ನಡೆಯುವ ಕಲ್ಲುಬಂಡೆಗಳು ಮತ್ತು ಗುಪ್ತನಿಧಿ

ನಡೆಯುವ ಕಲ್ಲುಬಂಡೆಗಳು ಮತ್ತು ಗುಪ್ತನಿಧಿ

ನೂರಾರು ವರುಷಗಳು ಹಿಂದೆ, ಒಂದು ಹಳ್ಳಿಯಲ್ಲಿ ಒಬ್ಬ ರೈತ ಮತ್ತು ಅವನ ತಂಗಿ ವಾಸವಾಗಿದ್ದರು. ಆ ಹಳ್ಳಿಯ ಬದಿಯಲ್ಲಿ ಹರಿಯುವ ನದಿ ಪಕ್ಕದಲ್ಲಿ ದೊಡ್ಡ ಕಲ್ಲುಬಂಡೆಗಳಿದ್ದವು. ಅವುಗಳ ಕೆಳಗೆ ಯಕ್ಷರು ನಿಧಿ ಹೂತಿದ್ದಾರೆಂದು ಹಳ್ಳಿಗರಲ್ಲಿ ಪ್ರತೀತಿ.

ಆ ಶ್ರೀಮಂತ ರೈತನ ತಂಗಿಯ ಹೆಸರು ರೊಸನ್ನಾ. ಅವಳು ಚಂದದ ಯುವತಿ. ಹತ್ತಿರದ ಪಟ್ಟಣದ ಹಲವು ಯುವಕರು ಅವಳ ಸಂಗಕ್ಕಾಗಿ ಹಾತೊರೆಯುತ್ತಿದ್ದರು. ಆದರೆ ಅವಳು ತನ್ನ ಅಣ್ಣನ ಹೊಲದಲ್ಲಿ ಕೆಲಸ ಮಾಡುವ ಪೀಟರನಿಗೆ ಮನಸೋತಿದ್ದಳು. ಪೀಟರ್ ಸುಂದರಾಂಗ ಮತ್ತು ಬಲಶಾಲಿ. ಆದರೆ ಅವನು ಬಹಳ ಬಡವ.

ಒಮ್ಮೆ ರೈತನ ಬಳಿ ಹೋಗಿ ರೊಸನ್ನಾಳನ್ನು ಮದುವೆಯಾಗ ಬೇಕೆಂದಿದ್ದೇನೆ ಎಂದು ಪೀಟರ್ ಹೇಳಿದ. ಆಗ ರೈತ ನಕ್ಕು, "ಮೊದಲು ನಿನ್ನ ಎರಡು ಜೇಬುಗಳ ತುಂಬ ಚಿನ್ನ ನನಗೆ ತೋರಿಸು” ಎಂದ. ಪೀಟರ್ ಜೋಲುಮುಖ ಮಾಡಿಕೊಂಡು ಅಲ್ಲಿಂದ ಹೋದ. ಯಾಕೆಂದರೆ ಅವನ ಬಳಿ ಒಂದು ಜೇಬು ತುಂಬ ಚಿನ್ನವೂ ಇರಲಿಲ್ಲ.

ಕ್ರಿಸ್‌ಮಸ್ ಹಬ್ಬದ ಮುನ್ನಾ ದಿನ ತನ್ನ ಎಲ್ಲ ಕೆಲಸಗಾರರಿಗೂ ರೈತ ಭೋಜನಕೂಟ ಏರ್ಪಡಿಸಿದ. ಆಗ ಒಬ್ಬ ಅಲೆಮಾರಿ ಅಲ್ಲಿಗೆ ಬಂದು ಆಹಾರ ಮತ್ತು ಆಶ್ರಯ ಕೇಳಿದ. ಅವನೊಬ್ಬ ಸಮಾಜಕಂಟಕನಾಗಿದ್ದರೂ ಹಬ್ಬವಾದ್ದರಿಂದ ರೈತ ಆಹಾರ ನೀಡಿದ.

