ಸ್ವಾಮಿಗಳ ನಡಾವಳಿಯನ್ನು ನೋಡಿದಾಗ ಸಿದ್ದೇಶ್ವರ ಸ್ವಾಮಿಗಳು ಬಹಳ ಎತ್ತರದಲ್ಲಿ ನಿಲ್ಲುವುದು ವಾಸ್ತವ.

ಆದರೆ ಈ ನೆಲದ ನಿಜವಾದ ನಡೆದಾಡಿದ ದೇವರ ಕಲ್ಪನೆಗೆ ಹತ್ತಿರವಾದವರು ಬಸವಣ್ಣ ಮಾತ್ರ. 12 ನೆಯ ಶತಮಾನದ ಆ ಕರ್ಮಠ ಕಠೋರ ದಿನಗಳಲ್ಲಿಯೇ ಅಸ್ಪೃಶ್ಯತೆಯನ್ನು ಕೇವಲ ಖಂಡಿಸದೆ ದಲಿತರಿಗೂ ಬ್ರಾಹ್ಮಣರಿಗೂ ಮದುವೆ ಮಾಡಿಸಿದ ಕ್ರಾಂತಿಕಾರಿ. ವೇಶ್ಯಯರನ್ನು ತನ್ನ ಅನುಭವ ಮಂಟಪಕ್ಕೆ ಸ್ವಾಗತಿಸಿ ಅವರ ಸಾಹಿತ್ಯವನ್ನು ಸ್ವೀಕರಿಸಿದ ಮಹಾನ್ ಮಾನವತಾವಾದಿ. ಕೊಲೆ ಪಾತಕರನ್ನು, ದುಶ್ಚಟಗಳ ದಾಸರನ್ನು ಶರಣರನ್ನಾಗಿಸುವಷ್ಟು ಕ್ಷಮೆ ಕರುಣೆ ಪ್ರೀತಿ ತೋರಿದ ನಿಜವಾದ ದೇವತಾ ಮನುಷ್ಯ, 8 ಶತಮಾನಗಳ ಹಿಂದೆಯೇ ಮೌಡ್ಯದ ವಿರುದ್ಧ ವೈಚಾರಿಕತೆ ಮತ್ತು ಕಾಯಕದ ಮಹತ್ವವನ್ನು ಸಾರಿದ ದಾರ್ಶನಿಕ. ಬಹುಶಃ ಇಷ್ಟೊಂದು ಸಮಾನತೆಯನ್ನು ಸಾರಿದ ನಡೆ ನುಡಿ ಒಂದಾಗಿದ್ದ ಜಗತ್ತಿನ ಮತ್ತೊಬ್ಬ ಸುಧಾರಕ ಸಿಗುವುದಿಲ್ಲ.

ಸಿದ್ದೇಶ್ವರ ಶ್ರೀಗಳ ಪ್ರವಚನ ಸಮಕಾಲೀನ ಸಮಾಜದಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಹ ಅವರ ಸರಳ ಉಪನ್ಯಾಸಗಳು ಅತ್ಯಂತ ಬೇಡಿಕೆ ಪಡೆದು ಕೊಂಡಿದ್ದವು. ಅವರ ವಿಚಾರಗಳಿಂದ ಗಾಢ ಪ್ರಭಾವಕ್ಕೆ ಒಳಗಾದವರು ಇದ್ದಾರೆ. ಅಷ್ಟರ ಮಟ್ಟಿಗೆ ಅವರೊಬ್ಬ ಸಂತ ಎಂಬುದರಲ್ಲಿ ಸಂಶಯವಿಲ್ಲ.

ಆದರೆ ಅದನ್ನು ಮೀರಿ ಭಾವನೆಗಳನ್ನು ಕಲ್ಲಾಗಿಸಿ ಯೋಚಿಸಿದಾಗ… ಈ ಸಮಾಜದಲ್ಲಿ ಯಾರೇ ದೇವರ ಸಮಾನರು ಎಂಬ ಗೌರವಕ್ಕೆ ಪಾತ್ರರಾದವರು ಮಾಡಬೇಕಾದ ಮೊದಲ ಕೆಲಸ ಜಾತಿ ಪದ್ದತಿಯ ವಿರುದ್ಧ ತೀವ್ರ ಹೋರಾಟ ಮತ್ತು ಜಾಗೃತಿ. ಹುಟ್ಟಿನ ಕಾರಣದಿಂದ ಮನುಷ್ಯರಲ್ಲಿ ಮೇಲು ಕೀಳು ಅಸ್ಪೃಶ್ಯತೆ ಇರುವ ಯಾವುದೇ ಸಮಾಜವನ್ನು ನಾಗರಿಕ ಸಮಾಜ ಎನ್ನಲು ಸಾಧ್ಯವಿಲ್ಲ.  ಅಲ್ಲಿ ದೇವರು ಧರ್ಮ ಮತ್ತು ದೇವತಾ ಮನುಷ್ಯರು ಇರಲೂ ಸಾಧ್ಯವಿಲ್ಲ.

