ನತದೃಷ್ಟ ಸೌಜನ್ಯ...

ನತದೃಷ್ಟ ಸೌಜನ್ಯ...

ಇತ್ತೀಚೆಗೆ ಬಹಳಷ್ಟು ಅಪರಾಧ ಜಗತ್ತಿನ ಅನುಮಾನದ ವಿಷಯಗಳ ಬಗ್ಗೆಯೇ ಹೆಚ್ಚು ಹೆಚ್ಚು ಬರೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿರುವುದು ಮಾನವೀಯ ಮೌಲ್ಯಗಳ ಪುನರುತ್ಥಾನದ ಮನಸ್ಸುಗಳ ಅಂತರಂಗದ ಚಳವಳಿಯ ನಮಗೂ ಬಹಳ ಬೇಸರದ ಸಂಗತಿಯಾಗಿದೆ. ಮನಸ್ಸುಗಳ ಅಂತಃಕರಣ ಕಲಕಿ ಒಳ್ಳೆಯ ನಡತೆ ರೂಪಿಸಿಕೊಳ್ಳಲು ಅಕ್ಷರಗಳ ಮೂಲಕ ಪ್ರಯತ್ನಿಸುವ ಸಂದರ್ಭದಲ್ಲಿ ಭಾವನೆಗಳು ಸಹ ಮುಖ್ಯವಾಗುತ್ತದೆ. ಆಗ ಸಮಾಜವನ್ನು ಕಾಡುತ್ತಿರುವ ಭಾವನಾತ್ಮಕ ವಿಷಯಗಳ ಬಗ್ಗೆಯು ಚರ್ಚಿಸಬೇಕಾಗುತ್ತದೆ. ಇಲ್ಲದಿದ್ದರೆ ಆತ್ಮವಂಚನೆಯಾಗುವ ಸಾಧ್ಯತೆ ಇದೆ.

ಕರ್ನಾಟಕದ ಅತ್ಯಂತ ಪ್ರಮುಖ ಯಾತ್ರಾ ಸ್ಥಳ ಧರ್ಮಸ್ಥಳ. ಧಾರ್ಮಿಕ ನಂಬಿಕೆಯ ಬಹುತೇಕ ಜನ ಜೀವನದಲ್ಲಿ ಒಮ್ಮೆಯಾದರೂ ಅಲ್ಲಿನ ಶ್ರೀ ಮಂಜುನಾಥನ ದರ್ಶನ ಪಡೆಯುತ್ತಾರೆ. ಮಕ್ಕಳಿಗೆ ಮುಡಿ (ತಲೆಗೂದಲು) ತೆಗೆಯಲು ಹೆಚ್ಚು ಪ್ರಶಸ್ತ ಸ್ಥಳ ಎಂಬ ಪ್ರತೀತಿ ಇದೆ. ಆಣೆ ಪ್ರಮಾಣ ಹರಕೆಗೂ ಹೆಚ್ಚು ಪಾವಿತ್ರ್ಯತೆ ಪಡೆದಿದೆ. ಮುಖ್ಯವಾಗಿ ಅತ್ಯಂತ ಸುಂದರ ಪರಿಸರದ ಮಡಿಲಲ್ಲಿ ಒಳ್ಳೆಯ ಶುಚಿ ಮತ್ತು ರುಚಿಯ ಉಚಿತ ಊಟಕ್ಕೆ ಪ್ರಖ್ಯಾತಿಯಾಗಿದೆ.