ಅವತ್ತು ರಾತ್ರಿ ರೈತನ ದನದ ಹಟ್ಟಿಯಲ್ಲಿ ಬೆಚ್ಚಗಿನ ಹುಲ್ಲಿನ ಮೇಲೆ ಅಲೆಮಾರಿ ಮಲಗಿದ. ಮಧ್ಯರಾತ್ರಿಯಲ್ಲಿ ಅವನಿಗೆ ಹಟ್ಟಿಯಲ್ಲಿದ್ದ ಕತ್ತೆ ಮತ್ತು ಎತ್ತು ಮಾತನಾಡುವುದು ಕೇಳಿಸಿತು. ಅವನು ಕಣ್ಣು ಮುಚ್ಚಿಕೊಂಡು ನಿದ್ದೆ ಬರುವಂತೆ ನಟಿಸಿದ. “ಈ ಬಾರಿ ಹೊಸ ವರುಷ ಆರಂಭವಾಗುವಾಗ ಮಧ್ಯರಾತ್ರಿಯಲ್ಲಿ ನದಿ ದಡದ ಬಂಡೆಗಲ್ಲುಗಳು ನೀರು ಕುಡಿಯಲು ನದಿಗೆ ಹೋಗಿ ಬರುತ್ತವೆ. ಅವು ನೂರು ವರುಷಕ್ಕೊಮ್ಮೆ ಹೀಗೆ ಮಾಡುತ್ತವೆ" ಎಂದಿತು ಎತ್ತು.

“ನಮಗೆ ಗೊತ್ತಿರುವ ಈ ಸಂಗತಿ, ಇಲ್ಲಿ ಗೊರಕೆ ಹೊಡೆಯುತ್ತಿರುವ ಮುದುಕನಿಗೂ ಗೊತ್ತಿದ್ದರೆ ಅವನು ನದಿ ದಡಕ್ಕೆ ಹೋಗುತ್ತಿದ್ದ. ಯಾಕೆಂದರೆ, ಕಲ್ಲುಬಂಡೆಗಳು ಎದ್ದು ಹೋದಾಗ ಅವುಗಳ ತಳದಲ್ಲಿರುವ ಗುಪ್ತನಿಧಿಯಿಂದ ಅವನು ಜೇಬುಗಳಲ್ಲಿ ಚಿನ್ನ ತುಂಬಿಸಿಕೊಳ್ಳಬಹುದು" ಎಂದಿತು ಕತ್ತೆ. “ಅದು ಸುಲಭದ ಕೆಲಸವಲ್ಲ. ಅವನ ಕೈಯಲ್ಲಿ ಐದೆಲೆ ಮರದ ಹತ್ತಾರು ಎಲೆಗಳು ಇಲ್ಲದಿದ್ದರೆ, ನದಿಯಿಂದ ಮರಳುವ ಬಂಡೆಗಲ್ಲುಗಳು ಅವನನ್ನು ನಜ್ಜುಗುಜ್ಜಾಗಿಸುತ್ತವೆ” ಎಂದು ದನಿಗೂಡಿಸಿತು ಎತ್ತು.

“ಅಷ್ಟೇ ಸಾಲದು. ಅವನೊಬ್ಬ ಮನುಷ್ಯನನ್ನು ಬಲಿಗೊಡಬೇಕು. ಇಲ್ಲವಾದರೆ ಅಲ್ಲಿಂದ ತಂದ ಚಿನ್ನ ಮರುದಿನ ಬೆಳಗ್ಗೆ ಧೂಳಾಗಿ ಬದಲಾಗುತ್ತದೆ” ಎಂದಿತು ಕತ್ತೆ. "ಐದೆಲೆ ಮರವನ್ನೇನೋ ಹುಡುಕಬಹುದು. ಆದರೆ ಇನ್ನೊಬ್ಬನಿಗೆ ಚಿನ್ನ ಸಿಗಲೆಂದು ತನ್ನ ಜೀವ ಬಲಿಗೊಡಲು ಯಾರು ಮುಂದೆ ಬರುತ್ತಾರೆ?" ಎಂದು ಪ್ರಶ್ನಿಸಿತು ಎತ್ತು. ಅನಂತರ ಕತ್ತೆ ಮತ್ತು ಎತ್ತು ಸುಮ್ಮನಾದವು.