ಸಮಾಜದ ಎರಡನೇ ಅತಿದೊಡ್ಡ ಶಾಪ ಭ್ರಷ್ಟಾಚಾರ. ಇಡೀ ವ್ಯವಸ್ಥೆ ಲಂಚದ ಹಾವಳಿಯಿಂದ ಬಸವಳಿದು ಜನರ ಜೀವನವೇ ಅದಕ್ಕೆ ಬಲಿಯಾಗುತ್ತಿರುವಾಗ ಯಾವುದೇ ಆಧ್ಯಾತ್ಮಿಕ ಚಿಂತನೆಗಳು, ಪ್ರವಚನಗಳು, ಉಪನ್ಯಾಸಗಳು ಮತ್ತು ಪ್ರಯತ್ನಗಳು ಅದರ ಸುತ್ತಲೇ ಹೆಚ್ಚು ಕೇಂದ್ರೀಕೃತವಾಗಿರಬೇಕು. ನಮ್ಮನ್ನು ಸುತ್ತುವರಿದ ಪ್ರಬಲ ಶಕ್ತಿಗಳನ್ನು ಕಡಿಮೆ ಭ್ರಷ್ಟ ಗೊಳಿಸಲು ನಮ್ಮೆಲ್ಲಾ ಶ್ರಮ ವಿನಿಯೋಗಿಸಬೇಕು. ನಮ್ಮ ದೈವಿಕ ಪ್ರಜ್ಞೆ ಆ ನಿಟ್ಟಿನಲ್ಲಿ ಕೆಲಸ ಮಾಡಿದರೆ ಮಾತ್ರ ದೇವತಾ ಮನುಷ್ಯರಾಗಲು ಸಾಧ್ಯ. ಇಡೀ ವ್ಯವಸ್ಥೆ ಕೊಳೆತು ನಾರುತ್ತಿರುವಾಗ ನಾವು ಮಾತ್ರ ಶುದ್ದರು ಎನ್ನಲಾಗದು.

ನಿಜವಾದ ಸಂತರು ಮೂಡಿಸಲೇಬೇಕಾದ ಮತ್ತೊಂದು ಮಹತ್ವದ ಜಾಗೃತಿ ಸಾಮಾನ್ಯ ಜನರಲ್ಲಿ ವೈಚಾರಿಕ ಮನೋಭಾವ ಮತ್ತು ಕಾಯಕ ಪ್ರಜ್ಞೆ. ನಮ್ಮ ಸಮಾಜದ ಅತಿದೊಡ್ಡ ಶೋಷಣಾ ಮಾರ್ಗ ಮೌಡ್ಯ. ವ್ಯಕ್ತಿತ್ವದ ಬೆಳವಣಿಗೆ ಮತ್ತು ‌ದೇಶದ ಅಭಿವೃದ್ಧಿಗೆ ಮಾರಕವಾಗಿರುವುದೇ ಜನರ ಮೌಡ್ಯ. ಅದನ್ನು ಹೋಗಲಾಡಿಸಲು ದೇವರ ಹಂತಕ್ಕೆ ತಲುಪಿದ ಗುರುಗಳು ನಿರಂತರ ಮಾಡಬೇಕು.

