ನಡೆಯದ ಆತ್ಮಾವಲೋಕನ ; ಕಾಂಗ್ರೆಸ್ ಪುನಶ್ಚೇತನ ಅಗತ್ಯ
ಪಂಚರಾಜ್ಯ ಚುನಾವಣೆಯ ಸೋಲಿನ ನಂತರ ಈ ಕುರಿತು ಚರ್ಚಿಸಲು ಕಾಂಗ್ರೆಸ್ ಸಭೆ ನಡೆದಿದೆ. ಪಕ್ಷದಲ್ಲಿ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆ ಅಬಾಧಿತವಾಗಿ ಮುಂದುವರಿದಿದೆ. ನಾಯಕತ್ವದ ಬದಲಾವಣೆ ಬೇಕು ಎಂದು ಅಪೇಕ್ಷಿಸಿರುವ ಗುಲಾಂ ನಬಿ ಆಜಾದ್ ನೇತೃತ್ವದ ‘ಜಿ-೨೩’ ಬಣದ ಬೇಡಿಕೆಗೆ ಮನ್ನಣೆ ದೊರೆತಿಲ್ಲ. ಹೀಗಾಗಿ ಗಾಂಧಿ ಕುಟುಂಬಕ್ಕೆ ಜೀಹುಜೂರ್ ಎನ್ನುವ ಕೆಲಸ ಮುಂದುವರಿದಿದೆ. ಪಕ್ಷದ ಸೋಲಿಗೆ ಏನು ಕಾರಣಗಳು ಎಂದು ಚರ್ಚೆ ಮಾಡಿ ಅವುಗಳ ಪರಿಹಾರಕ್ಕೆ ಗಂಭೀರ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಿದ್ದ ಸಭೆ ಹಾಗೆ ನಿಜಾರ್ಥದಲ್ಲಿ ‘ಆತ್ಮಾವಲೋಕನ' ದ ಸಭೆ ಆಗದೇ ಹೋಗಿದೆ.
ಕೇರಳ ಮತ್ತು ಪಶ್ಚಿಮ ಬಂಗಾಳ ಚುನಾವಣೆಯ ಸೋಲಿನ ನಂತರ ಅದರ ಕುರಿತು ಪರಿಶೀಲನೆ ನಡೆಸಿದ ಅಶೋಕ್ ಚವಾಣ್ ಸಮಿತಿ ವರದಿ ನೀಡಿದೆ. ಆದರೆ, ಅದರ ಮಂಡನೆ ಹಾಗೂ ಚರ್ಚೆ ಆಗಿಲ್ಲ. ಪಕ್ಷದಲ್ಲಿ ಯಾವುದೇ ಮುಖ್ಯ ಹುದ್ದೆ ವಹಿಸಿಲ್ಲದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿದ್ದು, ಉತ್ತರ ಪ್ರದೇಶದಲ್ಲಿ ಇದು ದುಬಾರಿಯಾಗಿದೆ. ಸದ್ಯ ದೇಶದ ೩೧ ರಾಜ್ಯಗಳಲ್ಲಿ ಎರಡು ಕಡೆ ಮಾತ್ರ ಕಾಂಗ್ರೆಸ್ ಪೂರ್ಣ ಬಹುಮತದಿಂದ ಅಧಿಕಾರದಲ್ಲಿದೆ - ರಾಜಸ್ಥಾನ ಮತ್ತು ಛತ್ತಿಸ್ ಗಡ. ಇದು ಕೂಡ ಆಡಳಿತ ವಿರೋಧಿ ಅಲೆಯಿಂದ ತತ್ತರಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಇವನ್ನೂ ಕಳೆದುಕೊಳ್ಳುವ ಆತಂಕ ತಪ್ಪಿದ್ದಲ್ಲ. ಆಡಳಿತದಲ್ಲಿದ್ದ ಒಂದು ರಾಜ್ಯ (ಪಂಜಾಬ್) ಅನ್ನೂ ಕಳೆದುಕೊಂಡಿದೆ. ಪಕ್ಷ ಶೂನ್ಯ ತಲುಪುವ ಮುನ್ನವೇ ಹೆಚ್ಚಿನ ಆತ್ಮಾವಲೋಕನ, ನಾಯಕತ್ವ ಬದಲಾವಣೆ ಅಥವಾ ಸಬಲೀಕರಕಣ, ಆಧುನಿಕ ಭಾರತೀಯ ಮತದಾರನ ಮನಸ್ಸತ್ವಕ್ಕೆ ತಕ್ಕಂತೆ ಪಕ್ಷದ ಮರುರಚನೆ-ಎಲ್ಲ ಆಗಬೇಕಿದೆ.