ಕರ್ನಾಟಕದ ಅತ್ಯುತ್ತಮ ನಾಗರಿಕ ಸೇವಾ ಪ್ರಶಸ್ತಿ ಕರ್ನಾಟಕ ರತ್ನ ಮತ್ತು ಭಾರತದ ಎರಡನೇ ಅತಿದೊಡ್ಡ ನಾಗರಿಕ ಸೇವಾ ಪ್ರಶಸ್ತಿ ಪದ್ಮವಿಭೂಷಣ ಪಡೆದ ಹಾಗು ಈಗ ರಾಜ್ಯ ಸಭಾ ಸದಸ್ಯರು ಆಗಿರುವ ರಾಜ್ಯದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾದ, ಜನರಿಂದ ಸದಾ ಪಾದ ಪೂಜೆಯ ಗೌರವ ಪಡೆಯುವ ಶ್ರೀ ವೀರೇಂದ್ರ ಹೆಗ್ಗಡೆಯವರು ಇಲ್ಲಿನ ಧರ್ಮಾಧಿಕಾರಿಗಳು ಮತ್ತು ಸುಮಾರು 75 ವರ್ಷ ವಯಸ್ಸಿನ ಹಿರಿಯರು. ಇಂತಹ ಧಾರ್ಮಿಕ ಕ್ಷೇತ್ರವನ್ನು ಹೊಂದಿರುವ ಊರಿನಲ್ಲಿ ಹನ್ನೊಂದು ವರ್ಷಗಳ ಹಿಂದೆ ಸೌಜನ್ಯ ಎಂಬ ಶಾಲಾ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ನಡೆಯುತ್ತದೆ. ಅಲ್ಲಿಂದ ಮುಂದೆ...

ಈ ಘಟನೆ ಧರ್ಮಸ್ಥಳದಂತ ಧಾರ್ಮಿಕ ಮಹತ್ವದ ಸ್ಥಳದಲ್ಲಿ ನಡೆದ ಕಾರಣಕ್ಕಾಗಿ ರಾಜ್ಯದ ಗಮನ ಸೆಳೆದು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತದೆ. ದಿನೇ ದಿನೇ ಅನುಮಾನದ ಹುತ್ತ ಬೆಳೆಯುತ್ತಾ ಹೋಗುತ್ತದೆ. ಮುಖ್ಯವಾಗಿ ಕೆಲವರು‌ ಇತರ ಯುವಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ತನಿಖಾ ತಂಡಗಳು ತನಿಖೆ ನಡೆಸಿ ಕೊನೆಗೆ ಮಾನಸಿಕ ಅಸ್ವಸ್ಥನಂತೆ ಕಾಣುವ‌ ಸಂತೋಷ್ ರಾವ್ ಎಂಬ ವ್ಯಕ್ತಿಯನ್ನು ಆರೋಪಿ ಎಂದು ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುತ್ತಾರೆ. ಹನ್ನೊಂದು ವರ್ಷಗಳ ವಾದ ಪ್ರತಿವಾದಗಳ ನಂತರ ನ್ಯಾಯಾಲಯ ಆರೋಪಿಯನ್ನು ಸಾಕ್ಷ್ಯಾಧಾರಗಳ ಕೊರತೆಯ ಆಧಾರದಲ್ಲಿ ನಿರಪರಾಧಿ ಎಂದು ಖುಲಾಸೆ ಮಾಡುತ್ತದೆ. ಅಂದರೆ ಕಾನೂನಿನ ಪ್ರಕಾರ ಮತ್ತು ಸಾಮಾನ್ಯ ಜನರ ದೃಷ್ಟಿಯಲ್ಲಿ ಅಪರಾಧಿ ಬೇರೆ ಇರುವ ಸಾಧ್ಯತೆಯ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಮತ್ತೆ ಹಿಂದಿನ ವ್ಯಕ್ತಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.