ಇದರ ಜೊತೆಗೆ ಸರ್ವ ಧರ್ಮ ಸಮನ್ವಯದ ಆತ್ಮಸಾಕ್ಷಿಯ ಪ್ರಯತ್ನಗಳು ಅಷ್ಟೇ ಅವಶ್ಯಕ. ಅದು ಕೇವಲ ಮಾತಿನ ಮೇಲ್ನೋಟದ ಚಿಂತನೆಗಳಾಗದೆ ಆಳದ ಮತ್ತು ವ್ಯವಸ್ಥೆಯ ವಿರುದ್ಧ ಹೋರಾಡುವ ದಿಟ್ಟತನವಾಗಿರಬೇಕು. ಸಿದ್ದೇಶ್ವರ ಸ್ವಾಮಿಗಳ ಹಂತಕ್ಕೆ ತಲುಪುವುದು ತುಂಬಾ ತುಂಬಾ ಕಷ್ಟ. ಅವರ ಒಂದು ಪ್ರವಚನಕ್ಕೆ ಲಕ್ಷಾಂತರ ಜನ ಸೇರುತ್ತಿದ್ದರು. ಆಧ್ಯಾತ್ಮಿಕ ಕ್ಷೇತ್ರದ ಸ್ಟಾರ್ ಆಗಿದ್ದರು. ಇಲ್ಲಿ ಒಂದು ವಿಷಯ ಗಮನಿಸಬೇಕಾಗಿದೆ. ಸದಾ ಒಳ್ಳೆಯದನ್ನೇ ಯೋಚಿಸುತ್ತಾ, ಒಳ್ಳೆಯದನ್ನೇ ಮಾತನಾಡುತ್ತಾ, ಒಳ್ಳೆಯದನ್ನೇ ಮಾಡುತ್ತಾ ಪಾಸಿಟಿವ್ ಆಗಿಯೇ ಇರುವುದು ವೈಯಕ್ತಿಕವಾಗಿ ಉತ್ತಮ ಸಾಧನೆಗೆ ಸಹಕಾರಿ ಮತ್ತು ನೆಮ್ಮದಿಯ ಜೀವನ ವಿಧಾನ. ಆದರೆ ‌ಸಮಾಜದ ಓರೆ ಕೋರೆಗಳನ್ನು ತಿದ್ದಿ ಸಾಮಾಜಿಕ ‌ನೆಮ್ಮದಿಗೆ ಕೆಟ್ಟದ್ದನ್ನು ಧೈರ್ಯವಾಗಿ ಖಂಡಿಸುವ ಮತ್ತು ತಿರಸ್ಕರಿಸುವ ಮನೋಭಾವ ಸಹ ಮುಖ್ಯವಾಗುತ್ತದೆ. ಅದರಿಂದ ಒಂದಷ್ಟು ಟೀಕೆಗಳು, ವಿರೋಧಗಳು, ಜನರ ನಿಂದನೆಗಳನ್ನು ಎದುರಿಸಬೇಕಾಗಬಹುದು. ಎರಡೂ ಒಟ್ಟಿಗೇ ಮಾಡಿದರೆ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಕೇವಲ ಒಂದೇ ಕೈಯಲ್ಲಿ ಚಪ್ಪಾಳೆ ಆಗುವುದಿಲ್ಲ.

ಒಳ್ಳೆಯದರ ಪುರಸ್ಕಾರ ಮತ್ತು ಕೆಟ್ಟದ್ದನ್ನು ತಿರಸ್ಕರಿಸುವುದು ಹಾಗು ಪ್ರತಿಭಟಿಸುವುದು ಒಂದೇ ನಾಣ್ಯದ ಎರಡು ಮುಖಗಳು. ಮಾಧ್ಯಮಗಳು ಸೃಷ್ಟಿಸುತ್ತಿರುವ ಭ್ರಮಾಲೋಕವನ್ನು ವಿಷಾಧದಿಂದ ಇಲ್ಲಿ ಪ್ರಸ್ತಾಪಿಸಲೇ ಬೇಕು. ಮನಸ್ಸಿನಲ್ಲಿ ಕಲ್ಮಶಗಳನ್ನು ಇಟ್ಟುಕೊಂಡು ಸಿದ್ದೇಶ್ವರ ಶ್ರೀಗಳ ಸರಳತೆ, ಅಹಿಂಸೆ, ಮಾನವೀಯತೆಯ ಬಗ್ಗೆ ದಿನಗಟ್ಟಲೆ ಚರ್ಚೆ ಮಾಡುವ ಮುಖವಾಡಗಳು ಅಸಹ್ಯ ಹುಟ್ಟಿಸುವಂತಿದ್ದವು. ಶ್ರೀಗಳು ಪ್ರತಿಪಾದಿಸಿದ ಚಿಂತನೆಗಳಿಗೆ ಸಂಪೂರ್ಣ ವಿರುದ್ಧ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತುತ್ತಿರುವ ಈ ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳು ಯಾವ ನೈತಿಕತೆಯ ಆಧಾರದ ಮೇಲೆ ಸ್ವಾಮಿಗಳನ್ನು ನಡೆದಾಡುವ ದೇವರು ಎಂದು ಕರೆಯುತ್ತಾರೆ ಎಂಬುದೇ ಸೋಜಿಗ. ಜೊತೆಗೆ ವ್ಯಕ್ತಿಯ ವಿವಿಧ ಮುಖಗಳನ್ನು ಪರಿಚಯಿಸದೆ, ವಾಸ್ತವ ಪ್ರಜ್ಞೆ ಮೂಡಿಸದೆ ನಡೆದಾಡುವ ದೇವರು ಎಂದು ಹೇಳುತ್ತಾ ಅತಿಮಾನುಷ ವ್ಯಕ್ತಿಯಾಗಿ ಚಿತ್ರಿಸಿ ಅವರನ್ನು ಮತ್ತೊಬ್ಬ ದೇವರು ಎಂದು ಹೇಳಿ ಕಾಯಿ ಕರ್ಪೂರ ವಿಭೂತಿಗೆ ಸೀಮಿತ ಗೊಳಿಸಿದರು. ಅವರೊಬ್ಬ ಮನುಷ್ಯ ತನ್ನ ನಡತೆಯಿಂದ ಜನಾಕರ್ಷಣೆಯ ವ್ಯಕ್ತಿಯಾದರು. ಹಾಗೇ ನಾವೂ ಪ್ರಯತ್ನಿಸಬೇಕು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲೇ ಇಲ್ಲ. ಅವರು ದೇವರು ಇವರು ಕನಿಷ್ಠ ಅದರ ನೆರಳಾಗಲು ಪ್ರಯತ್ನಿಸದ ಭಂಡರು.