ಮರುದಿನ ಮುಂಜಾನೆ ರೈತನ ಹಟ್ಟಿಯಿಂದ ಅಲೆಮಾರಿ ಹೊರಟ. ಅವನು ಹಳ್ಳಿಗಾಡಿನಲ್ಲಿ ಮೂರು ದಿನ ಸತತವಾಗಿ ಹುಡುಕಾಡಿದ ನಂತರ ಅವನಿಗೊಂದು ಐದೆಲೆ ಮರ ಕಾಣ ಸಿಕ್ಕಿತು. ಕೂಡಲೇ ಅದರಿಂದ ಹತ್ತಾರು ಎಲೆಗಳನ್ನು ಕಿತ್ತುಕೊಂಡ. ಅನಂತರ ಅವನು ಪುನಃ ಅದೇ ಹಳ್ಳಿಗೆ ಹಿಂತಿರುಗಿದ.

ವರುಷದ ಕೊನೆಯ ದಿನ ಮಧ್ಯಾಹ್ನದ ಹೊತ್ತಿನಲ್ಲಿ ಅವನು ನದಿ ದಡಕ್ಕೆ ಹೋದ. ಅಲ್ಲಿ ಅವನಿಗೆ ಪೀಟರ್ ಭೇಟಿಯಾದ. ಅವನು ಒಂದು ದೊಡ್ಡ ಬಂಡೆಗಲ್ಲಿನ ಬುಡದಲ್ಲಿ ಕುಳಿತು ಪ್ರಾರ್ಥಿಸುತ್ತಿದ್ದ. ಅನಂತರ ಬುತ್ತಿ ತಿಂದ. ಅವನನ್ನು ರೈತನ ಮನೆಯಲ್ಲಿ ಕಂಡದ್ದು ಅಲೆಮಾರಿಗೆ ನೆನಪಾಯಿತು. ತಕ್ಷಣವೇ ಅವನ ತಲೆಯಲ್ಲೊಂದು ಸಂಚು ಮೂಡಿತು.

“ಇಲ್ಲೇನು ಮಾಡುತ್ತಿದ್ದಿ?” ಎಂದು ಪೀಟರ್ ಬಳಿ ಅಲೆಮಾರಿ ಕೇಳಿದ. “ಇದು ಕ್ರಿಸ್‌ಮಸ್ ಹಬ್ಬದ ಸಮಯವಾದ್ದರಿಂದ ಪ್ರಾರ್ಥಿಸುತ್ತಿದ್ದೆ. ಇನ್ನು ನನ್ನ ಹೊಲದ ಕೆಲಸಕ್ಕಾಗಿ ಹೊರಟೆ” ಎಂದ ಪೀಟರ್.
“ಯಾವ ಭಾಗ್ಯಕ್ಕೆ ಹೊಲದ ಕೆಲಸ ಮಾಡುತ್ತಿ? ಅದರಿಂದ ನಿನಗೆ ಸಂಪತ್ತು ಗಳಿಸಲು ಸಾಧ್ಯವಿಲ್ಲ. ನಿನ್ನ ಜೇಬುಗಳ ತುಂಬ ಚಿನ್ನ ಬೇಕೇ?” ಎಂದು ಕೇಳಿದ ಅಲೆಮಾರಿ. ಅನಂತರ ಪೀಟರನಿಗೆ ಕತ್ತೆ ಮತ್ತು ಎತ್ತು ಮಧ್ಯರಾತ್ರಿಯಲ್ಲಿ ಮಾತಾಡಿದ್ದನ್ನು ತಿಳಿಸಿದ ಅಲೆಮಾರಿ. ಆದರೆ ಐದೆಲೆ ಮರದ ಎಲೆ ಮತ್ತು ಮನುಷ್ಯನ ಜೀವ ಬಲಿ ಕೊಡುವ ಸಂಗತಿ ತಿಳಿಸಲಿಲ್ಲ. ಅದೆಲ್ಲವನ್ನೂ ಕೇಳಿದ ಪೀಟರ್ “ಇವತ್ತು ಮಧ್ಯರಾತ್ರಿಯ ಮುಂಚೆ ನಿನ್ನನ್ನು ಇಲ್ಲಿ ಕಾಣುತ್ತೇನೆ” ಎಂದು ತನ್ನ ಹೊಲದ ಕೆಲಸಕ್ಕೆ ಹೊರಟ.