ಈ ಮಧ್ಯೆ ಕೆಲವು ಪ್ರಗತಿಪರ ಸಂಘಟನೆಗಳು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಧರ್ಮಸ್ಥಳದ ಸುತ್ತ ಮುತ್ತ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ನಡೆದ ಕೊಲೆ ಅತ್ಯಾಚಾರ, ಆತ್ಮಹತ್ಯೆ ಮತ್ತು ಕಾಣೆಯಾದವರ ಮಾಹಿತಿಯನ್ನು ಸ್ಥಳೀಯ ಆರಕ್ಷಕ ಠಾಣೆಯಿಂದ ಪಡೆದಿದ್ದಾರೆ. ಅದರಲ್ಲಿ ಸಹ ಅನುಮಾನಕ್ಕೆ ಆಸ್ಪದ ನೀಡುವ ಮುಖ್ಯವಾಗಿ ಹೆಣ್ಣು ಮಕ್ಕಳು ಕಾಣೆಯಾಗಿರುವ ಮಾಹಿತಿ ಒಳಗೊಂಡಿದೆ. ಹಾಗೆಯೇ ಅನುಮಾನ ವ್ಯಕ್ತವಾದ ಆ ಮೂರು ಜನ ಯುವಕರು ಸಹ ಧರ್ಮಸ್ಥಳಕ್ಕೆ ನಿಷ್ಠರಾದ ಮಾಜಿ ಸಚಿವರ ಜೊತೆ ಇತ್ತೀಚೆಗೆ ಪತ್ರಿಕಾಗೋಷ್ಠಿ ಮಾಡಿ ತಾವು ಆ ಕೃತ್ಯದಲ್ಲಿ ಭಾಗಿಯಾಗಿಲ್ಲ. ಕೆಲವು ವಿರೋಧಿಗಳು ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಾರೆ ಎಂಬುದಾಗಿ ಹೇಳಿದ್ದಾರೆ. ಈ ರೀತಿಯ ನಿರ್ಜನ ಪ್ರದೇಶದಲ್ಲಿ ಅನೇಕ ಪ್ರಕರಣಗಳು ಸಹಜವಾಗಿಯೂ ನಡೆದಿರಬಹುದು ಅಥವಾ ಉದ್ದೇಶಪೂರ್ವಕವೂ ಆಗಿರಬಹುದು. ಈಗ ಇದರಲ್ಲಿ ಆಸಕ್ತಿ ಇರುವವರು ಅಭಿಪ್ರಾಯ ರೂಪಿಸಿಕೊಳ್ಳುವ ಮತ್ತು ವ್ಯಕ್ತಪಡಿಸುವ ಸಮಯ ಮತ್ತು ಸರದಿ. ಅದಕ್ಕೆ ಮುಂಚೆ ಅಪರಾಧಗಳ ಬಗ್ಗೆ ಸಣ್ಣ ಮಾಹಿತಿ. 

ಅಪರಾಧಗಳಲ್ಲಿ ಅನೇಕ ವಿಧಗಳಿವೆ. ಕೆಲವು  ಅಪರಾಧಗಳು ನೇರವಾಗಿ ಅದಕ್ಕೆ ಕಾರಣರಾದವರು, ಸಹಾಯ ಮಾಡಿದವರು ಎಲ್ಲವೂ ಮೇಲ್ನೋಟಕ್ಕೆ ಬಹಿರಂಗವಾಗಿರುತ್ತದೆ. ಇನ್ನು ಕೆಲವು ಪ್ರಕರಣಗಳಲ್ಲಿ ಸ್ವಲ್ಪ ಸಾಮಾನ್ಯ ತನಿಖೆಯ ನಂತರ ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ಪತ್ತೆ ಹಚ್ಚಲಾಗುತ್ತದೆ. ಆದರೆ ಕೆಲವು ಅಪರೂಪದ ಪ್ರಕರಣಗಳಲ್ಲಿ ಕೊಲೆ ಅಥವಾ ಅತ್ಯಾಚಾರ ಆದವರಿಗು, ಅದನ್ನು ಮಾಡಿದವರಿಗೂ, ಆ ಪ್ರದೇಶಕ್ಕೂ, ಆ ಸಮಯಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಅಂತಹ ಅನೇಕ ಘಟನೆಗಳು ಈಗಲೂ ಪತ್ತೆಯಾಗದೆ ಹಾಗೇ ಮುಚ್ಚಿ ಹೋಗಿದೆ ಅಥವಾ ಆಸಕ್ತಿ ಕಳೆದುಕೊಂಡಿದೆ. ಕೆಲವು ಸೀರಿಯಲ್ ಕಿಲ್ಲಿಂಗ್ ಅಂಡ್ ರೇಪ್ ಪ್ರಕರಣಗಳು ಮುಂದೆ ಪತ್ತೆಯಾಗಬಹುದು. 