ಹಾಗೆಯೇ ಅಲ್ಲಿ ಸೇರಿದ್ದ ರಾಜಕಾರಣಿಗಳಲ್ಲಿ ಬಹುತೇಕರು ಭ್ರಷ್ಟರು, ದುಷ್ಟರು, ಜಾತಿವಾದಿಗಳು, ಕೋಮುವಾದಿಗಳು. ಸ್ವಾಮಿಗಳ ಬಗ್ಗೆ ಅವರು ಹೇಳುತ್ತಿದ್ದುದು ಕೇಳಿದರೆ ನಗು, ಅಸಹ್ಯ ಮತ್ತು ಕೋಪ ಬರುತ್ತಿತ್ತು. ಹೇಳುವುದು ಮಾತ್ರ ವಿಶ್ವ ಮಾನವತ್ವ ಮತ್ತು ಬದುಕಿನ ನಶ್ವರತೆಯ ಬಗ್ಗೆ. ಆತ್ಮ ಸಾಕ್ಷಿ ಮಾರಿಕೊಂಡವರು ಬಯಲಾಗುವ ಪರಿ.

ಎಲ್ಲರೂ ನೆನಪಿಡಬೇಕಾದ ಒಂದು ವಿಷಯವೆಂದರೆ, ಸಿದ್ದೇಶ್ವರ ಸ್ವಾಮಿಗಳ ಅಂತ್ಯ ಸಂಸ್ಕಾರದಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯ ಜನಸ್ತೋಮ ನೆರೆದಿತ್ತು. ಏಕೆಂದರೆ ಅವರು ಮಾಡಿದ್ದು ಏಳು ಜನ್ಮಕ್ಕಾಗುವಷ್ಟು ಆಸ್ತಿಯಲ್ಲ. ಸಮಾಜಕ್ಕಾಗಿ ಒಂದಷ್ಟು ಅರಿವು. ನಾವು ನಮ್ಮವರಿಗಾಗಿ ಎಷ್ಟೇ ಮಾಡಿದರು ನಮ್ಮ ನೆನಪು ಕೆಲವೇ ವರ್ಷಗಳು ಮಾತ್ರ. ಆದರೆ ಸಮಾಜಕ್ಕಾಗಿ ಮಾಡಿದರೆ ಇಡೀ ಸಮಾಜ ಶತಮಾನಗಳ ಕಾಲ ನೆನಪು ಮಾಡಿಕೊಳ್ಳುತ್ತದೆ. ಹೇಗೆ ಬದುಕಬೇಕೆಂದು ನಿರ್ಧರಿಸುವ ವಿವೇಚನೆ ನಮಗೆ ಸೇರಿದ್ದು...

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

Comments

Submitted by kannadakanda Fri, 01/06/2023 - 08:12

ಸಿದ್ಧೇಶ್ವರಸ್ವಾಮಿಗಳು ಇನ್ನೊಬ್ಬ ಜಿಡ್ಡು ಕೃಷ್ಣಮೂರ್ತಿ ತೆಱನಾಗಿ ಕಾಣುತ್ತಾರೆ. ಬೇಱೆಯವರನ್ನು ನೋಯಿಸದಿರುವುದು ಇವರಿಬ್ಬರ ಮನೋಭಾವ. ಹಾಗಾಗಿ ಸಮಾಜದ ಓರೆಕೋರೆಗಳ ಬಗ್ಗೆ ಇಬ್ಬರು ಕಠಿಣವಾಗಿ ಮಾತಾಡಿದ್ದು ಕಡಿಮೆ. ಸಮಾಜ ಓರೆಕೋರೆಗಳು ಅದಱ ಸ್ವಭಾವವೆಂದು ಅದನ್ನು ಕಠೋರವವಾಗಿ ಇಬ್ಬರೂ ಖಂಡಿಸಿಲ್ಲ. ಹಾಗಾಗಿ ಇದು ಅವರ ದೌರ್ಬಲ್ಯವೆಂದು ಕೆಲವರಿಗನಿಸಿರಬಹುದು.