ನದಿಗಳ ಪುನರುಜ್ಜೀವನ : ತರುಣ್ ಭಾರತ್ ಸಂಘದ ಮಾದರಿ

ನದಿಗಳ ಪುನರುಜ್ಜೀವನ : ತರುಣ್ ಭಾರತ್ ಸಂಘದ ಮಾದರಿ

ವಾರ್ಷಿಕ ೫೩೧ ಮಿಮೀ ಮಳೆ ಸುರಿಯುವ ರಾಜಸ್ಥಾನದಲ್ಲಿ ಆಗಾಗ ಬರಗಾಲ. ೧೯೭೦ರಲ್ಲಿ ಅಳ್ವಾರ್ ಜಿಲ್ಲೆಯ ರಾಜ್‍ಘರ್, ಲಚ್‍ಮನ್‍ಘರ್, ತಾನಘಜಿ ಮತ್ತು ಬಾನ್ಸು – ಈ ನಾಲ್ಕು ತಾಲೂಕುಗಳನ್ನು “ಕಪ್ಪು ಪ್ರದೇಶ”ವೆಂದು ರಾಜ್ಯ ಸರಕಾರ ಘೋಷಿಸಿತು.
ಯಾಕೆಂದರ ಅಲ್ಲಿ ಅಂತರ್ಜಲ ಮಟ್ಟವು ಸುಧಾರಿಸಲಾಗದಷ್ಟು ಆಳಕ್ಕೆ ಕುಸಿದಿತ್ತು. ೧೯೮೭ರಲ್ಲಂತೂ ಅಲ್ಲಿ ಮಳೆ ತೀರಾ ಕಡಿಮೆ – ಕೇವಲ ೨೨೩.೮ ಮಿಮೀ. ಇದರಿಂದಾಗಿ ಅಲ್ಲಿ ಚರಿತ್ರೆಯಲ್ಲೇ ಕಠೋರ ಬರಗಾಲ ಎದುರಾಯಿತು. ಈ ಸಮಯದಲ್ಲಿ ಲಾಭರಹಿತ ಸಂಘವಾದ “ತರುಣ್ ಭಾರತ್ ಸಂಘ” (ತಭಾ ಸಂಘ) ಗ್ರಾಮ ಸಮುದಾಯಗಳನ್ನು ಸಂಘಟಿಸಿತು - ಅಲ್ಲಿನ ಪಾರಂಪರಿಕ ಜ್ನಾನ ಆಧಾರಿತ ಮಳೆನೀರು ಕೊಯ್ಲು ಸಂರಚನೆಗಳನ್ನು ನಿರ್ಮಿಸಲಿಕ್ಕಾಗಿ. ತಭಾ ಸಂಘ, ಅಂತರರಾಷ್ಟ್ರೀಯ ಆರ್ಥಿಕ ನೆರವಿನ ಸಂಸ್ಥೆ ಮತ್ತು ಸ್ಥಳೀಯ ಸಮುದಾಯ – ಇವು ಮೂರು ಸಂಸ್ಥೆಗಳು ಒಗ್ಗೂಡಿ ತ್ರಿಪಕ್ಷೀಯ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಿದವು.
೧೯೮೫ರಲ್ಲಿ ಗ್ರಾಮೀಣ ಅಭಿವೃದ್ಧಿಯ ಕನಸಿನೊಂದಿಗೆ ಅಳ್ವಾರಿನ ಗ್ರಾಮಕ್ಕೆ ಬಂದ ಡಾ. ರಾಜೇಂದ್ರ ಸಿಂಗ್ ಈ ಆಂದೋಲನದ ಮುಂದಾಳುತನ ವಹಿಸಿದರು. ಆಗಿನಿಂದಲೂ ಅವರೇ ತಭಾ ಸಂಘದ ಚೇರ್‍ಮನ್. ಜಲಸಂರಕ್ಷಣೆಯಲ್ಲಿ ಅವರ ಅಪೂರ್ವ ಸಾಧನೆಗಳನ್ನು ಗುರುತಿಸಿ ಅವರಿಗೆ ೨೦೦೧ರಲ್ಲಿ ಮ್ಯಾಗಸ್ಸೇ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಸ್ಥಳೀಯ ಸಮುದಾಯಗಳು ಯೋಜನಾ ವೆಚ್ಚದ ಶೇ.೨೫ ಪಾಲನ್ನು ಭರಿಸಿದವು ಮತ್ತು ಕೆಲಸಗಾರರನ್ನು ಒದಗಿಸಿದವು. ಉಳಿದ ಯೋಜನಾ ವೆಚ್ಚವನ್ನು ಆರ್ಥಿಕ ನೆರವಿನ ಸಂಸ್ಥೆಗಳ ಮೂಲಕ ತಭಾ ಸಂಘ ಒದಗಿಸಿತು. ಜೊತೆಗೆ, ನೀರಿನ ಸಮರ್ಥ ನಿರ್ವಹಣೆಗಾಗಿ ಕಾಡುಗಳನ್ನು ಸಂರಕ್ಷಿಸಬೇಕೆಂದು ಸ್ಥಳೀಯ ಸಮುದಾಯಗಳನ್ನು ತಭಾ ಸಂಘ ಆಗ್ರಹಿಸಿತು.