ಆದರೆ ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ಆಕೆ, ಆ ಘಟನೆ ನಡೆದ ಸ್ಥಳ, ಸಮಯ, ಅಲ್ಲಿನ ಸಹಜ ಸಾಮಾಜಿಕ ವ್ಯವಸ್ಥೆ ಎಲ್ಲವೂ ಸ್ಪಷ್ಟವಾಗಿ ತಿಳಿದಿದೆ. ಸ್ವಲ್ಪ ಕಡಿಮೆ ಓಡಾಟದ ಜನಸಂಖ್ಯೆಯ ಪರಿಚತ ಪ್ರದೇಶದಲ್ಲಿ ಮಳೆಯ ನಡುವೆ ಕೆಲವೇ ಗಂಟೆಗಳಲ್ಲಿ ಈ ದುರ್ಘಟನೆ ನಡೆದಿದೆ. ಅಪರಾಧಿ ಯಾರು ಎಂಬುದೇ ಆಗೋಚರ ಪ್ರಶ್ನೆ. ನೇರ ಸಾಕ್ಷಿ ಕಾಣುತ್ತಿಲ್ಲ ಎಂದು ಪೋಲೀಸ್ ವರದಿಗಳು ಹೇಳಿದರೆ ಇಲ್ಲ ಆ ಸ್ಥಳದಲ್ಲಿ ಈ ವ್ಯಕ್ತಿಗಳು ಇದ್ದಿರಬಹುದು ಮತ್ತು ಅವರ ನಡವಳಿಕೆ ಸರಿ ಇಲ್ಲ ಎಂಬ ಸಾಂದರ್ಭಿಕ ಸಾಕ್ಷ್ಯಗಳನ್ನು ಕೆಲವರು ಹೇಳುತ್ತಾರೆ.

ಯಾವುದೇ ಅಪರಾಧಗಳ ಸುತ್ತ ಈ ರೀತಿಯ ಅನುಮಾನಗಳು ಸದಾ ಕಾಡುತ್ತವೆ. ಹೇಳಿ ಕೇಳಿ ಇದು ಅತ್ಯಾಚಾರ ಮತ್ತು ಕೊಲೆ. ತಕ್ಷಣಕ್ಕೆ ಒಂದು ನಿರ್ಧಾರಕ್ಕೆ ಬರುವುದು ತುಂಬಾ ಕಷ್ಟ. ನಾವು ಊಹಿಸಿದ ಅಪರಾಧಿಗಳೇ ನಿಜವಾಗಿದ್ದರೆ ಸರಿ. ಒಂದು ವೇಳೆ ಅವರು ನಿರಪರಾಧಿಗಳೇ ಆಗಿದ್ದರೆ ಆಗ ವಿಷಯ ಮತ್ತಷ್ಟು ಘೋರವಾಗುತ್ತದೆ. ಹಾಗಾದರೆ ಅನುಮಾನದ ಲಾಭ ಯಾರಿಗೆ ಕೊಡಬೇಕು. ವೈಯಕ್ತಿಕವಾಗಿ ನಾವು ಆ ಸ್ಥಾನದಲ್ಲಿ ಇದ್ದರೆ ನಮ್ಮ ಪರಿಸ್ಥಿತಿ ಏನು. ಏಕೆಂದರೆ ಕಾನೂನಿನ ಪ್ರಕಾರ " ಅಪರಾಧಿಗಳನ್ನು ಹಿಡಿಯುವ ಮತ್ತು ಶಿಕ್ಷಿಸುವ ಪ್ರಕ್ರಿಯೆಯಲ್ಲಿ ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ ಒಬ್ಬ ನಿರಪರಾಧಿಗೆ ಶಿಕ್ಷೆಯಾಗದಂತೆ ಎಚ್ಚರಿಕೆ ವಹಿಸಬೇಕು " ಎಂದು ನಮೂದಿಸಲಾಗಿದೆ ಎಂದು ಹೇಳಲಾಗುತ್ತದೆ.

