ನಡೆಯುವುದು ನಡೆಯುತ್ತಿದೆ
ಹಾರುವ ಪಕ್ಷಿ ಅಕ್ಷಿಪಟಲ ಮೀರಿ
ಹಾರುತ್ತಿದೆ
ನೀರ ಕನ್ನಡಿ ಚೂರಾಗಿ
ಹಬೆಯಾಗಿ
ಮೇಘಗರ್ಭ ಕಟ್ಟಿ
ನೀರಾಗಿ ಸುರಿಯುತ್ತಿದೆ
ಅಲೆಯಾಗಿ ಸೆಳೆಯುತ್ತಿದೆ
ಸುನಾಮಿಯಾಗಿ ಭೋರ್ಗರೆಯುತ್ತಿದೆ
ನಡೆಯುವುದು ನಡೆಯುತ್ತಿದೆ
ತಿರುಗುತ್ತಿದೆ ಭೂಮಿ
ಕಿರುಗುಡದೇ
ಉರಿವ ರವಿ ಊರ ತೊರೆದು
ನಗುಚಂದ್ರ ಮೊಗ ತೆರೆದು
ಸಂಜೆಗತ್ತಲುತುಂಬಿ ತೊನೆಯಲು
ಒಳಗಣ್ಣಜ್ಜಿಯ ನುಂಗಲು
ಅಲ್ಲೇ ಸಾವು ಕಾದಿದೆ
ಶುರುವಾಗಿದೆ
ಮತ್ತೆಲ್ಲೋ
ಹೆರಿಗೆ ಬೇನೆ
ಈ ಪಂದ್ಯಕ್ಕಿಲ್ಲ ಕೊನೆ
ಬಿಸಿಲಿಗೆ ಬಾಗುತ್ತಿದೆ
ಅಜ್ಜಿ ನೆಟ್ಟು ಬಿಟ್ಟುಹೋದ ತೆನೆ
ಒಡೆಯುತ್ತಿದೆ ಬೀಜ ಒಂದಂಕುರಕ್ಕೆ
ತಲೆ ಬಾಗಿಸಿದಂತೆ
ಚಿಗುರಾಗಿ ಹಗುರಾಗಿ
ಮರವಾಗಿ ಬೆಳೆದು
ಉದುರಿದೆ ಅದೇ ಬೀಜ
ಬಸಿರಾಗಿ ಹರಿದು
ಮೊರೆದಿದೆ ಜೀವ ಮತ್ತೆ ಮತ್ತೆ
ಬಡಿಯುತ್ತಿದೆ ಹೃದಯ
ಹಗಲೆನ್ನದೇ ಇರುಳೆನ್ನದೇ
ನೆತ್ತರ ಅಣುಕಣದೊಳಗೆ
ಕಾಣದ್ದೇನೋ ಪ್ರವರ್ಧಿಸುತ್ತಿದೆ
ಸತ್ತವರು ಹುಟ್ಟುವವರು
ಅಲ್ಲೆಲ್ಲೋ ಸಂಧಿಸುತ್ತಿದ್ದಾರೆ
ಅರಳುತ್ತಿದೆ ಹೂವು ಬೆತ್ತಲೆದೆ ತೆರೆದು
ದಾರಿಗುಂಟ ಬಂದ
ಭ್ರಮರಗಳು ಹೀರಿವೆ ಮಧು
ಹಂಚಿವೆ ಸಿಹಿ ಬುಟ್ಟಿ
ಜೇನ ಕಟ್ಟಿ
ಗೋಡೆಯಿಲ್ಲದ ಗಾಳಿಗೆ
ತನ್ನೊಡಲ ವಾಂಛೆ ಪಸರಿಸಿ
ಕೆರಳುತ್ತಿದೆ ಸರ್ಪ
ಕಪ್ಪೆ ನಡುಗಲು
ಅದರ ಬಾಯ ಹುಳು
ಸಾವಿನವಸರಕ್ಕೆಅದುರಾಡಿ ಬೆದರಿ ಒದರಾಡಿದೆ
ಹುಟ್ಟಿದ ಹುಲ್ಲು ಹುಲ್ಲೆಯ
ಬಾಯಿಗೆ
ಆದರೆ ಹುಲಿಯ ಹಸಿವಿಗೆ
ದಾಹಗಳು ಲೋಕರೂಢಿಗಳಾಗಿ ಗೋಚರಿಸುತ್ತಿವೆ
ಒಣ ನೆಲವೂ ಸೋತು
ಜಲ ಜಿನುಗಿಸಿದೆ
ಕೊರಡು ಕೊನರಿದೆ
ಇಂಧನವಿಲ್ಲದಿದ್ದರೂ
ವೀರ್ಯಾಣು ಅಂಡಾಣುವನ್ನರಸಿದೆ
ಸ್ಪಷ್ಟ ನಿರ್ವಾತದಲ್ಲಿ
ಅಸ್ಪಷ್ಟ ಗೆರೆಗಳಿಲ್ಲದೇ
ಒಂದನ್ನೊಂದು ಬಿಗಿದಪ್ಪುತ್ತಿವೆ
ಜಗವೇ ಒಂದು ಗಂಟಾಗಿ
ಮೇಲಕ್ಕೆ ಕೆಳಕ್ಕೆ ಜಿಗಿವ
ಮೆಟ್ಟಿಲಾಗಿ
ಮಿಲನಗೊಳ್ಳುತ್ತಿದೆ ಆಶ್ಚರ್ಯಗಳು
ಮಲ್ಲಿಗೆಯಾಗಿ ಹಾರವಾಗಿ ಬಾಡುತ್ತಿವೆ[-
ಯಾಕೋ ಕಾಡುತ್ತಿವೆ
ಕತ್ತಿ ಹಿಡಿದ
ಮಾತನಾಡುವ ವೀರ್ಯಾಣುಗಳು
ಅವುಗಳ ಹಿಂದ್ಹಿಂದೆ
ನೆಗೆಯುತ್ತಿವೆ
ನುಗ್ಗುತ್ತಿವೆ ಕರಿಗೆರೆಗಳು
ಪ್ರಖರ ಪ್ರವರ ಕಿರಣ ನುಂಗಿ
ಭೂಮ್ಯಾಕಾಶ ಪಸರಿಸಿ
ಜಗವೇ ಛಿದ್ರವಾಗುತ್ತಿದೆ
ಗೆದ್ದಲು ಕಟ್ಟಿದ ಮನೆಗೆ
ಹಾವು ನುಗ್ಗುತ್ತಿದೆ
ಒಟ್ಟಿನಲ್ಲಿ ನಡೆಯುವುದು ನಡೆಯುತ್ತಿದೆ
ಅಡೆತಡೆಯಿಲ್ಲದೇ
ನಿಜಕ್ಕೂ!