ಈ ಎಲ್ಲ ಪ್ರಯತ್ನಗಳಿಂದಾಗಿ, ೧೯೯೨ರಲ್ಲೇ ನಾಲ್ಕು ನದಿಗಳನ್ನು ಪುನರುಜ್ಜೀವನಗೊಳಿಸಲು ತಭಾ ಸಂಘಕ್ಕೆ ಸಾಧ್ಯವಾಯಿತು. ಆ ನದಿಗಳು: ರೂಪಾರೆಲ್, ಭಗನಿ, ಜಹಜ್‍ವಾಲಿ ಮತ್ತು ಸಾರ್ಸಾ. ಮತ್ತೆಮತ್ತೆ ಬಾಧಿಸಿದ ಬರಗಾಲದಿಂದಾಗಿ ಈ ನದಿಗಳು ಬತ್ತಿ ಹೋಗಿದ್ದವು. ಈ ವರೆಗೆ ಇಂತಹ ೧೧ ನದಿಗಳು ತಭಾ ಸಂಘದ ಕಾಮಗಾರಿಗಳಿಂದಾಗಿ ಮಳೆಗಾಲದ ತಿಂಗಳುಗಳಲ್ಲಿ ಹರಿಯುವಂತಾಗಿದೆ.
ಈ ಯಶೋಗಾಥೆಯಿಂದಾಗಿ ಎದ್ದು ಕಾಣುವ ಸಂಗತಿ: ಬರಗಾಲ ಎಂದರೆ ಮಳೆ ಬಾರದಿರುವುದು ಅಥವಾ ಮಳೆ ಕೊರತೆ ಎಂದಲ್ಲ; ಬದಲಾಗಿ ಬರಗಾಲವು ನೀರಿನ ನಿರ್ವಹಣೆ ಇಲ್ಲ ಎಂಬುದರ ಪುರಾವೆ.
ತಭಾ ಸಂಘದ ಜನಾಂದೋಲನವನ್ನು ಮುಂಬೈಯ ಟಾಟಾ ಸಮಾಜ ವಿಜ್ನಾನಗಳ ಸಂಸ್ಥೆಯ ಅಸಿಸ್ಟೆಂಟ್ ಪ್ರೊಫೆಸರ್ ರೂಪೇಶ್ ಕೌಶಿಕ್ ಅಧ್ಯಯನ ಮಾಡಿದರು. ಭಗನಿ ಮತ್ತು ಜಹಜ್‍ವಾಲಿ ನದಿಗಳ ವಿಸ್ತಾರವಾದ ಜಲಾನಯನ ಪ್ರದೇಶದ ೧೫ ಗ್ರಾಮಗಳಲ್ಲಿ. ಅವರು ದಾಖಲಿಸಿರುವ ಸಂಗತಿಗಳು ಹೀಗಿವೆ: ೧೯೮೫ರಿಂದ ೨೦೦೯ರ ಅವಧಿಯಲ್ಲಿ ಸ್ಥಳೀಯ ಸಮುದಾಯಗಳ ಸಹಕಾರದಿಂದ ತಭಾ ಸಂಘವು ಅಲ್ಲಿ ಅಂತರ್ಜಲದ ಮರುಪೂರಣಕ್ಕಾಗಿ ೨೪೨ ಜೋಹಡ್‍ಗಳನ್ನು (ಮಳೆನೀರು ಕೊಯ್ಲಿನ ಸಂರಚನೆಗಳು) ನಿರ್ಮಿಸಿತು. (ಅನಂತರ ರಚಿಸಿದವನ್ನೂ ಸೇರಿಸಿ ಒಟ್ಟಾಗಿ ಈ ವರೆಗೆ ತಭಾ ಸಂಘ ನಿರ್ಮಿಸಿದ ಜೋಹಡ್‍ಗಳ ಸಂಖ್ಯೆ ೧೧,೮೦೦.)