ಆ ದಿನ ಮಧ್ಯರಾತ್ರಿ ಹತ್ತಿರವಾಗುವಾಗ ಪೀಟರ್ ಮತ್ತು ಅಲೆಮಾರಿ ಇಬ್ಬರೂ ನದಿ ದಡದಲ್ಲಿ ಕಾದು ಕುಳಿತಿದ್ದರು. ಮಧ್ಯರಾತ್ರಿ ಆಗುತ್ತಲೇ ಅಲ್ಲಿದ್ದ ಕಲ್ಲುಬಂಡೆಗಳು ತಮ್ಮ ಸ್ಥಾನದಿಂದ ಮೇಲೆದ್ದು, ಗಡಗಡ ಸದ್ದು ಮಾಡುತ್ತಾ ನೀರು ಕುಡಿಯಲಿಕ್ಕಾಗಿ ನದಿಗೆ ಹೊರಟವು. ತಕ್ಷಣವೇ ಅವರಿಬ್ಬರೂ ಕಲ್ಲುಬಂಡೆಗಳ ತಳದ ಹೊಂಡಗಳತ್ತ ಓಡಿದರು. ಅಲ್ಲಿ ಗುಪ್ತನಿಧಿಯ ಚಿನ್ನ ಮಿರಮಿರನೆ ಮಿಂಚುತ್ತಿತ್ತು. ಇಬ್ಬರೂ ತಮ್ಮ ಜೇಬುಗಳ ತುಂಬ ಚಿನ್ನ ತುಂಬಿಸಿಕೊಂಡರು.

ಅಷ್ಟರಲ್ಲಿ ಪುನಃ ಗಡಗಡ ಸದ್ದು ಕೇಳಿಸಿತು. “ಇಲ್ಲಿಂದ ಓಡೋಣ. ಇಲ್ಲದಿದ್ದರೆ ಕಲ್ಲುಬಂಡೆಗಳು ನಮ್ಮನ್ನು ನಜ್ಜುಗುಜ್ಜಾಗಿಸುತ್ತವೆ” ಎಂದ ಪೀಟರ್. ಅಲೆಮಾರಿ ಮೋಸದ ನಗು ನಗುತ್ತಾ, “ನನ್ನನ್ನು ಕಲ್ಲುಬಂಡೆಗಳೇನೂ ಮಾಡೋದಿಲ್ಲ. ಯಾಕೆಂದರೆ ನನ್ನ ಕೈಯಲ್ಲಿ ಮ್ಯಾಜಿಕ್ ಮರದ ಎಲೆಗಳಿವೆ. ನೀನು ಇಲ್ಲಿಂದ ಪಾರಾಗಲಾರೆ. ನಾನು ಅದಕ್ಕಾಗಿಯೇ ಕಾಯುತ್ತಿದ್ದೆ. ಯಾಕೆಂದರೆ ಒಬ್ಬ ಮನುಷ್ಯನನ್ನು ಬಲಿಗೊಡದಿದ್ದರೆ, ನಾಳೆ ಬೆಳಗ್ಗೆ ನನ್ನ ಚಿನ್ನವೆಲ್ಲ ಧೂಳಾಗುತ್ತದೆ" ಎಂದ.