ಯಾವುದೇ ಪಕ್ಷವಾದರೂ ಇಂದು ಹರೆಯದ ಹುಮ್ಮಸ್ಸಿನ, ಹಿರಿಯರನ್ನೂ ಸರಿದೂಗಿಸಿಕೊಂಡು ಹೋಗಬಲ್ಲ, ತಂತ್ರಜ್ಞಾನಾತ್ಮಕವಾಗಿ ಅಪ್ ಡೇಟ್ ಆದ, ಸ್ಥಳೀಯ ಪಕ್ಷಗಳಿಗೆ ಸಡ್ಡು ಹೊಡೆಯಬಲ್ಲ, ಯುವ ನಾಯಕತ್ವವನ್ನು ಬಯಸುತ್ತದೆ. ಈ ಹಿಂದೆ ಪಕ್ಷದೊಳಗೆ ಹಲವು ರಾಜ್ಯಗಳಲ್ಲಿ ಉಂಟಾದ ಬಂಡಾಯವೂ ಹಿರಿಯ ನಾಯಕರ ಪಾಳೇಗಾರಿಕೆಯನ್ನು ವಿರೋಧಿಸಿಯೇ ಉಂಟಾದದ್ದು. ಕಾಂಗ್ರೆಸ್ ನ ಉಳಿವು, ಬೆಳವಣಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ದೃಷ್ಟಿಯಿಂದಲೂ ಮುಖ್ಯ. ದೇಶಕ್ಕೊಂದು ಬಹುಮತವಿರುವ ಆಡಳಿತ ಪಕ್ಷ ಇರುವಂತೆ, ಸಾಕಷ್ಟು ಬಲಿಷ್ಟವಾದ ಮತ್ತು ಆಡಳಿತ ಪಕ್ಷವನ್ನು ಸಕಾರಾತ್ಮಕವಾಗಿ ಟೀಕೆ ಮಾಡಬಲ್ಲಷ್ಟು ಬಲವಾಗಿರುವ ಪ್ರತಿಪಕ್ಷವೂ ಅವಶ್ಯಕ. ಅಂತಹದೊಂದು ಪ್ರತಿಪಕ್ಷ ಇಲ್ಲವಾದರೆ ಆಡಳಿತ ಪಕ್ಷ ತನ್ನನ್ನು ಪ್ರಶ್ನಿಸುವವರೇ ಇಲ್ಲ ಎಂಬ ಸರ್ವಾಧಿಕಾರಿ ಮನಸ್ಸತ್ವ ಬೆಳೆಸಿಕೊಳ್ಳಬಹುದು. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಪ್ರತಿಪಕ್ಷಗಳು ಸಕಾರಣವಾಗಿ ಕುಟುಕುತ್ತ ಇದ್ದರೆ ಆಡಳಿತ ಪಕ್ಷ ಎಚ್ಚರದಲ್ಲಿ ಮುನ್ನಡೆಯುತ್ತದೆ. ಹೀಗಾಗಿ ಕಾಂಗ್ರೆಸ್ ಒಬ್ಬ ಉತ್ತಮ ನಾಯಕ/ಕಿಯನ್ನು ಹೊಂದಿ ತನ್ನ ಧ್ವನಿಯನ್ನು ಆದಷ್ಟು ಬೇಗನೇ ಕಂಡುಕೊಳ್ಳುವುದು ಅಗತ್ಯ. ಗಾಂಧಿ ಕುಟುಂಬದವರೇ ಪಕ್ಷ ಮುನ್ನಡೆಸಬೇಕು ಎಂದು ದುಂಬಾಲು ಬೀಳುವುದು ಮಾತ್ರ ಕಾಂಗ್ರೆಸ್ ನಂತಹ ಮೂರ ಮೂವತ್ತು ವರ್ಷ ಇತಿಹಾಸ ಹೊಂದಿದ ಪಕ್ಷಕ್ಕೆ ಗೌರವವಲ್ಲ. ಮುಖ್ಯವಾಗಿ ಮತದಾರ, ಕಾಂಗ್ರೆಸ್ ನ ಕುಟುಂಬ ರಾಜಕಾರಣ, ಪಾಳೇಗಾರಿಕೆ ಪ್ರವೃತ್ತಿ ಹಾಗೂ ಸೈದ್ಧಾಂತಿಕ ಗೊಂದಲವನ್ನು ತಿರಸ್ಕರಿಸಿದ್ದಾನೆ. ಕಾಂಗ್ರೆಸ್ ನ ಹಿರಿಯ ನಾಯಕರು ಹೊಸ, ಉಜ್ವಯ ಚಿಂತನೆಗಳ ಯುವನಾಯಕರಿಗೆ ಆಸ್ಪದ ನೀಡದೆ ಇರುವುದರಿಂದ ಇಲ್ಲಿ ಹೊಸ ಚಿಂತನೆಗಳು ಮೊಳೆಯುವುದು ಅಸಾಧ್ಯವಾಗಿದೆ. ಹೀಗಾಗಿ ಜನತೆಯನ್ನು ತಲುಪುವುದೂ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಅಭಿವೃದ್ಧಿಪರ ಮತಗಳು ಬಿದ್ದಿವೆ. ಎಂದರೆ ಪ್ರಗತಿಯ ಕಡೆಗೆ ನಡೆಯುವ ಸ್ಥಿರ ನಾಯಕತ್ವವನ್ನು ಜನತೆ ಅಪೇಕ್ಷಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ತನ್ನನ್ನು ಬೇರುಮಟ್ಟದಿಂದ ಪುನಶ್ಚೇತನ ಮಾಡಿಕೊಳ್ಳಬೇಕಾಗಿದೆ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೪-೦೩-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