ಜೋಹಡ್‍ಗಳ ನೀರನ್ನು ಕುಡಿಯಲಿಕ್ಕಾಗಿ ಯಾರೂ ಬಳಸಬಹುದು. ಆದರೆ, ಖಾಸಗಿ ಜಮೀನಿನ ನೀರಾವರಿಗಾಗಿ ಜೋಹಡ್ ನೀರು ಬಳಸಲು ನಿರ್ಬಂಧಗಳಿವೆ. ಇದಕ್ಕಾಗಿ ಬಾವಿಗಳ ನೀರನ್ನು ಬಳಸಬಹುದು (ಮಳೆನೀರು ಕೊಯ್ಲಿನ ಸಂರಚನೆಗಳಿಂದಾಗಿ ಈ ಬಾವಿಗಳ ನೀರು ಮರುಪೂರಣವಾಗುತ್ತದೆ.) ಅಷ್ಟೇ ಅಲ್ಲ, ಆಯಾ ಹಳ್ಳಿಯ ಜನರು ಮಾತ್ರ ಬಾವಿಗಳ ನೀರನ್ನು ವಾರಕ್ಕೊಮ್ಮೆ ಮಾತ್ರ ನೀರಾವರಿಗೆ ಬಳಸಬಹುದು. ನೀರಿನ ಕಳ್ಳತನದ ಪ್ರಕರಣಗಳೂ ಪತ್ತೆಯಾಗಿದ್ದವು. ಈ ತಪ್ಪಿತಸ್ಥರಿಗೆ ಭಾರೀ ದಂಡ ವಿಧಿಸಲಾಗಿತ್ತು – ಗ್ರಾಮದ ಇತರ ನಿವಾಸಿಗಳಿಗೆಲ್ಲ ಪಾಠವಾಗಲಿ ಎಂಬ ಉದ್ದೇಶದಿಂದ.
ಆ ಗ್ರಾಮಗಳ ನಿವಾಸಿಗಳು ಅಲ್ಲಿನ ಒಣಭೂಮಿಯ ಮಣ್ಣು ಈಗ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಗಳಿಸಿದೆ ಎನ್ನುತ್ತಾರೆ. ಮಳೆ ಅನಿಶ್ಚಿತವಾಗಿದ್ದರೂ, ಆ ಗ್ರಾಮಗಳ ಕೃಷಿ ಉತ್ಪಾದನೆ ಹೆಚ್ಚಾಗಿದೆ. ಮಳೆನೀರು ಕೊಯ್ಲಿನ ಸಂರಚನೆಗಳ ಮೇಲ್ಭಾಗದ ಮತ್ತು ಕೆಳಭಾಗದ ರೈತರಿಗೆ ನಿರಂತರವಾಗಿ ನೀರು ಸಿಗುತ್ತಿದೆ.
ಈಗ ಅಲ್ಲಿನ ರೈತರು ಹೆಚ್ಚು ಹೈನಪಶುಗಳನ್ನು ಸಾಕುತ್ತಿದ್ದಾರೆ. ಯಾಕೆಂದರೆ, ಅಲ್ಲಿನ ಬಾವಿಗಳಲ್ಲಿ ನೀರು ಹೆಚ್ಚಾಗಿದೆ. ಇದರಿಂದಾಗಿ ಆಹಾರ ಮತ್ತು ಮೇವಿನ ಲಭ್ಯತೆಯ ಬಹುಪಾಲು ಸಮಸ್ಯೆಗಳು ಈಗ ಪರಿಹಾರವಾಗಿವೆ. ಮುಂಚೆ ಪ್ರತಿದಿನ ೬ರಿಂದ ೧೮ ಗಂಟೆಗಳು ದೂರದಿಂದ ಮನೆಗೆ ನೀರು ತರಲು ಹೆಣಗುತ್ತಿದ್ದ ಮಹಿಳೆಯರೆಲ್ಲ ಈಗ ಮನೆಯ ಹತ್ತಿರವೇ ನೀರು ಸಿಗುವ ಕಾರಣ ನಿರಾಳವಾಗಿದ್ದಾರೆ. ಆ ಹಳ್ಳಿಗಳಿಂದ ಯಾರೂ ಗುಳೇ ಹೋಗುತ್ತಿಲ್ಲ. ಒಟ್ಟಾರೆಯಾಗಿ ಅಲ್ಲಿನ ಕುಟುಂಬಗಳ ಜೀವನಮಟ್ಟ ಸುಧಾರಿಸಿದೆ. ಗಮನಿಸಿ: ಈ ಅಧ್ಯಯನಕ್ಕಾಗಿ ೩೨೬ ಜನರಿಂದ ಮಾಹಿತಿ ಸಂಗ್ರಹಿಸಲಾಗಿತ್ತು.