ಇದನ್ನು ಕೇಳಿದ ಪೀಟರ್ ಭಯದಿಂದ ಚೀರಿದ. ಕಲ್ಲುಬಂಡೆಗಳು ಹತ್ತಿರ ಬಂದಾಗ ಅಲೆಮಾರಿ ಮ್ಯಾಜಿಕ್ ಮರದ ಎಲೆಗಳನ್ನು ಎದುರು ಹಿಡಿದ; ಅವು ಅತ್ತಿತ್ತ ಸರಿದು, ಪೀಟರನನ್ನು ಬೆನ್ನಟ್ಟಿ ಹೋದವು. ಆಗ ಭಾರೀ ಬಂಡೆಯೊಂದು ಪೀಟರನತ್ತ ನುಗ್ಗಿ ಬಂತು. ಅದರಡಿಗೆ ಸಿಕ್ಕಿ ಬೀಳುತ್ತೇನೆಂದು ಪೀಟರ್ ತತ್ತರಿಸಿದ. ಆಗ ಅದು ಅವನ ಪಕ್ಕದಲ್ಲೇ ನಿಶ್ಚಲವಾಗಿ ನಿಂತು, ನುಗ್ಗಿ ಬರುತ್ತಿದ್ದ ಇತರ ಬಂಡೆಗಳಿಂದ ಪೀಟರನನ್ನು ರಕ್ಷಿಸಿತು! ಅದು ಅವನು ಪ್ರಾರ್ಥನೆ ಸಲ್ಲಿಸಿದ ಬಂಡೆಯಾಗಿತ್ತು.

ಇತರ ಕಲ್ಲುಬಂಡೆಗಳೆಲ್ಲ ತಮ್ಮತಮ್ಮ ಸ್ಥಾನ ಸೇರಿಕೊಂಡ ನಂತರ, ಆ ಭಾರೀ ಬಂಡೆ ಅಲೆಮಾರಿಯ ಬೆನ್ನಟ್ಟಿತು. ಅವನು ಮ್ಯಾಜಿಕ್ ಮರದ ಎಲೆಗಳನ್ನು ಅದರ ಎದುರು ಹಿಡಿದರೂ ಅದು ನಿಲ್ಲಲಿಲ್ಲ. ಯಾಕೆಂದರೆ, ಅಷ್ಟರಲ್ಲಿ ಮ್ಯಾಜಿಕ್ ಮರದ ಎಲೆಗಳು ತಮ್ಮ ಪ್ರಭಾವ ಕಳೆದುಕೊಂಡಿದ್ದವು. ಭಾರೀ ಬಂಡೆ ಅಲೆಮಾರಿಯ ಮೇಲೆ ಬಿದ್ದು ಅವನನ್ನು ನಜ್ಜುಗುಜ್ಜಾಗಿಸಿತು.

ಪೀಟರ್ ನಡುಗುತ್ತಾ, ಜೀವ ಉಳಿದರೆ ಸಾಕೆಂದು ಅಲ್ಲಿಂದ ಮನೆಗೆ ಓಡಿದ. ಮರುದಿನ ಬೆಳಗ್ಗೆ ಅವನ ಜೇಬುಗಳಲ್ಲಿದ್ದ ಚಿನ್ನ ಮಿಂಚುತ್ತಿತ್ತು. ಪೀಟರ್ ಅವನ್ನು ಒಯ್ದು ರೈತನಿಗೆ ತೋರಿಸಿ, ರೊಸನ್ನಾಳ ಜೊತೆ ತನ್ನ ಮದುವೆ ಮಾಡಬೇಕೆಂದ. ಈಗ ರೈತ  ಒಪ್ಪಿ, ಸಂತೋಷದಿಂದ ರೊಸನ್ನಾಳನ್ನು ಪೀಟರನಿಗೆ ಮದುವೆ ಮಾಡಿ ಕೊಟ್ಟ.