ಇದೇ ನಮಗೂ ಬಹಳವಾಗಿ ಕಾಡುತ್ತಿದೆ. ನಾವು ಸಾಮಾನ್ಯ ಜನರು. ಬಹುತೇಕ ಮಾಧ್ಯಮಗಳ ಸುದ್ದಿಯ ಆಧಾರದ ಮೇಲೆಯೇ ಹೆಚ್ಚು ಅವಲಂಬಿತರು. ಅಪರಾಧ ಜಗತ್ತು ತುಂಬಾ ವಿಶಾಲ ಮತ್ತು  ನಿಗೂಢ. ಬೇದಿಸಲು ನಮ್ಮ ಅರಿವು ಮತ್ತು ಅನುಭವ ಮಾತ್ರ ಇರುತ್ತದೆ. ಅದರ ಆಧಾರದ ಮೇಲೆಯೇ ಅಭಿಪ್ರಾಯ ರೂಪಿಸಿಕೊಳ್ಳಬೇಕು. ಸೌಜನ್ಯ ಎಂಬ ಮಗು ನಮ್ಮ  ಅರಿವಿನ ಅಂತರದಲ್ಲೇ ನಮ್ಮ ನಡುವೆಯೇ ಊಹಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಅತ್ಯಾಚಾರ ಮತ್ತು ಕೊಲೆಯಾಗಿದೆ. ಸರ್ಕಾರಿ ವ್ಯವಸ್ಥೆಯ ತನಿಖೆಗಳು ಮುಗಿದಿವೆ. ನ್ಯಾಯಾಲಯ ಅಸಹಾಯಕವಾಗಿದೆ. ನಾವು ಇದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಾಗುತ್ತಿಲ್ಲ. ಮಾಡುವುದಾದರು ಏನು ?

ಕರ್ನಾಟಕದ ಉಚ್ಚ ನ್ಯಾಯಾಲಯ ( ಹೈ ಕೋರ್ಟ್ ) ಸ್ವ ಇಚ್ಛೆಯಿಂದ ಈ ಪ್ರಕರಣವನ್ನು ದಾಖಲು ಮಾಡಿಕೊಂಡು ಅದಕ್ಕೆ ಇರುವ ಮಾಹಿತಿಯ ಆಧಾರದ ಮೇಲೆ ಕರ್ನಾಟಕದ ಯಾರಾದರೂ ಅತ್ಯಂತ ಪ್ರಾಮಾಣಿಕ ಉನ್ನತ ಪೋಲೀಸ್ ಅಧಿಕಾರಿಯ ನೇತೃತ್ವದಲ್ಲಿ ಒಂದು ವಿಶೇಷ ತನಿಖಾ ತಂಡ ರಚಿಸಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿಯೇ ತನಿಖೆ ನಡೆಸಿ ವರದಿ ಪಡೆದು ತೀರ್ಪು ನೀಡಿದರೆ ಬಹುಶಃ ಸರಿಯೋ ತಪ್ಪೋ ಅದೇ ಅಂತಿಮವಾಗುತ್ತದೆ. ಆರೋಪ ಮಾಡುವವರು ಒಪ್ಪಿಕೊಳ್ಳಬೇಕಾಗುತ್ತದೆ. ಆರೋಪಿತ ಯುವಕರು ಭವಿಷ್ಯದಲ್ಲಿ ನೆಮ್ಮದಿಯಾಗಿ ಇರಬಹುದು ಅಥವಾ ಶಿಕ್ಷೆಗೆ ಒಳಗಾಗಬಹುದು. 

ಸೌಜನ್ಯಳಿಗಂತೂ ನ್ಯಾಯ ಸಿಗುವುದಿಲ್ಲ. ಆಕೆಗೆ ಶಾಶ್ವತ ಅನ್ಯಾಯ ‌ಆಗಿ ಹೋಗಿದೆ. ಆದರೆ ನಿಜವಾದ ನ್ಯಾಯಕ್ಕೆ ನ್ಯಾಯ ಸಿಗಬಹುದು. ನಮಗೆ ಸ್ವಲ್ಪ ಸಮಾಧಾನ ಆಗಬಹುದು. ಅದಕ್ಕಾಗಿ ನ್ಯಾಯಾಲಯದ ಮೇಲೆ ಒತ್ತಡ ತರುವ ಮನವಿಯ ಅಭಿಯಾನ ಪ್ರಾರಂಭಿಸಬಹುದೇ....?

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