ಈ ನದಿಗಳ ದಡಗಳ ಹಳ್ಳಿಗರನ್ನು ಸಂಘಟಿಸಿ, ಸ್ವಯಂ-ಆಡಳಿತ ಮತ್ತು ರಾಜಕೀಯ ಸಬಲೀಕರಣಕ್ಕಾಗಿ ಅವರನ್ನು ಸಜ್ಜುಗೊಳಿಸಿದ್ದು ತಭಾ ಸಂಘದ ಸಾಧನೆ. ಇದಕ್ಕಾಗಿ, ಅಲ್ಲಿನ ೭೨ ಹಳ್ಳಿಗಳ ಪ್ರತಿನಿಧಿಗಳನ್ನು ಒಳಗೊಂಡ “ಅರ್ವಾರಿ ಸಂಸತ್” ಸ್ಥಾಪನೆಯ ಪ್ರೇರಕ ಶಕ್ತಿ ತಭಾ ಸಂಘ. ಈ ಸಂಸತ್, ವರುಷಕ್ಕೆ ಎರಡು ಬಾರಿ ಒಟ್ಟು ಸೇರುತ್ತದೆ. ತಮ್ಮ ಜಲಸಂಪನ್ಮೂಲಗಳ ನಿರ್ವಹಣೆ ಮತ್ತು ಸಂರಕ್ಷಣೆ ಬಗ್ಗೆ ನಿರ್ಧಾರಗಳನ್ನು ಕೈಗೊಂಡು ಜ್ಯಾರಿಗೊಳಿಸಿತ್ತದೆ. ನೀರಿನ ದಕ್ಷ ಬಳಕೆ ಮತ್ತು ನದಿಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಬೆಳೆಯಬೇಕಾದ ಬೆಳೆಗಳು ಯಾವುವು ಎಂಬ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುತ್ತದೆ. ಇಂತಹ ವಿನೂತನ ಕಾರ್ಯಕ್ರಮಗಳನ್ನು ಗುರುತಿಸಿ, ತಭಾ ಸಂಘಕ್ಕೆ ೨೦೧೫ರಲ್ಲಿ “ಸ್ಟಾಕ್ ಹೋಮ್ ಜಲ ಪುರಸ್ಕಾರ” (ಜಲಸಂರಕ್ಷಣೆಯ ನೊಬೆಲ್ ಬಹುಮಾನ) ನೀಡಲಾಗಿದೆ.
ಇದು ಮರುಕಳಿಸುವ ಬರಗಾಲದ ಸಮಸ್ಯೆಯನ್ನು ಸ್ಥಳೀಯ ಸಮುದಾಯಗಳ ಸಹಭಾಗಿತ್ವದಿಂದ ಹೇಗೆ ಪರಿಹರಿಸಬಹುದು ಮತ್ತು ಬತ್ತಿ ಹೋದ ನದಿಗಳನ್ನು ಹೇಗೆ ಪುನರುಜ್ಜೀವನಗೊಳಿಸಬಹುದು ಎಂಬುದಕ್ಕೆ ಜ್ವಲಂತ ಮಾದರಿ.

ಫೋಟೋ: ವಿದ್ಯಾರ್ಥಿಗಳೊಂದಿಗೆ ಡಾ. ರಾಜೇಂದ್ರ ಸಿಂಗ್ ಸಂವಾದ
ಫೋಟೋ ಕೃಪೆ: ವಿಕಿಪೀಡಿಯ